

| ಡಾ. ಕೆ.ಪಿ.ಪುತ್ತೂರಾಯ
ಒಮ್ಮೆ ಶ್ರೀಕೃಷ್ಣ ಪರಮಾತ್ಮ ತನ್ನ ಮೇಲೆ ನಿಜವಾದ ಪ್ರೀತಿ ಉಳ್ಳವರು ಯಾರು ಎಂಬುದನ್ನು ಪರೀಕ್ಷಿಸಲು ನಾರದರನ್ನು ಕರೆದ. ‘ನಾರದರೆ, ಯಾಕೋ ತುಂಬ ತಲೆ ನೋಯುತ್ತಿದೆ. ನನ್ನಲ್ಲಿ ನಿಜವಾದ ಪ್ರೀತಿ ಇರುವವರ ಪಾದಗಳನ್ನು ತೊಳೆದ ನೀರನ್ನು ನನ್ನ ತಲೆಯ ಮೇಲೆ ಪ್ರೋಕ್ಷಿಸಿದರೆ ತಲೆನೋವು ಶಮನವಾದೀತೇನೋ. ಹೋಗಿ ಅಂತಹ ಜಲವನ್ನು ತನ್ನಿ’ ಎಂದ. ಅಂತೆಯೇ, ನಾರದರು ಎಲ್ಲರನ್ನೂ ವಿಚಾರಿಸಲಾಗಿ, ಸಾಕ್ಷಾತ್ ಪರಮಾತ್ಮ ಸ್ವರೂಪಿಯಾದ ಶ್ರೀಕೃಷ್ಣನ ತಲೆಯ ಮೇಲೆ ನಮ್ಮ ಪಾದಗಳನ್ನು ತೊಳೆದ ನೀರನ್ನು ಪ್ರೋಕ್ಷಿಸಿದರೆ, ತಮಗೆ ನರಕವೇ ಪ್ರಾಪ್ತಿ ಆದೀತು ಎಂಬ ಭಯದಿಂದ ಯಾರೂ ಇದಕ್ಕೆ ಒಪ್ಪಲಿಲ್ಲ. ಆದರೆ, ತಮ್ಮ ಪ್ರಾಣವಲ್ಲಭನಂತೆ ಶ್ರೀಕೃಷ್ಣನನ್ನು ಆರಾಧಿಸುತ್ತಿರುವ ಗೋಪಿಕಾ ಸ್ತ್ರೀಯರು ಮಾತ, ‘ಕೃಷ್ಣನ ತಲೆನೋವು ಶಮನವಾಗುವಂತಿದ್ದರೆ ನಮಗೆ ನರಕವೇ ಪ್ರಾಪ್ತಿ ಆದರೂ ಪರವಾಗಿಲ್ಲ. ಹೋಗಿ, ನಮ್ಮ ಪಾದಗಳನ್ನು ತೊಳೆದ ನೀರನ್ನು ಅವನ ಶಿರದ ಮೇಲೆ ಪ್ರೋಕ್ಷಿಸಿ’ ಎನ್ನುತ್ತ ಅಂತಹ ನೀರನ್ನು ನೀಡಿದರಂತೆ!
ಇದುವೇ ನಿಚ್ಚಳವಾದ ಪ್ರೀತಿ, ಭಗವಂತನ ಮೇಲಿನ ಅನನ್ಯವಾದ ಭಕ್ತಿಯಲ್ಲಿ ಎರಡು ವಿಧ: ಒಂದು ಸಕಾಮ ಭಕ್ತಿ; ಇನ್ನೊಂದು ನಿಷ್ಕಾಮ ಭಕ್ತಿ. ಸಕಾಮ ಭಕ್ತಿ ಎಂದರೆ, ‘ನನಗೆ ಅದು ಕೊಡು, ಇದು ಕೊಡು, ಅದಕ್ಕಾಗಿ ಈ ಪೂಜೆ’ ಎಂಬ ಬೇಕುಗಳ ಪಟ್ಟಿಯೊಂದಿಗೆ ಭಗವಂತನನ್ನು ಪೂಜಿಸುವುದು, ನಿಷ್ಕಾಮ ಭಕ್ತಿ ಎಂದರೆ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಮಾಡುವ ಪೂಜೆ. ‘ನೀನು ಕೊಡು, ಬಿಡು ಅದು ನಿನಗೆ ಬಿಟ್ಟ ವಿಷಯ. ಆದರೆ, ನಿನಗೆ ನನ್ನ ಪೂಜೆ ನಿತ್ಯನಿರಂತರ’ ಎಂಬ ಭಾವನೆಯಿಂದ ಮಾಡುವ ಪೂಜೆ. ಭಗವಂತನಿಗೆ ಪ್ರಿಯವಾದುದು ನಿಷ್ಕಾಮ ಭಕ್ತಿಯೇ ಹೊರತು ಸಕಾಮ ಭಕ್ತಿಯಲ್ಲ! ಆದುದರಿಂದಲೇ ಶ್ರೀಕೃಷ್ಣ ಹೇಳುತ್ತಾನೆ- ‘ಕೃಪಣಾಃ ಫಲಹೇತವಃ’ ಅಂದರೆ ಪ್ರತಿಫಲಾಪೇಕ್ಷೆಯಿಂದ ಪೂಜಿಸುವವರು ದೀನರು. ನಿಷ್ಕಾಮ ಭಕ್ತರನ್ನೆಂದೂ ಭಗವಂತ ಕೈಬಿಡಲಾರ. ‘ಬೇಡಿದವರಿಗೆ ಬೇಡಿದ ವರಗಳನ್ನಷ್ಟೇ ನೀಡುವೆ. ಏನನ್ನೂ ಬೇಡದ ನಿಜ ಭಕುತರಿಗೆ ತನ್ನನ್ನು ತಾನೇ ನೀಡುವವ’ ಎಂಬುದಾಗಿ, ದಾಸರು ಇವನನ್ನು ಬಣ್ಣಿಸಿದರು.
