ಜೀವನಪಥದಲ್ಲಿ ಉತ್ಸಾಹದಿಂದ ಮುಂದೆ ಸಾಗೋದಕ್ಕೆ ಏನು ಮಾಡಬೇಕು?

pen april
Published on

ಡಾ.ಗಣಪತಿ ಹೆಗಡೆ

ಶಾಲೆಯಲ್ಲಿ ನಿರಂತರವಾಗಿ ಪಾಠ ಪ್ರವಚನಗಳು ನಡೆಯುತ್ತಿದ್ದವು. ವಾರದಲ್ಲೊಮ್ಮೆ ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕಾಗಿ ಗುರುಗಳು ಏನಾದರೊಂದು ದೃಷ್ಟಾಂತದ ಮೂಲಕ, ಕಥೆಗಳ ಮೂಲಕ ಅವರಿಗೆ ತಿಳಿಹೇಳುತ್ತಿದ್ದರು. ಒಂದು ದಿನ ಗುರುಗಳು ತರಗತಿಯ ಒಳಗೆ ಬಂದವರೇ ಕಪ್ಪುಹಲಗೆಯ ಮೇಲೆ ದೊಡ್ಡದಾದ ಒಂದು ಬಿಳಿ ಹಾಳೆಯನ್ನು ಅಂಟಿಸಿದರು. ಹಾಗೆಯೇ ಆ ಬಿಳಿ ಹಾಳೆಯ ಮಧ್ಯ ಭಾಗದಲ್ಲಿ ಒಂದು ಕಪ್ಪುಚುಕ್ಕಿಯನ್ನು ಬರೆದರು. ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು- ‘ಮಕ್ಕಳೇ ನಿಮಗೆ ಹಾಳೆಯಲ್ಲಿ ಏನು ಕಾಣಿಸುತ್ತಿದೆ?’ ವಿದ್ಯಾರ್ಥಿಗಳೆಲ್ಲರ ಉತ್ತರ ಒಂದೇ, ‘ನಮಗೆ ಅಲ್ಲಿ ಒಂದು ಕಪ್ಪುಚುಕ್ಕೆ ಕಾಣಿಸುತ್ತಿದೆ’.

ಶಿಕ್ಷಕರು ಸಮಾಧಾನದಿಂದಲೇ ಹೇಳಿದರು, ‘‘ನಿಮಗೆ ಇಡೀ ಬಿಳಿಯ ಹಾಳೆಯಲ್ಲಿ, ಒಂದು ಕಪ್ಪುಚುಕ್ಕೆ ಮಾತ್ರವೇ ಕಣ್ಣಿಗೆ ಕಾಣಿಸುತ್ತಿದೆ. ಆದರೆ, ಒಂದು ಕಪ್ಪುಚುಕ್ಕೆ ಹೊರತಾಗಿ ಒಂದು ಇಡೀ ಬಿಳಿಯ ಹಾಳೆ ಅಲ್ಲಿರುವುದು ನಿಮ್ಮ ಗಮನಕ್ಕೆ ಬರಲೇ ಇಲ್ಲ. ನಿಮ್ಮ ಜೀನವದಲ್ಲೂ ಹಾಗೇ. ಕಪ್ಪುಚುಕ್ಕೆ ಎನ್ನುವುದು ಜೀವನದ ಅಡೆತಡೆ ಮಾತ್ರ. ಆದರೆ ಬಿಳಿಯ ಹಾಳೆ ಇಡೀ ನಿಮ್ಮ ಜೀವನದಲ್ಲಿ ನಿಮಗೆ ಸಿಕ್ಕಿ ತುಂಬಿ ತುಳುಕುತ್ತಿರುವ ವಿಪುಲವಾದ ಅವಕಾಶಗಳು. ಈ ಅವಕಾಶಗಳನ್ನು ಬಳಸಿಕೊಂಡು ಆ ಕಪ್ಪುಚುಕ್ಕೆಯನ್ನು ದೂರ ಹೋಗಲಾಡಿಸಬೇಕಾದ್ದು, ನಿಮ್ಮ ಕರ್ತವ್ಯ. ನಿಮ್ಮ ಓದಿನಲ್ಲಿ, ಜೀವನದ ಪ್ರಗತಿಯಲ್ಲಿ ಎಂದಿಗೂ ಕೂಡ ಆ ಕಪ್ಪುಚುಕ್ಕೆ ಅಡ್ಡ ಬರಬಾರದು. ಆ ಚುಕ್ಕೆ ತರಹದಲ್ಲಿ ನಿಮ್ಮ ಅಡೆತಡೆಗಳು ನಿಮ್ಮ ಕಣ್ಣಿಗೆ ಕಾಣಿಸುತ್ತವೆ. ಆದರೆ ಆ ದೊಡ್ಡ ಬಿಳಿ ಹಾಳೆ ಅಗಾಧ ಅವಕಾಶಗಳಿಂದ ತುಂಬಿದೆ. ಆದ್ದರಿಂದ ನೋಡುವ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು.

