

ಒಂದು ವಿಶಾಲ ಕಾಡಿನ ದೊಡ್ಡದೊಂದು ಮರದ ಕೊಂಬೆಯ ಮೇಲೆ ಗುಬ್ಬಿಗಳ ಜೋಡಿ ನೆಮ್ಮದಿಯ ಜೀವನ ಸಾಗಿಸುತ್ತಿತ್ತು. ಒಂದು ದಿನ ಆನೆ ಮಧ್ಯಾಹ್ನದ ಬಿಸಿಲು ತಡೆಯಲಾರದೆ ಆ ಮರದ ಕೆಳಗೆ ಸ್ವಲ್ಪ ಹೊತ್ತು ವಿಶ್ರಾಂತಿಗೆಂದು ನಿಂತುಕೊಂಡಿತು. ಹಾಗೇ ಸುಮ್ಮನೆ ನಿಂತಿದ್ದರೆ ಸಮಸ್ಯೆ ಇರಲಿಲ್ಲ. ಬದಲು ತುಂಟ ಬುದ್ಧಿಯಿಂದ ಸೊಂಡಿಲನ್ನು ಬೀಸಿ ಮರದ ಕೊಂಬೆಯನ್ನು ಮುರಿದು ಹಾಕಿತು. ಅದೇ ಕೊಂಬೆಯಲ್ಲಿ ಇದ್ದ ಗುಬ್ಬಚ್ಚಿ ಜೋಡಿಯ ಗೂಡು ಮೊಟ್ಟೆಗಳು ಕೆಳಗೆ ಬಿದ್ದು ಒಡೆದು ಹೋದವು. ಅದೃಷ್ಟವಶಾತ್ ಆ ಜೋಡಿ ಬದುಕುಳಿದವು. ಮೊಟ್ಟೆಗಳು ನಾಶವಾಗಿದ್ದಕ್ಕೆ ಹೆಣ್ಣು ಗುಬ್ಬಚ್ಚಿ ತುಂಬ ಶೋಕಿಸುತ್ತಿತ್ತು. ಇದನ್ನು ಕಂಡ ಸ್ನೇಹಿತೆ ಮರಕುಟಿಗ ಹಕ್ಕಿ ಗುಬ್ಬಿಯ ಅಳುವಿಗೆ ಕಾರಣವನ್ನು ತಿಳಿದು, ‘ನಡೆದು ಹೋಗಿರುವ ಅನಾಹುತಕ್ಕೆ ಈಗ ಎಷ್ಟು ಅತ್ತರೂ ಪ್ರಯೋಜನವಿಲ್ಲ. ನನ್ನ ಜೊತೆ ಬಾ’ ಎಂದಿತು. ನಂತರ ತನ್ನ ಸ್ನೇಹಿತೆಯಾದ ದುಂಬಿಯ ಹತ್ತಿರ ಕರೆದುಕೊಂಡು ಹೋಗಿ ಆನೆಯಿಂದ ಗುಬ್ಬಚ್ಚಿಗೆ ಆದ ಅನ್ಯಾಯವನ್ನು ವಿವರಿಸಿತು.
ಅದನ್ನು ಕೇಳಿದ ದುಂಬಿಯು, ‘ಅಯ್ಯೋ ಪಾಪ! ಗುಬ್ಬಚ್ಚಿಗೆ ಇಷ್ಟು ದೊಡ್ಡ ದುಃಖ ಬಂದಿದೆಯೇ? ಏನು ಮಾಡೋದು?’ ಅಂತ ಯೋಚಿಸುತ್ತ ಅದರ ಸ್ನೇಹಿತನಾದ ಮೇಘದೂತನೆಂಬ ಕಪ್ಪೆಯ ಬಳಿ ಕರೆದುಕೊಂಡು ಹೋಯಿತು. ಎಲ್ಲ ವಿಷಯ ತಿಳಿದ ಕಪ್ಪೆ, ‘ನಾವೆಲ್ಲ ಚಿಕ್ಕ ಚಿಕ್ಕ ಪ್ರಾಣಿಗಳಾದರೂ ಬುದ್ಧಿವಂತಿಕೆ ಹಾಗೂ ಒಗ್ಗಟ್ಟಿನಿಂದ ಪ್ರಯತ್ನ ಪಟ್ಟರೆ ದೊಡ್ಡಗಾತ್ರದ, ಪರ ಮಮೂಢನಾದ ಆನೆಗೆ
ತಕ್ಕ ಪಾಠವನ್ನು ಕಲಿಸಬ ಹುದು’ ಎಂದಿತು. ಕಪ್ಪೆಯ ಮಾತಿಗೆ ಎಲ್ಲರೂ ಸಮ್ಮತಿ ವ್ಯಕ್ತಪಡಿಸಿದರು.
