

'ಮಲ್ನಾಡ ಮೂಲೆನಾಗೇ ಇತ್ತೊಂದು ಸೋಮ್ನ ಹಳ್ಳಿ’ ಎಂದು ಆರಂಭವಾಗುವ ಕನ್ನಡದ ಹಳೆಯ ಚಿತ್ರಗೀತೆಯೊಂದರ ಸಾಲಿನಲ್ಲಿ ಜಂಭದ ಅಜ್ಜಿಯೊಬ್ಬಳ ಕತೆ ಇದೆ. ಅಜ್ಜಿ ತನ್ನ ಬಳಿ ಇರುವ ಹುಂಜ ಕೂಗಿದರೆ ಮಾತ್ರ ಇಡೀ ಹಳ್ಳಿಗೆ ಬೆಳಕಾಗುತ್ತದೆ ಎಂದು ನಂಬಿದ್ದವಳು. ಅದೊಂದು ದಿನ ಊರಿನ ಜನರಿಗೆ ಬುದ್ಧಿ ಕಲಿಸಬೇಕೆಂದು ತನ್ನ ಕೋಳಿಯ ಸಹಿತ ಊರು ಬಿಡುತ್ತಾಳೆ. ಎಂದಿನಂತೆ ಮತ್ತೆ ಬೆಳಗಾಗುತ್ತದೆ. ಊರ ಜನ ಕ್ರಮೇಣ ಅಜ್ಜಿಯನ್ನು ಮರೆತು ಬಿಡುತ್ತಾರೆ. ಅಜ್ಜಿಯ ಗರ್ವ ಇಳಿದು ಊರಿಗೆ ವಾಪಸಾಗುತ್ತಾಳೆ. ‘ಸದ್ದಿಲ್ದೆ ಸೂರ್ಯ ಚಂದ್ರ ಬೆಳಕ ಕೊಡ್ತಾರೆ ಈ ಭೂಮಿ ಮಂದಿ ಮಾತ್ರ ಬಿಂಕ ಪಡ್ತಾರೆ’ ಎನ್ನುವ ಸಾಲುಗಳೊಂದಿಗೆ ಒಳ್ಳೆ ನೀತಿ ಬಾಳಿನ ರೀತಿಯನ್ನು ತಿಳ್ಕೊಂಡು ಎಲ್ಲರೂ ಚೆನ್ನಾಗಿ ಬದುಕಬೇಕು ಎನ್ನುವ ಅಶಯದೊಂದಿಗೆ ಗೀತೆ ಕೊನೆಯಾಗುತ್ತದೆ.
ನಿಜ ನಮ್ಮಲ್ಲಿ ಕೂಡ ಹಲವು ಜನ ಇಂಥದ್ದೊಂದು ಅಹಂನ್ನು ತಮಗರಿವಿಲ್ಲದೆ ಹೊಂದಿರುತ್ತಾರೆ. ‘ನಾನು ಪ್ರಮುಖ ವ್ಯಕ್ತಿ, ನನ್ನನ್ನು ಎಲ್ಲರೂ ಗುರುತಿಸುತ್ತಾರೆ, ನಾನೆಂದರೆ ಎಲ್ಲರಿಗೂ ಇಷ್ಟ. ನಾನು ತುಂಬ ಚಂದ ಇದ್ದೀನಿ, ನಾನಿಲ್ಲದಿದ್ದರೆ ಕಾರ್ಯಕ್ರಮ ಕಳೆಗಟ್ಟುವುದಿಲ್ಲ, ನಾನಿದ್ದಲ್ಲಿ ನಗುವಿರತ್ತೆ. ಜನ ನನ್ನನ್ನು ಮಿಸ್ ಮಾಡ್ತಾರೆ...’ ಹೀಗೆ ಈ ಅಹಂನ ಭಾವಗಳು ತರಹೇವಾರಿಯಾದವು.
ನಿಜಕ್ಕೆಂದರೆ ಅವರಲ್ಲಿ ಅಂಥದ್ದೊಂದು ಯೋಗ್ಯತೆ ಇದ್ದಿರಬಹುದು. ಹಾಗಾಗಿಯೇ ಆ ಬಗೆಗೊಂದು ಆತ್ಮವಿಶ್ವಾಸ ಅವರಲ್ಲಿದ್ದರೆ ಅದು ಖಂಡಿತಾ ತಪ್ಪಲ್ಲ. ಆದರೆ ಆ ವಿಶ್ವಾಸ ತನ್ನ ಮಿತಿಯನ್ನು ಮೀರಿದರೆ ಅದು ಅಹಂಭಾವ ಎನಿಸಿಕೊಳ್ಳುತ್ತದೆ. ಹಾಗಾಗಿ ‘ನಾನು ಇಲ್ಲದಿರೆ ಏನಿಲ್ಲ’ ಎನ್ನುವ ಮನಸ್ಥಿತಿ ಸರಿಯಲ್ಲ. ‘ನನ್ನನ್ನು ಬಿಟ್ಟರೂ ಜಗತ್ತು ಎಂದಿನಂತೆ ಮುಂದೆ ಸಾಗುತ್ತದೆ’ ಎನ್ನುವುದು ತಿಳಿದಿರಬೇಕು. ಜಗತ್ತು ಅದೆಷ್ಟೋ ಮಹಾತ್ಮರನ್ನು ಕಂಡಿದೆ. ಇನ್ನೂ ಕಾಣಲಿಕ್ಕಿದೆ. ಇಲ್ಲಿರುವಷ್ಟು ದಿನ ನಮ್ಮ ಸಾಧನೆಗಳಿಂದ ಗುರುತಿಸಿಕೊಳ್ಳುವಂತಾಗಬೇಕೇ ಹೊರತು ಯೋಗ್ಯತೆಗಳನ್ನೇ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳಬಾರದು. ದಿನಂಪ್ರತಿ ವ್ಯಕ್ತಿತ್ವದ ಬೆಳವಣಿಗೆಯತ್ತ ಗಮನ ಹರಿಸೋಣ ಪ್ರದರ್ಶನದತ್ತ ಅಲ್ಲ. ಅಹಂಭಾವದಿಂದ ಉನ್ನತಿ ಸಾಧ್ಯವಿಲ್ಲ. ವಿನಯ, ಸರಳತೆ, ಸೌಜನ್ಯ, ಸಹಬಾಳ್ವೆ, ಸಮನ್ವಯದಂಥ ಗುಣಗಳೇ ಬಾಳಿಗೆ ಬೆಳಕಾಗಬಲ್ಲವು. ಇವುಗಳ ಅಳವಡಿಕೆಯಿಂದ ಜೀವನದ ದಾರಿಯೂ ಸುಗಮ, ಮನಸ್ಸಿಗೂ ನೆಮ್ಮದಿ. ವಿನಾಕಾರಣ ಅಹಂಕಾರ ಅಳವಡಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ, ಅಲ್ಲದೆ, ವ್ಯಕ್ತಿತ್ವಕ್ಕೂ ಹಾನಿ ಎಂಬ ವಾಸ್ತವವನ್ನು ಮನಗಾಣೋಣ. ಸರಳತೆಯ ಹಾದಿಯಲ್ಲಿ ಸಾಗೋಣ.
ನರೇಂದ್ರ ಎಸ್. ಗಂಗೊಳ್ಳಿ
(ಲೇಖಕರು ಉಪನ್ಯಾಸಕರು)