ಪರೋಪಕಾರವೆಂಬ ಸ್ವರ್ಗ: ಮನೋಲ್ಲಾಸ

Manollasa
Published on
| ಭಾರತಿ ಎ. ಕೊಪ್ಪ

ದೇಶಸಂಚಾರ ಮಾಡುತ್ತಿದ್ದ ಸನ್ಯಾಸಿಯೊಬ್ಬರು ಒಂದೂರಿಗೆ ಬಂದರು. ಅಂದಿನ ಭಿಕ್ಷಾಟನೆ ಬಳಿಕ ಅಲ್ಲಿಯೇ ಒಂದು ಮನೆಯ ಪಕ್ಕದಲ್ಲಿದ್ದ ಮರದ ಕಟ್ಟೆಯ ಮೇಲೆ ರಾತ್ರಿ ಮಲಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಆ ಕಟ್ಟೆಯಲ್ಲಿಯೇ ಒರಗಿದರು. ಇದ್ದಕ್ಕಿದ್ದಂತೆ ಯಾರೋ ಚೀರಿದ ಸದ್ದು ಕೇಳಿಸಿತು. ಸ್ವಲ್ಪ ಸಮಯದ ನಂತರ ಜನರ ಗುಂಪಿನ ಗುಜುಗುಜು ಮಾತುಗಳು ಕೇಳಿಸತೊಡಗಿದವು. ಆದರೆ ಮಾತುಗಳೆಲ್ಲವೂ ಅಸ್ಪಷ್ಟವಾಗಿ ಕೇಳುತ್ತಿದ್ದವು. ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಮನೆಯ ಬಾಗಿಲು ತೆರೆಯಿತು. ಅಜ್ಜಿಯೊಬ್ಬಳು ಒಂದು ಹೆಣ್ಣುಮಗಳಿಗೆ ಕೈಯಲ್ಲಿ ಲಾಟೀನು ಕೊಟ್ಟು, ‘ಜಾಗ್ರತೆ ಹೋಗಿ ಬಾ, ವಿಷಯ ಏನೆಂದು ತಿಳಿದುಕೊಂಡು ಬಾ’ ಎಂದು ಹೇಳುತ್ತಿರುವುದು ಕಾಣಿಸಿತು. ಸನ್ಯಾಸಿ ಇವೆಲ್ಲವನ್ನೂ ಗಮನಿಸುತ್ತ ಕುಳಿತರು. ಸ್ವಲ್ಪಹೊತ್ತಿನಲ್ಲಿ ಆ ಯುವತಿ ಹಿಂದಿರುಗಿ ಬಂದಳು. ‘ಏನಾಯಿತು’ ಎಂದು ಅಜ್ಜಿ ಕೇಳುತ್ತಿದ್ದಂತೆಯೇ, ‘ಮೂಲೆಮನೆ ದಾನಪ್ಪ ಸ್ವರ್ಗಕ್ಕೆ ಹೋದ’ ಎನ್ನುತ್ತಲೇ ಮನೆಯೊಳಕ್ಕೆ ಹೋದಳು.

