ಅಂತರಂಗ ಮೆಚ್ಚುವಂಥ ಕೆಲಸ ಮಾಡಿ: ಮನೋಲ್ಲಾಸ

Manollasa
Published on
| ವಿದ್ವಾನ್ ನವೀನ್ ಶಾಸ್ತ್ರಿ ಪುರಾಣಿಕ

ಬದುಕಿನ ಜಂಜಾಟದಿಂದ ಬೇಸತ್ತಿದ್ದ ಒಬ್ಬ ಯುವಕ ಬುದ್ಧನ ಬಳಿಗೆ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೇಳಿಕೊಂಡ. ‘ಸ್ಮಶಾನದಲ್ಲಿ ಒಂದು ಹಗಲು, ಒಂದು ರಾತ್ರಿ ನೀನು ಕಳೆದು ಬಂದರೆ ಇದು ಸಾಧ್ಯ’ ಎಂದು ಬುದ್ಧ ಷರತ್ತು ವಿಧಿಸಿದ. ಯುವಕ ಹಾಗೆಯೇ ಮಾಡಿದ. ನಂತರ ಬುದ್ಧ ಅವನಿಗೆ ಕೇಳಿದ- ‘ಅಲ್ಲಿ ನೀನು ಏನು ನೋಡಿದೆ?’ ‘ಹಗಲಲ್ಲಿ ಎರಡು ಶವಗಳು ಅಂತಿಮಸಂಸ್ಕಾರಕ್ಕಾಗಿ ಬಂದಿದ್ದವು, ಒಂದು ಧನಿಕನದ್ದು, ಮತ್ತೊಂದು ಬಡವನದ್ದು’ ಎಂದ ಯುವಕ. ‘ಆ ಎರಡೂ ಚಿತೆಗಳ ಬೆಂಕಿಯಲ್ಲಿ ಏನಾದರೂ ವ್ಯತ್ಯಾಸವಿತ್ತೇ?’ ಎಂದು ಬುದ್ಧ ಪ್ರಶ್ನಿಸಿದಾಗ, ‘ಇಲ್ಲ, ಎರಡೂ ಸಮನಾಗಿ ಉರಿದು ಬೂದಿಯಾದವು’ ಎಂದ. ‘ರಾತ್ರಿಯಲ್ಲಿ ಏನು ಕಂಡೆ?’ ಎಂಬ ಪ್ರಶ್ನೆಗೆ, ‘ರಾತ್ರಿಯಿಡೀ ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತಿದ್ದೆ, ಅಂಗೈಲಿ ಜೀವಹಿಡಿದು ಯಾವಾಗ ಬೆಳಗು ಆಗುವುದೋ ಎಂದು ಜೀವಭಯದಿಂದ ಎದ್ದುಬಂದೆ’ ಎಂದ.

