ಬೇಕೆನ್ನುವ ಹಿಡಿತದಿಂದ ಪಾರಾಗೋಣ

edit 4
Published on

ಸಿದ್ಧಪುರುಷರೊಬ್ಬರು ಹಳ್ಳದ ಹರಿಯುವಿಕೆ ಮತ್ತು ಸೃಷ್ಟಿಯ ಸೌಂದರ್ಯವನ್ನು ಆನಂದಿಸುತ್ತಿದ್ದರು. ಅಕಸ್ಮಾತ್ತಾಗಿ ಅವರ ದೃಷ್ಟಿ ಏಡಿಯ ಮೇಲೆ ಬಿತ್ತು. ಹಳ್ಳದ ದಡದಲ್ಲಿ ಅದು ನಡೆಯುತ್ತಲಿತ್ತು. ಏಡಿಯ ವಿಕೃತ ದೇಹ, ಅಡ್ಡ ನಡಿಗೆ ಕಂಡು ಮರುಗಿದರು. ಏಡಿಯನ್ನು ಉದ್ದೇಶಿಸಿ, ‘ದೇವರು ಉಳಿದೆಲ್ಲ ಪ್ರಾಣಿಗಳಿಗೆ ಸುಂದರ ದೇಹ ನೀಡಿದ್ದಾನೆ. ಆದರೆ ನಿನ್ನನ್ನು ಕುರೂಪವಾಗಿಸಿದ್ದಾನೆ. ನಿನಗೆ ಅನ್ಯಾಯವಾಗಿದೆ. ನಿನಗೆ ಎಂಥ ದೇಹ ಬೇಕೋ, ಯಾವ ಬಣ್ಣ ಬೇಕೋ, ಬೇಡು ಈಗಲೇ ಕೊಡುವೆ!’ ಎಂದರು. ಏಡಿ ಹೇಳಿತು, ‘ನನಗೆ ಅನ್ಯಾಯವಾಗಿದೆ ಎಂದು ನಿಮಗೇಕೆ ಅನ್ನಿಸಿತು? ಸಾವಿರಾರು ವರುಷಗಳಿಂದ ಇದೇ ದೇಹದೊಂದಿಗೆ ಚೆನ್ನಾಗಿ ಬದುಕಿದ್ದೇವೆ. ಇದಕ್ಕಿಂತ ಸಶಕ್ತ, ಸುಂದರ ಶರೀರ ಇನ್ನೆಲ್ಲಿ ಇರಲು ಸಾಧ್ಯ?’ ಏಡಿಯ ಸಂತೃಪ್ತ ಭಾವವನ್ನು ಕಂಡು ಸಂತುಷ್ಟರಾದ ಸಿದ್ಧಪುರುಷರು, ‘ಎಷ್ಟೆಲ್ಲ ಪಡೆದುಕೊಂಡಿರುವ ಮಾನವರು, ಕೊಟ್ಟದ್ದು ಸಾಲದೆಂದು ನಿತ್ಯ ಮತ್ತೆ ಮತ್ತೆ ಅದು ಬೇಕು ಇದು ಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಏನೂ ಇಲ್ಲದ ನೀನು ಬೇಡುವುದಿಲ್ಲವೇಕೆ?’ ‘ಹೌದು, ಗುರುಗಳೇ ಅವರು ಬೇಡಲೆಂದೇ ಬಂದವರು. ನಾವು ಇದ್ದುದರಲ್ಲಿಯೇ ಸಂತೃಪ್ತವಾಗಿ ಬದುಕಲು ಬಂದವರು’ ಎಂದಿತು ಏಡಿ.

