

ಅದು ಐದು ವರ್ಷದ ಬಾಲಕನ ಹುಟ್ಟುಹಬ್ಬದ ಸಮಾರಂಭ. ಅವನ ಗೆಳೆಯರು ಹಾಗೂ ಪರಿವಾರದವರೆಲ್ಲ ಇದ್ದರು. ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿಯಾಯಿತು. ಉಡುಗೊರೆಗಳು ಬರಲಾರಂಭಿಸಿದವು.
ಅವನಿಗೋ ಆ ಅವುಗಳನ್ನೆಲ್ಲ ಕೂಡಲೇ ತೆಗೆದು ನೋಡುವ ತವಕ. ಆದರೆ ಅವನ ಅಪ್ಪ ಮೊದಲೇ ಹೇಳಿದ್ದರಿಂದ ಅವರೆಲ್ಲ ಹೋಗುವವರೆಗೆ ಹೇಗೋ ತಡೆದುಕೊಂಡು ಅವರು ಹೋದ ತಕ್ಷಣ ಪೊಟ್ಟಣಗಳನ್ನೆಲ್ಲ ತೆಗೆದು ಚಾಕಲೇಟ್, ಆಟಿಗೆ ಸಾಮಾನುಗಳು, ಹೊಸಬಟ್ಟೆ ಮುಂತಾದ ಎಲ್ಲ ಉಡುಗೊರೆಗಳನ್ನು ತೆಗೆದು ಆನಂದಿಸತೊಡಗಿದ. ತನ್ನ ಮಿತ್ರರಿಗೂ ತಿಳಿಸಿ ಖುಷಿ ಹಂಚಿಕೊಂಡು ಕುಣಿದ. ಸ್ವಲ್ಪ ಸಮಯದ ನಂತರ ತನ್ನ ತಂದೆಗೆ ಕೇಳಿದ, ‘ಕಳೆದ ತಿಂಗಳು ನಿಮ್ಮ ಹುಟ್ಟುಹಬ್ಬಕ್ಕೆ ಸಾಕಷ್ಟು ಜನರು ಬಂದಿದ್ದರು. ನಿಮಗೇನೇನು ಉಡುಗೊರೆ ಬಂದಿವೆ?’ ‘ಒಹೋ ನಾನಿನ್ನೂ ಅವುಗಳನ್ನು ನೋಡಿಯೇ ಇಲ್ಲ. ದಣಿವಾದ್ದರಿಂದ ಹಾಗೆಯೇ ಕಪಾಟಿನಲ್ಲಿ ತೆಗೆದಿಟ್ಟುಬಿಟ್ಟೆ’. ಬಾಲಕ ಕಪಾಟಿನ ಬಾಗಿಲು ತೆಗೆದು ನೋಡಿದ. ಸಾಕಷ್ಟು ಉಡುಗೊರೆಗಳಿದ್ದವು. ಅದರಲ್ಲಿ ಯಾವುದಾದರೂ ಒಂದನ್ನು ತೆಗೆಯಲೇ ಎಂದ. ತಂದೆ-‘ಆಯಿತು ನಮಗೇನು ದೊಡ್ಡ ದೊಡ್ಡ ಗಿಫ್ಟ್ ಬರುತ್ತವೆಯೇ? ಎಂಥದೋ ಒಂದಿಷ್ಟಿರಬೇಕು. ನೋಡು ನೋಡು...’ ಎಂದರು. ಅವುಗಳಲ್ಲಿ ಅಚ್ಚುಕಟ್ಟಾಗಿ ಕೆಂಪುಬಣ್ಣದ ಕಾಗದದಲ್ಲಿ ಸುತ್ತಿದ ರಟ್ಟಿನ ಪ್ಯಾಕೆಟ್ ಒಂದನ್ನು ತೆಗೆದ. ಒಳಗಡೆ ಗೋಡಂಬಿ, ಬದಾಮ್ ಒಣದ್ರಾಕ್ಷಿ, ಪಿಸ್ತಾ, ಖಾರೀಕುಗಳಿರುವ ಸುಂದರವಾದ ಉಡುಗೊರೆ. ಆದರೆ ಇಷ್ಟು ದಿವಸ ಹಾಗೆಯೇ ಇಟ್ಟಿದ್ದರಿಂದ ಎಲ್ಲವೂ ಕೆಟ್ಟು ವಾಸನೆ ಬರಲಾರಂಭಿಸಿದ್ದವು. ಎಷ್ಟೊಂದು ಪ್ರೀತಿಯಿಂದ ಕೊಟ್ಟ ವಸ್ತುವಿಗೆ ಎಂಥ ತಾತ್ಸಾರ? ಏನು ಆಲಸ್ಯತನ? ಛೇ!
