ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ ಮಧುಮೇಹವನ್ನು ದೂರವಿಡಿ... Diabetes

untitled-design-10-6880a1626d0ed
Published on

Diabetes: ಇಂದಿನ ದಿನಗಳಲ್ಲಿ ಮಧುಮೇಹ ಅನ್ನೋದು ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಈ ಹಿಂದೆ ಹಿರಿಯರಲ್ಲಿ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿ ಈ ರೋಗ ಬಾದಿಸುತ್ತಿದೆ. ಇಡೀ ವಿಶ್ವದಲ್ಲೇ, ಅತ್ಯಧಿಕ ಮಧುಮೇಹಿಗಳನ್ನು ಹೊಂದಿರುವ ದೇಶವೆಂಬ ಕುಖ್ಯಾತಿಯನ್ನು ಭಾರತ ಪಡೆದುಕೊಂಡಿದೆ. ದೇಶದಲ್ಲಿ 212 ಮಿಲಿಯನ್​ಗೂ ಅಧಿಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಒಮ್ಮೆ ಮಧುಮೇಹ ಬಂದರೆ ಅದನ್ನು ಹೋಗಲಾಡಿಸುವುದು ತುಂಬಾನೇ ಕಷ್ಟ. ಹಾಗಾದರೆ, ಮಧುಮೇಹವನ್ನು ನಿಯಂತ್ರಿಸುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

ಮಧುಮೇಹ ಹೇಗೆ ಪರಿಣಾಮ ಬೀರುತ್ತೆ?

ಮಧುಮೇಹಗಳಲ್ಲಿ 2 ವಿಧಗಳಿವೆ. ಈ ಎರಡೂ ವಿಧಗಳೂ ಸ್ವಲ್ಪ ಭಿನ್ನವಾಗಿದ್ದರೂ, ಮಾನವ ದೇಹದ ಇನ್ಸುಲಿನ್ ಬಳಕೆಯ ಮೇಲೆ ಎರಡೂ ಪರಿಣಾಮ ಬೀರುತ್ತವೆ. ಟೈಪ್​ 1 ಮಧುಮೇಹ, ಇನ್ಸುಲಿನ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಮಧುಮೇಹ ಬೆಳೆಯುತ್ತದೆ.

ಟೈಪ್​ 2 ಮಧುಮೇಹವು ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿ ಮತ್ತು ಕುಟುಂಬದ ಇತಿಹಾಸದೊಂದಿಗೆ ಸಂಬಂಧ ಹೊಂದಿರುತ್ತದೆ. ಇದು ಹೆಚ್ಚಾಗಿ ಕಾರ್ಡಿಯಕ್​ ಅರೆಸ್ಟ್​ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳ ಆರಂಭಿಕ ಲಕ್ಷಣಗಳನ್ನು ಸೂಚಿಸುತ್ತದೆ.

ಇನ್ಸುಲಿನ್ ಪ್ರತಿರೋಧ

ಇನ್ಸುಲಿನ್ ರಕ್ತದಿಂದ ಹೆಚ್ಚುವರಿ ಗ್ಲೂಕೋಸ್ ಅನ್ನು ತೆಗೆದುಹಾಕಿ ಜೀವಕೋಶಗಳಲ್ಲಿ ಸಂಗ್ರಹಿಸಲು ಸಹಾಯ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದರಿಂದ ಮಾನವನು ಆರೋಗ್ಯವಾಗಿರುತ್ತಾನೆ.

ನಿಯಮಿತ ತಪಾಸಣೆಯ ಮೂಲಕ ಪತ್ತೆ

ಮಧುಮೇಹವನ್ನು ಆರಂಭದಲ್ಲಿಯೇ ನಿಯಂತ್ರಿಸಲು ತಪಾಸಣೆ ನಡೆಸುವುದು ಒಂದು ಪರಿಣಾಮಕಾರಿ ಸಾಧನವಾಗಿದೆ. ಈ ರೋಗ ಉಲ್ಬಣವಾಗುವುದಕ್ಕಿಂತ ಮುಂಚೆಯೇ ಜನರು ಚಿಕಿತ್ಸೆ ಆಯ್ಕೆ ಮಾಡಿಕೊಳ್ಳಬೇಕು.

