ಮನೋಲ್ಲಾಸ | ಸಹನಶೀಲತೆಯ ಶಕ್ತಿ

Manollasa
Published on
| ಡಾ. ಶ್ರುತಿ ಪ್ರಸಾದ್

ಒಮ್ಮೆ ದೇಶದ ವಿಜ್ಞಾನಿಗಳು ಹೀಗೊಂದು ಪ್ರಯೋಗ ಮಾಡಿದರು. ಎಲ್ಲ ಮಕ್ಕಳ ಮುಂದೆಯೂ ಒಂದೊಂದು ಮಿಠಾಯಿ ಇಟ್ಟು, ಅದನ್ನು 15 ನಿಮಿಷಗಳು ಕಳೆದ ಬಳಿಕ ತಿಂದರೆ ಎರಡು ಮಿಠಾಯಿಗಳನ್ನು ಕೊಡುವುದಾಗಿ ಅವರಿಗೆ ತಿಳಿಸಿದರು. ಕೆಲವು ಮಕ್ಕಳು ಎರಡು ಮಿಠಾಯಿಯ ಆಸೆಯಿಂದ, ಕಾದು, ಹೆಚ್ಚು ಲಾಭ ಪಡೆದರು. ಉಳಿದ ಮಕ್ಕಳು ಕಾಯಲಾರದೆ, ತಕ್ಷಣ ಅದನ್ನು ತ್ವರಿತ ತೃಪ್ತಿಗಾಗಿ ಸಹನೆ ಇಲ್ಲದೆ ತಿಂದರು. ವರ್ಷಗಳು ಕಳೆದವು. ಮತ್ತೆ ಈ ಮಕ್ಕಳನ್ನು ಪರಿಶೀಲಿಸಲಾಯಿತು. ತಮ್ಮ ಕೈಗೆ ಬಂದಿದ್ದನ್ನು ಬಾಯಿಗೆ ಹಾಕದೆ, ತಾಳ್ಮೆಯಿಂದ ಇದ್ದ ಮಕ್ಕಳು ಇತರರಿಗಿಂತ ಭಾವನಾ ಪ್ರಚೋದನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳವರಾಗಿ ಬೆಳೆದಿದ್ದರು. ಶೈಕ್ಷಣಿಕ ಸಾಧನೆಗಳನ್ನು ಮಾಡಿ, ಕೆಟ್ಟ ಚಟಗಳಿಗೆ ತುತ್ತಾಗದ ಹಾಗೆ ಬೆಳೆದಿದ್ದರು.

ಇಂದಿನ ಕಾಲದಲ್ಲಿ ಜಗತ್ತು ವೇಗದ ಗತಿಯಲ್ಲಿ ಸಾಗುತ್ತಿದೆ. ಅಂದುಕೊಂಡಿದ್ದು ತಕ್ಷಣ ನಡೆಯಬೇಕೆಂಬ ತವಕ. ತಾವಂದುಕೊಂಡಿದ್ದಕ್ಕಿಂತ ಪರಿಣಾಮ ವಿರುದ್ಧವಾದರೆ ಸಹಿಸುವ ಧೃತಿಯಿಲ್ಲ. ಅನುಕೂಲವಾದ ಕಾಲಾವಕಾಶಕ್ಕೆ ಕಾಯುವ ತಾಳ್ಮೆಯೇ ಇಲ್ಲ. ದೊಡ್ದವರಾದ ನಮಗೇ ಈ ಗತಿಯಾದರೆ, ಇನ್ನು ಚಿಕ್ಕಮಕ್ಕಳ ಪಾಡು ಹೇಳತೀರದು. ಹೆಚ್ಚಾಗಿ ಈಗಿನ ಕಾಲದ ಮಕ್ಕಳಲ್ಲಿ ಅಸಹನೆ ಮತ್ತು ತ್ವರಿತ ತೃಪ್ತಿ ಎದ್ದುಕಾಣುತ್ತಿದೆ. ಪಾಲಕರ ಸಮಯದ ಅಭಾವದಿಂದ ಮಕ್ಕಳ ನಡವಳಿಕೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಆಗುತ್ತಿದೆ. ಗಗನಕ್ಕೆ ಹಾರುವ ಸಾಮರ್ಥ್ಯವನ್ನೂ ಬೆಳೆಸುತ್ತಿರುವ ಇಂದಿನ ಶಿಕ್ಷಣ ಪದ್ಧತಿ ಕೆಲವೊಮ್ಮೆ ವ್ಯಕ್ತಿತ್ವದ ಕೆಲವು ಮುಖಗಳನ್ನು ಬೆಳೆಸುವ ಕೆಲಸದಲ್ಲಿ ಹಿಂದೆಬಿದ್ದಿದೆ. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಆತ್ಮಗುಣಗಳಲ್ಲೊಂದಾದ ಸಹನಶೀಲತೆಯನ್ನು ಬೆಳೆಸುವ ವ್ಯವಸ್ಥೆ ಇತ್ತು.