ಎಂಭತ್ನಾಲ್ಕು ಲಕ್ಷ ಜೀವಿಗಳಲ್ಲಿ ನಾವು ಪಡೆದ ಮನುಷ್ಯ ಜನ್ಮವೆಂದರೆ, ಭಗವಂತನು ವಿಶೇಷ ಕೃಪೆ ಮಾಡಿ ನೀಡಿದ ಬೆಲೆ ಕಟ್ಟಲಾಗದ ಕೊಡುಗೆ. ದುರ್ದೈವದ ಸಂಗತಿಯೆಂದರೆ ನಮ್ಮ ಆಯುಷ್ಯವು ಅದನ್ನು ಸದುಪಯೋಗಪಡಿಸಿ ಆನಂದಿಸದೆ, ಅದರ ಕಡೆ ನೋಡದೇ ಕಳೆದು ಹೋಗುತ್ತದೆ. ಕೆಲವೊಂದು ಸಲ ಇತರರಲ್ಲಿ ನಮಗಿಂತ ಹೆಚ್ಚಿನ ಸೌಂದರ್ಯ, ಕಲೆ, ಶಕ್ತಿಯುತವಾದ ದೇಹ, ಚುರುಕುಬುದ್ಧಿ, ಧನಸಂಪತ್ತು, ಪ್ರತಿಷ್ಠೆ ಇತ್ಯಾದಿಗಳು ಇವೆಯೆಂದು ನಮ್ಮಷ್ಟಕ್ಕೆ ನಾವೇ ಕೀಳರಿಮೆಗೆ ಒಳಗಾಗಿ ನೀಡಿದವನನ್ನು ಬಯ್ಯುತ್ತ ದುಃಖಿಸುತ್ತೇವೆ. ಅವೆಲ್ಲ ಒಂದು ವಾಹನಕ್ಕೆ ಜೋಡಿಸಿದ ಹೆಚ್ಚಿನ ಸಲಕರಣೆಗಳಾಗಿರಬಹುದೇ ಹೊರತು ಮೂಲಗಾಡಿ ಎಲ್ಲರಿಗೂ ಒಂದೇ ಅಲ್ಲವೇ? ಬರೀ ಅವುಗಳನ್ನು ಜೋಡಿಸಿಕೊಳ್ಳುವುದರಲ್ಲಿ ನಿರತರಾಗಿ ಮೂಲಗಾಡಿಯನ್ನೇ ತಿಳಿದುಕೊಳ್ಳುವಲ್ಲಿ ವಿಫಲರಾಗಿ ಜೀವನವನ್ನೇ ಮರೆತು ಬಿಡುತ್ತೇವೆ. ಇದು ನಮಗೆ ಕೊಡುಗೆ ನೀಡಿದ ಪರಮಾತ್ಮನಿಗೆ ಮಾಡುವ ಅಪಮಾನವಲ್ಲದೇ ಇನ್ನೇನು? ಅನುಭಾವಿಗಳ ಬೋಧನೆಗಳು, ದಾಸರ ಪದಗಳು, ವಚನಗಳು, ಉಪನಿಷತ್ತುಗಳು, ಭಗವದ್ಗೀತೆ ಮುಂತಾದವುಗಳ ಸಹಾಯದಿಂದ ಅಮೂಲ್ಯವಾದ ಈ ಉಡುಗೊರೆಯನ್ನು ಅನಾವೃತ್ತಗೊಳಿಸಿ ಆನಂದಿಸದಿದ್ದರೆ ಹಾನಿ ಯಾರಿಗೆ?
| ಚಿದಂಬರ ಮುನವಳ್ಳಿ
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)