

ಅದೊಂದು ಪುಟ್ಟ ಗ್ರಾಮ. ಅಲ್ಲಿ ಒಂದು ಪುರಾತನ ದೇವಸ್ಥಾನವಿತ್ತು. ಆ ದೇಶದ ರಾಜನು ದೇವಸ್ಥಾನದ ಪೂಜಾಕೈಂಕರ್ಯಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಾ ದೇವಸ್ಥಾನದ ಹಿರಿಮೆಯನ್ನು ಎಲ್ಲೆಡೆ ಹೆಚ್ಚಿಸಿದ್ದನು. ಕಾರ್ಯದೊತ್ತಡದ ಕಾರಣಕ್ಕೆ ರಾಜನು ಆ ದೇವಸ್ಥಾನದ ಮೇಲುಸ್ತುವಾರಿಗಾಗಿ ಆಡಳಿತಾಧಿಕಾರಿಯನ್ನು ನೇಮಿಸಲು ತೀರ್ವನಿಸುತ್ತಾನೆ. ಅಂತಹ ಪ್ರಾಮಾಣಿಕ ವ್ಯಕ್ತಿಯನ್ನು ಹುಡುಕಲು ಪ್ರತಿದಿನ ರಾಜನು ದೇವಸ್ಥಾನದ ಬಳಿ ಮಾರುವೇಷದಲ್ಲಿ ಬಂದು ನಿಲ್ಲತೊಡಗಿದ. ಒಂದು ವಾರ ಗತಿಸಿದ ನಂತರ, ದೇವರ ದರ್ಶನಕ್ಕೆ ಬರುವ ನೂರಾರು ಭಕ್ತರಲ್ಲಿ ಒಬ್ಬನನ್ನು ಮಾತ್ರ ಗುರುತಿಸುವಲ್ಲಿ ರಾಜನು ಯಶಸ್ವಿಯಾದ.
‘ನಾಳೆ ಅರಮನೆಗೆ ಬಾ’ಎಂದು ರಾಜ ಆ ಭಕ್ತನಿಗೆ ಸೂಚಿಸಿದ. ಅಂತೆಯೇ ಆ ಭಕ್ತ ಅರಮನೆಗೆ ಬಂದು ರಾಜನಿಗೆ ತಲೆ ತಗ್ಗಿಸಿ ನಮಸ್ಕರಿಸಿ ನಿಂತ. ‘ನಾಳೆಯಿಂದ ನೀನು ಈ ದೇವಸ್ಥಾನದ ವ್ಯವಸ್ಥಾಪಕ. ಚೆನ್ನಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗು’ಎಂದು ರಾಜ ಹೇಳಿದ. ಆ ಭಕ್ತ ಗಾಬರಿಗೊಂಡು, ‘ಮಹಾರಾಜರೇ ನೀವು ಹೇಳಿದಂತೆ ದೇವಸ್ಥಾನದ ಜವಾಬ್ದಾರಿ ನಡೆಸುವಷ್ಟು ಶಿಕ್ಷಣವನ್ನು ನಾನು ಪಡೆದಿಲ್ಲ. ಅಷ್ಟೇ ಅಲ್ಲ, ನಾನು ಶ್ರೀಮಂತ ಕುಟುಂಬದಿಂದ ಬಂದವನೂ ಅಲ್ಲ. ಈ ಕೆಲಸ ನನ್ನಿಂದಾಗದು. ದಯವಿಟ್ಟು ಕ್ಷಮಿಸಿ’ ಎಂದನು. ಆಗ ರಾಜ, ‘ದೇವಸ್ಥಾನದ ಆಡಳಿತಾತ್ಮಕ ಹುದ್ದೆ ನಿರ್ವಹಿಸಲು ಹೆಚ್ಚಿನ ಶಿಕ್ಷಣ ಪಡೆಯುವುದು ಮಹತ್ವವಲ್ಲ. ಅಲ್ಲಿ ಶ್ರದ್ಧೆ, ಪ್ರಾಮಾಣಿಕತೆ. ಹಾಗೂ ಸಾಮಾಜಿಕ ಕಳಕಳಿ ಮುಖ್ಯ. ನಾನು ಅದನ್ನು ನಿನ್ನಲ್ಲಿ ಕಂಡಿದ್ದೇನೆ. ಬಹುತೇಕರು ದೇವಸ್ಥಾನಕ್ಕೆ ಬರುವಾಗ ರಸ್ತೆಯಲ್ಲಿದ್ದ ಸಣ್ಣಕಲ್ಲಿಗೆ ಎಡವಿ ಪೆಟ್ಟಾಗಿ ರಕ್ತ ಸುರಿದರೂ ಆ ಕಲ್ಲನ್ನು ಕಿತ್ತು ರಸ್ತೆಯಾಚೆ ಹಾಕುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ.
