ಭಕ್ತಿ ಮತ್ತು ಆತ್ಮಶಕ್ತಿಯ ಮಹಿಮೆ

manollasa
Published on

ಎರಡು ಸಣ್ಣ ಕಥೆಗಳು ಸಾರುವ ಅದ್ಭುತ ಸತ್ಯ: ಒಂದು ಮಾರ್ಕಂಡೇಯನ ಕಥೆೆ.

ಮೃಖಂಡು ಎಂಬ ಮುನಿಗೆ ಮದುವೆಯಾಗಿ ಬಹಳ ವರ್ಷವಾದರೂ ಮಕ್ಕಳಾಗಲಿಲ್ಲ. ತನ್ನ ಆರಾಧ್ಯ ದೇವರಾದ ಶಿವನನ್ನು ಕುರಿತು ಕಠಿಣವಾದ ತಪಸ್ಸನ್ನು ಆಚರಿಸಿದ, ಅವನ ತಪಸ್ಸಿಗೆ ಶಿವನೊಲಿದ. ಮೃಖಂಡುವಿನಲ್ಲಿ ಕೇಳಿದ, ‘ನಿನಗೆ ಮಂದಬುದ್ಧಿಯಿರುವ ನೂರುವರ್ಷ ಬದುಕುವ ಮಗ ಬೇಕೋ ಅಥವಾ ಸುಜ್ಞಾನಿಯಾದ ಅಲ್ಪಾಯುಷಿ ಮಗ ಬೇಕೋ’. ಮೃಖಂಡು, ‘ಅಲ್ಪಾಯುಷ್ಯವಿರುವ ಸುಜ್ಞಾನಿಯಾದ ಮಗನನ್ನು ಕರುಣಿಸು’ ಎಂದು ಬೇಡಿದ. ಶಿವನ ವರಪ್ರಸಾದದಿಂದ ಹುಟ್ಟಿದ ಗಂಡುಮಗುವಿಗೆ ಮಾರ್ಕಂಡೇಯ ಎಂದು ಹೆಸರನ್ನಿತ್ತರು, ಮುಂದೆ ಅವನು ವೇದ, ಪುರಾಣಗಳನ್ನು ಅಧ್ಯಯನ ಮಾಡಿ ಸುಜ್ಞಾನಿಯಾಗಿ ಜೀವಿಸಿದ. ಆದರೆ ಅವನ ಹದಿನಾರನೇ ವರ್ಷದ ಹುಟ್ಟುಹಬ್ಬ ಬರುತ್ತಿದ್ದ ಹಾಗೆ ತಂದೆ-ತಾಯಿ ಕಣ್ಣೀರು ಸುರಿಸತೊಡಗಿದರು. ಮಾರ್ಕಂಡೇಯ, ‘ನಿಮ್ಮ ಕಣ್ಣೀರಿಗೆ ಕಾರಣವೇನು?’ ಎಂದು ಕೇಳಿದ. ಇಷ್ಟು ಸಮಯ ಮುಚ್ಚಿಟ್ಟ ಸತ್ಯವನ್ನು ಮಗನ ಬಳಿ ಬಿಚ್ಚಿಟ್ಟರು. ಮಗ ಧೃತಿಗೆಡಲಿಲ್ಲ. ‘ಅಮ್ಮಾ ನಾನು ಶಿವಭಕ್ತಿಯ ಶಕ್ತಿಯಿಂದ ಸಾವನ್ನು ಜಯಿಸಿಕೊಂಡು ಬರುವೆ’ ಎಂದು ಅವರಿಗೆ ಧೈರ್ಯ ಹೇಳಿ, ಕಾಡಿಗೆ ಹೋಗಿ ಶಿವಲಿಂಗದ ಮುಂದೆ ಕುಳಿತು ತಪಸ್ಸನ್ನಾಚರಿಸಿದ.

