ದೌರ್ಬಲ್ಯ ದೂರವಿಡೋಣ

Dyan
Published on

| ಅನಿತಾ ನಾಗರಾಜ ಹೆಗಡೆ

ಅದೊಂದು ಗುರುಕುಲ. ಅಲ್ಲಿ ವಿದ್ಯೆ ಕಲಿಯುತ್ತಿದ್ದ ಶಿಷ್ಯರಲ್ಲಿ ಆ ದೇಶದ ರಾಜಕುಮಾರನೂ ಒಬ್ಬ. ಒಂದು ದಿನ ಗುರುಗಳು ಶಿಷ್ಯರನ್ನೆಲ್ಲ ಹತ್ತಿರ ಕರೆದು- ‘ಇಲ್ಲಿಯವರೆಗೆ ನೀವು ಏನನ್ನು ಕಲಿತಿರಿ?’ ಎಂದು ಕೇಳಿದರು. ಶಿಷ್ಯರುಗಳೆಲ್ಲ ಅದುವರೆಗೆ ತಾವು ಕಲಿತ ವಿದ್ಯೆಗಳನ್ನು ಗುರುಗಳ ಮುಂದೆ ಪ್ರದರ್ಶಿಸಿದರು. ರಾಜಕುಮಾರನ ಸರದಿ ಬಂದಾಗ ಗುರುಗಳು, ‘ನೀನೇನು ಕಲಿತಿರುವೆ?’ ಎಂದು ಪ್ರಶ್ನಿಸಿದರು. ಅದಕ್ಕವನು, ‘ಗುರು ದೇವಾ, ಬದುಕಿನಲ್ಲಿ ಕಲಿಯಬೇಕಾದ ಮೊದಲ ವಾಕ್ಯವನ್ನು ಕಲಿತೆ’ ಎಂದನು. ‘ಅಷ್ಟರ ಹೊರತು ಇನ್ನೇನೂ ಕಲಿಯಲಿಲ್ಲವೇ?’ ಎಂದು ಅಸಹನೆಯಿಂದ ಕೇಳಿದಾಗ ‘ಈಗ ಎರಡನೆಯ ವಾಕ್ಯವನ್ನೂ ಕಲಿತೆ ಗುರುದೇವಾ’ ಎಂದು ಶಾಂತನಾಗಿಯೇ ಹೇಳಿದ.

ಗುರುಗಳ ಕೋಪ ಮಿತಿ ಮೀರಿತು. ಇವನು ರಾಜನ ಮಗ ಎಂಬ ಕಾರಣಕ್ಕೆ ಅಷ್ಟೊಂದು ಶ್ರಮವಹಿಸಿ ವಿದ್ಯೆ ಕಲಿಸಿದ್ದು ವ್ಯರ್ಥವಾಯಿತೆ? ಎಂಬ ಬೇಸರದಿಂದ ರಾಜಕುಮಾರನಿಗೆ ಬೆತ್ತದಿಂದ ನಾಲ್ಕು ಬಾರಿಸಿ, ‘ಅಷ್ಟು ಕಾಲದಿಂದ ನೀನು ಕಲಿತಿದ್ದು ಕೇವಲ ಎರಡು ವಾಕ್ಯಗಳೇ?’ ಎಂದು ಗದರಿಸಿದರೂ, ಥಳಿಸಿದರೂ ಆತ ಕೋಪಗೊಳ್ಳದೇ ನಸು ನಗುತ್ತಿದ್ದ. ಆಗ ಗುರುಗಳಿಗೆ ಯೋಚನೆಯಾಗಿ, ‘ಈಗ ಇವನು ಯುವರಾಜ. ನಾಳೆ ಮಹಾರಾಜನಾಗಿ ನನ್ನನ್ನೂ ಆಳಲಿರುವನು. ಆದರೆ ತಾನಿಷ್ಟು ಹೊಡೆದರೂ ಕೋಪಗೊಳ್ಳದೆ ನಸು ನಗುತ್ತಿರುವನಲ್ಲ’ ಎಂದುಕೊಂಡು ಅವನ ಕೈಯಲ್ಲಿದ್ದ ಪುಸ್ತಕದಲ್ಲಿರುವ ಮೊದಲ ವಾಕ್ಯವನ್ನು ನೋಡಿದರು. ಅದರಲ್ಲಿ ಹೀಗಿತ್ತು-‘ನಿನ್ನ ಬುದ್ಧಿಯನ್ನೆಂದೂ ಕೋಪದ ವಶ ಮಾಡದೇ ಶಾಂತಚಿತ್ತನಾಗಿರು’. ಹಾಗೆ ಎರಡನೆಯ ವಾಕ್ಯ-‘ಸತ್ಯವನ್ನೇ ಹೇಳು’.

