

ಒಂದೂರಿನ ರಾಜನಿಗೆ ಸುಂದರವಾದ ಹೆಂಡತಿ ಇದ್ದಳು. ಮದುವೆಯಾದ ಕೆಲ ದಿನಗಳಲ್ಲಿಯೇ ಅವಳು ತೀರಿಕೊಂಡಳು. ರಾಜ ಅತ್ಯಂತ ವಿಹ್ವಲನಾದ. ಅವಳ ನೆನಪು ಅವನನ್ನು ಹಗಲಿರುಳು ಕಾಡುತ್ತಿತ್ತು. ಕೊನೆಗೆ ಅವಳ ನೆನಪಿನ ಮತ್ತು ಪ್ರೀತಿಯ ಪ್ರತೀಕವಾಗಿ ಶಾಶ್ವತ ಸ್ಮಾರಕ ನಿರ್ವಿುಸಬೇಕೆಂದು ನಿರ್ಧರಿಸಿದ. ಕೆಲಸ ಪ್ರಾರಂಭವಾಯಿತು. ಕೆಲಸದ ಪ್ರಗತಿಯನ್ನು ಪರೀಕ್ಷಿಸಲು ರಾಜ ಪ್ರತಿದಿನ ಬರುತ್ತಿದ್ದ. ಬಲು ವಿಶಾಲವಾದ ಸ್ಮಾರಕ ನಿರ್ವಿುಸಬೇಕು ಎಂಬುದು ಅವನ ಅಪೇಕ್ಷೆಯಾಗಿತ್ತು. ಕಟ್ಟಡ ಶಿಲ್ಪಿಗಳು ಯೋಜನೆ ಮಾಡಿ ಬಲು ದೊಡ್ಡ ಕಟ್ಟಡಕ್ಕೆ ಪಾಯ ಹಾಕಿದರು. ಕಂಬಗಳನ್ನು ನಿಲ್ಲಿಸಿದರು. ಆದರೆ ರಾಜನಿಗೆ ಸಮಾಧಾನವಾಗಲಿಲ್ಲ. ಚಿಕ್ಕದಾದರೂ ಚಿಂತೆಯಿಲ್ಲ, ಸ್ಮಾರಕ ಬಲು ಸುಂದರವಾಗಿ ಇರಬೇಕೆಂದು ಶಿಲ್ಪಿಗೆ ಹೇಳಿದ. ಕಟ್ಟಿದ ಕಂಬಗಳನ್ನು ಕಿತ್ತಿದ್ದಾಯಿತು. ಹೊಸ ನಕ್ಷೆ ತಯಾರು ಮಾಡಿ, ತಳಪಾಯ ಹಾಕಿದರು. ಕಂಬಗಳೂ ಏರಿದವು. ಇಷ್ಟರಲ್ಲಿ ಎರಡು ವರ್ಷಗಳು ಸವೆದಿದ್ದವು. ರಾಜನ ದೃಷ್ಟಿಕೋನ ಮತ್ತೊಮ್ಮೆ ಬದಲಾಯಿತು. ಬಣ್ಣಬಣ್ಣದ ಸುಂದರ ಕಟ್ಟಡಕ್ಕಿಂತಲೂ ನಾನಾ ಕಲೆಗಳ ಸಂಗಮವಾಗಿ ಇರುವಂತೆ ಸ್ಮಾರಕ ನಿರ್ಮಾಣ ಮಾಡುವುದು ಲೇಸೆಂದು ತೀರ್ವನಿಸಿದ. ಮತ್ತೆ ಕಟ್ಟಿದ್ದನ್ನೆಲ್ಲ ಬಿಚ್ಚಿದರು. ರಾಜನ ಅಭಿಲಾಷೆಯಂತೆ ಹೊಸ ಕಲಾಪೂರ್ಣ ಕಟ್ಟಡದ ಕೆಲಸ ಪ್ರಾರಂಭವಾಯಿತು. ವರ್ಷ ಕಳೆದಂತೆಲ್ಲ ರಾಜನ ನಿರ್ಧಾರ ಬದಲಾಗುತ್ತಿತ್ತು. ಆದರೆ ಹಲವು ವರ್ಷಗಳ ಕಾಲ ದುಡಿದು ಶಿಲ್ಪಿಗಳು ಕಲಾಮಯವಾದ ಕಟ್ಟಡವನ್ನು ತಯಾರಿಸಿದರು.
