

| ಡಾ. ಗಣಪತಿ ಹೆಗಡೆ
ಅದೊಂದು ಭವ್ಯವಾದ ಬಂಗಲೆ. ಮನೆಯೊಳಗೆ ಗಂಡ-ಹೆಂಡತಿ ಇಬ್ಬರೇ. ಮಕ್ಕಳಿಲ್ಲದ ಅವರಿಗೆ ಸದಾ ಚಿಂತೆಯೇ ಜೀವನ. ಹೇಗಾದರೂ ಒಂದು ಮಗುವನ್ನು ಕರುಣಿಸಪ್ಪಾ, ಅಂತ ನಿತ್ಯವೂ ಭಗವಂತನಲ್ಲಿ ಗೋಗರೆತ. ಕೊನೆಗೂ ಫಲಿಸದ ಪ್ರಾರ್ಥನೆ. ಅದೇ ಚಿಂತೆಯಲ್ಲಿಯೇ ದಂಪತಿ ಒಂದು ನಿರ್ಧಾರಕ್ಕೆ ಬಂದರು. ಯಾರಾದರೂ ಒಬ್ಬ ಅನಾಥನನ್ನು ದತ್ತು ತೆಗೆದುಕೊಳ್ಳುವುದು. ಸರಿ ಹುಡುಕಾಟ ಶುರುವಾಯ್ತು.
ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಹುಡುಗ ದಿನೇಶ. ಉತ್ತಮ ಗುಣಗಳನ್ನು ಹೊಂದಿದ ಹದಿನೈದು ವರ್ಷಗಳ ಸುಂದರ ಹುಡುಗ. ದಿನೇಶನನ್ನು ನೋಡಿದ ದಂಪತಿಗೆ ಪರಮಾನಂದವಾಯಿತು. ಅವನನ್ನು ಹೇಗೋ ಮನೆಗೆ ಕರೆಸಿಕೊಂಡರು. ಮೊದಲ ಬಾರಿಗೆ ಭವ್ಯ ಮನೆ ನೋಡಿದ ದಿನೇಶನಿಗೆ ದಿಗ್ಭŠಮೆಯಾಯಿತು. ಹೀಗೂ ಇರುತ್ತಾರಾ ಶ್ರೀಮಂತರು ಎಂದು ಚಕಿತನಾದ. ಬಂದ ಉದ್ದೇಶ ಅವನಿಗೂ ಗೊತ್ತಿರಲಿಲ್ಲ, ಮೊದಲೇ ಯಾಕೆ ಹೇಳುವುದು, ಒಂದಷ್ಟು ದಿನ ಹಾಗೆಯೇ ಇರಲೆಂದು ದಂಪತಿಯೂ ಹೇಳಿರಲಿಲ್ಲ. ಆರಂಭದಲ್ಲಿ ದಿನೇಶ ಸಂಕೋಚದಿಂದಲೇ ಇರುತ್ತಿದ್ದ. ಅವರು ಹೇಳಿದ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಕೊಂಡು ಅವರು ಕೊಟ್ಟ ಕೊಠಡಿಯಲ್ಲಿ ಮಲಗುತ್ತಿದ್ದ.
ಎಷ್ಟಾದರೂ ಮುಂದೆ ನಮ್ಮ ಮನೆಯವನೇ ಅಲ್ಲವೇ? ಎಂದು ದಂಪತಿ ಅವನನ್ನು ಸ್ವತಂತ್ರವಾಗಿ ಇರಲು ಬಿಟ್ಟರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತು, ಒಡವೆಗಳು ಮನೆಯಲ್ಲಿ ಎಲ್ಲೆಂದರಲ್ಲಿ ಇರುತ್ತಿದ್ದವು. ದಿನೇಶನಿಗೋ ಆಸೆ. ಆದರೆ ಕಳುವು ಮಾಡಬಾರದಲ್ಲ! ದಿನಗಳು ಕಳೆದವು. ದಂಪತಿಗೆ ದಿನೇಶನ ಬಗ್ಗೆ ಇನ್ನಿಲ್ಲದ ಅಭಿಮಾನ, ಪ್ರೀತಿ, ವಿಶ್ವಾಸ ಹುಟ್ಟಿಕೊಂಡವು. ‘ಸರಿ ನಾಳೆ ಬೆಳಗ್ಗೆ ದಿನೇಶನಿಗೆ ಎಲ್ಲ ವಿಷಯ ಹೇಳಿಬಿಡೋಣ, ಅವನಿಗೆ ಈ ಮನೆಯ ಪೂರ್ಣ ಜವಾಬ್ದಾರಿ ವಹಿಸಿಬಿಡೋಣ’ ಎಂದು ದಂಪತಿ ನಿಶ್ಚಿಂತೆಯಿಂದ ರಾತ್ರಿ ನಿದ್ರಿಸಿದರು.
