ಒಳ ನೆಮ್ಮದಿಯನ್ನು ಅನುಭವಿಸೋಣ: ಮನೋಲ್ಲಾಸ

Manollasa
Published on
| ಡಾ.ಮೋಹನ ರಾಘವನ್

ದಟ್ಟವಾದ ಕಾಡಿನ ಪ್ರಶಾಂತವಾದ ಸರೋವರದ ತೀರದಲ್ಲಿ ಮೂವರು ಸಂಗಡಿಗರ ಸಹಬಾಳುವೆ. ಆಮೆ, ಜಿಂಕೆ ಮತ್ತು ಹದ್ದು. ಆತ್ನೀಯ ಸ್ನೇಹಿತರಾದ ಈ ಮೂವರೂ ದಿನವೂ ಕಾಡುಹರಟೆಯಲ್ಲೂ, ವಿಚಾರ-ವಿನೋದದಲ್ಲೂ ಕಾಲ ಕಳೆಯುತ್ತಿದ್ದರು. ಒಮ್ಮೆ ಬೇಡನೊಬ್ಬನು ಆ ಪ್ರಶಾಂತ ವಾತಾವಾರಣಕ್ಕೆ ಭಂಗ ತರಲು ಬಂದನು. ಹದ್ದು ಕೂಡಲೇ ಹಾರಿಹೋಯಿತು, ಜಿಂಕೆ ವೇಗವಾಗಿ ಓಡಿ, ಕಾಣದಂತಾಯಿತು. ಆದರೆ ನಿಧಾನವಾಗಿ ನಡೆದಾಡುತ್ತಿದ್ದ ಆಮೆಯು ಬೇಡನ ಕೈಗೆ ಸಿಲುಕಿತು. ಅದರ ಕೈ ಕಾಲುಗಳನ್ನು ಕಟ್ಟಿ, ತನ್ನ ಬಿಲ್ಲಿನ ತುದಿಗೇರಿಸಿ ಮನೆಯಕಡೆಗೆ ಹೊರಟನು. ಆಗ ಜಿಂಕೆ ಮತ್ತು ಹದ್ದು ಸೇರಿ ಮಿತ್ರನನ್ನು ಉಳಿಸಿಕೊಳ್ಳಲು ಒಂದು ಯುಕ್ತಿಯನ್ನು ರೂಪಿಸಿದರು. ಜಿಂಕೆ ಓಡಿ ಹೋಗಿ ಬೇಡನು ಹೋಗುತ್ತಿದ್ದ ಮಾರ್ಗದಲ್ಲಿ ಸತ್ತಂತೆ ನಟಿಸುತ್ತ ಮಲಗಿತು. ಅದನ್ನು ನೋಡಿದ ಬೇಡ, ಆಮೆಯನ್ನು ಬದಿಗಿಟ್ಟು ಜಿಂಕೆಯನ್ನು ಎತ್ತಿಕೊಂಡು ಬರಲು ಧಾವಿಸಿದ. ಹತ್ತಿರ ಬರುವವರೆಗೂ ಕಾದಿದ್ದು ಬೇಡ ಕಣ್ಣು ಮಿಟುಕಿಸುವುದರಲ್ಲಿ ಜಿಂಕೆ ಎದ್ದು ಕಾಡಿನೊಳಗೆ ಸೇರಿಕೊಂಡಿತು. ಈ ನಡುವೆ ಹದ್ದು ಆಮೆಯನ್ನು ಕಟ್ಟಿರುವ ಪಾಶವನ್ನು ಕಚ್ಚಿ ಆಮೆಯನ್ನು ಬಿಡಿಸಿತು. ಆಮೆಯು ತನ್ನ ಕೈಕಾಲುಗಳನ್ನು ಒಳಕ್ಕೆ ಸೆಳೆದು ಪಕ್ಕದಲ್ಲೇ ಇದ್ದ ಕಲ್ಲು ಬಂಡೆಗಳ ನಡುವೆ ತಾನೂ ಬಂಡೆಯಂತೆ ಕುಳಿತುಬಿಟ್ಟಿತು. ಯಾವ ಬೇಟೆಯೂ ಸಿಗದೇ ಬೇಡನು ಹತಾಶನಾಗಿ ಹಿಂತಿರುಗಬೇಕಾಯಿತು.

