ಕಾಯಲು ಅವನೊಬ್ಬನಿರುವಾಗ...: ಮನೋಲ್ಲಾಸ

Manollasa
Published on
| ಚಿದಂಬರ ಮುನವಳ್ಳಿ

ಪ್ರತಿ ವರ್ಷ ಬೇಸಿಗೆ ರಜೆ ಬಂತೆಂದರೆ ಆ ಬಾಲಕನ ತಂದೆ-ತಾಯಿ ಒಂದು ವಾರ ಅವನನ್ನು ಅಜ್ಜ-ಅಜ್ಜಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ನಾಲ್ಕೈದು ವರ್ಷದ ನಂತರ ಒಂದು ದಿನ ಆ ಬಾಲಕ ತಂದೆಗೆ ಹೇಳಿದ. ‘ಈಗ ನಾನು ದೊಡ್ಡವನಾಗಿದ್ದೇನೆ. ಇನ್ನು ಮೇಲೆ ಅಜ್ಜನ ಮನೆಗೆ ನಾನೊಬ್ಬನೇ ಹೋಗುತ್ತೇನೆ, ನೀವು ಬರುವುದು ಬೇಡ’ ಎಂದು. ದೂರದ ಪ್ರವಾಸವಾದ್ದರಿಂದ ಅವರು ಅವನೊಬ್ಬನನ್ನೇ ಕಳಿಸಲು ಒಪ್ಪಲಿಲ್ಲ. ಆದರೆ ಹುಡುಗನು ಹಠ ಮಾಡಿದಾಗ ಕೊನೆಗೆ ನಿರ್ವಾಹವಿಲ್ಲದೆ ಒಪ್ಪಿದರು. ಪ್ರವಾಸದ ದಿನ ಅವನಿಗೆ ರೈಲಿನಲ್ಲಿ ಜಾಗ ಮಾಡಿ ಕೂಡ್ರಿಸಿ ಎಚ್ಚರಿಕೆಯಿಂದ ಪ್ರವಾಸ ಮಾಡುವಂತೆ ಎಲ್ಲ ಜಾಗರೂಕತೆಗಳನ್ನು ಪುನಃ ಹೇಳಿದರು. ‘ನನಗೆ ಎಲ್ಲ ಗೊತ್ತು. ಚಿಂತೆ ಮಾಡಬೇಡಿ. ನೀವಿನ್ನು ಹೊರಡಿ’ ಎಂದ. ಗಾಡಿ ಇನ್ನೇನು ಹೊರಡಬೇಕೆಂದಾಗ ತಂದೆ ಒಂದು ಲಕೋಟೆ ತೆಗೆದು ಅವನ ಕೈಗೆ ಕೊಡುತ್ತ, ‘ನಿನಗೆ ಪ್ರವಾಸದಲ್ಲಿ ಏನಾದರೂ ಹೆದರಿಕೆಯಾದರೆ ಇದನ್ನು ತೆಗೆದುನೋಡು’ ಎಂದರು. ಅದನ್ನು ಆತ ಕಿಸೆಯಲ್ಲಿ ಇಟ್ಟುಕೊಂಡ. ರೈಲು ಹೊರಟಿತು. ಅವರತ್ತ ಕೈ ಬೀಸಿದ. ಮುಂದಿನ ಸ್ಟೇಷನ್​ಗಳಲ್ಲಿ ಟ್ರೇನ್ ಏರುವ ಜನ ಕಡಿಮೆಯಾಗಿ ಇಳಿಯುವವರ ಸಂಖ್ಯೆ ಹೆಚ್ಚಾಗುತ್ತ ಅವನಿಗೆ ಒಂಟಿತನದ ಅನುಭವ ಆಗತೊಡಗಿತು.

