ಅನ್ಯಾಯ ಸಹಿಸಿಕೊಂಡರೆ ಅನರ್ಥ

cvbcvbcvb
Published on
|ಕಾಂತೇಶಾಚಾರ್ಯ ಕದರಮಂಡಲಗಿ

ಅವನು ಸುಗ್ರೀವ. ವಾನರರಾಜ. ಮಹಾಬಲಿಷ್ಠ. ಮರ್ಯಾದಾ ಪುರುಷೋತ್ತಮ ಶ್ರೀರಾಮನೊಂದಿಗೆ ಸಖ್ಯ ಬೆಳೆಸಿ ಸೀತಾಮಾತೆಯನ್ನು ಹುಡುಕಿಸಿ ಕರೆತರುವ ಜವಾಬ್ದಾರಿ ತೆಗೆದುಕೊಂಡ. ಹನುಮಂತನ ಮೂಲಕ ಸೀತೆ ಲಂಕೆಯಲ್ಲಿರುವ ವಿಚಾರ ತಿಳಿದು, ತನ್ನ ಸಮಗ್ರವಾದ ಕಪಿಸೈನ್ಯವನ್ನು ತೆಗೆದುಕೊಂಡು, ಲಂಕೆಯಮೇಲೆ ಯುದ್ಧಕ್ಕೆ ಹೊರಟರು. ಸಾಗರದಲ್ಲಿ ಸೇತುಬಂಧನ ಮಾಡಿ, ಲಂಕೆಯನ್ನು ತಲುಪಿದರು. ಅಲ್ಲಿ ಸುವೇಲಪರ್ವತ. ಬಹುಎತ್ತರದ ಶಿಖರ. ವಿಶಾಲಸ್ಥಳ. ಮನಮೋಹಕ ವಾತಾವರಣ. ಅಲ್ಲಿನ ಪರಿಸರಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸುವೇಲಪರ್ವತವನ್ನು ಏರುತ್ತಾರೆ. ಮೇಲೆ ನಿಂತು ನೋಡಿದರೆ ಲಂಕಾಪಟ್ಟಣ ಸುಂದರವಾಗಿ ಕಾಣಿಸುತ್ತಿದೆ. ಅಲ್ಲಿ ರಾವಣನ ಅಂತಃಪುರ. ಅಲ್ಲಿ ರಾವಣ ತನ್ನ ಸಚಿವರೊಂದಿಗೆ ಮಾತನಾಡುತ್ತಿರುವ ದೃಶ್ಯ ಕಾಣಿಸಿತು. ರಾವಣನನ್ನು ಕಂಡೊಡನೆಯೇ ಸುಗ್ರೀವನಿಗೆ ಎಲ್ಲಿಲ್ಲದ ಕೋಪ ಉಂಟಾಗಿ, ತಾನು ನಿಂತ ಸ್ಥಳದಿಂದಲೇ ಜೋರಾಗಿ ಹಾರಿ, ನೇರವಾಗಿ ರಾವಣನ ಮುಂದೆ ನಿಂತ. ಕ್ಷಣದಲ್ಲೇ ರಾವಣನೊಂದಿಗೆ ಯುದ್ಧವನ್ನೇ ಆರಂಭಿಸಿದ. ಖಡ್ಗಯುದ್ಧ, ಮಲ್ಲಯುದ್ಧ, ಜಂಘಾಯುದ್ಧ, ವಕ್ಷಸ್ಥಳಯುದ್ಧ ಹೀಗೆ ನಾನಾವಿಧವಾಗಿ ಘೊರವಾದ ಯುದ್ಧವನ್ನೇ ಮಾಡಿ, ರಾವಣನನ್ನು ನಿಶ್ಶಕ್ತನನ್ನಾಗಿ ಮಾಡಿದ. ಅಷ್ಟೇ ಅಲ್ಲ, ‘ನಾನು ಶ್ರೀರಾಮನ ದಾಸ ಸುಗ್ರೀವ. ಸೀತಾಮಾತೆಯನ್ನು ಬಿಡದಿದ್ದರೆ ನಿನಗೆ ಅನರ್ಥ ಕಾದಿದೆ’ ಎಂದು ಎಚ್ಚರಿಕೆಯನ್ನೂ ಕೊಟ್ಟು ಮರಳಿ ಬಂದ ಸುಗ್ರೀವ.