ದುಂಬಿಯು ಆ ಆನೆಯ ಕಣ್ಣಿನ ಹತ್ತಿರ ಹೋಗಿ ಝೇಂಕರಿಸಿತು. ತಕ್ಷಣ ಮರಕುಟಿಗ ಹಕ್ಕಿ ಆನೆಯ ಕಣ್ಣುಗಳಿಗೆ ಕುಟುಕಿತು. ಪರಿಣಾಮ, ಕಣ್ಣುಗಳ ಉರಿ, ನೋವಿನಿಂದ ನೀರಿನ ಮಡುವನ್ನು ಸೇರಬೇಕೆಂದು ಆನೆ ಅತ್ತಿತ್ತ ಓಡಿತು. ಅದೇ ಸಮಯಕ್ಕೆ ಕಪ್ಪೆ ಕೂಗುವ ಶಬ್ದದ ಕಡೆ ನೀರು ಇರುವುದೆಂದು ತಿಳಿದು ಆನೆ ಕಣಿವೆಯೊಳಕ್ಕೆ ಬಿದ್ದು ಒದ್ದಾಡಿತು. ಆ ಸಂಕಟದ ಸಮಯದಲ್ಲಿ ಅದಕ್ಕೆ ತಾನು ಗುಬ್ಬಚ್ಚಿಗೆ ಮಾಡಿದ ಅನ್ಯಾಯದ ಅರಿವಾಗಿ ಪಶ್ಚಾತಾಪ ಪಟ್ಟಿತು. ಸಣ್ಣಜೀವಿಗಳು ಸಮಾಧಾನಗೊಂಡವು.
ತಾತ್ಪರ್ಯ ಇಷ್ಟೇ. ಭೂಮಿಯ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು, ಅರ್ಹತೆ ಇದೆ. ಶಕ್ತಿ ಕಡಿಮೆಯಿದ್ದ ಮಾತ್ರಕ್ಕೆ ಅವುಗಳ ಮೇಲೆ ಬಲಪ್ರಯೋಗ ಸಲ್ಲ. ನಿಸರ್ಗದ ಸೃಷ್ಟಿಯಲ್ಲಿ ಎಲ್ಲರಿಗೂ ಸಾಮರಸ್ಯದಿಂದ, ಸಂತೃಪ್ತಿಯಿಂದ ಬದುಕುವ ಶಕ್ತಿಯನ್ನು ಆ ಸೃಷ್ಟಿಕರ್ತನೇ ಕರುಣಿಸಿದ್ದಾನೆ. ಈ ವಾಸ್ತವವನ್ನು ಅರಿತುಕೊಳ್ಳದೆ ಗರ್ವ, ಅಹಂಕಾರದಿಂದ ಇತರ ಜೀವಿಗಳ ಮೇಲೆ ಬಲಪ್ರಯೋಗ ಮಾಡುವ, ಹಿಂಸೆ ನೀಡುವ, ಗತ್ತು ತೋರುವ ವರ್ತನೆ ಸರಿಯಾದುದಲ್ಲ. ಗರ್ವದಿಂದ ನಡೆದುಕೊಳ್ಳದೆ ಎಲ್ಲರನ್ನೂ ದಯೆ, ಕರುಣೆ, ಸ್ನೇಹದ ಭಾವದಿಂದ ಕಾಣುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಆಗ ನೆಮ್ಮದಿ ನೆಲೆಸಿ, ಸಂತಸ ಅರಳುತ್ತದೆ.
(ಲೇಖಕಿ ಉಪನ್ಯಾಸಕಿ)