ಬೆಳಗಾಗೆದ್ದು ನೋಡಿದರೆ ದಿನೇಶ ಮನೆಯಲ್ಲಿ ಇರಲಿಲ್ಲ. ಮನೆಯ ಬೀರುವಿನ ಕೀ ತೆರೆದಿತ್ತು. ಬೆಲೆಬಾಳುವ ವಸ್ತುಗಳು, ಹಣ, ಒಡವೆಗಳು ಕಾಣಿಸಲಿಲ್ಲ. ಮೊದಲು ದಿನೇಶನ ಬಗ್ಗೆ ಸಂಶಯವಿರದಿದ್ದರೂ ಪೊಲೀಸರು ಕೇಳಿದಾಗ ಅವರು ದಿನೇಶನ ಹೆಸರನ್ನೇ ಹೇಳಿದ್ದರು. ಪೊಲೀಸರು ಎಲ್ಲ ವಸ್ತುಗಳ ಜೊತೆಗೆ ದಿನೇಶನನ್ನೂ ಕರೆತಂದು ದಂಪತಿ ಎದುರು ನಿಲ್ಲಿಸಿದರು. ‘ಇನ್ನು ಒಂದು ದಿನ ತಾಳ್ಮೆಯಿಂದ ಕಾದಿದ್ದರೆ ಇಡೀ ಆಸ್ತಿ, ಮನೆ, ಹಣ, ಒಡವೆ ಎಲ್ಲವೂ ನಿನ್ನದೇ ಆಗಿರುತ್ತಿತ್ತಲ್ಲ! ದುಡುಕಿನಿಂದ ಎಂಥ ಅವಕಾಶ ಕಳೆದುಕೊಂಡು ಬಿಟ್ಟೆಯಲ್ಲ’ ಎಂದು ದಂಪತಿ ವ್ಯಥೆಯಿಂದ ಹೇಳಿದಾಗ ದಿನೇಶ ತನ್ನ ಮೂರ್ಖತನವನ್ನು ಹಳಿದುಕೊಂಡ.
ನಾವೂ ಒಮ್ಮೊಮ್ಮೆ ತಾಳ್ಮೆ ಕಳೆದುಕೊಂಡು ಮಹತ್ತರವಾದ ಸುವರ್ಣಾವಕಾಶಗಳನ್ನು ತಪ್ಪಿಸಿಕೊಳ್ಳುತ್ತೇವೆ. ಯಾವುದೋ ಕಾರ್ಯವೊಂದನ್ನು ಮಾಡಿ ಇನ್ನೇನು ಮುಗಿಯಬೇಕು ಅಂತಿರುವಾಗ ಸಹನೆ ಕಳೆದುಕೊಂಡುಬಿಡುತ್ತೇವೆ. ‘ತಾಳಿದವನು ಬಾಳಿಯಾನು’ ಎಂಬ ಗಾದೆಯ ಮಾತೇ ಇದೆಯಲ್ಲ. ಅದನ್ನು ಮರೆತೇ ಬಿಡುತ್ತೇವೆ. ಜೀವನದಲ್ಲಿ ತಾಳ್ಮೆ ಎಂಬುದು ದೊಡ್ಡ ಸಂಪತ್ತು. ಅದೊಂದನ್ನು ಗಳಿಸಿದರೆ ಏನೆಲ್ಲ ಅವಕಾಶಗಳನ್ನು ಪಡೆದುಕೊಳ್ಳಬಹುದು. ಅದಕ್ಕೇ ದಾಸರು ಹೇಳಿದ್ದು ‘ತಾಳುವಿಕೆಗಿಂತ ತಪವು ಬೇರಿಲ್ಲ’ ಎಂದು.
(ಲೇಖಕರು ಸಂಸ್ಕೃತ ಉಪನ್ಯಾಸಕರು)