ವಿನಮ್ರರಾಗಿ ಮುಂದೆ ಸಾಗೋಣ

edit 5
Published on

| ಡ್ಯಾನಿ ಪಿರೇರಾ

ನದಿಯೊಂದು ಭೋರ್ಗರೆದು ಹರಿಯುತ್ತ ತನ್ನ ಹರಿವಿಗೆ ಸಿಕ್ಕ ಎಲ್ಲ ವಸ್ತುಗಳನ್ನು ತನ್ನೊಡಲೊಳಗೆ ಸೆಳೆದು ಹೊತ್ತೊಯ್ಯುತ್ತಿತ್ತು. ಆ ಜಲಧಾರೆಯೊಳಗಿನ ನಾಲ್ಕಾರು ಬಿಂದುಗಳಿಗೆ ಇದ್ದಕ್ಕಿದ್ದಂತೆ ಅಹಂಕಾರದ ಆವಾಹನೆಯಾಗಿ ಈ ನದಿಯ ಒಟ್ಟು ನೀರಿನ ಭೋರ್ಗರೆಯುವ ಆ ಧ್ವನಿ ಮತ್ತದರ ರಭಸ, ತಮ್ಮೊಡನೆ ತಮ್ಮಷ್ಟೇ ವೇಗದಲ್ಲಿ ಸಿಕ್ಕಿದ್ದನ್ನೆಲ್ಲ ಕೊಚ್ಚಿ ಹೊತ್ತೊಯ್ಯುವ ಆ ಶಕ್ತಿಗೆ ನಾವೇ ಮುಖ್ಯ ಕಾರಣ ಎಂದು ಆ ಬಿಂದುಗಳು ಕೇಕೆ ಹಾಕುತ್ತ ಬೀಗಿದವಂತೆ. ಆದರೆ, ಆ ಜೀವನದಿ ಮಾತ್ರ ತಲೆಕೊಡಿಸಿಕೊಳ್ಳದೆ, ಮುಂದೆ ಸಾಗಿತಂತೆ. ನದಿಯ ಮೌನ ತಮಗೆ ತೋರಿದ ಉಪೇಕ್ಷೆ ಎಂದು ಪರಿಗಣಿಸಿದ ಆ ಬಿಂದುಗಳೊಳಗೆ ದುರಭಿಮಾನ ಸೆಟೆದು ದುಪ್ಪಟ್ಟಾಗಿ, ‘ನಮ್ಮ ಸಾಮರ್ಥ್ಯ ಇದಕ್ಕೆ ಗೊತ್ತಿಲ್ಲ! ಎಂದು ಗೊಣಗಲು ಶುರುವಿಟ್ಟುಕೊಂಡವಂತೆ!

ನದಿ ತನ್ನ ಗುರಿ, ಉದ್ದೇಶ ಮಾತ್ರವಷ್ಟೇ ಮುಂದಿಟ್ಟು ಸಾಗಬೇಕಿರುವಾಗ, ತನ್ನದೇ ಜೀವಸೆಲೆಯ ಆ ನಾಲ್ಕಾರು ಜಲಬಿಂದುಗಳಲ್ಲಿ ಹುದುಗಿರುವ ‘ಅಹಮ್ಮಿಕೆ’ಗೆ ಮಹತ್ವ ಕೊಡಬೇಕೆಂದಾಗಲೀ ಅವುಗಳ ಪ್ರಶ್ನೆಗಳಿಗೆ ಉತ್ತರಿಸಬೇಕೆಂದಾಗಲಿ ಅದಕ್ಕೆ ಅನಿಸಲೇ ಇಲ್ಲ. ರೊಚ್ಚಿಗೆದ್ದ ಆ ಹನಿಗಳು ಕ್ರೋಧದಿಂದ ಉರಿದು, ‘ಸೂಕ್ತಕಾಲದಲ್ಲಿ ನಿನಗೆ ಬುದ್ಧಿ ಕಲಿಸುತ್ತೇವೆ. ನಿನ್ನ ವೇಗಕ್ಕೆ ತಡೆ ಹಾಕಿಯೇ ತೀರುತ್ತೇವೆ’ ಎಂದು ಶಪಥ ಮಾಡಿದವಂತೆ. ಅದೊಂದು ಮಧ್ಯಾಹ್ನದ ಬಿರುಬಿಸಿಲಿನ ಸಮಯ. ಆ ಬಿಂದುಗಳು ನದಿಯಿಂದ ಬೇರ್ಪಡುವ ಬಗ್ಗೆ ತಮ್ಮೊಳಗೆ ಮಾತಾಡಿಕೊಂಡು ಸೂಕ್ತ ಸ್ಥಳಕ್ಕಾಗಿ ಕಾಯುತ್ತಿರುವಾಗ, ಅವುಗಳ ನಿರೀಕ್ಷಿತ ಸ್ಥಳ ಆ ಕಲ್ಲುಬಂಡೆಯ ಕೊರಕಲು ಇಳಿಜಾರಿನ ಪ್ರದೇಶ ಬಂದೇ ಬಿಟ್ಟಿತ್ತು. ನೀರಿನ ಹರಿವ ವೇಗದ ಜೊತೆಗೆ ಧಾವಿಸುತ್ತಲೇ ಆ ಹನಿಗಳು ನದಿಯ ಪಕ್ಕದ ಬಂಡೆಯ ಮೇಲೆ ಜಿಗಿದು ಆ ಜೀವಸಲಿಲ ಗಂಗೆಯಿಂದ ಬೇರ್ಪಟ್ಟವು.

ಆಗಿದ್ದೇನು?! ಆ ಸಜೀವ ಜಲರಾಶಿ ತನ್ನ ಎಂದಿನ ಸಾಗರ ಸೇರುವ ಧಾವಂತದಲ್ಲಿ ವೇಗವಾಗಿ ಸಾಗುತ್ತಿದ್ದರೆ, ಆ ಬಿಂದುಗಳು ಕೆಲ ಕ್ಷಣಗಳ ತರುವಾಯ ಬಿಸಿಲಿನ ಝುಳಕ್ಕೆ ಸೀದು ಅಸ್ತಿತ್ವವನ್ನೇ ಕಳೆದುಕೊಂಡವಂತೆ! ಹೌದು, ವಿಶಾಲ ಜಗತ್ತಿನಲ್ಲಿ ನಮ್ಮ ನಡೆಗಳೂ ಅನೇಕ ಬಾರಿ ಆ ನೀರಬಿಂದುಗಳಂತೆ! ನಮ್ಮ ಶಕ್ತಿಯ ಇತಿಮಿತಿಯಲ್ಲಿ ಯೋಚಿಸದೆ, ನಮ್ಮೊಳಗಿನ ಶಕ್ತಿ ಅಜೇಯ ಎನ್ನುವಂತೆ ಕಾರ್ಯಪ್ರವೃತ್ತರಾಗುತ್ತೇವೆ. ಆ ಮೂಲಕ ಜಗತ್ತಿನ ಅಗೋಚರ ಶಕ್ತಿಗೆ ಸಡ್ಡು ಹೊಡೆಯುವ ವಿಫಲ ಪ್ರಯತ್ನ ಮಾಡುತ್ತ ಕೊನೆಗೊಮ್ಮೆ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ.

ಅದನ್ನು ಕಬೀರರು ಹೀಗೆ ಹೇಳುತ್ತಾರೆ-‘ಒಗ್ಗಟ್ಟೆಂಬ ಮಹಾಶಕ್ತಿಯ ಸಾಮರ್ಥ್ಯ ಅಗಾಧವಾದದ್ದು. ಹಾಗಾಗಿ, ನಮ್ಮೊಳಗಿರುವ ಏಕಶಕ್ತಿಯ ಬಲದ ಮೇಲೆ ವಿಶ್ವಾಸ ಇದ್ದಾಗ್ಯೂ, ಬಹುಬಲದ ಶಕ್ತಿಗೆ ಮತ್ತಷ್ಟು ಬಲ ಹೆಚ್ಚು ಎಂಬ ಭಾವ ತಾಳೋಣ!’ ಆತ್ಮವಿಶ್ವಾಸದೊಂದಿಗೆ ದೈವೀಬಲಕ್ಕೂ ಗೌರವ ನೀಡುತ್ತ ನನ್ನಿಂದಲ್ಲ ನಿನ್ನಿಂದಲೇ ಇದೆಲ್ಲ ಎಂಬ ವಿನಮ್ರ ನಡೆಯೊಂದಿಗೆ ಮುಂದೆ ಸಾಗೋಣ!

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net