ತನಗೆ ಕಲ್ಲು ಹೊಡೆದ ವೃದ್ಧೆಗೆ ಶ್ರೀಮಂತ ನೂರು ರೂಪಾಯಿ ನೀಡಿದ...

Manollasa 19 march 20
Published on

ಒಮ್ಮೆ ಒಬ್ಬ ದೊಡ್ಡ ಸಿರಿವಂತ ಕಾಲ್ನಡಿಗೆಯಲ್ಲಿ ಎಲ್ಲೋ ಸಾಗುತ್ತಿದ್ದ. ಅಲ್ಲಿಯೇ ನಿಂತ ಓರ್ವ ವೃದ್ಧೆ ಕಲ್ಲು ಬೀಸುತ್ತಿದ್ದಳು. ಅದು ಶ್ರೀಮಂತನಿಗೆ ತಗುಲಿತು. ಗಾಯವಾಗಿ ರಕ್ತ ಸುರಿಯಿತು. ಶ್ರೀಮಂತನ ಪರಿವಾರದವರು ಅವಳನ್ನು ಹಿಡಿದು ತಂದು ನಿಲ್ಲಿಸಿ ವಿಚಾರಣೆ ನಡೆಸಿದರು. ಕಾರಣ ಕೇಳಲಾಗಿ ಆ ವೃದ್ಧೆ, ‘ಕಲ್ಲನ್ನು ಹತ್ತಿರದ ಹಣ್ಣಿನ ಮರಕ್ಕೆ ಹೊಡೆದೆ. ಅದು ಕೈ ತಪ್ಪಿ ಇವರಿಗೆ ತಗುಲಿದೆ’ ಎಂದಳು. ಅಲ್ಲದೆ ತಾನು ಆಹಾರ ಇಲ್ಲದೆ ಎರಡು ದಿವಸದಿಂದ ಉಪವಾಸವೇ ಇದ್ದು ಹಣ್ಣಿಗಾಗಿ ಹೀಗೆ ಮಾಡಿರುವುದಾಗಿ ಸೌಜನ್ಯದಿಂದ ಅಷ್ಟೇ ನೋವಿನ ಸ್ವರದಲ್ಲಿ ಹೇಳಿದಳು. ತಕ್ಷಣವೇ ಆ ಸಿರಿವಂತ ತನ್ನಲ್ಲಿದ್ದ ನೂರು ರೂಪಾಯಿಗಳನ್ನು ಅವಳಿಗೆ ನೀಡಿದ.

ನೆರೆದಿದ್ದ ಜನರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ. ‘ಹೀಗೇಕೆ ಮಾಡಿದಿರಿ’ ಎಂದು ಕೆಲವರು ಪ್ರಶ್ನಿಸಿದರು. ಅದಕ್ಕೆ ಆತ ಕೊಟ್ಟ ಉತ್ತರ ನಮ್ಮೆಲ್ಲರ ಕಣ್ಣು ತೆರೆಸುವಂಥದ್ದು. ‘ಮರಕೆ್ಕೆ ಕಲ್ಲು ಸರಿಯಾಗಿ ಬಿದ್ದಿದ್ದರೆ ಕಡೇ ಪಕ್ಷ ಆ ಹಸಿದ ಮುದುಕಿಗೆ ಎರಡು ಹಣ್ಣಾದರೂ ಸಿಗುತ್ತಿತ್ತು. ಆದರೆ ಮುದುಕಿ ಹೊಡೆದ ಕಲ್ಲು ನನಗೆ ಬಿದ್ದಿದೆ. ನಾನು ಏನೂ ಕೊಡದಿದ್ದರೆ ಮರಕ್ಕಿಂತಲೂ ಕಡೆಯಾಗುವುದಿಲ್ಲವೆ?’ ಎಂದ. ನಿಜವಾದ ಸಜ್ಜನರ ಹೃದಯವೇ ಹಾಗಿರುತ್ತದೆ.

ಒಬ್ಬ ಕವಿ ಹೇಳುತ್ತಾನೆ.