ಆ ವೇಳೆಗೆ ಅವನ ಆಯುಷ್ಯ ಮುಗಿದ ಕಾರಣ ಯಮದೂತರು ಬಂದರು. ಅವರಿಗೂ ಅವನನ್ನು ಕೊಂಡೊಯ್ಯಲು ಆಗಲಿಲ್ಲ. ಆವಾಗ ಸ್ವತಃ ಯಮಧರ್ಮರಾಯ ಸಿಟ್ಟಿನಿಂದಲೇ ಬಂದ. ಮಾರ್ಕಂಡೇಯ ಶಿವಲಿಂಗವನ್ನು ಬಿಗಿದಪ್ಪಿಕೊಂಡ. ಯಮಧರ್ಮರಾಯನು ಶಿವಲಿಂಗ ಮತ್ತು ಮಾರ್ಕಂಡೇಯನನ್ನು ಆವರಿಸುವಂತೆ ತನ್ನ ಪಾಶವನ್ನು ಬೀಸಿದ. ತಕ್ಷಣವೇ ಶಿವನು ಪ್ರತ್ಯಕ್ಷನಾದ. ‘ಭಕ್ತಾ ಮಾರ್ಕಂಡೇಯ ನಿನ್ನ ತಪಸ್ಸಿಗೆ ಮೆಚ್ಚಿದೆ, ನೀನು ದೀರ್ಘಾಯುಷಿಯಾಗಿ ಬಾಳು’ ಎಂದು ಅನುಗ್ರಹಿಸಿದ.

ಇನ್ನೊಂದು ಕಥೆ ಸತ್ಯವಾನ್ ಸಾವಿತ್ರಿ: ಸಾವಿತ್ರಿಯ ಮದುವೆಯ ತಯಾರಿ ನಡೆಯುವ ಸಂದರ್ಭದಲ್ಲಿ ನಾರದ ಮಹರ್ಷಿಗಳು ಅಲ್ಲಿಗೆ ಬಂದು ಕಠೋರವಾದ ಸತ್ಯವನ್ನು ಆಕೆಗೆ ತಿಳಿಸಿದರು. ಅದೇನೆಂದರೆ, ‘ಮದುವೆಯಾಗಿ ಒಂದು ವರ್ಷ ಪೂರ್ತಿಯಾಗುವ ದಿನವೇ ನಿನ್ನ ಗಂಡನಾದ ಸತ್ಯವಾನನು ಅಸುನೀಗುತ್ತಾನೆ’. ಆದರೂ ಸಾವಿತ್ರಿ ಸತ್ಯವಾನನನ್ನೇ ಮದುವೆಯಾದಳು. ನಾರದ ಮಹರ್ಷಿಗಳು ಹೇಳಿದ ಆ ದಿನ ಬಂದೇ ಬಿಟ್ಟಿತು. ಆಲದ ಮರದ ಕೆಳಗೆ ಸಾವಿತ್ರಿಯ ತೊಡೆಯ ಮೇಲೆ ದಣಿದ ಸತ್ಯವಾನನು ಮಲಗಿದ. ಆ ಹೊತ್ತಿಗೆ ಅವನ ಪ್ರಾಣಪಕ್ಷಿ ಹಾರಿಹೋಗುವ ಸಮಯದಲ್ಲಿ ಯಮಧರ್ಮನು ಪ್ರತ್ಯಕ್ಷನಾದ, ‘ನನ್ನ ಗಂಡನನ್ನು ಕರೆದುಕೊಂಡು ಹೋಗಬೇಡ. ಅವರ ಪ್ರಾಣವನ್ನು ಹಿಂತಿರುಗಿಸು. ಇಲ್ಲವಾದರೆ ನನ್ನನ್ನೂ ಅವರ ಜತೆ ಕರೆದುಕೊಂಡು ಹೋಗು’ ಎಂದು ಸವಾಲೆಸೆದಳು. ಸಾವಿತ್ರಿಯ ಅಚಲ ಭಕ್ತಿಗೆ, ಅಪ್ರಮೇಯ ಪ್ರೇಮಕ್ಕೆ ಕಠೋರ ಹೃದಯದ ಯಮನೂ ಕರಗಿದ. ‘ನೀವಿಬ್ಬರೂ ನೂರುಕಾಲ ಸುಖವಾಗಿ ಬಾಳಿ’ ಎಂದು ಮನಸಾರೆ ಹರಸಿದ.

ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿರುವುದು ನಮ್ಮೊಳಗೆ ಇರುವ ಭಕ್ತಿ ಮತ್ತು ಆತ್ಮಶಕ್ತಿಗೆ ಮಾತ್ರ. ಏನೇ ಬಂದರೂ ಧೃತಿಗೆಡದೆ ಮುನ್ನಡೆಯೋಣ. ಕಷ್ಟ ಎಂಬುದು ಮನಸ್ಸಿನ ಸ್ಥಿತಿ ಅದನ್ನು ಮೆಟ್ಟಿ ನಿಲ್ಲೋಣ.

ಹೇಮಲತಾ -ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net