‘ನೀನು ಇನ್ನೂ ಒಂದು ಹಗಲು-ರಾತ್ರಿ ಅಲ್ಲೇ ಕಳೆಯಬೇಕು’ ಎಂದು ಬುದ್ಧ ಆದೇಶಿಸಿದಾಗ, ‘ಈಗಾಗಲೇ ಭಯಗ್ರಸ್ತನಾಗಿರುವ ನನ್ನನ್ನು ಅಲ್ಲಿಗೇ ಮತ್ತೆ ಕಳಿಸುವ ಉದ್ದೇಶವೇನು?’ ಎಂದು ಯುವಕ ಪ್ರಶ್ನಿಸಿದ. ತನ್ನ ಉದ್ದೇಶ ಈಡೇರದ ಕಾರಣ ಮತ್ತೆ ಕಳಿಸುತ್ತಿರುವುದಾಗಿ ಬುದ್ಧ ಹೇಳಿದ. ಹೀಗೆ ಸ್ಮಶಾನದಲ್ಲಿ ಮತ್ತೊಂದು ದಿನ-ರಾತ್ರಿ ಕಳೆದು ವಾಪಸಾದ ಯುವಕನಿಗೆ ಆದ ಅನುಭವದ ಕುರಿತು ಬುದ್ಧ ಕೇಳಿದಾಗ, ‘ಒಂದು ವಿಸ್ಮಯವನ್ನು ಕಂಡೆ. ಉರಿಯುವ ಚಿತೆಯನ್ನೇ ದಿಟ್ಟಿಸುತ್ತ ಕುಳಿತಿದ್ದ ನನಗೆ, ಇದ್ದಕ್ಕಿದ್ದಂತೆ ನನ್ನ ಶವವನ್ನೇ ಅಲ್ಲಿಗೆ ಹೊತ್ತು ತಂದಂತಾಯ್ತು. ಸುತ್ತ ನೆರೆದಿದ್ದ ಬಂಧು-ಮಿತ್ರರು ಅಳುತ್ತಿದ್ದರೂ, ಅವರಲ್ಲಿ ಕೆಲವರದ್ದು ತೋರಿಕೆಯ ಅಳುವಾಗಿತ್ತು. ಕೆಲವರು ‘ನೀನೇ ಮುಂದಿನ ಏಕೈಕ ವಾರಸುದಾರ’ ಎಂದು ಅಣ್ಣನಿಗೆ ಹೇಳುತ್ತಿದ್ದರು. ನನ್ನ ಚಿತೆಗೆ ಅಗ್ನಿಸ್ಪರ್ಶವಾಗಿ, ದೇಹ ಬೂದಿಯಾಯಿತು. ನನ್ನಾತ್ಮ ದೂರದಿಂದಲೇ ಎಲ್ಲವನ್ನೂ ನೋಡುತ್ತಿತ್ತು. ರಾತ್ರಿಯೆಲ್ಲ ಒಂದಿನಿತೂ ಭಯವಿಲ್ಲದೆ ಉರಿಯುವ ನನ್ನ ಚಿತೆಯನ್ನೇ ನೋಡುತ್ತಿದ್ದೆ’ ಎಂದುತ್ತರಿಸಿದ ಯುವಕ. ಆಗ ಬುದ್ಧ, ‘ಈ ದೇಹ ನಶ್ವರ, ಆದರೆ ಆತ್ಮವು ಎಂದಿಗೂ ಅಮರ ಎನ್ನುವ ಸತ್ಯ ನಿನಗೆ ತಿಳಿದಂತಾಯಿತು. ನೀನೀಗ ನನ್ನ ಶಿಷ್ಯನಾಗಬಹುದು’ ಎನ್ನುತ್ತ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ.

‘ಯಾರಿಗೂ ಯಾರೊಡನೆಯೂ ಹೆಚ್ಚು ನಿಕಟಸಂಬಂಧ ಇರುವದು ಸಾಧ್ಯವಿಲ್ಲ. ತನ್ನ ಶರೀರದ ಸಂಬಂಧವೇ ನಿತ್ಯವಲ್ಲ. ಅಂದಮೇಲೆ ಬೇರೆಯವರೊಡನೆ ನಮ್ಮ ಸಂಬಂಧವು ಎಂತಹುದು?’

ಪಂಚಭೂತಗಳಿಂದ ಬಂದ ಈ ಮಾನವನ ಶರೀರ ಅಂತಿಮವಾಗಿ ಲೀನವಾಗುವುದು ಅವುಗಳಲ್ಲೇ. ಇದು ಗೊತ್ತಿದ್ದೂ ಬಹಳಷ್ಟು ಮಂದಿ ಬದುಕಿನುದ್ದಕ್ಕೂ ಹಣ-ಆಸ್ತಿ-ಅಂತಸ್ತು-ಪ್ರತಿಷ್ಠೆಯ ಹಿಂದೆಯೇ ಓಡುತ್ತಾರೆ. ತೊಟ್ಟಿಲಲ್ಲಿ ಆಡಿದ ಎಲ್ಲರೂ ಒಂದು ದಿನ ಸ್ಮಶಾನಕ್ಕೆ ಹೋಗಲೇಬೇಕು. ಇದು ಗೊತ್ತಿದ್ದರೂ ನೀಚಕೃತ್ಯಗಳಲ್ಲಿ ವ್ಯಸ್ತರಾಗುತ್ತಾರೆ. ಅದರ ಬದಲು, ಅಂತರಂಗ ಮೆಚ್ಚುವಂಥ ಕೆಲಸ ಮಾಡಿ, ನ್ಯಾಯ-ನೀತಿ-ಧರ್ಮದ ಮಾರ್ಗದಲ್ಲಿ ನಡೆದರೆ ಆತ್ಮಕ್ಕೂ ಒಂದು ಸಾರ್ಥಕ್ಯ ದಕ್ಕುವುದಲ್ಲವೇ?

(ಲೇಖಕರು ಸಂಸ್ಕೃತ ಉಪನ್ಯಾಸಕರು, ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net