ಒಂದು ಸ್ಟೇಷನ್​ನಲ್ಲಿ ಜೊಂಡುಮೀಸೆ, ದಪ್ಪ ಗಡ್ಡ, ಉದ್ದುದ್ದ ತಲೆಗೂದಲು ಕೈಯಲ್ಲಿ ಬಡಿಗೆ ಹಿಡಿದುಕೊಂಡ, ಧಡೂತಿ ಆಸಾಮಿಯೊಬ್ಬ ಬಂದು ಇವನ ಎದುರಿಗೆ ಕುಳಿತು ಇವನನ್ನೇ ದಿಟ್ಟಿಸಿ ನೋಡಿ- ‘ಯಾವೂರಿಗೆ ಹೊರಟಿದ್ದಿ? ಒಬ್ಬನೇ ಇದ್ದೀಯ? ಜೊತೆಯಲ್ಲಿ ಯಾರಿಲ್ಲವೇ?’ ಇತ್ಯಾದಿ ಪ್ರಶ್ನೆ ಕೇಳಲಾರಂಭಿಸಿದ. ಇವನು ದೃಷ್ಟಿ ತಪ್ಪಿಸಿ ಬೇರೆ ಕಡೆಗೆ ನೋಡಿದರೂ ಅವನ ಅಕ್ರಾಳ-ವಿಕ್ರಾಳ ಆಕೃತಿಯೇ ಕಣ್ಣು ಮುಂದೆ ಬರಲಾರಂಭಿಸಿತು. ಆ ಭಯಂಕರ ವ್ಯಕ್ತಿಯೊಬ್ಬನೇ ಇವನ ಸಹಪ್ರಯಾಣಿಕನಾಗಿದ್ದ. ಬಾಲಕ ಹೆದರಿದ. ಆದರೆ ಥಟ್ಟನೇ ತಂದೆ ಕೊಟ್ಟ ಲಕೋಟೆಯ ನೆನಪಾಯಿತು. ನಡಗುವ ಕೈಗಳಿಂದ ಅದನ್ನು ತೆಗೆದು ಓದಿದ. ತಂದೆ ಬರೆದಿದ್ದರು, ‘ಮಗೂ ಹೆದರಬೇಡ. ನಾನಿಲ್ಲಿಯೇ ಇದೇ ಟ್ರೇನಿನ ನಿನ್ನ ಪಕ್ಕದ ಕಂಪಾರ್ಟ್​ವೆುಂಟಿನಲ್ಲಿ ಇದ್ದೇನೆ’. ಅವನ ಮುಖಚರ್ಯುಯೇ ಬದಲಾಯಿತು. ಆನೆಯ ಬಲ ಬಂತು. ಮುಂದಿನ ಪ್ರವಾಸ ನಿರಾಳವಾಗಿ ಸುಖಮಯವಾಗಿತ್ತು.

ಭಗವಂತನು ನಮ್ಮನ್ನು ಈ ಭೂಮಿಗೆ ಕಳುಹಿಸುವಾಗ ಒಂದು ಸ್ಪಷ್ಟಸಂದೇಶ ಕೊಟ್ಟಿರುತ್ತಾನೆ. ‘ಜೀವನವೆಂಬ ಪ್ರವಾಸದಲ್ಲಿ ಪ್ರತಿಕ್ಷಣವೂ ನಿನ್ನೊಟ್ಟಿಗಿದ್ದೇನೆ. ಕೇವಲ ಅನನ್ಯವಾಗಿ ಸ್ಮರಣೆ ಮಾಡಿದರೆ ಸಾಕು, ಕ್ಷಣದಲ್ಲಿ ಹಾಜರಾಗುತ್ತೇನೆ’. ಅಕ್ಕಲಕೋಟದ ಸ್ವಾಮಿ ಸಮರ್ಥರ ದೇವಸ್ಥಾನಗಳಲ್ಲಿ ಅವರ ಒಂದು ಸುಂದರವಾದ ವಾಕ್ಯವಿರುತ್ತದೆ. ‘ಅಂಜಬೇಡ ನಾನು ನಿನ್ನ ಬೆನ್ನ ಹಿಂದೆ ಇದ್ದೇನೆ’. ವಿಪರೀತ ಸನ್ನಿವೇಶಗಳಲ್ಲಿ ನಾವು ಖಿನ್ನರಾಗಿ, ವ್ಯರ್ಥ ಚಿಂತೆ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಕಳೆದುಕೊಂಡು ಹತಾಶರಾಗುವದಕ್ಕಿಂತ ವಿಶ್ವಾಸದಿಂದ ಆ ಸಂದೇಶವನ್ನು ನೆನಪಿಸಿಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಯೋಗ್ಯಮಾರ್ಗ ಅಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net