ಆಮೆಯೊಂದು ವಿಶಿಷ್ಟವಾದ ಪ್ರಾಣಿ. ಆಮೆಯ ಉದಾಹರಣೆ ಮೂಲಕ ಶ್ರೀರಂಗಮಹಾಗುರುಗಳು ಜೀವನದ ಗಾಢವಾದ ತತ್ತ್ವ ಗಳನ್ನು ತಿಳಿಸಿಕೊಡುತ್ತಿದ್ದರು. ಆಮೆ ನಾಲ್ಕು ಕಾಲುಗಳು, ಪುಚ್ಚ ಮತ್ತು ತಲೆಯನ್ನು ಹೊರಕ್ಕೆ ಚಾಚಿ ವ್ಯವಹಾರವನ್ನು ನಡೆಸಬಲ್ಲದು. ಅಂತೆಯೇ ಅವನ್ನು ಒಳಕ್ಕೆ ಸೆಳೆದು ಹೊರಲೋಕದಿಂದ ತನ್ನನ್ನು ಒಳಸೆಳೆದುಕೊಂಡು ತನ್ನ ಗೂಡಿನೊಳಗೆ ಸೇರಿಕೊಂಡು ಆರಾಮವಾಗಿ ಇರಲೂ ಬಲ್ಲದು. ನಾವೂ ಅಂತೆಯೇ ನಮ್ಮ ಇಂದ್ರಿಯಗಳ ಮೂಲಕ ಹೊರಲೋಕದೊಂದಿಗೆ ವ್ಯವಹರಿಸುತ್ತೇವೆ. ಈ ಲೋಕದಲ್ಲಿ ಸುಖವೂ ಉಂಟು, ಬೇಡನಂತೆ ಬೇಡದ ದುಃಖ, ಕಷ್ಟಕಾರ್ಪಣ್ಯಗಳೂ ಉಂಟು. ನಾನಾ ಇಂದ್ರಿಯದ ಬಯಕೆಗಳು. ಒಂದನ್ನು ತೀರಿಸಿದರೆ ಇನ್ನೊಂದು ಪುಟಿದೇಳುತ್ತವೆ. ಇಂದ್ರಿಯಗಳ ಬಯಕೆಗಳು ತೃಪ್ತಿಗೊಳಿಸಿ ತೀರವು.

ಹೀಗೆ ಇಂದ್ರಿಯ ಸುಖಕ್ಕಾಗಿ ನಾವು ಆಮೆಯಂತೆ ಓಡಿ, ಇಂದ್ರಿಯಗಳನ್ನು ಹೊರಚಾಚಿ ಪ್ರಯತ್ನಿಸುತ್ತೇವೆ. ಆದರೆ ದುಃಖ ಬಂದಾಗ ಜಿಂಕೆಯಂತೆ ಓಡುವ ಸಾಮರ್ಥ್ಯ ಇಲ್ಲ, ಹದ್ದಿನಂತೆ ಹಾರುವ ಸಾಮರ್ಥ್ಯವೂ ಇಲ್ಲ. ಆದರಿಂದ ಎಷ್ಟು ಓಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುಃಖವೆಂಬ ಬೇಡ ಪಕ್ಕದಲ್ಲೇ ಇರುತ್ತಾನೆ. ದುಃಖದಿಂದ ತಪ್ಪಿಸಿಕೊಳ್ಳಲು ಏಕೈಕ ಉಪಾಯವೆಂದರೆ ಇಂದ್ರಿಯಗಳನ್ನು ಒಳಕ್ಕೆ ಸೆಳೆದು ನಮ್ಮ ಗೂಡಿನೊಳಗೆ ಇರುವ ಒಳ ನೆಮ್ಮದಿಯನ್ನು ಅನುಭವಿಸುವುದು. ಇದೇ ಯೋಗವು ತೋರಿಸಿಕೊಡುವ ದಾರಿ. ಆಮೆಯಂತೆ ಇಂದ್ರಿಯಗಳನ್ನು ಒಳಕ್ಕೆ ಸೆಳೆಯುವುದನ್ನು ಯೋಗಶಾಸ್ತ್ರದಲ್ಲಿ ಪ್ರತ್ಯಾಹಾರ ಎನ್ನುತ್ತಾರೆ. ಪ್ರತ್ಯಾಹಾರವು ಧ್ಯಾನ, ನಂತರದ ಸಮಾಧಿ ಶಾಂತಿಗಳಿಗೆ ಅಣಿಮಾಡಿ ಕೊಡುತ್ತದೆ. ಹೀಗೆ ಹೊರಜೀವನದ ಬೇಗೆಯಿಂದ ಒಳಜೀವನದೆಡೆಗೆ ನಮ್ಮ ಇಂದ್ರಿಯಗಳನ್ನು ಸೆಳೆಯಲು ಆಮೆಯ ಉದಾಹರಣೆಯಿಂದ ಕಲಿಯೋಣ.

(ಲೇಖಕರು ಹೈದರಾಬಾದ್ ಐಐಟಿಯ ಸಹಾಯಕ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net