

| ರೇಖಾ ಗಜಾನನ ಭಟ್ಟ
ರೈತನೊಬ್ಬ ಕಾಡಿನಲ್ಲಿ ಹಸುವನ್ನು ಮೇಯಿಸುತ್ತಿದ್ದ. ಆ ಹಸುವಿನ ಕೊರಳಿಗೆ ಅಲಂಕಾರಕ್ಕಾಗಿ ಒಂದು ಹೊಳೆಯುವ ಸಣ್ಣ ಕಲ್ಲನ್ನು ಕಟ್ಟಿದ್ದ. ಅದೇ ದಾರಿಯಲ್ಲಿ ಬರುತ್ತಿದ್ದ ಒಬ್ಬ ಆಭರಣ ವ್ಯಾಪಾರಿ ಹಸುವಿನ ಕುತ್ತಿಗೆಯಲ್ಲಿ ಇದ್ದ ಕಲ್ಲನ್ನು ಗಮನಿಸಿ ಅದು ವಜ್ರವೆಂದು ತಿಳಿದು, ಅದನ್ನು ರೈತನಿಂದ ಪಡೆಯಲು ಮುಂದಾದ. ರೈತನು ‘ನೂರು ರೂಪಾಯಿ ಕೊಟ್ಟರೆ ಆ ಕಲ್ಲು ಕೊಡುವೆ’ ಎಂದಾಗ ಆಭರಣ ತಯಾರಕ ಅಷ್ಟು ಹಣ ಕೊಡಲು ಒಪ್ಪದೇ ಮುಂದೆ ಸಾಗಿದ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಾಪಾರಿ ಅಲ್ಲಿಗೆ ಬಂದು ಆ ಕಲ್ಲನ್ನು ಗಮನಿಸಿ ಕೊಳ್ಳಲು ಮುಂದಾದಾಗ ರೈತ ಎರಡು ನೂರು ರೂಪಾಯಿ ನೀಡಬೇಕೆಂದು ಆಗ್ರಹಿಸಿದ. ಆತ ಕೂಡಲೇ ಅಷ್ಟು ಹಣ ನೀಡಿ ಆ ವಜ್ರವನ್ನು ತೆಗೆದುಕೊಂಡು ಹೋದ. ಮತ್ತೆ ಕೆಲವೇ ನಿಮಿಷಗಳಲ್ಲಿ ಮೊದಲನೇ ಆಭರಣ ವ್ಯಾಪಾರಿ ಓಡಿಬಂದು ‘ನೂರು ರೂಪಾಯಿ ಕೊಡಲು ಸಿದ್ಧ. ಆ ಕಲ್ಲನ್ನು ನನಗೆ ಕೊಡು’ ಎಂದ. ರೈತ ಜಂಭದಿಂದ, ‘ನಾನು ಎರಡು ನೂರು ರೂಪಾಯಿಗೆ ಆ ಕಲ್ಲನ್ನು ಈಗಷ್ಟೇ ಮಾರಿದೆ’ ಎಂದ. ಆಗ ವ್ಯಾಪಾರಿ- ‘..ಛೇ ನೀನು ಮೋಸ ಹೋದೆ. ಅದು ಸಾಮಾನ್ಯ ಕಲ್ಲಲ್ಲ. ಲಕ್ಷ ರೂಪಾಯಿ ಬೆಲೆಬಾಳುವ ವಜ್ರವಾಗಿತ್ತು. ಅದನ್ನು ಅರಿಯದೆ ಮೂರ್ಖನಾದೆ’ ಎಂದು ಗೇಲಿ ಮಾಡಿದ. ಆಗ ರೈತ ‘ಅದು ವಜ್ರ ಎಂದು ತಿಳಿದ ಮೇಲೂ ಕೇವಲ ನೂರು ರೂಪಾಯಿ ಕೊಟ್ಟು ಕೊಳ್ಳದೇ ಬಿಟ್ಟುಹೋದ ನೀನು ನನಗಿಂತಲೂ ದೊಡ್ಡ ಮೂರ್ಖನಾಗಿದ್ದೀಯಾ’ ಎಂದು ತಿರುಗೇಟು ನೀಡಿದ. ಆಗ ವ್ಯಾಪಾರಿ ತಲೆತಗ್ಗಿಸಿ ಹೊರಟುಹೋದ.
ನಾವು ತಿಳಿಯದೇ ಮೋಸಹೋಗುವುದು ಸಹಜ. ತಿಳಿವಳಿಕೆ ಹೊಂದಿದ ಮೇಲೂ ಕೆಲವೊಮ್ಮೆ ಅಲಕ್ಷ್ಯ ತೋರಿ ಮೋಸಹೋಗುವುದು ಹೆಚ್ಚಿನ ಮೂರ್ಖತನವೇ ಅಗುತ್ತದೆ. ಒಂದು ವಸ್ತು, ಸಂಗತಿ, ಅಥವಾ ಸಂಬಂಧಗಳ ಮಹತ್ವ ನಾವು ಅರಿತಿರುವಾಗ ಅವುಗಳ ಕುರಿತಾಗಿ ನಿರ್ಲಕ್ಷ್ಯ ತೋರದೆ ಕಾಪಾಡಿಕೊಳ್ಳಬೇಕು. ಅಲ್ಲದೆ ಜೀವನದಲ್ಲಿ ಅವಕಾಶಗಳು ತುಂಬ ವಿರಳವಾಗಿ ಬರುತ್ತವೆ. ಎಷ್ಟೋ ಸಲ ದೊರೆತ ಅವಕಾಶಗಳ ಅರಿವು ನಮಗೆ ಇರುವುದಿಲ್ಲ. ಅವಕಾಶಗಳ ಮಹತ್ವದ ಅರಿವು ನಮಗಿದ್ದರೂ ಸರಿಯಾದ ಸಮಯಕ್ಕೆ ಬಳಸಿಕೊಳ್ಳದೆ, ಅದು ಕೈ ತಪ್ಪಿ ಹೋದ ಮೇಲೆ ಹಳಿದುಕೊಳ್ಳುತ್ತೇವೆ. ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ’ ಎಂಬ ಮಾತಿನಂತೆ ಆಗ ಅವಕಾಶಗಳು ನಮ್ಮನ್ನು ಹುಡುಕಿ ಬರಲಾರವು. ದೊರೆತ ಉತ್ತಮ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ.
ಸುಸಮಯ ಸದವಕಾಶಗಳೆಂಬ ದಾರಿಗಳು
ತಾವಾಗಿ ಸ್ವಾಗತವ ಕೋರುತಿರಲು
ಪರರ ನೋಯಿಸದೆ ಮುನ್ನಡೆಯುತಿರಲು
ಹರುಷ ತಾ ಬರುವುದು ನಮ್ಮ ಜೊತೆ ಇರಲು.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)