ಇವನ್ನೆಲ್ಲ ನೋಡುತ್ತಿದ್ದಂತೆ ಸನ್ಯಾಸಿಗೆ ಆಶ್ಚರ್ಯವಾಯಿತು. ದಾನಪ್ಪ ಸ್ವರ್ಗಕ್ಕೇ ಹೋದ ಎಂದು ಯುವತಿ ಹೇಗೆ ನಿಶ್ಚಯವಾಗಿ ಹೇಳಿದಳೆಂದು ಚಿಂತಿಸತೊಡಗಿದ. ಉತ್ತರ ಸಿಗದೆ ನಿಧಾನವಾಗಿ ಆ ಮನೆಯಬಾಗಿಲು ಬಡಿದ. ಅಜ್ಜಿಯ ಬಳಿ ತನ್ನ ಪ್ರಶ್ನೆ ಹೊರಹಾಕಿದ. ‘ಮನುಷ್ಯನಿಗೆ ಸ್ವರ್ಗವೋ, ನರಕವೋ ಎಂಬುದು ಅವನು ಸತ್ತುಹೋದ ಕೂಡಲೇ ಹೇಳಬಹುದು. ವ್ಯಕ್ತಿ ಸತ್ತಾಗ ಹತ್ತಾರು ಜನ ಸೇರಿ ಅವನ ಕೆಲಸಕಾರ್ಯಗಳನ್ನು ಸ್ಮರಿಸುತ್ತಾರೆ ಎಂದರೆ ಆತನಿಗೆ ಸ್ವರ್ಗವೇ ಸರಿ. ಹೆಣ ಹೊರಲೂ ಜನ ಸಿಗುವುದಿಲ್ಲವೆಂದಾದರೆ ಆತನಿಗೆ ನರಕವೇ ಸರಿ. ದಾನಪ್ಪ ಸಮಾಜಕ್ಕೆ ಒಳಿತು ಮಾಡಿದ್ದರಿಂದಲೇ ಅಷ್ಟೊಂದು ಜನ ಸೇರಿದ್ದರು. ಆದ್ದರಿಂದಲೇ ಅವನಿಗೆ ಸ್ವರ್ಗಪ್ರಾಪ್ತಿ’ ಎಂದಳು. ಆಕೆಯ ಉತ್ತರ ಸನ್ಯಾಸಿಯ ಮನತಟ್ಟಿತು. ದೈನಂದಿನ ಬದುಕಿನಲ್ಲಿ ನಮ್ಮ ಮನಸ್ಥಿತಿಗೆ ತಕ್ಕಂತೆ ಕೆಲವರು ಸ್ವರ್ಗ-ನರಕಗಳೆಂಬ ವಿಚಾರ ಕಲ್ಪಿಸಿಕೊಳ್ಳಬಹುದು. ಅದೇನೇ ಇದ್ದರೂ, ನಮ್ಮ ಈ ದೇಹದ ಉಸಿರು ನಿಂತ ಬಳಿಕವೂ ಜನರು ನಮ್ಮನ್ನು ನೆನಪಿಸಿಕೊಳ್ಳುವ ಉತ್ತಮ ಕೆಲಸಗಳನ್ನು ಜೀವಂತವಾಗಿ ಇರುವಾಗ ಮಾಡಿದರೆ ಅದಕ್ಕಿಂತ ಮಿಗಿಲಾದ ಸ್ವರ್ಗ ಬೇರೊಂದಿಲ್ಲ. ನಮ್ಮ ಆತ್ಮೀಯರ ಜೀವನದಲ್ಲಿ ಅನಿರೀಕ್ಷಿತ ಕಷ್ಟಗಳು ಬಂದೊದಗಿದಾಗ ಅವರಿಗೆ ಹೆಗಲು ಕೊಟ್ಟು ನಿಲ್ಲುವುದು, ಸಮಾಧಾನದ ಮಾತುಗಳನ್ನಾಡುವುದು, ಸಂತೈಸುವುದು ಇಂತಹ ಒಳ್ಳೆಯ ಕೆಲಸಗಳೂ ನಮ್ಮನ್ನು ಇತರರ ಮನದಲ್ಲಿ ಶಾಶ್ವತವಾಗಿಡುತ್ತವೆ. ಕಷ್ಟದಲ್ಲಿರುವವರ ಕಣ್ಣೊರೆಸುವ ಮನೋಭಾವ ನಮ್ಮದಾಗಿಸಿಕೊಂಡಾಗ, ಸಹಾಯ ಮಾಡುವ ಶಕ್ತಿ ತಾನೇ ತಾನಾಗಿ ಬರುತ್ತದೆ.

ವ್ಯಾಧನೊಂದು ಮೊಲವ ತಂದರೆ, ಸಲುವ ಹಾಗಕ್ಕೆ ಬಿಲಿವರಯ್ಯ!

ನೆಲನಾಳ್ವನನ ಹೆಣನೆಂದರೆ, ಒಂದಡಿಕೆಗೆ ಕೊಂಬುವರಿಲ್ಲ ನೋಡಯ್ಯ!

ಮೊಲನಿಂದ ಕರಕಷ್ಟ ನರನ ಬಾಳುವೆ. ಸಲೆ ನಂಬೋ ನಮ್ಮ ಕೂಡಲ ಸಂಗಮದೇವನ ಎಂಬ ಬಸವಣ್ಣನವರ ವಚನದ ಸಾಲುಗಳಂತೆ, ಬೇಡನೊಬ್ಬ ಸತ್ತ ಮೊಲವನ್ನು ತಂದರೆ, ಅದಕ್ಕಾಗಿ ಜನ ಮುಗಿಬೀಳುತ್ತಾರೆ. ಬೆಲೆಕಟ್ಟುತ್ತಾರೆ. ಆದರೆ ರಾಜನ ಶವವೆಂದಾದರೂ ಒಂದು ಕಾಸಿಗೂ ಕೊಳ್ಳುವವರಿಲ್ಲ. ಸತ್ತಮೇಲೆ ಪ್ರಾಣಿಗಳಷ್ಟೂ ಮನುಷ್ಯನಿಗೆ ಬೆಲೆಯಿಲ್ಲ. ಆದ್ದರಿಂದ ಬದುಕಿರುವಾಗಲೇ ಪರೋಪಕಾರದ ಬಾಳುವೆ ಬಾಳಬೇಕು.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net