ಅಲ್ಲದೆ, ಅಕ್ಕಪಕ್ಕದ ರಸ್ತೆಯಲ್ಲಿ ಕುಳಿತು ತುತ್ತು ಅನ್ನಕ್ಕಾಗಿ ಅನೇಕ ನಿರ್ಗತಿಕರು ಯಾಚಿಸುತ್ತಿದ್ದರು ಕೂಡ ಅವರತ್ತ ಕಣ್ಣೆತ್ತಿ ಸಹ ನೋಡದೆ ಜನ ದೇವರ ದರ್ಶನಕ್ಕೆ ಮುಗಿಬಿದ್ದುದನ್ನು ಕಂಡೆ. ಆದರೆ ನೀನು ಮಾತ್ರ ರಸ್ತೆಯಲ್ಲಿದ್ದ ಕಲ್ಲನ್ನು ಕಿತ್ತು ಎಸೆದು ನಡೆದು ಹೋಗುವವರಿಗೆ ಅನುಕೂಲ ಮಾಡಿದೆ. ದುಃಖದಲ್ಲಿ ಇದ್ದವರ ಕಣ್ಣೀರು ತೊಡೆವ ಪ್ರಯತ್ನ ಮಾಡಿರುವೆ. ಈಗ ಹೇಳು ನಿನ್ನಷ್ಟು ಪ್ರಾಮಾಣಿಕರು ಹಾಗೂ ಸುಶಿಕ್ಷಿತರು ಯಾರಿದ್ದಾರೆ..?’ ಎಂದ. ರಾಜನ ಮಾತು ಕೇಳಿ ಆ ಭಕ್ತ ಮೂಕವಿಸ್ಮಿತನಾದನು; ದೇಗುಲದ ವಿಷಯದಲ್ಲಿ ರಾಜನ ಸೂಚನೆ ಪಾಲಿಸಲು ಮುಂದಾದನು. ನಾವು ಮಾಡುವ ಸತ್ಕಾರ್ಯಗಳು ಎಂದೂ ಹುಸಿಯಾಗುವುದಿಲ್ಲ. ಯಾವುದೇ ಪ್ರತಿಫಲದ ನಿರೀಕ್ಷೆ ಮಾಡದೆ, ಪ್ರತಿಷ್ಠೆ, ಗೌರವಕ್ಕಾಗಿ ಸತ್ಕಾರ್ಯದಲ್ಲಿ ತೊಡಗದೆ ನಿರ್ಮಲಭಾವದಿಂದ ಸಹಾಯ ಸಹಕಾರ ಸಲ್ಲಿಸಿದರೆ ಅದು ದೇವನಿಗೂ ಪ್ರಿಯವಾಗುತ್ತದೆ. ಸಮಾಜದಿಂದ ನಾನಾ ನೆರವು ಪಡೆಯುವ ನಾವು ಚಿಕ್ಕಪುಟ್ಟ ರೀತಿಯಲ್ಲಾದರೂ ಪ್ರತಿಯಾಗಿ ಸಮಾಜಕ್ಕೆ ಏನನ್ನಾದರೂ ಕೊಡುವುದು ಕರ್ತವ್ಯ.
(ಲೇಖಕರು ಹವ್ಯಾಸಿ ಬರಹಗಾರರು)