ಸಾತ್ವಿಕತೆಯನ್ನೇ ಪ್ರಶಂಸಿಸೋಣ

Tukaram
Published on

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಇತ್ತೀಚೆಗೆ ನಮ್ಮ ಹಳೆಯ ಸ್ನೇಹಿತರ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮ ನಡೆಯಿತು. ಎಲ್ಲರೂ ಹೋಗಿದ್ದೆವು. ಬೇರೆ ಬೇರೆ ಪ್ರಸಿದ್ಧ ಉಪನ್ಯಾಸಗಳು, ಪುಸ್ತಕಗಳ ಬಗ್ಗೆ ಅಲ್ಲಿ ಚರ್ಚೆ ನಡೆಯಿತು. ಯಾವುದೋ ಒಂದು ಚರ್ಚೆ ಸುತ್ತಿ ಸುತ್ತಿ ಕಡೆಗೆ ಭಯೋತ್ಪಾದಕರ ವಿಷಯಕ್ಕೆ ಬಂದು ನಿಂತಿತು. ‘ಕಸಾಬ್ ಮಾಡಿದ್ದು ಅದೇ ಅಲ್ಲೇನು. ಏನೋ ಕೆಲಸ ಅಂತ ಮನಿಯಿಂದ ಹೊರಗ ಬಂದವರನ್ನ ಹೆಂಗೆ ನಿರ್ದಾಕ್ಷಿಣ್ಯವಾಗಿ ಸಾಯಿಸಿಬಿಟ್ಟ’. ‘ಹೌದವಾ ಕಸಾಬ್ ಬಗ್ಗೆ ಕೇಳಿದ್ರ ಈಗೂ ಹೆದರಿಕಿ ಆಗ್ತದ ನೋಡು’ ಅಂತ ಅಂದ್ರು ಸ್ನೇಹಿತೆಯರು. ಅಷ್ಟರಲ್ಲೇ ಮೂಲೆಯಲ್ಲಿ ತನ್ನ ಮಗುವನ್ನು ಎತ್ತಿಕೊಂಡು ನಿಂತಿದ್ದ ನಮ್ಮ ಗೆಳತಿಯೊಬ್ಬಳು ಕೇಳಿದಳು, ‘ಯಾರವಾ ಕಸಾಬ್ ಅಂದ್ರ?’ ಎಲ್ಲರೂ ಆಶ್ಚರ್ಯದಿಂದ ಕೇಳಿದರು, ‘ಅಲ್ಲ ಶಾಂತಿ, ನಿನಗ ಕಸಾಬ್ ಯಾರ ಅಂತ ಗೊತ್ತಿಲ್ಲಾ? ಭಾರತದ ಮೂಲ್​ವುೂಲ್ಯಾಗ್ ಹೋಗಿ ಯಾರ್ನರ ಕೇಳು, ಬೇಕಾದವರು ಹೇಳ್ತಾರ. ಅವನ್ ಹೆಸರು ಗೊತ್ತಿಲ್ಲದವರು ಯಾರೂ ಇಲ್ಲ’.

ಆಗ ನನ್ನ ಸ್ನೇಹಿತೆ ವಿದ್ಯಾ, ‘ತುಕಾರಾಮ್ ಒಂಬ್ಳೇ ಯಾರ್ ಅಂತ ಗೊತ್ತದ ಏನ್ ನಿಮಗೆಲ್ಲ?’ ಅಂದ್ಲು. ಎಲ್ಲರೂ ಮುಖ-ಮುಖ ನೋಡಿಕೊಂಡರು. ‘ನೀವೆಲ್ಲ ಯಾವ ಕಸಾಬ್​ನ ಬಗ್ಗೆ ಭಾರೀ ಚರ್ಚಾ ಮಾಡ್ಲಿಕತ್ತೀರಿ ಆ ನೀಚನನ್ನ ಹಿಡಿದು ಹಾಕಿದವರೇ ತುಕಾರಾಮ್ ಒಂಬ್ಳೇ, ಒಬ್ಬ ಸಬ್ ಇನ್​ಸ್ಪೆಕ್ಟರ್. ಕಸಾಬ್​ನ ಗುಂಡಗಳನ್ನ ಧೈರ್ಯದಿಂದ ತಮ್ಮ ಎದಿ ಮ್ಯಾಲೆ ತೊಗೊಂಡ್ರೂ, ಕಡೀಕೂ ಆ ಕಸಾಬ್​ನ್ನ ಹಿಡಿದ್ರು. ಆದ್ರ ಇದ್ರಾಗ ಅವರು ತಮ್ಮಪ್ರಾಣಾನೇ ಕಳಕೊಂಡ್ರು’ ಅಂತ ಎಲ್ಲ ವಿಷಯಗಳನ್ನೂ ಎಳೆಎಳೆಯಾಗಿ ಎಲ್ಲರಿಗೂ ತಿಳಿಸಿದಳು ವಿದ್ಯಾ. ಇದನ್ನೆಲ್ಲ ನೋಡಿದಾಗ, ಕೇಳಿದಾಗ ಅನ್ನಿಸಿದ್ದು ಸಮಾಜದ ಮನಃಸ್ಥಿತಿ ಎಲ್ಲಿಗೆ ಹೋಗಿದೆ ಅಂತ.

