

ಮೈಥಿಲೀ ರಾಘವನ್
ಸುಖ-ಶಾಂತಿ-ಆನಂದಗಳನ್ನು ಬಯಸುವುದು ಮನುಷ್ಯನ ಸಹಜಸ್ವಭಾವವೇ ಆಗಿದೆ. ಯುಗಯುಗಾಂತರಗಳಿಂದಲೂ ಈ ಉದ್ದೇಶದಿಂದಲೇ ಮಾನವನು ತನ್ನ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾನೆ. ಇಂದಿನ ಆಧುನಿಕ ಪ್ರಪಂಚವೂ ಇದಕ್ಕೆ ಹೊರತಾದದ್ದಲ್ಲ. ಆದರೆ ಈ ಸುಖವು ಶಾಶ್ವತವಾಗಿಲ್ಲದೆ ದುಃಖಮಿಶ್ರಿತವಾಗಿದೆ ಎನ್ನುವ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಯಂತ್ರಪ್ರಪಂಚದಲ್ಲೇ ಜೀವನ ಮಾಡುತ್ತಿರುವ ಮಾನವನನ್ನು ಸದಾಕಾಲವೂ ಹೊತ್ತು ತಿರುಗುತ್ತಿರುವ ಯಂತ್ರವೊಂದಿದೆ. ಮಾನವನಿಗೆ ‘ಮಾನವ’ನೆಂಬ ಗುರುತನ್ನು ನೀಡುವ ಶರೀರವೇ ಆ ಯಂತ್ರ. ಆ ಯಂತ್ರವನ್ನೂ, ಅದರಿಂದೊದಗಬಹುದಾದ ಸುಖವನ್ನೂ ಪರಿಚಯಿಸಿಕೊಳ್ಳುವುದು ಪ್ರತಿಮಾನವನ ಹಕ್ಕು-ಕರ್ತವ್ಯ.
ಶರೀರದೊಳಗೆ ಹೊರಗಣ್ಣಿಗೆ ಕಾಣದಿರುವ ಸೂಕ್ಷ್ಮಾಂಶಗಳನ್ನೂ ಆಧುನಿಕ ವಿಜ್ಞಾನ ಯಂತ್ರಗಳ ಸಹಾಯದಿಂದ ಕಣ್ಮುಂದೆ ತೋರಿಸುತ್ತಿದೆ. ಹೊರಗಣ್ಣು ಸ್ಥೂಲವಾದ ಅಂಶಗಳನ್ನು ತೋರಿಸುತ್ತದೆ. ಆದರೆ ಭಾರತೀಯಮಹರ್ಷಿಗಳ ಯೋಗವೆಂಬ ದಿವ್ಯದೃಷ್ಟಿಯು ಮಾನವಶರೀರದೊಳಗೆ ಸ್ಥೂಲ-ಸೂಕ್ಷ್ಮಗಳಿಗೂ ಹಿಂದಿರುವ ಪರವಸ್ತುವನ್ನು ದರ್ಶನ ಮಾಡಿಸಿತು. ಆ ದೃಷ್ಟಿಯಿಂದ ಅವರಿಗೆ ಒಳಗೆ ಸುಸ್ಪಷ್ಟವಾಗಿ ಕಂಡದ್ದು ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳು (ಪ್ರಪಂಚಗಳು). ದೇವತಾಶಕ್ತಿಗಳು ಮೂರ್ತಾಕಾರವಾಗಿ ಬೆಳಗುತ್ತಿರುವ ಅನೇಕ ಸ್ಥಾನಗಳುಳ್ಳದ್ದು ದೈವೀಕ್ಷೇತ್ರ. ಶರೀರದ ಬೆನ್ನುಹುರಿಯಲ್ಲಿ ಅಡಗಿರುವ ಷಡ್ಚಕ್ರಗಳು, ಅದರ ಮೇಲಿನ ಸಹಸ್ರಾರಚಕ್ರದಲ್ಲಿ ಬೆಳಗುವ ಪರಂಜ್ಯೋತಿ-ಇವು ಅಧ್ಯಾತ್ಮಕ್ಷೇತ್ರ. ಆ ಜ್ಯೋತಿ ಕೋಟಿಸೂರ್ಯ ಸಮಾನವಾದರೂ ಅತ್ಯಂತ ತಂಪಾಗಿರುವ ಅದ್ಭುತ ಪ್ರಕಾಶವೆಂಬುದು ಅವರ ಅನುಭವ! ಭೌತಿಕದ ಜೊತೆಗೆ ದೈವಿಕ-ಆಧ್ಯಾತ್ಮಿಕಕ್ಷೇತ್ರಗಳನ್ನೂ ಅರಿತಾಗ ಮಾತ್ರವೇ ಶರೀರಯಂತ್ರದ ಪೂರ್ಣಪರಿಚಯವಾದಂತೆ ಎನ್ನುವುದು ಮಹರ್ಷಿಗಳ ನಿಲುವು. ನಮ್ಮ ಅರಿವಿಗೆ ಬರದಿದ್ದರೂ ಈ ಶರೀರಯಂತ್ರದ ಚಾಲನೆಗೆ ಶಕ್ತಿಯನ್ನು ನೀಡುತ್ತಿರುವುದು ಒಳಗೆ ಬೆಳಗುವ ದೇವತೆಗಳೇ ಎಂಬುದು ಅವರಿಗೆ ಖಚಿತವಾಗಿತ್ತು.