ನಿಷ್ಕಾಮ ಭಕ್ತರಿಗೆ ಭಗವಂತನ ಅಭಯಹಸ್ತ ಹೀಗಿದೆ- ‘ಯೋಗಕ್ಷೇಮಂ ವಹಾಮ್ಯಹಂ’ ಅರ್ಥಾತ್ ‘ನಿನ್ನ ಯೋಗಕ್ಷೇಮವನ್ನು ನನಗೆ ಬಿಟ್ಟುಬಿಡು’ ಎಂದು. ಈ ರೀತಿಯಲ್ಲಿ ಭಗವಂತನಲ್ಲಿ ಇರಬೇಕಾದುದು ಅಚಲ, ಪ್ರಶ್ನಾತೀತವಾದ ಭಕ್ತಿಯೇ ಹೊರತು ಭಯಭೀತಿಯಲ್ಲ. ಕಾರಣ ಭಗವಂತ ಭಕ್ತರ ಅಧೀನನೇ ಹೊರತು ಭಯೋತ್ಪಾದಕನಲ್ಲ! ಈ ಕಾರಣದಿಂದಲೇ ತಮಗೆ ನರಕವಾದರೂ ಪರವಾಗಿಲ್ಲ ಅಂತ ಕೃಷ್ಣನ ಸುಖವನ್ನೇ ಬಯಸಿದರು ಆ ಗೋಪಿಕಾಸ್ತ್ರೀಯರು. ‘ಪ್ರೀತಿಗಾಗಿ ನೋವನ್ನು ಸಹಿಸಬೇಕು. ನೋವುಂಡು ಪ್ರೀತಿಯನ್ನೂ ಅನುಭವಿಸಬೇಕು, ಆನಂದಿಸಬೇಕು’ ಎಂಬುದನ್ನು ಸ್ಪಷ್ಟೀಕರಿಸಿದರು ಆ ಕೃಷ್ಣನ ನಿಜವಾದ ಭಕ್ತೆಯರು.
ಪರಮ ಶ್ರೇಷ್ಠವಾದ ಭಕ್ತಿ ಹೇಗಿರುತ್ತದೆ ಎಂದರೆ ಭಕ್ತ ಬೇಡಿಕೊಳ್ಳುತ್ತಾನೆ, ‘ಹೇ ದೇವಾ, ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಷಡ್ವೈರಿಗಳೂ ನನ್ನೊಳಗಿರಲಿ. ಆದರೆ ಅವುಗಳು ಹೇಗಿರಬೇಕೆಂದರೆ- ದೇವಾ, ನಿನ್ನನ್ನು ನೋಡುವ ಕಾಮನೆ ಎನಗಿರಲಿ, ನಿನ್ನ ವಿರೋಧಿಗಳ ಬಗ್ಗೆ ನನಗೆ ಕ್ರೋಧವಿರಲಿ, ನಿನ್ನ ಚರಣವ ನಾ ಬಿಡೆನೆಂಬ ಲೋಭವಿರಲಿ, ನಿನ್ನ ನಾಮದ ಮೋಹವೆನಗಿರಲಿ, ನಾನು ನಿನ್ನ ಭಕ್ತನೆಂಬ ಮದವಿರಲಿ ಹಾಗೂ ಈ ಭಾಗ್ಯ ಇತರರಿಗೆ ಇಲ್ಲವಲ್ಲ ಎಂಬ ಮತ್ಸರವಿರಲಿ!’
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)