ಮನೋಲ್ಲಾಸ: ಮನಸಿನಂತೆ ಮಾತು-ಕ್ರಿಯೆ

manollasa
Published on
ನಾಗಶ್ರೀ ತ್ಯಾಗರಾಜ್

ಅದೊಂದು ಸಂಕಷ್ಟದ ಪರಿಸ್ಥಿತಿ. ಇಡೀ ಬಡಾವಣೆಯ ಎಲ್ಲ ವರ್ಗದ ಜನರು ಹಲವು ಸಮಸ್ಯೆಗಳಿಂದ ಕಷ್ಟದಲ್ಲಿ ಒದ್ದಾಡುತ್ತಿದ್ದರು. ಮತ್ತೊಬ್ಬರಲ್ಲಿ ಯಾಚಿಸಿ ತಿನ್ನುವಂಥ ಶೋಚನೀಯ ಮಾರ್ಗ. ಸೇವೆಯೇ ಪರಮ ಧರ್ಮ ಎಂದು ಪಾಲಿಸುವ ಕೆಲವು ಮಂದಿ ಇವರಿಗೆ ಅವಶ್ಯ ಇರುವ ಹಲವು ಸೌಕರ್ಯಗಳನ್ನು ಒದಗಿಸುತ್ತಿದ್ದರು. ಆದರೆ, ಇದನ್ನೇ ರಾಜಕೀಯ ದಾಳವಾಗಿ ಬಳಸಿದ ಮತ್ತೂ ಹಲವರು ತಮ್ಮ ಸಾಂಕೇತಿಕ ನಿಲುವುಗಳೊಂದಿಗೆ ಸಹಾಯ ಮಾಡಿದರು. ಹಾಗೋ ಹೀಗೋ ಸಂಕಷ್ಟದಲ್ಲಿ ಇರುವವರಿಗೆ ಬೇಕಾದದ್ದು ಅವಶ್ಯಕ ಸಾಮಗ್ರಿಗಳೇ ಹೊರತು ಬರುವ ಮಾರ್ಗ ಎಲ್ಲಿಂದ ಎಂಬುದಲ್ಲ.

ಒಮ್ಮೆ ಹಳೆ ವೈಷಮ್ಯ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಸಂಕಷ್ಟದಲ್ಲಿ ಇರುವ ತನ್ನ ಹಳೆಯ ಸ್ನೇಹಿತನಲ್ಲಿಗೆ ಬಂದು ಸಹಾಯ ಮಾಡುವ ನೆಪದಲ್ಲಿ ಹೀಯಾಳಿಸಿ ಮಾತನಾಡಿದ- ‘ತಗೋ! ಈ ಎಲ್ಲ ಆಹಾರ ಸಾಮಗ್ರಿಗಳನ್ನು ನಾನು ಭಿಕ್ಷೆ ನೀಡುತ್ತಿದ್ದೇನೆ. ನೀನು ಮಾಡಿದ ತಪ್ಪುಗಳೆಲ್ಲ ಈಗ ನನಗೆ ಕಾಲಕಸ. ಈಗಲಾದರೂ ನನ್ನ ಅಡಿಯಾಳಾಗಿ ನೀನು ಬದುಕುವುದನ್ನು ಕಲಿತುಕೋ’ ಎಂದು ಅಹಂಕಾರದಿಂದ ಹೇಳಿದ. ಇವನಿಗೋ ಒಂದು ಕಡೆ ಸ್ವಾಭಿಮಾನ, ಮತ್ತೊಂದು ಕಡೆ ತನ್ನ ಕುಟುಂಬದ ಹಸಿವು, ನೋವು. ಎರಡನ್ನೂ ತಾಳೆ ನೋಡಿದ ಈ ಸ್ನೇಹಿತ, ‘ನಿನ್ನ ಭಿಕ್ಷೆಯ ಅಗತ್ಯವಿಲ್ಲ. ನಾನು ಮತ್ತು ಕುಟುಂಬದವರು ಉಪವಾಸವಿದ್ದ್ದು ಸಾಯುತ್ತೇವೆಯೇ ಹೊರತು ನಿನ್ನ ಬಳಿ ಕೈ ಚಾಚುವುದಿಲ್ಲ’ ಎಂದು ತಿರಸ್ಕರಿಸಿದ. ದೈವಕೃಪೆಯಿಂದ ಈತನಿಗೆ ಮತ್ತೊಬ್ಬರಿಂದ ಗೌರವಪೂರ್ವಕ ಸಹಾಯ ದೊರೆಯಿತು. ತಾಳ್ಮೆ, ಸಂಯಮ ಎಲ್ಲವನ್ನೂ ದೊರಕಿಸಿಕೊಟ್ಟಿತು. ಆದರೆ ಸೇವೆ ನೀಡುವವನು ತನ್ನ ಮಾತಿನ ಗಂಭೀರತೆಯನ್ನು ಅರಿತಿದ್ದರೆ ಎದುರಿಗೆ ಇರುವವರ ಮನಸ್ಸನ್ನು ಕೆರಳಿಸುತ್ತಿರಲಿಲ್ಲ.