ಕೇವಲ ಸಮಸ್ಯೆಗಳನ್ನು ನೋಡುವುದು ನಮ್ಮ ಜೀವನವಾಗಬಾರದು. ಇಡೀ ಜೀವನ ಸುಖಮಯವಾಗಿ ಸಾಗುತ್ತಿರಬೇಕಾದರೆ ಮಧ್ಯೆ ಎಲ್ಲೋ ಒಂದು ಕಷ್ಟ ಬಂದು ಬಿಟ್ಟರೆ ಅದಕ್ಕಾಗಿ ಯೋಚಿಸುತ್ತ, ಶೋಕಿಸುತ್ತ ಕುಳಿತುಬಿಡಬಾರದು, ಎದುರಾಗಿರುವ ಸಮಸ್ಯೆಯ ಹೊರಗಿರುವ ವಿಶಾಲ ಪ್ರಪಂಚವನ್ನು ನೋಡುವ ದೃಷ್ಟಿ ನಮ್ಮದಾಗಬೇಕು. ಆ ಸಂದರ್ಭ ಬಂದಾಗ ಮಾತ್ರವೇ ಮನುಷ್ಯ ಜೀವನದಲ್ಲಿ ಗೆಲ್ಲುವುದಕ್ಕೆ ಸಾಧ್ಯ. ಇಲ್ಲದೆ ಹೋದರೆ ಜೀವನಪೂರ್ತಿ ಸಮಸ್ಯೆಗಳೇ ತುಂಬಿದೆ ಎಂಬ ಭಾವನೆಯಿಂದ ಕೊರಗುತ್ತ ಕುಳಿತುಕೊಳ್ಳಬೇಕಾಗುತ್ತದೆ. ಅದು ಆಗದೇ ಇರಲಿ ಎಂಬ ದೃಷ್ಟಿಯಿಂದ ನಿಮಗೆ ಈ ದೃಷ್ಟಾಂತವನ್ನು ಹೇಳಿದ್ದೀನಿ. ಇದು ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ’’ ಎಂದು ಹೇಳಿ ವಿದ್ಯಾರ್ಥಿಗಳ ಬೆನ್ನು ಸವರಿದರು.

ಇಷ್ಟು ಸಾಕಲ್ಲವೇ ನಾವು ನಮ್ಮ ಜೀವನದ ವಿಪುಲ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ. ಕಪ್ಪುಚುಕ್ಕೆಯಿಂದ ಹೊರಬಂದು ವಿಶಾಲ ಪ್ರಪಂಚವನ್ನು ನೋಡುವುದಕ್ಕೆ. ನಾವು ಕೂಡ ಸಕಾರಾತ್ಮಕ ಸಂಗತಿಗಳನ್ನು ಅಳವಡಿಸಿಕೊಂಡು, ಸಮಸ್ಯೆಗಳನ್ನು ಮೆಟ್ಟಿನಿಂತು ಜೀವನಪಥದಲ್ಲಿ ಉತ್ಸಾಹದಿಂದ ಮುಂದೆ ಸಾಗೋಣ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net