ಮೇಲಿನ ದೃಷ್ಟಾಂತದಲ್ಲಿಯ ಏಡಿಯ ಗುಣ ನಮಗೇಕೆ ಬಾರದು ಎಂದು ಒಮ್ಮೊಮ್ಮೆ ಅನಿಸುವುದುಂಟು. ಸ್ವಲ್ಪವೇ ಇದ್ದಾಗ ಇನ್ನೂ ಬೇಕೆನಿಸುತ್ತದೆ. ಹೆಚ್ಚಿನದು ಸಿಕ್ಕಾಗ ಇನ್ನಷ್ಟು ಬೇಕೆನಿಸುತ್ತದೆ. ಎಲ್ಲವನ್ನೂ ಕಳೆದುಕೊಂಡಾಗ ಗೊತ್ತಾಗುತ್ತದೆ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದು. ಜೀವನದಲ್ಲಿ ದುರಾಸೆ ಒಳ್ಳೆಯದಲ್ಲ. ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು. ಬೇಕು ಬೇಕೆಂಬ ಹಪಹಪಿಯನ್ನು ಇಷ್ಟು ಗಂಭೀರವಾಗಿ ಪರಿಗಣಿಸಿದ್ದು ನಿಜಕ್ಕೂ ಹಾನಿಯಲ್ಲದೆ ಮತ್ತೇನು? ಆಲೋಚನೆಗಳು ಭೂಮಿಯ ಮೇಲಿನ ಅತಿ ಶಕ್ತಿಯುತ ಪ್ರಭಾವಗಳು. ಒಬ್ಬ ಮನುಷ್ಯನಲ್ಲಿ ಉಸಿರಾಡಿಸಲ್ಪಟ್ಟ ಆಲೋಚನೆ ಅವನನ್ನು ಪುನರ್ಜೀವನಗೊಳಿಸಬಲ್ಲುದು. ಹೀಗಾಗಿ ಇದ್ದುದು ಸಾಕು ಎನ್ನುವ ಆಲೋಚನೆಯನ್ನು ಮನದಲ್ಲಿ ಬಿತ್ತಿಕೊಳ್ಳಬೇಕು. ಬೇಕೋಬೇಡವೋ ಗೊತ್ತಿಲ್ಲ ದುರಾಸೆಯಿಂದ ಕೂಡಿಡುವ ಚಟವನ್ನು ಬೆಳೆಸಿಕೊಂಡಿದ್ದೇವೆ. ಇದರಿಂದ ಅವಶ್ಯವಿರುವವರಿಗೆ ಅವು ಸಿಗದಂತಾಗುತ್ತವೆ. ಅಗತ್ಯವಿಲ್ಲದ ವಸ್ತುಗಳೆಲ್ಲ ಕಸವೇ ಸರಿ. ಅನುಭಾವಿಗಳು ಹೇಳುವಂತೆ ಅನಗತ್ಯ ಆಸೆಗಳನ್ನು ಆಗಾಗ ಹೊರ ಹಾಕಬೇಕು. ಅಗತ್ಯವಿರುವುದು ಬೇಕು ಎನ್ನುವ ಆಸೆ ಬೇಕು. ಆದರೆ ದುರಾಸೆ ಲವಲೇಶವೂ ಉಚಿತವಲ್ಲ. ‘ಹೃದಯವು ದುರಾಸೆಯಿಂದ ಮಲಿನವಾಗುತ್ತದೆ. ನಾಲಿಗೆಯು ಸುಳ್ಳಿನಿಂದ ಕಳಂಕಪೂರ್ಣವಾಗುತ್ತದೆ. ಅಪವಿತ್ರ ನಡುವಳಿಕೆಗಳು ಮಾನವನ ಆತ್ಮವನ್ನು ನರಕದ ಕಡಗೆ ತಳ್ಳುತ್ತವೆ’ ಎಂದು ಗುರುನಾನಕರು ಹೇಳಿದ ನುಡಿ ಅರ್ಥಪೂರ್ಣ. ಎಮ್ಮಾ ಗೋಲ್ಡ್​ಮನ್ ಹೀಗೆ ಹೇಳಿದರು-‘ನನ್ನ ಕತ್ತಿನಲ್ಲಿ ವಜ್ರಹಾರ ಧರಿಸುವುದಕ್ಕಿಂತ ಮೇಜಿನ ಮೇಲೆ ಗುಲಾಬಿ ಹೂಗಳನ್ನು ಇಷ್ಟ ಪಡುತ್ತೇನೆ’. ಬೇಕು ಬೇಕು ಎನ್ನುವ ಹಪಹಪಿ ಅಳಿಸಿ ಹಾಕಿದಾಗಲೇ ಸಾಕು ಎಂಬ ವಿವೇಕದ ಪಾಠ ಕಲಿಯಲು ಸಾಧ್ಯವಾಗುವುದು. ಬೇಕೆನ್ನುವ ಹಿಡಿತದಿಂದ ತಪ್ಪಿಸಿಕೊಳ್ಳೋಣ. ಸಾಕೆನ್ನುವ ವಿವೇಕದ ಪಾಠ ಕಲಿಯೋಣ. ಬದುಕಿನ ಸಾರ್ಥಕತೆಯ ಹೂನಗು ಚೆಲ್ಲೋಣ.

| ಜಯಶ್ರೀ ಜೆ.ಅಬ್ಬಿಗೇರಿ (ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net