ಸಂಜೆಯ ಟೀ ಜೊತೆ ಪರ್ಫೆಕ್ಟ್ ಜುಗಲ್ಬಂದಿ: ಗರಿಗರಿ ಮಸಾಲೆ ವಡೆ ಮಾಡುವುದು ಈಗ ಇನ್ನಷ್ಟು ಸುಲಭ! Masala Vada

Masala Vada ಸಾಂದರ್ಭಿಕ ಚಿತ್ರ
Masala Vada ಸಾಂದರ್ಭಿಕ ಚಿತ್ರ
Published on
Masala Vada: ಸಂಜೆಯ ತಂಪಾದ ವಾತಾವರಣಕ್ಕೆ ಬಿಸಿಬಿಸಿ ಚಹಾ ಅಥವಾ ಕಾಫಿ ಜೊತೆ ನಂಜಿಕೊಳ್ಳಲು ಗರಿಗರಿಯಾದ ಮಸಾಲೆ ವಡೆ ಸಾರ್ವಕಾಲಿಕ ನೆಚ್ಚಿನ ತಿನಿಸು. ಹೊರಗೆ ಕರುಕು-ಮುರುಕು, ಒಳಗೆ ಮೆದುವಾದ ಈ ತಿನಿಸು ಪ್ರತಿಯೊಬ್ಬರ ನಾಲಿಗೆಗೂ ಇಷ್ಟವಾಗುತ್ತದೆ. ಕಡಲೆಬೇಳೆ, ಹೆಚ್ಚಿದ ಈರುಳ್ಳಿ, ಸೋಂಪು ಹಾಗೂ ತಾಜಾ ನೈಸರ್ಗಿಕ ಮಸಾಲೆಗಳ ಸುವಾಸನೆಯಿಂದ ಕೂಡಿದ, ಶ್ರೇಷ್ಠ ಹೋಟೆಲ್ ಶೈಲಿಯ ಕ್ರಿಸ್ಪಿ ಮಸಾಲೆ ವಡೆಯನ್ನು ಮನೆಯಲ್ಲೇ ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

* 1 ಕಪ್ ಕಡಲೆಬೇಳೆ
*1 ಈರುಳ್ಳಿ
* 2 ರಿಂದ 3 ಹಸಿಮೆಣಸಿನಕಾಯಿ
* 1/2 ಇಂಚು ಶುಂಠಿ
*4-5 ಎಸಳು ಬೆಳ್ಳುಳ್ಳಿ
*1 ಟೀಸ್ಪೂನ್ ಸೋಂಪು
*ಸ್ವಲ್ಪ ಕರಿಬೇವು
* 2-3 ಚಮಚ ಕೊತ್ತಂಬರಿ ಸೊಪ್ಪು
*1-2 ಚಮಚ ಪುದೀನಾ ಸೊಪ್ಪು
*1 ಚಟಿಕಿ ಇಂಗು
*ರುಚಿಗೆ ತಕ್ಕಷ್ಟು ಉಪ್ಪು
*ಎಣ್ಣೆ

ಮಾಡುವ ವಿಧಾನ

ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು, ಕನಿಷ್ಠ 2 ರಿಂದ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಬೇಳೆಯಿಂದ ನೀರನ್ನು ಸಂಪೂರ್ಣವಾಗಿ ಸೋಸಿ. ನೀರನ್ನು ಬಳಸದೆ, 2 ಚಮಚ ನೆನೆಸಿದ ಬೇಳೆಯನ್ನು ಪಕ್ಕಕ್ಕೆ ತೆಗೆದಿರಿಸಿ, ಬೇಳೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ. ಅದಕ್ಕೆ ಪಕ್ಕಕ್ಕೆ ಎತ್ತಿಟ್ಟಿದ್ದ ಇಡೀ ನೆನೆಸಿದ ಬೇಳೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಸೋಂಪು, ಕರಿಬೇವು, ಕೊತ್ತಂಬರಿ, ಪುದೀನಾ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಕೈಗೆ ಸ್ವಲ್ಪ ನೀರು ಅಥವಾ ಎಣ್ಣೆ ಸವರಿಕೊಂಡು, ಮಿಶ್ರಣದಿಂದ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ, ಅಂಗೈ ಮೇಲಿಟ್ಟು ಲಘುವಾಗಿ ಒತ್ತಿ ವಡೆಯ ಆಕಾರ ಕೊಡಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಕಾದ ನಂತರ, ಉರಿಯನ್ನು ಮಧ್ಯಮ ಪ್ರಮಾಣದಲ್ಲೇ ಇಟ್ಟುಕೊಂಡು, ತಟ್ಟಿದ ವಡೆಗಳನ್ನು ಒಂದೊಂದಾಗಿ ಎಣ್ಣೆಗೆ ಬಿಡಿ. ವಡೆಗಳು ಎರಡೂ ಕಡೆ ಚನ್ನಾಗಿ ಬೆಂದು, ಕಂದು ಬಣ್ಣ ಬರುವವರೆಗೆ ತಿರುವಿ ಹಾಕಿ ಕರಿಯಿರಿ. ಈಗ ಬಿಸಿಬಿಸಿಯಾದ, ಘಮಘಮಿಸುವ ಗರಿಗರಿ ಮಸಾಲೆ ವಡೆ ಸಿದ್ಧ! ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಖಾರ ಚಟ್ನಿ ಜೊತೆ ಸವಿಯಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net