

ಡಾ.ವಿಜಯಲಕ್ಷ್ಮಿ ಪುರೋಹಿತ
ಅದೇ ತರಹ ಪಾಂಡವ ಧೀರಪುತ್ರನಾದ ಅಭಿಮನ್ಯು ಒಬ್ಬ ಧರ್ವತ್ಮ, ಮುಗ್ಧ, ಕಪಟರಹಿತನಾದ, ಕೃಷ್ಣನ ಪ್ರೀತಿಪಾತ್ರನಾದ. ಗುರುಹಿರಿಯರಲ್ಲಿ, ದೇವರಲ್ಲಿ ಭಕ್ತಿಗೌರವ ಇಟ್ಟುಕೊಂಡವ, ಒಬ್ಬನೇ ಅಮೂಲ್ಯ ಪುತ್ರ ಸುಭದ್ರೆಗೆ. ಆ ಅಭಿಮನ್ಯು ಚಕ್ರವ್ಯೂಹ ಭೇದಿಸಲು ಹೋಗಿ ವೀರಮರಣ ಹೊಂದಿದ. ಅಲ್ಲಿಯೂ ತಾಯಿಯ ಸಂತಾಪ, ಪುತ್ರಶೋಕ. ಆದರೂ ಸುಭದ್ರೆ ದುಃಖವನ್ನೆಲ್ಲ ಸಹಿಸಿಕೊಂಡಳು. ತನ್ನ ದುಃಖಕ್ಕೆ ಯಾರನ್ನೂ ದೂಷಿಸಲಿಲ್ಲ, ಬೈಯಲಿಲ್ಲ, ಯಾರಿಗೂ ಶಾಪ ಹಾಕಲಿಲ್ಲ. ಅಲ್ಲಿಯೂ ತಾಯಿ ಜೀವ-ಇಲ್ಲಿಯೂ ತಾಯಿ ಜೀವ. ಒಂದು ಪಾಪಾತ್ಮದ ವಿಡಂಬನೆ ತೋರಿಸಿದರೆ, ಇನ್ನೊಬ್ಬ ತಾಯಿ ಸಹನಾಮೂರ್ತಿಯಾಗಿ, ಪುಣ್ಯಜೀವಿ ಅನಿಸಿಕೊಂಡಳು.
ಸ್ವಾರ್ಥದ ಅಟ್ಟಹಾಸ ಮೆರೆದ ಗಾಂಧಾರಿ ಕೇಡನ್ನೇ ಮಾಡಿದಳು. ಅವಳಿಗೆ ಸತ್ಯ ಗೊತ್ತಿತ್ತು. ಯುದ್ಧ ಏತಕ್ಕಾಗಿ ನಡೆಯಿತು, ತನ್ನ ಮಕ್ಕಳು ಯಾವ ಕಾರಣಕ್ಕೆ ವಧಿಸಲ್ಪಟ್ಟರು, ಧರ್ಮವಿಜಯದ ಅಗತ್ಯವೇನಿತ್ತು ಎಂಬುದೆಲ್ಲದರ ಅರಿವಿತ್ತು. ಆದರೂ, ಶೋಕಸಂತಾಪದಲ್ಲಿ ಮುಳುಗಿದಳು. ಅಷ್ಟೇ ಆಗಿದ್ದರೆ ಯಾರಿಗೂ ಹಾನಿ ಇರಲಿಲ್ಲ. ಆದರೆ, ಇತರರೂ ದುಃಖ, ಕೇಡು ಅನುಭವಿಸಲಿ ಎಂದು ಕೃಷ್ಣನಿಗೇ ಶಾಪ ಕೊಟ್ಟಳು. ನಮ್ಮ ಸಮಾಜದ ಜೀವನ ನೋಡಿದಾಗಲೂ ಇಂಥವರು ತುಂಬ ಜನ ಕಾಣ ಸಿಗುತ್ತಾರೆ. ಸಾಗಬಾರದ ಹಾದಿಯಲ್ಲಿ ಸಾಗಿ ನೀತಿಯನ್ನು ಉಲ್ಲಂಘಿಸುವವರು, ತಮ್ಮದೇ ತಪು್ಪ ಇದ್ದರೂ ಅದನ್ನು ಪ್ರಾಂಜಲ ಮನಸಿನಿಂದ ಒಪ್ಪಿಕೊಳ್ಳದೆ, ಆ ದುಃಖ, ಶೋಕವನ್ನು ಇತರರಿಗೂ ಉಂಟು ಮಾಡುವ ವಿಚಿತ್ರ, ವಿಕ್ಷಿಪ್ತ ಮಾನಸಿಕತೆಯವರು. ಶೋಕ, ದುಃಖದ ಸಂದರ್ಭಗಳಲ್ಲಿ ಸ್ವಾರ್ಥ, ಲೋಭದಿಂದ ಆವರಿಸಿಕೊಂಡು ಮತ್ತೊಬ್ಬರಿಗೆ ಕೆಡುಕನ್ನು ಬಗೆಯುವುದು ಯಾವ ಧರ್ಮ? ಇದರಿಂದ ನಮಗೂ ಹಾನಿ, ಇತರರಿಗೂ ಹಾನಿ. ಆಗಿ ಹೋದದ್ದನ್ನು ಮತ್ತೆ ಸರಿ ಮಾಡಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ವಿನಯ, ತಾಳ್ಮೆಯನ್ನೇ ಭೂಷಣವಾಗಿಸಿಕೊಂಡು ಮುಂದಿರುವ ಆಯ್ಕೆಗಳನ್ನು ಗಮನಿಸಬೇಕು, ಸರಿಯಾದ ಹಾದಿಯಲ್ಲಿ ಸಾಗಬೇಕು. ಇಲ್ಲವಾದರೆ ಭಸ್ಮಾಸುರನ ಗತಿ ಆಗುತ್ತದೆ. ಪರರನ್ನು ಸುಡಲು ಹೋಗಿ ತಾನೇ ಸುಟ್ಟು ಬೂದಿಯಾದ. ಹಾಗೆ ನಮ್ಮ ಕರ್ಮ ನಮಗೇ ಶಾಪ ಆಗಬಾರದು. ವ್ಯಕ್ತಿತ್ವಕ್ಕೆ ಸಂಯಮವೇ ಭೂಷಣವಾಗಬೇಕು ಎಂಬುದನ್ನು ಮರೆಯದಿರೋಣ.
(ಲೇಖಕರು ವೈದ್ಯರು, ಹವ್ಯಾಸಿ ಬರಹಗಾರರು)