ಇದನ್ನರಿತು ದೇವತೆಗಳನ್ನು ಪೂಜಿಸಿದಾಗ ಅವರ ಪ್ರಸನ್ನತೆಯು ಲಭಿಸಿ ಐಹಿಕಸುಖಪ್ರಾಪ್ತಿಯ ದಾರಿ ಸುಗಮವಾಗುವುದು. ಅಧ್ಯಾತ್ಮಕ್ಷೇತ್ರದ ತುಟ್ಟತುದಿಯಲ್ಲಿ ಬೆಳಗುವ ಪರಂಜ್ಯೋತಿಯ ದರ್ಶನದಿಂದಾಗುವ ಲಾಭವಾದರೋ ಭೌತಿಕ ಸುಖಗಳಿಂದ ದೊರಕಬಹುದಾದ ಉಚ್ಚತಮ ಆನಂದಕ್ಕಿಂತಲೂ ಕೋಟಿಕೋಟಿ ಪಾಲಿನ ಆನಂದ-ನೆಮ್ಮದಿ-ಶಾಂತಿ, ಶಾಶ್ವತಸುಖದ ಪರಮಾವಧಿ!
ಆಧುನಿಕ ವಿಜ್ಞಾನಿಗಳು ತಮ್ಮ ಅನ್ವೇಷಣೆಗಳು ಲೋಕೋಪಕಾರಿಯಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸುವಂತೆಯೇ ಮಹರ್ಷಿಗಳೂ ಲೋಕ-ಹಿತಚಿಂತಕರಾಗಿದ್ದರು. ಅಂತರಂಗ ಅನುಭವಗಳಿಂದ ತಾವು ಪಡೆದ ಆನಂದವನ್ನು ಲೋಕವೆಲ್ಲವೂ ಪಡೆದು ನಲಿಯಲಿ ಎಂಬ ಉದಾರಮನಸ್ಸಿನಿಂದ ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ನೀಡಿದರು. ದೇಹಯಂತ್ರದಲ್ಲಿನ ಒಳಕೇಂದ್ರಗಳ ಅನುಭವಕ್ಕೆ ಪೋಷಕ-ಮಾರಕವಾದ ಪದಾರ್ಥ ಹಾಗೂ ಆಚರಣೆಗಳ ಪಟ್ಟಿಯನ್ನೇ ಅನ್ವೇಷಣೆಯಿಂದರಿತು ಸಾರಿತು ಅವರ ವೈಜ್ಞಾನಿಕಮತಿ. ಮಾನವಶರೀರವನ್ನು ಹೊರತುಪಡಿಸಿ ಇನ್ಯಾವ ಶರೀರದಲ್ಲೂ ಪರಮಾತ್ಮನನ್ನು ತೋರಿಸುವಂತಹ ರಚನೆಯಿಲ್ಲ ಎಂಬುದು ಮಹರ್ಷಿಗಳು ಸಾರಿದ ಸತ್ಯ. ಅದನ್ನೇ ಶ್ರೀರಂಗಮಹಾಗುರುಗಳು ‘ಭಗವಂತನನ್ನು ಕಾಣುವುದು ಪ್ರತಿಮಾನವನ ಜನ್ಮ-ಸಿದ್ಧ ಹಕ್ಕು’ ಎಂಬುದಾಗಿ ಒತ್ತಿ ಒತ್ತಿ ಹೇಳುತ್ತಿದ್ದರು.
(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)