ನಾವು ರಾಮನಷ್ಟೇ ರಾವಣನನ್ನು ಪ್ರಸಿದ್ಧಿಗೊಳಿಸುತ್ತಿದ್ದೀವಾ? ರಾವಣ ಮಹಾಜ್ಞಾನಿ, ಅವನು ಸೀತೆಯನ್ನು ಅವಳ ಇಚ್ಛೆಗೆ ವಿರುದ್ಧ ಎಂದಿಗೂ ರ್ಸ³ಸಲಿಲ್ಲ ಎಂದು ವರ್ಣಿಸಿದವರೂ ಇದ್ದಾರೆ. ಅಷ್ಟೇ ಅಲ್ಲ, ‘ದುರ್ಯೋಧನನನ್ನು ನಿಜವಾಗಲೂ ಸುಯೋಧನ ಎನ್ನಬೇಕು. ತನಗಾದ ಅನ್ಯಾಯವನ್ನು ಪ್ರತಿಭಟಿಸಿದವನು’ ಎಂದವರೂ ಇದ್ದಾರೆ. ದುರ್ದೈವವೆಂದರೆ ಬುದ್ಧಿವಂತರೇ ಇಂಥದ್ದನ್ನೆಲ್ಲ ಉಪದೇಶಿಸುತ್ತಿದ್ದಾರೆ. ಆದರೆ, ನಮ್ಮ ಪರಂಪರೆ ಇದಲ್ಲ. ನಿತ್ಯ ಸತ್ಯವಾದ ಸಂಸ್ಕೃತಿ ನಮ್ಮದು. ರಾಮನ ಆದರ್ಶಗಳನ್ನು ಮಾತ್ರ ಸಮಾಜಕ್ಕೆ ತಿಳಿಸೋಣ. ಪರಸ್ತ್ರೀಯನ್ನು ಅಪಹರಿಸಿದ ಚರಿತ್ರಹೀನ ರಾವಣನ ಪ್ರಶಂಸೆ ನಮಗೆ ಬೇಡ. ಧರ್ಮಯುದ್ಧವನ್ನು ನ್ಯಾಯವಾಗಿಯೇ ಗೆದ್ದ ಪಾಂಡವರ ಪ್ರಶಂಸೆ ಮಾಡೋಣ.

ಕೈಯಲ್ಲಿ ಮಾರಕ ಬಂದೂಕನ್ನು ಹಿಡಿದ ಅಜ್ಮಲ್ ಕಸಾಬನನ್ನು, ಕೇವಲ ಲಾಠಿ ಹಿಡಿದ ತುಕಾರಾಮ್ ಎದುರಿಸಿದರು. ಅಂದು ಧೈರ್ಯವೇ ಒಂಬ್ಳೇ ಅವರ ಅಸ್ತ್ರ. ಆದರೆ ಅವರ ಈ ಶೌರ್ಯದ ಬಗ್ಗೆ ಸಮಾಜದ ಎಷ್ಟೋ ಜನಕ್ಕೆ ಮಾಹಿತಿಯೇ ಇಲ್ಲ. ಆದರೆ ಕಸಾಬ್ ಮಾತ್ರ ಎಲ್ಲರಿಗೂ ಗೊತ್ತು. ಇದೇ ದುರ್ದೈವ. ನಾವು ಯಾವುದನ್ನು, ಯಾರನ್ನು ಪ್ರಶಂಸಿಸುತ್ತಿದ್ದೇವೆ ಎನ್ನುವುದರ ಬಗ್ಗೆ ಎಚ್ಚರವಿರಲಿ. ಅನ್ಯಾಯ, ಅಧರ್ಮವನ್ನು ಪ್ರಶಂಸಿಸುವ ಮಾನಸಿಕತೆಯಿಂದ ಹೊರಬರೋಣ. ಸಾತ್ವಿಕತೆಯನ್ನೇ ಪ್ರಶಂಸಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ:manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net