ದಿನದಿನದ ಮಾತುಕತೆ ಹೇಗಿರಬೇಕು? ಅದು ಚಂದನದ ಕಂಪಿನಂತಿರಬೇಕು. ಅರಳಿಯ ಸೊಂಪಿನಂತಿರಬೇಕು. ಸಲ್ಲಾಪದ ಸುವಾಸನೆಯ ತಾರದೆ, ಬರಿಯ ತಾಪವ ತಂದರೆ ಕೊನೆಗೆ ಭಸ್ಮವೇ ಸಿಗುವುದು. ಜೀವನವು ಕಂಪು ಸೂಸಲು ಮಾತುಕತೆಗಳು ಸೊಂಪಾಗಿ ಇರಬೇಕು. ಮಾತುಕತೆಗಳು ಸೊಂಪಾಗಿರಲು ಮನಸ್ಸು ತಂಪಾಗಿರಬೇಕು. ಏಕೆಂದರೆ ಮನಸ್ಸು ಮಾತುಗಳೆರಡು ಒಂದೇ ಲೋಕದ ಬೆರಗು. ಒಬ್ಬರ ಮನಸ್ಸನ್ನು ಅರಳಿಸಬೇಕು ಎಂದರೆ ಮತ್ತೊಬ್ಬರ ಒಳ್ಳೆಯ ಮಾತು ಮುಖ್ಯ ಕಾರಣವಾಗುತ್ತದೆ. ಹಾಗೆಯೇ ಮನಸ್ಸನ್ನು ಕೆರಳಿಸಬೇಕು ಎಂದರೂ ಮತ್ತೊಬ್ಬರ ವ್ಯಗ್ರ ಮಾತು ಮುಖ್ಯ ಕಾರಣವಾಗುತ್ತದೆ.

ಮನವು ಸೋತಾಗ ಮಾತೆಂಬುದು ಮನಸ್ಸನ್ನು ಎಬ್ಬಿಸಿ ನಿಲ್ಲುವಂತೆ ಮಾಡಬೇಕು. ಹಾಗೆಯೇ ಸೇವೆ ನೀಡುವವನು ಮತ್ತು ಸೇವೆ ಸ್ವೀಕರಿಸುವವನು ಇಬ್ಬರೂ ತಿಳಿಯಬೇಕಾದ ಅಂಶವೆಂದರೆ, ಸೇವೆಯಿಂದ ಇಬ್ಬರೂ ಉದ್ಧಾರವಾಗುತ್ತಾರೆ. ಒಬ್ಬ ಕೊಟ್ಟು ಉದ್ಧಾರವಾದರೆ, ಮತ್ತೊಬ್ಬ ಕೊಡುವವನಿಗೆ ಒಂದು ಅವಕಾಶವನ್ನು ಕಲ್ಪಿಸಿ ಉದ್ಧಾರವಾಗುತ್ತಾನೆ. ಹಾಗಾಗಿ ಈ ಲೋಕೋದ್ಧಾರದ ಕಾರ್ಯಗಳಿಗೆ ಮನಸ್ಸು ಮತ್ತು ಮಾತು ಎರಡೂ ಮುಖ್ಯ ಎಂಬುದನ್ನು ಅರಿಯೋಣ. ಸಂತೃಪ್ತಿಯಿಂದ ಮುಂದೆ ಸಾಗೋಣ.

(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net