ಸಜ್ಜನಸ್ಯ ಹೃದಯಂ ನವನೀತಮ್

ಯದ್ವದಂತಿ ಕವಯಸ್ತದಲೀಕಂ

ಅನ್ಯದೇಹವಿಲಸತ್ಪರಿತಾಪಾತ್

ಸಜ್ಜನೋ ದ್ರವತಿ ನೋ ನವನೀತಮ್

ಸಜ್ಜನರ ಹೃದಯ ಬೆಣ್ಣೆಯಂತೆ. ಬೆಣ್ಣೆ ಬಿಸಲಿನ ತಾಪಕ್ಕೆ ಕರಗುವಂತೆ ಇನ್ನೊಬ್ಬರಿಗೆ ಕಷ್ಟ ಆಗಿದೆ ಎಂದಾದರೆ ಸಜ್ಜನರ ಮನಸ್ಸು ಕರಗಿ ಹೋಗುತ್ತದೆ. ಆದರೆ ಕವಿ ಇಲ್ಲಿಯೇ ಇನ್ನೊಂದು ಮಾತು ಹೇಳುವುದನ್ನು ಮರೆಯಲಿಲ್ಲ. ಅದು ಏನೆಂದರೆ ಬೆಣ್ಣೆ ತನಗೆ ಅಗ್ನಿಯ ಸ್ಪರ್ಶ ಆದರೆ ಮಾತ್ರ ಕರಗುತ್ತದೆ. ಇನ್ನೊಬ್ಬರ ದೇಹದಲ್ಲಿ ತಾಪ ಆದರೂ ಸಜ್ಜನರ ಮನಸ್ಸು ಕರಗಿ ಹೋಗುತ್ತದೆ. ಸಜ್ಜನರ ಮನಸ್ಸು ಬೆಣ್ಣೆಗಿಂತ ಮೃದು.

ಪ್ರತಿಯೊಬ್ಬರ ಜೀವನದಲ್ಲಿಯೂ ಅನೇಕ ಘಟನೆಗಳು ಸಂಭವಿಸುತ್ತಿರುತ್ತವೆ. ಕೆಲವನ್ನು ಇನ್ನೊಬ್ಬರ ಮುಂದೆ ಹೇಳಲಾಗುವುದಿಲ್ಲ ಅಥವಾ ಹೇಳಿ ಪ್ರಯೋಜನವಿಲ್ಲವೆಂದು ಸುಮ್ಮನಿದ್ದು ಬಿಡುತ್ತೇವೆ. ಆದರೆ ಮತೆ್ತೆ ಮತೆ್ತೆ ಮೆಲಕು ಹಾಕಬೇಕೆನಿಸುವ ಹಾಗೂ ನಮ್ಮ ಹತ್ತಿರದವರಿಗೆ ಹೇಳಿಕೊಳ್ಳಬೇಕೆಂಬ ಆಸೆ ಹುಟ್ಟಿಸುವ, ಸ್ಪೂರ್ತಿದಾಯಕವಾದ ಘಟನೆಗಳು ಹಲವಾರು ಇರುತ್ತವೆ. ಅವು ಚಿಕ್ಕ ಚಿಕ್ಕ ಘಟನೆಗಳಾಗಿರಲಿ, ದೊಡ್ಡ ದೊಡ್ಡ ವಿಚಾರಗಳಾಗಿರಲಿ ಇನ್ನೊಬ್ಬರ ಮುಂದೆ ಆಗಾಗ ಹೇಳುತ್ತಿರಬೇಕು. ಅದರಿಂದ ಆಗುವ ಸಂತೋಷವೇ ಬೇರೆ. ಅಲ್ಲದೆ, ಹೀಗೆ ಬೇರೆಯವರ ಕಷ್ಟಕ್ಕೆ ಮಿಡಿಯುವ, ಸ್ಪಂದಿಸುವ ಗುಣ ನಮ್ಮದಾಗಲಿ. ಎಷ್ಟು ಸಾಧ್ಯವೋ ಅಷ್ಟು ಇತರರಿಗೆ ನೆರವಾಗುತ್ತ ಸಾರ್ಥಕವಾಗಿ ಬದುಕಿನ ಯಾತ್ರೆಯನ್ನು ಸಾಗಿಸೋಣ.

| ಡಾ.ವೆಂಕಟೇಶಾಚಾರ್ಯ ಬಿ.ಆರ್.

(ಲೇಖಕರು ಸಂಸ್ಕೃತ ಸಂಶೋಧಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net