

ಒಬ್ಬ ವಿದ್ಯಾರ್ಥಿ ಮುಖ್ಯೋಪಾಧ್ಯಾಯರ ಬಳಿ ಧಾವಂತದಿಂದ ಬಂದು, ‘ಸರ್, ನಾನು ನಾಳೆಯಿಂದ ಶಾಲೆಗೆ ಬರುವುದಿಲ್ಲ, ಈ ಶಾಲೆಯನ್ನು ಬಿಡುತ್ತಿದ್ದೆನೆ’ ಎಂದ. ಅವರು, ‘ಸರಿ, ಬರಬೇಡ. ಆದರೆ ಏನಾಯಿತು ಎಂಬುದನ್ನು ಹೇಳಿ ಹೋಗು’ ಎಂದರು. ‘ಈ ಶಾಲೆಯಲ್ಲಿ ಯಾವುದೂ ಸರಿಯಾಗಿಲ್ಲ. ಅಧ್ಯಾಪಕರು ಒಬ್ಬರನ್ನೊಬ್ಬರು ನಿಂದಿಸುತ್ತಾರೆ. ಎಲ್ಲರೂ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಮಗೆ ಕನ್ನಡ ಕಲಿಸುವ ಅಧ್ಯಾಪಕರಿಗೇ ಕನ್ನಡವನ್ನು ಸರಿಯಾಗಿ ಓದಲು ಬರುವುದಿಲ್ಲ. ಇಲ್ಲಿ ಯಾವ ಶಿಕ್ಷಕರೂ ಸರಿಯಾಗಿಲ್ಲ. ವಿದ್ಯಾರ್ಥಿಗಳು ಯಾವಾಗಲೂ ಕಚ್ಚಾಡುತ್ತಿರುತ್ತಾರೆ. ನನ್ನ ಸಹಪಾಠಿಗಳ ನಡುವೆ ಹೊಡೆದಾಟ, ಬಡಿದಾಟ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಒಬ್ಬರು ಇನ್ನೊಬ್ಬರನ್ನು ಕೀಳಾಗಿ ಕಾಣುತ್ತಾರೆ. ಒಟ್ಟಿನಲ್ಲಿ ಈ ಶಾಲೆಯೇ ಸರಿಯಾಗಿಲ್ಲ, ನಾಳೆಯಿಂದ ನಾನು ಈ ಶಾಲೆಗೆ ಬರಲಾರೆ’ ಎಂದು ಒಂದೇ ಉಸಿರಿನಲ್ಲಿ ವಿವರಿಸಿ ಹೇಳಿದ.
ಮುಖ್ಯೋಪಾಧ್ಯಾಯರು-‘ಸರಿ, ಹಾಗಾದರೆ ನಾನು ಹೇಳಿದ ಒಂದು ಕೆಲಸವನ್ನು ಮಾಡಿ ಇಲ್ಲಿಂದ ಹೋಗಬಹುದು’ ಎಂದರು. ಒಂದೇ ಒಂದು ಕೆಲಸ ತಾನೇ ಎಂದುಕೊಂಡು, ‘ಆಗಬಹುದು, ಅದೇನು ಬೇಗ ಹೇಳಿ’ ಎಂದು ಅವಸರಿಸಿದ. ಅವರು ಮೇಜಿನ ಮೇಲೆ ನೀರು ತುಂಬಿ ಇಟ್ಟಿದ್ದ ಗಾಜಿನ ಲೋಟವನ್ನು ತೋರಿಸುತ್ತ, ‘ಇದನ್ನು ಹಿಡಿದುಕೊಂಡು ನೀರು ಚೆಲ್ಲದಂತೆ ಶಾಲೆಯನ್ನು ಮೂರು ಸುತ್ತು ಹಾಕಿ ಬಾ, ಆಮೇಲೆ ನೀನು ಹೋಗಬಹುದು’ ಎಂದರು. ಅಷ್ಟೆತಾನೇ ಎಂದು ಲೋಟವನ್ನು ಹಿಡಿದು ಮೂರು ಸುತ್ತು ಹಾಕಿ ಬಂದ. ಮುಖ್ಯೋಪಾಧ್ಯಾಯರು, ‘ನೀರು ಎಲ್ಲಿಯಾದರೂ ಚೆಲ್ಲಿತೇ?’ ಎಂದು ಕೇಳಿದರು. ‘ಇಲ್ಲ’. ‘ನೀನು ಲೋಟವನ್ನು ಹಿಡಿದು ಸುತ್ತುವಾಗ ಸಹಪಾಠಿಗಳು ಜಗಳವಾಡುತಿದ್ದರೆ?’ ಅವನ ಉತ್ತರ ‘ಇಲ್ಲ’. ‘ಅಧ್ಯಾಪಕರು ಒಬ್ಬರ ಬಗ್ಗೆ ಇನ್ನೊಬ್ಬರು ಹಗುರವಾಗಿ ಮಾತನಾಡುತಿದ್ದರೆ?’ ‘ಇಲ್ಲ’. ‘ಅವರೇಕೆ ಜಗಳವಾಡುತ್ತಿರಲಿಲ್ಲ ಎಂಬುದು ನಿನಗೆ ಗೊತ್ತೇ?’ ಎಂದು ಕೇಳಿದಾಗಲೂ, ಅವನಿಂದ ‘ಇಲ್ಲ’ ಎಂಬ ಉತ್ತರ. ‘ನಿನ್ನ ಗಮನ ಎಲ್ಲವೂ ಗಾಜಿನಲೋಟ ಮತ್ತು ನೀರಿನ ಕಡೆಗೇ ಇತ್ತು, ನೋಡು, ಎಲ್ಲಿಯವರೆಗೆ ನಾವು ನಮ್ಮ ಗುರಿ ಮುಟ್ಟುವ ಕಡೆಗೆ ಗಮನ ಕೊಡುತ್ತೇವೆಯೋ ಅಲ್ಲಿಯವರೆಗೆ ಬೇರೆಯವರ ನ್ಯೂನತೆಗಳಾಗಲಿ, ತಪ್ಪುಗಳಾಗಲಿ ಗಮನಕ್ಕೆ ಬರುವುದಿಲ್ಲ, ಏಕಾಗ್ರತೆಯಿಂದ ವಿದ್ಯಾಭ್ಯಾಸ ಮುಂದುವರಿಸು’ ಎಂದು ಅವನಿಗೆ ತನ್ನ ತಪ್ಪಿನ ಮನವರಿಕೆ ಮಾಡಿಕೊಟ್ಟರು.
ನಮ್ಮ ಜೀವನದಲ್ಲೂ ಎಷ್ಟೋ ಬಾರಿ ಹೀಗಾಗುತ್ತದೆ. ಸುತ್ತಮುತ್ತಲಿನ ಸಂಗತಿಗಳು ನಮ್ಮನ್ನು ಕಂಗೆಡಿಸಿ, ಹೈರಾಣ ಮಾಡಿ ಬಿಡುತ್ತವೆ. ಸಣ್ಣಪುಟ್ಟ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ನಾವು ನಮ್ಮ ಗಮ್ಯವನ್ನೇ ಮರೆಯುತ್ತೇವೆ. ಆ ಕಡೆ ಸಾಗಬೇಕಾದ ಪಯಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತೇವೆ. ಅಂದ ಮೇಲೆ, ನಾವು ಅಂದುಕೊಂಡ ಗುರಿ ಸಾಧನೆ ಹೇಗೆ ಸಾಧ್ಯ? ನಮ್ಮ ಸುತ್ತಮುತ್ತ ಅನುನಕೂಲತೆ, ಗೊಂದಲಗಳಿದ್ದರೂ, ಅವುಗಳ ಕಡೆ ಹೆಚ್ಚು ಗಮನ ನೀಡದೆ ಸಾಧನೆಯ ಕಡೆ ಮುಖ ಮಾಡಿದಲ್ಲಿ ಜೀವನಪಯಣ ಸಾರ್ಥಕ.
(ಲೇಖಕರು ಇಂಜಿನಿಯರ್, ಹವ್ಯಾಸಿ ಬರಹಗಾರರು)