ಜೀವನದ ಪ್ರತಿ ಹೆಜ್ಜೆಯಲ್ಲೂ ನಮಗೆ ದ್ವಂದ್ವಗಳು ಎದುರಾಗುತ್ತವೆ. ಅದರಲ್ಲಿ ನಮಗೆ ಈ ಸದ್ಯದಲ್ಲಿ ಇಷ್ಟವಾಗದೆ ಹೋದರೂ, ದೀರ್ಘಕಾಲದಲ್ಲಿ ಯಾವುದು ಒಳಿತನ್ನು ಮಾಡುತ್ತದೋ ಅದನ್ನು ನಾವು ಸಹನೆಯಿಂದ ಆರಿಸಿಕೊಳ್ಳಬೇಕು. ಸುಖ-ದುಃಖ, ಉಷ್ಣ-ಶೀತ, ಇಷ್ಟ ಮತ್ತು ಅನಿಷ್ಟ ಘಟನೆಗಳನ್ನು ಸಮಭಾವದಿಂದ ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಇದನ್ನು ತಪವೆಂದೂ ಅಷ್ಟಾಂಗಯೋಗದ ಒಂದು ಹೆಜ್ಜೆಯಾದ ನಿಯಮದಲ್ಲಿ ಅಂತರ್ಗತವಾಗಿರುವುದೆಂದೂ ಹೇಳುತ್ತಾರೆ. ಶ್ರೀರಾಮನು ಪಟ್ಟಾಭಿಷೇಕವನ್ನೂ ಮತ್ತು ನಾರುಮಡಿಯ ವನವಾಸವನ್ನೂ ಒಂದೇ ರೀತಿಯಾಗಿ ಭಾವಿಸಿ ಪ್ರಸನ್ನ ಆತ್ಮ-ಇಂದ್ರಿಯ-ಮನಸ್ಸುಗಳಿಂದ ಸ್ವೀಕರಿಸಿದ್ದು, ನಮಗೆ ಆದರ್ಶವಾಗಿರಬೇಕು. ಹೀಗೆ ರೂಢಿಸಿಕೊಳ್ಳುವುದರಿಂದ ಚಿತ್ತಚಾಂಚಲ್ಯ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಯೋಗಮಾರ್ಗದ ಸುಷುಮ್ನಾ ನಾಡಿಯಲ್ಲಿ ಪ್ರಾಣವು ಸಾಗಿ ಪ್ರತಿ ಜೀವಿಯ ಹಕ್ಕಾದ ಆತ್ಮಸಾಕ್ಷಾತ್ಕಾರಕ್ಕೆ ಅನುವು ಮಾಡಿಕೊಡುತ್ತದೆ.

18 ವರ್ಷವಾದ ಕೂಡಲೇ ಮತ ಚಲಾಯಿಸುವ ಹಕ್ಕು ಹೇಗೆ ಸಹಜವಾಗಿಯೇ ಬರುವುದೋ, ಹಾಗೆಯೇ ಮನುಷ್ಯನಾಗಿ ಹುಟ್ಟಿದ ಪ್ರತಿಜೀವಿಗೂ ಆತ್ಮದರ್ಶನ ಪಡೆಯುವ ಹಕ್ಕಿರುತ್ತದೆ ಎಂಬುದು ಶ್ರೀರಂಗಮಹಾಗುರುಗಳ ಉದ್ಘೋಷ. ಸಹನ ಶೀಲತೆ ಮೊದಲಾದ ಆತ್ಮಗುಣಗಳು ನಮ್ಮನ್ನು ಅತ್ತ ಕರೆದೊಯ್ಯಲು ಸಹಕಾರಿ.

(ಲೇಖಕರು ದಂತವೈದ್ಯರು, ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net