ಮತ್ಸರ ಎಂಬ ಶತ್ರುವನ್ನು ಸಂಹರಿಸೋಣ: ಮನೋಲ್ಲಾಸ

Manollasa
Published on
| ಬೇಲೂರು ರಾಮಮೂರ್ತಿ

ಅಂದು ಗುರುಕುಲದಲ್ಲಿ ಶಿಷ್ಯನೊಬ್ಬ ತನ್ನ ಸಹಪಾಠಿ ಶಿಷ್ಯನ ಬಗೆಗೆ ಕೆಟ್ಟದಾಗಿ ಮಾತಾಡಿದ. ಗುರುಗಳು, ‘ಅವನೂ ನಿನ್ನಂತೆ ವಿದ್ಯೆ ಕಲಿಯಲು ಬಂದಿರುವನು. ನೀನು ಏಕಸಂಧಿಗ್ರಾಹಿ ಇರಬಹುದು. ಆದರೆ ಅವನನ್ನು ನೀನು ಹೀಯಾಳಿಸುವುದು ತಪ್ಪು. ಶಿಷ್ಯರಾದ ನಿಮ್ಮಲ್ಲಿ ಮತ್ಸರ ಇರಲೇಬಾರದು. ನಿನಗೆ ಇನ್ನೊಬ್ಬ ವಿದ್ಯಾರ್ಥಿ ಬಗೆಗೆ ಮತ್ಸರ ಇದ್ದರೆ ಅವನು ಗುರುಗಳಿಗೆ ನಿನಗಿಂತ ಹತ್ತಿರವಾಗುವನು’ ಎಂದು ತೋಟಕಾಚಾರ್ಯ ಎಂದು ಹೆಸರಾದ ಆದಿಗುರು ಶ್ರೀಶಂಕರಾಚಾರ್ಯರ ನಾಲ್ಕನೇ ಶಿಷ್ಯರಾದ ಆನಂದಗಿರಿಯ ಕಥೆಯನ್ನು ಹೇಳಿದರು.

