ಸಹಾಯಹಸ್ತದ ಅನರ್ಘ್ಯಮಣಿ: ಮನೋಲ್ಲಾಸ

Manollasa
Published on
| ಚಿದಂಬರ ಮುನವಳ್ಳಿ

ಭಾರತದ ಉದ್ಯಮಜಗತ್ತಿನ ದಿಗ್ಗಜ ಜಮಶೇಡ್ಜಿ ಟಾಟಾ ಉದ್ಯೋಗ ನಿಮಿತ್ತ ಮೈಸೂರಿಗೆ ಬಂದಾಗ ಅವರ ಮಿತ್ರ ಹಾಗು ಶಿಕ್ಷಣತಜ್ಞ ಡಾ.ಭಾಭಾ, ತಮ್ಮ ಮಗಳಾದ ಮೆಹೆರ್​ಬಾಯಿಯನ್ನು ಅವರಿಗೆ ಪರಿಚಯಿಸಿದರು. ಯೋಗ್ಯ ಸೊಸೆಯ ಶೋಧದಲ್ಲಿದ್ದ ಟಾಟಾ ಮುಂಬೈಗೆ ಹೋದವರೇ ಮಗ ದೊರಾಬ್ಜಿಗೆ ಮೆಹೆರ್​ಬಾಯಿಯನ್ನು ಭೇಟಿಯಾಗಿ ಬರಲು ಕಳುಹಿಸಿದರು. ಮೊದಲ ನೋಟದಲ್ಲಿಯೇ ಇಬ್ಬರಲ್ಲಿಯೂ ಪ್ರೇಮಾಂಕುರವಾಯಿತು. ಮದುವೆಯಾದ ಹೊಸದರಲ್ಲಿ ದೊರಾಬ್ಜಿ ಟಾಟಾ ಹೆಂಡತಿ ಮೆಹೆರ್​ಗೆ ಪ್ರೀತಿಯಿಂದ, ವಿಶ್ವದಲ್ಲಿಯೇ ಪ್ರಸಿದ್ಧವಾದ ಕೊಹಿನೂರ್ ವಜ್ರದ ಎರಡು ಪಟ್ಟು ಬೆಲೆ ಬಾಳುವ 245 ಕ್ಯಾರೆಟ್ಟಿನ ಜುಬಿಲಿ ವಜ್ರವನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಮೆಹೆರ್ ವಿಶೇಷ ಸಮಾರಂಭಗಳಲ್ಲಿ ಪ್ಲಾಟಿನಂ ಸರದಲ್ಲಿ ಪೋಣಿಸಿ ಧರಿಸುತ್ತಿದ್ದರು. ಕೆಲವು ವರ್ಷಗಳ ನಂತರ 1924ರಲ್ಲಿ ಅಂತಾರಾಷ್ಟ್ರೀಯ ವಹಿವಾಟು ಕಾರಣಗಳಿಂದ ಟಾಟಾ ಸ್ಟೀಲ್ ಕಂಪನಿ ಭಾರಿ ಹಾನಿ ಅನುಭವಿಸಿತು. ಕಾರ್ಖಾನೆ ಮುಚ್ಚುವ ಪರಿಸ್ಥಿತಿಗೆ ಬಂತು. ನೌಕರರು ಉಪವಾಸ ಬೀಳುವ ಪರಿಸ್ಥಿತಿಯನ್ನು ಮೆಹೆರ್​ಗೆ ನೋಡಲಾಗಲಿಲ್ಲ. ಪತಿಗೆ ಹೇಳಿದರು- ‘ಈ ಜುಬಿಲಿ ಡೈಮಂಡ್​ನ್ನು ತೆಗೆದುಕೊಳ್ಳಿ, ಅದರ ಜೊತೆ ಬೇರೆ ದಾಗೀನುಗಳನ್ನೂ ಕೊಡುವೆ. ಏನಾದರೂ ಮಾಡಿ ಅವರ ಹಸಿವು ನೀಗಿಸಿ. ಅವರ ಮನೆ ನಡೆಯಬೇಕು’. ಒದ್ದೆಯಾದ ಕಣ್ಣುಗಳಿಂದಲೇ ಅದನ್ನು ತೆಗೆದುಕೊಂಡ ದೊರಾಬ್ಜಿ ಅದನ್ನು ಇಂಪೀರಿಯಲ್ ಬ್ಯಾಂಕಿನಲ್ಲಿ ಅಡವಿಟ್ಟು ಎರಡು ಕೋಟಿ ರೂಪಾಯಿ ಸಾಲ ಮಾಡಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು. ಸಮಯ ಒಂದೇ ತೆರನಾಗಿ ಇರುವದಿಲ್ಲ. ನಾಲ್ಕೇ ವರ್ಷದಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತು. ಅದನ್ನು ಬಿಡಿಸಿಕೊಂಡು ಬಂದರು.

ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದ್ದ ಮೆಹೆರ್ ಬಾಲ್ಯವಿವಾಹದ ವಿರುದ್ಧ ಶಾರದಾ ಕಾಯ್ದೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ನ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತೀಯ ಸಂಸ್ಕೃತಿಯಾದ ಸೀರೆ ಉಟ್ಟುಕೊಂಡೇ ಭಾಗವಹಿಸಿದರು. ವಿಮಾನ ನಡೆಸಿದ ಭಾರತದ ಪ್ರಥಮ ಮಹಿಳೆಯಾದರು. ವಿಶ್ವಪರ್ಯಟನ ಮಾಡಿ ಅಮೆರಿಕದ ರಾಷ್ಟ್ರಪತಿ, ಇಂಗ್ಲೆಂಡಿನ ರಾಣಿ ಇವರನ್ನೆಲ್ಲ ಭೇಟಿಯಾಗಿ ಭಾರತದ ಸಂಸ್ಕೃತಿಯ ಮಹತ್ವ ವಿವರಿಸಿದರು. ಸಾಯುವ ಮುನ್ನ, ‘ನನ್ನ ಎಲ್ಲ ಸಂಪತ್ತನ್ನು ಮಾನವಕುಲದ ಒಳಿತಿಗೆ ಮೀಸಲಾಗಿಡಿ’ ಎಂದು ಹೇಳಿ ಪ್ರಾಣಬಿಟ್ಟರು. ದೊರಾಬ್ಜಿ ಟಾಟಾ ಅಂದು ಬಿಡಿಸಿ ತಂದ ಆ ವಜ್ರವನ್ನು ಮಾರಿ ಮೆಹೆರ್ ಇಚ್ಛೆಯಂತೆ ಟ್ರಸ್ಟ್ ಒಂದನ್ನು ಸ್ಥಾಪಿಸಿ ಭಾರತದಲ್ಲಿಯೇ ಪ್ರಥಮವಾಗಿ ಸಂಶೋಧನೆ, ಕ್ಯಾನ್ಸರ್ ಚಿಕಿತ್ಸೆ ಒಳಗೊಂಡ ದೊಡ್ಡದಾದ ‘ಟಾಟಾ ಮೆಮೋರಿಯಲ್ ಹಾಸ್ಪಿಟಲ್’ನ್ನು ಮುಂಬೈಯಲ್ಲಿ ಕಟ್ಟಿಸಿ, ಸಾರ್ಥಕ ಶ್ರದ್ಧಾಂಜಲಿ ಅರ್ಪಿಸಿದರು. ಅಂದು ಅವರು ಕೊಟ್ಟ ಆ ವಜ್ರವು ದೇಶದ ಪ್ರತಿಷ್ಠಿತ ಉದ್ಯೋಗ ಸಮೂಹವನ್ನು ಉಳಿಸಿತು. ಇಂದು ಸಾವಿರಾರು ಜನರ ಜೀವ ಉಳಿಸುತ್ತಿದೆ. ಅವರ ಜುಬಿಲಿ ಡೈಮಂಡ್ ಇಂದಿಗೂ ಹೊಳೆಯುತ್ತಿದೆ. ಮೆಹೆರ್ ಜೀವನ ನಮಗೆಲ್ಲ ಸ್ಪೂರ್ತಿ. ಅಲ್ಲದೆ, ಇತರರ ಸಂಕಷ್ಟಕ್ಕಾಗಿ ಮಿಡಿಯುವಾಗ, ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಾಗ ದೊರೆಯುವ ಸಂತೃಪ್ತಿಯೂ ಅನನ್ಯ ಎಂಬುದಕ್ಕೆ ಸಾಕ್ಷಿ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net