ಭಾರತದಲ್ಲಿ ಮಧುಮೇಹ ವಿಶಾಲವಾಗಿ ಹರಡುತ್ತಿರುವುದರಿಂದ ಔಷಧಿ ಹಾಗೂ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಬೊಜ್ಜು, ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ ಬೇಗನೆ ಹರಡುತ್ತದೆ. ಕೊಬ್ಬಿನಾಂಶದಿಂದ ಕೂಡಿದ ಆಹಾರ ಸೇವನೆ, ಕಡಿಮೆ ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ಅಭ್ಯಾಸಗಳು ಬೊಜ್ಜುತನಕ್ಕೆ ಕಾರಣವಾಗುತ್ತವೆ.

ನಿಮಗೆ ಮಧುಮೇಹ ಬರುವ ಮುನ್ಸೂಚನೆ ಇದ್ದರೆ, ಮಧುಮೇಹ ಪೂರ್ವಹಂತದಲ್ಲಿದ್ದರೆ ಅದರಿಂದ ಪಾರಾಗಲು ಬಯಸುತ್ತೀರಾ? ಹಾಗಾದರೆ ಭಯ ಹೋಗಲಾಡಿಸಲು ಜನರಿಗೆ ಸಹಾಯ ಮಾಡುವ ಅಂಶಗಳು ಇಲ್ಲಿವೆ.

ವ್ಯಾಯಾಮ ಮಾಡಿ

ದಿನನಿತ್ಯ ವ್ಯಾಯಾಮ ಮಾಡುವುದರಿಂದ ಜನರು ತೂಕ ಇಳಿಸಿಕೊಳ್ಳಲು, ಕೊಲೆಸ್ಟ್ರಾಲ್​ ಕಡಿಮೆ ಮಾಡಲು ಹಾಗೂ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.

ಆರೋಗ್ಯಕರ ಪದಾರ್ಥಗಳ ಬಳಕೆ

ತರಕಾರಿ, ಹಣ್ಣು-ಹಂಪಲುಗಳು, ಸೊಪ್ಪು, ಬಟಾಣಿ, ಬೇಳೆ-ಕಾಳುಗಳು, ಕಾರ್ಬೋಹೈಡ್ರೇಟ್​, ಓಟ್ಸ್​ಗಳು ಹಾಗೂ ಸಮುದ್ರ ಮೀನು, ಬಾದಾಮಿ, ಕಡಲೆಕಾಯಿ, ಸೂರ್ಯಕಾಂತಿ, ಹತ್ತಿ ಬೀಜಗಳಿಂದ ತಯಾರಿಸಿದ ಎಣ್ಣೆ, ಕಡಿಮೆ ಕೊಬ್ಬಿನ ಮಾಂಸಗಳನ್ನು ಬಳಸುವುದರಿಂದ ಮಧುಮೇಹವನ್ನು ತಡೆಯಬಹುದು.

ಅತಿಯಾದ ಮದ್ಯಪಾನ ಮತ್ತು ತಂಬಾಕು ಬಳಕೆ ತಪ್ಪಿಸಿ

ಯುಎಸ್‌ಎಫ್‌ಡಿಎ ವರದಿಯ ಪ್ರಕಾರ, ಸಿಗರೇಟ್ ಸೇದುವವರಲ್ಲಿ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿದೆ. ಧೂಮಪಾನದಿಂದ ಬರುವ ನಿಕೋಟಿನ್ ದೇಹದ ಜೀವಕೋಶಗಳು ಇನ್ಸುಲಿನ್‌ಗೆ ಕಡಿಮೆ ಸ್ಪಂದಿಸುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ನೀವು ಮಧುಮೇಹಿಗಳಾಗಿದ್ದು, ಮದ್ಯಪಾನ ಮಾಡುತ್ತಿದ್ದರೆ, ಅದರಿಂದ ಅಪಾಯಗಳು ಉಂಟಾಗುತ್ತವೆ. ಮದ್ಯಪಾನವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟುಮಾಡುವ ಮೂಲಕ ಮಧುಮೇಹ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net