ಆನಂದಗಿರಿ ಎಂಬ ಹುಡುಗ ಶಂಕರಾಚಾರ್ಯರ ಸೇವೆ ಮಾಡಿಕೊಂಡು ಗುರುಕುಲದಲ್ಲಿದ್ದ. ಅವನು ಗುರುಗಳಿಗೆ ಸ್ನಾನಕ್ಕೆ ಸಿದ್ಧ ಮಾಡುವುದು, ಉಡುಪುಗಳನ್ನು ನದಿಯಲ್ಲಿ ಶುಭ್ರಗೊಳಿಸಿ, ಒಣಗಿಸಿ ತಂದು ಜೋಡಿಸಿ ಇಡುವುದು, ಪೂಜೆಗೆ ಅಣಿ ಮಾಡುವುದು, ಗುರುಗಳ ಫಲಾಹಾರದ ವ್ಯವಸ್ಥೆ ಮಾಡುವುದು. ಹೀಗೆ ಎಲ್ಲ ಕೆಲಸಗಳನ್ನೂ ಮಾಡಿ ಇತರ ಶಿಷ್ಯರ ಜೊತೆ ಕೂತು ಪಾಠ ಕೇಳುತ್ತಿದ್ದ. ಆದರೆ ಆನಂದಗಿರಿ ಇತರ ಶಿಷ್ಯರಷ್ಟು ಚುರುಕಲ್ಲ. ಹೀಗಾಗಿ ಸನಂದನರೇ ಮೊದಲಾದ ಶಿಷ್ಯರಿಗೆ ಆನಂದಗಿರಿಯನ್ನು ಕಂಡರೆ ಅಕ್ಕರೆಯಿಲ್ಲ. ಒಂದು ದಿನ ಎಲ್ಲ ಶಿಷ್ಯರೂ ಬಂದು ಸೇರಿ, ‘ಗುರುಗಳೇ ಪಾಠ ಶುರುಮಾಡಿ’ ಎಂದಾಗ ಶಂಕರಾಚಾರ್ಯರು, ‘ಇರಿ ಗಿರಿಯೂ ಬರಲಿ’ ಎಂದರು. ಕೂಡಲೇ ಸನಂದನರು ‘ಗುರುಗಳೇ ಗಿರಿ ಶುದ್ಧ ಶುಂಠಿ. ಅವನಿಗೆ ನಿಮ್ಮ ಪಾಠ ತಲೆಗೆ ಹತ್ತೋಲ್ಲ. ಅವನಿಗೆ ಕಾಯೋದು ವ್ಯರ್ಥ. ನಮಗೆ ಪಾಠ ಮಾಡಿ’ ಎಂದರು. ಶಿಷ್ಯರ ಈ ಅಹಂಕಾರ ಭಾವವನ್ನು ಹೋಗಲಾಡಿಸಬೇಕೆಂದು ಶಂಕರಾಚಾರ್ಯರು ಆ ಕೂಡಲೇ ಆನಂದಗಿರಿಗೆ ಚತುರ್ದಶ ವಿದ್ಯೆಗಳೂ ಪ್ರಾಪ್ತವಾಗಲಿ ಎಂದು ಅನುಗ್ರಹಿಸಿದರು. ನದಿತೀರದಲ್ಲಿ ಗುರುಗಳ ಬಟ್ಟೆ ಶುಭ್ರಗೊಳಿಸುತ್ತಿದ್ದ ಆನಂದಗಿರಿಗೆ ಮೈಯಲ್ಲಿ ಮಿಂಚಿನ ಸಂಚಾರವಾಗಿ ದೊಡ್ಡ ತೇಜಸ್ಸೊಂದು ತನ್ನ ಹೃದಯ ಹೊಕ್ಕ ಅನುಭವವಾಯಿತು. ಮುಖದಲ್ಲಿ ಅತೀವ ತೇಜಸ್ಸು ತುಂಬಿಕೊಂಡಿತು. ಅಲ್ಲಿಂದ ಗುರುಸನ್ನಿಧಾನಕ್ಕೆ ಓಡಿಬಂದು ಸಕಲವೇದಾಂತಸಾರವಾಗಿ ಗುರುಶಿಷ್ಯ ಸಂವಾದ ರೂಪದಲ್ಲಿ ತೋಟಕ ವೃತ್ತ ಶೈಲಿಯ ಐದು ಪದ್ಯಗಳನ್ನು ನಿರರ್ಗಳವಾಗಿ ಹೇಳಿದ. ಇದರಿಂದಾಗಿ ಆದಿಶಂಕರಾಚಾರ್ಯರು, ‘ತೋಟಕವೃತ್ತದಿಂದ ತತ್ತ್ವಅರ್ಥಸಾರವನ್ನು ವಿವರಿಸಿದ ನಿನಗೆ ಇಂದು ನಾನು ತೋಟಕಾಚಾರ್ಯ ಎಂದು ಮರುನಾಮಕರಣ ಮಾಡಿ ನನ್ನ ನಾಲ್ಕನೇ ಶಿಷ್ಯನನ್ನಾಗಿ ಸ್ವೀಕರಿಸುತ್ತಿದ್ದೇನೆ’ ಎಂದರು. ಇದರಿಂದ ಇತರ ಶಿಷ್ಯರು ತಲೆತಗ್ಗಿಸುವಂತಾಯಿತು.

‘ವಿದ್ಯಾಲಾಭ ಶಿಷ್ಯರಿಗೆ ಶ್ರವಣ ಮಾತ್ರದಿಂದ ಲಭಿಸುವುದಿಲ್ಲ. ಅದಕ್ಕೆ ಗುರು ಅನುಗ್ರಹವೂ ಬೇಕು. ಇಂದಿನಿಂದ ನೀವು ಸಹಪಾಠಿಗಳ ಬಗೆಗೆ ಮತ್ಸರಭಾವವನ್ನು ಬಿಟ್ಟು ಗುರುಗಳ ಪಾಠ ಕೇಳುವುದರ ಜೊತೆಗೆ ಗುರುಗಳು ಅನುಗ್ರಹಕ್ಕೂ ಪಾತ್ರರಾಗಿರಿ’ ಎಂದರು. ನಿಜವೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಇದಕ್ಕೇ ಹೇಳುವುದು. ನಮಗೆ ಸದಾ ಗುರುಗಳ ಅನುಗ್ರಹ ಇರಲಿ. ಹಾಗೆ ಇರುವಂತೆ ನಮ್ಮ ಚಿಂತನೆಯನ್ನು, ಮತ್ಸರರಹಿತ ಭಾವವನ್ನೂ ರೂಪಿಸಿಕೊಳ್ಳೋಣ.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net