‘ಯಾರಿಗೂ ಹೇಳದೇ ಇದ್ದಕ್ಕಿದ್ದಂತೆ ಹಾರಿ ಹೋಗಿ ಏಕೆ ಯುದ್ಧ ಮಾಡಿದೆ?’ ಎಂದು ಶ್ರೀರಾಮ ಕೇಳಿದಾಗ ಸುಗ್ರೀವ ನೀಡಿದ ಉತ್ತರ-

ತವ ಭಾರ್ಯಾಪಹರ್ತಾರಂ ದೃಷ್ಟಾ ್ವ ರಾಘವ ರಾವಣಮ್ |

ಮರ್ಷಯಾಮಿ ಕಥಂ ವೀರ ಜಾನನ್ ಪೌರುಷಮಾತ್ಮನಃ ||

‘ನಾನು ನಿನ್ನ ಗೆಳೆಯ. ನಿನಗೆ ಅನ್ಯಾಯ ಮಾಡಿದ ಆ ರಾವಣನನ್ನು ನೋಡಿದಾಗ, ನನ್ನ ದೇಹದಲ್ಲಿ ಬಲವಿದ್ದಾಗ, ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿಯಿರುವಾಗ ನಾನು ಹೇಗೆ ಸುಮ್ಮನಿರಲಿ?’

ಸುಗ್ರೀವ ಹೇಳಿದ ಈ ಮಾತು ನಿಜಕ್ಕೂ ಜಗತ್ತಿಗೆ ದೊಡ್ಡ ಸಂದೇಶವನ್ನೇ ನೀಡುತ್ತಿದೆ. ನಮ್ಮ ಕುಟುಂಬದವರು, ಗುರುಗಳು, ಹಿರಿಯರು, ಜ್ಞಾನವಂತರು, ವಯೋವೃದ್ಧರು ಹೀಗೆ ಯಾರಿಗೇ ಅನ್ಯಾಯ ನಡೆದಾಗ, ಅದನ್ನು ಪ್ರತಿಭಟಿಸುವ ಶಕ್ತಿ ನಮ್ಮಲ್ಲಿ ಇರುವಾಗ ಅದನ್ನು ಪ್ರತಿಭಟಿಸಬೇಕಾದದ್ದು ನಮ್ಮ ಕರ್ತವ್ಯ. ಪ್ರತಿಭಟನೆಯ ಕ್ರಮ ಬೇರೆ ಬೇರೆಯಾದರು ಸಹ ನಮ್ಮೆದುರು ಅನ್ಯಾಯ ನಡೆದಾಗ, ಪ್ರತಿಭಟಿಸುವ ಶಕ್ತಿ ಇದ್ದಾಗ ಪ್ರತಿಭಟಿಸದೇ ಇರಬಾರದು. ಒಬ್ಬರು ಮಾಡುವ ಪ್ರತಿಭಟನೆ ಅನೇಕರ ಅನೇಕ ದುಷ್ಟಕಾರ್ಯಗಳಿಗೆ ಕಡಿವಾಣ ಹಾಕುತ್ತದೆ ಎಂಬುದನ್ನು ಮರೆಯುವಂತಿಲ್ಲ. ದುರ್ಜನರ ಅಟ್ಟಹಾಸಕ್ಕಿಂತ ಸಜ್ಜನರ ಮೌನವೇ ಹೆಚ್ಚು ಅಪಾಯಕಾರಿ ಎಂಬ ಜ್ಞಾನಿಗಳ ಮಾತು ಅರ್ಥಪೂರ್ಣ. ಕಣ್ಣೆದುರಿಗೇ ಅನ್ಯಾಯ ನಡೆಯುತ್ತಿದ್ದರೂ, ಅದನ್ನು ನೋಡಿ ಸುಮ್ಮನಾದರೆ ಲೇಸಲ್ಲ. ಪ್ರತಿಭಟನೆ ಎಂದರೆ ಎಲ್ಲ ಸಂದರ್ಭದಲ್ಲಿ ನೇರಯುದ್ಧವೇ ಆಗಬೇಕಿಲ್ಲ. ದನಿ ಎತ್ತುವುದು, ಇತರರಲ್ಲಿ ಅರಿವು ಮೂಡಿಸುವುದು, ಅನ್ಯಾಯ ಆಗುತ್ತಿದೆ ಎಂದು ತಿಳಿಸುವುದು... ಹೀಗೆ ಸಣ್ಣಸಣ್ಣ ಹೆಜ್ಜೆಗಳು ಕೂಡ ಅನ್ಯಾಯ ತಡೆಯುವಲ್ಲಿ ಪ್ರಬಲ ಅಸ್ತ್ರವಾಗಬಲ್ಲವು.

(ಲೇಖಕರು ಸಂಸ್ಕೃತ ವಿದ್ವಾಂಸರು)

ಪ್ರತಿಕ್ರಿಯಿಸಿ: manollasavv@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net