ತಾನು ಮೊದಲ ವಾಕ್ಯ ಕಲಿತೆನೆಂದು ಅವನು ಹೇಳಿದ್ದು ಈಗ ಗುರುಗಳಿಗೆ ಅರ್ಥವಾಯಿತು. ಅವರು ರಾಜಕುಮಾರನನ್ನು ಆಲಂಗಿಸಿಕೊಂಡು, ‘ಮಗು ನಾನು ಕಲಿಯಲಾಗದಿದ್ದನ್ನು ನಿಜವಾದ ಅರ್ಥದಲ್ಲಿ ನೀನು ಕಲಿತೆ’ ಎಂದಾಗ ‘ಗುರುದೇವಾ, ನಾನು ಆ ವಾಕ್ಯವನ್ನು ಇನ್ನೂ ಪೂರ್ತಿಯಾಗಿ ಕಲಿತಿಲ್ಲ. ಏಕೆಂದರೆ ನಿಮ್ಮಿಂದ ಪೆಟ್ಟು ತಿನ್ನುವಾಗ ಮನದೊಳಗೆ ಒಂದೆರಡು ಬಾರಿ ಕೋಪದ ಅಲೆಗಳೆದ್ದವು’ ಎಂದು ಸತ್ಯವನ್ನೇ ನುಡಿದ.

ಹೌದು! ಕೋಪ ನಮ್ಮ ಜೀವನದ ಬಹುತೇಕ ಸಂದರ್ಭಗಳಲ್ಲಿ ಆವರಿಸಿಕೊಂಡುಬಿಡುತ್ತದೆ. ಹೇಗೆ ಬಿಟ್ಟ ಬಾಣವನ್ನು ಮರಳಿ ಪಡೆಯಲಾಗುವುದಿಲ್ಲವೋ ಹಾಗೆಯೇ ಕೋಪದಲ್ಲಿ ಆಡುವ ಬೇಡದ ಮಾತುಗಳನ್ನೂ ಮರಳಿ ಪಡೆಯಲಾಗದು. ಅವು ಎದುರಿಗಿರುವವರನ್ನು ನೋಯಿಸಿದರೆ, ಖುಷಿಯಲ್ಲಿರುವಾಗ ಆಡುವ ಮಾತುಗಳು ನಮ್ಮ ಬಗ್ಗೆ ನಮಗೇ ತಿಳಿಯದಂತೆ ಹಲವಾರು ವಿಷಯಗಳನ್ನು ನಾಲಿಗೆಯಿಂದ ಜಾರಿಸಿಬಿಡುತ್ತವೆ. ಅಂತೆಯೇ ಆತಂಕದಲ್ಲಿ ಇರುವಾಗ ಆಡುವ ಮಾತುಗಳು ದೌರ್ಬಲ್ಯವನ್ನು ಎದುರಾಳಿಗೆ ತಿಳಿಯುವಂತೆ ಮಾಡುತ್ತವೆ. ಆದ್ದರಿಂದ ಕೋಪ, ಖುಷಿ, ಉದ್ವೇಗ, ಆತಂಕದಲ್ಲಿ ಇರುವಾಗ ನಮ್ಮ ಅಂತರಾತ್ಮದೊಡನೆಯೇ ಮಾತನಾಡುವುದು ಒಳಿತು. ಇನ್ನು ಸತ್ಯದ ನುಡಿಗಳು ಆ ಕ್ಷಣ ನೋವನ್ನುಂಟು ಮಾಡಿದರೂ ಅವುಗಳೇ ವಾಸ್ತವ. ಅವುಗಳನ್ನು ಸ್ವೀಕರಿಸದೇ ಬೇರೆ ದಾರಿಯಿಲ್ಲ. ವಾಸ್ತವಿಕತೆಗಳನ್ನು ಅರಿತು ಅದನ್ನು ಸ್ವೀಕರಿಸುವ ಮನಸ್ಥಿತಿ, ಗುಣ ಇಲ್ಲದಿರುವಾಗ ಸಂಘರ್ಷ ಉಂಟಾಗುತ್ತದೆ. ಆದ್ದರಿಂದ ಸತ್ಯದ ಮಹತ್ವವನ್ನು ಅರಿಯುತ್ತ ಅವುಗಳನ್ನೇ ಆಡುವ ಸಂಕಲ್ಪ ನಮ್ಮದಾಗಲಿ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net