ಜನ ಬಂದರು, ನೋಡಿದರು, ಹೊಗಳಿದರು. ಆದರೂ ರಾಜನಿಗೆ ತೃಪ್ತಿಯಾಗಲಿಲ್ಲ. ಈಗ ಅವನಿಗೆ ಐವತ್ತು ಮೀರಿತ್ತು. ಅವನ ಮನಸ್ಸು ಸರಳ ನಿರಾಡಂಬರವನ್ನು ಬಯಸತೊಡಗಿತು. ಕಟ್ಟಡದ ಯೋಚನೆಯಲ್ಲೇ ಹಲವು ವರ್ಷಗಳು ಜಾರಿದವು. ಹೆಂಡತಿಯ ನೆನಪಿಗಾಗಿ ಸೊಗಸಾದ ಕಟ್ಟಡ ಕಟ್ಟಿಸುವ ಹಂಬಲ ಇನ್ನೂ ಅವನಲ್ಲಿ ಬಲವಾಗಿ ತುಡಿಯುತ್ತಲೇ ಇತ್ತು. ಇದೇ ಚಿಂತೆಯಲ್ಲಿ ರಾಜ ಸೊರಗಿದ. ಪ್ರಜೆಗಳು ಅವನ ಅವಸ್ಥೆ ಕಂಡು ಮರುಗಿದರು.
ರಾಜ ಒಂದು ದಿನ ನಸುಕಿನಲ್ಲಿ ಹೆಂಡತಿಯ ಸಮಾಧಿ ಬಳಿ ಹೋದ. ಆ ಪ್ರಶಾಂತ ಸ್ಥಳದಲ್ಲಿ ಅದೇ ತಾನೇ ಸೂರ್ಯ ಉದಯಿಸುತ್ತಿದ್ದ. ವಸಂತ ಕಾಲ ಆಗ ತಾನೇ ಪ್ರಾರಂಭವಾಗಿತ್ತು. ಗಿಡಗಳು ಹೂ ಬಿಡಲಾರಂಭಿಸಿದ್ದವು. ಗೋರಿಯ ಸುತ್ತ ಪುಷ್ಪಗಳು ನಗುತ್ತಿದ್ದವು. ಹಿನ್ನೆಲೆಯಲ್ಲಿ ಮಂಜು ಕವಿದ ಬೆಟ್ಟ ಒಂದು ಮಾಯೆಯನ್ನು ಸೃಷ್ಟಿಸಿತ್ತು. ಆಗೊಮ್ಮೆ ಈಗೊಮ್ಮೆ ಕೋಗಿಲೆಯ ನಿನಾದ ಆ ತಂಪು ವಾತಾವರಣದಲ್ಲಿ ಪುಳಕವೆಬ್ಬಿಸುತ್ತಿತ್ತು. ಸೃಷ್ಟಿಕರ್ತನು ನಿರ್ವಿುಸಿದ ಸೌಂದರ್ಯ ಅವನನ್ನು ಮುಗ್ಧನನ್ನಾಗಿ ಮಾಡಿತು. ತಾನು ನಿರ್ವಿುಸಬೇಕೆಂದ, ಆದರೆ ನಿರ್ವಿುಸಲಾಗದ ಸೌಂದರ್ಯ ಇಲ್ಲಿ ಜಿನುಗುತ್ತಿತ್ತು. ಅವನ ದೃಷ್ಟಿಕೋನ ಈಗ ಸಂಪೂರ್ಣವಾಗಿ ಬದಲಾಗಿತ್ತು. ರಾಜನು ಉಲ್ಲಾಸದಿಂದ ಅರಮನೆಯತ್ತ ನಡೆದ. ಅವನ ಮನಸ್ಸಿನಲ್ಲೂ ಬೆಳಕು ಹರಿದಿತ್ತು, ಮಂಜು ಕರಗಿತ್ತು.
ಹೌದು, ಮಾನವನು ಎಷ್ಟೇ ಸುಂದರ ದೃಶ್ಯ ನಿರ್ವಿುಸಿದರೂ ಅದು ಕೃತಕ ಮತ್ತು ನಿರ್ಜೀವ. ಸೃಷ್ಟಿಕರ್ತನ ನಿರ್ವಣವೇ ಸಜೀವ. ಈ ವಾಸ್ತವವನ್ನು ಅರ್ಥ ಮಾಡಿಕೊಂಡರೆ ಬದುಕಿನ ದೃಷ್ಟಿ ಬದಲಾಗಬಹುದು.
(ಲೇಖಕರು ಸಹ ಪ್ರಾಧ್ಯಾಪಕರು)