

ಬೆಟ್ಟದ ತುದಿಯನ್ನು ಏರಿ ಮೇಲಿನಿಂದ ಕೆಳಗಡೆ ನೋಡುವವನಿಗೆ ದಿಬ್ಬ ಮತ್ತು ತಗ್ಗುಗಳೆಲ್ಲವೂ ಒಂದೇ ತರಹ ಕಾಣುತ್ತವೆ. ಹೀಗೆ, ಉನ್ನತದಲ್ಲಿ ನಿಂತು ಎಲ್ಲವನ್ನೂ ಸಮಾನ ದೃಷ್ಟಿಯಿಂದ ನೋಡುವ ಪರಿಪೂರ್ಣತೆಯ ಸಂಕೇತ ಶ್ರೀರಾಮ. ರಾಮನ ಸಂಯಮ, ನ್ಯಾಯದರ್ಶಿತ್ವ, ಸಮದರ್ಶಿತ್ವಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.
ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಬಿಡಿಸಿಕೊಂಡು ಬರಲೋಸುಗ ರಾಮಲಕ್ಷ್ಮಣರು ಹನುಮಂತನೊಡಗೂಡಿ ವಾನರ ಸೈನ್ಯದೊಂದಿಗೆ ಸಮುದ್ರತೀರಕ್ಕೆ ಬರುತ್ತಾರೆ. ಆ ಮಹಾಶರಧಿಯನ್ನು ದಾಟುವುದೆಂತು? ದಾರಿಬಿಡುವಂತೆ ಸಮುದ್ರರಾಜನನ್ನು ರಾಮ ಕೇಳಬೇಕೆಂದು ಇತರರು ಅಭಿಪ್ರಾಯಿಸುತ್ತಾರೆ. ರಾಮ ಸಾಗರಕ್ಕೆ ಆಜ್ಞೆ ಮಾಡಬಹುದಿತ್ತು. ಹಾಗೆ ಮಾಡದೆ ವಿನಮ್ರನಾಗಿ ಪ್ರಾರ್ಥಿಸುತ್ತಾನೆ. ಆದರೆ ಸಮುದ್ರರಾಜ ದಿನವೇ ಕಳೆದರೂ ಕಾಣಿಸಿಕೊಳ್ಳುವುದಿಲ್ಲ. ಅಂತಿಮವಾಗಿ ರಾಮನಿಗೆ ಕೋಪ ಬಂದು ಅಸ್ತ್ರಪ್ರಯೋಗಕ್ಕೆ ಸಜ್ಜಾಗುತ್ತಾನೆ. ಸಮುದ್ರರಾಜ ಶರಣುಬರುತ್ತಾನೆ.
ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ಮೇಲ್ವರ್ಗದ ಆಹಾರ ಧಾನ್ಯವಾದ ಭತ್ತ ಹಾಗೂ ಕೆಳವರ್ಗದ ಆಹಾರ ಧಾನ್ಯವಾದ ನರೆದಲೆಗ(ರಾಗಿ) ನಡುವಿನ ಶ್ರೇಷ್ಠತೆಯ ಕಾಳಗ ವಿಶಿಷ್ಟವಾಗಿ ಬಣ್ಣಿಸಲ್ಪಟ್ಟಿದೆ. ಭತ್ತ ಮತ್ತು ನರೆದಲೆಗ ನಡುವೆ ಶ್ರೇಷ್ಠತೆಯ ವಾಕ್ಸಮರ ನಡೆದು ಕೊನೆಗೆ ನಿರ್ಣಯಕ್ಕೆಂದು ರಾಮನ ಮೊರೆಹೋಗುತ್ತವೆ. ಎರಡೂ ಧಾನ್ಯಗಳ ವಾದ ಆಲಿಸಿದ ರಾಮ ಆ ಕ್ಷಣವೇ ಯಾವುದೇ ತೀರ್ಪು ನೀಡದೆ ಪರಾಂಬರಿಸಿ ನೋಡುವ ತನ್ನ ನ್ಯಾಯಶೀಲಗುಣವನ್ನು ಪ್ರಕಟಿಸುತ್ತಾನೆ. ಆ ಎರಡೂ ಧಾನ್ಯಗಳಿಗೆ ಆರು ತಿಂಗಳ ಸೆರೆವಾಸ ವಿಧಿಸಿ ನಂತರ ಅವುಗಳ ಶ್ರೇಷ್ಠತೆ ನಿರ್ಧರಿಸೋಣ ಎಂದು ಸೂಚಿಸುತ್ತಾನೆ. ಸೆರೆವಾಸದ ಅವಧಿ ಮುಗಿದ ಬಳಿಕ ರಾಮ ಎಲ್ಲ ರಾಜರು, ಮುನಿಗಳ ಸಮ್ಮುಖದಲ್ಲಿ ಸಭೆ ಸೇರಿಸಿ ಧಾನ್ಯಗಳನ್ನು ತರಿಸುತ್ತಾನೆ. ಇವೆರಡರ ಪೈಕಿ ಯಾವುದು ಸತ್ವಯುತವಾದ ಧಾನ್ಯವೆಂದು ನಿಷ್ಪಕ್ಷಪಾತವಾಗಿ ನಿರ್ಣಯಿಸುವಂತೆ ಕೋರುತ್ತಾನೆ. ಸೆರೆವಾಸದಲ್ಲಿದ್ದ ಭತ್ತ ಮುಗ್ಗಿ ತನ್ನ ಕಾಂತಿಯನ್ನು ಕಳೆದುಕೊಂಡಿದ್ದರೆ, ನರೆದಲೆಗ ಸ್ವಲ್ಪವೂ ಕಾಂತಿಯನ್ನು ಕಳೆದುಕೊಳ್ಳದೆ ಮತ್ತಷ್ಟು ಕಾಂತಿಯುತವಾಗಿ, ಸತ್ವಯುತವಾಗಿ ಹೊಳಪು ಪಡೆದಿತ್ತು. ಆಸ್ಥಾನಿಗರು ನರೆದಲೆಗವೇ ಸತ್ವಯುತವಾದ ಶ್ರೇಷ್ಠ ಧಾನ್ಯವೆಂದು ತೀರ್ಪು ಮಂಡಿಸಿದರು. ರಾಮ ಸಂತೋಷದಿಂದ ನರೆದಲೆಗಕ್ಕೆ ‘ರಾಘವ’ ಎಂದು ತನ್ನ ಹೆಸರನ್ನೇ ಇಡುತ್ತಾನೆ. ಅಂದಿನಿಂದ ನರೆದಲೆಗ ‘ರಾಗಿ’ ಎಂದು ಪ್ರಖ್ಯಾತಿ ಪಡೆಯಿತು. ಭತ್ತ ಸೋಲಿನಿಂದ ತಲೆತಗ್ಗಿಸಿತು. ಆಗ ರಾಮ, ‘ದೇವತೆಗಳಿಗೆ ಪರಮಾನ್ನ ನೀನು, ನೀನೆಂದೂ ಕೀಳಲ್ಲ’ ಎಂದು ಸಮಾಧಾನಪಡಿಸಿ, ವಾಸ್ತವ ಅರಿತು, ರಾಗ-ದ್ವೇಷಗಳನ್ನು ಬಿಟ್ಟು ರಾಗಿಯೊಂದಿಗೆ ಸ್ನೇಹದಿಂದ ಬಾಳುವಂತೆ ಸೂಚಿಸಿದ.
ಸಮಾಜದಲ್ಲಿಯೂ ಹಾಗೆಯೇ. ಪ್ರತಿಯೊಂದು ವರ್ಗಕ್ಕೂ ಅದರದ್ದೇ ಆದ ಸ್ಥಾನಮಾನ ಇದ್ದು ಸಮಾಜ ನಿರ್ಮಾಣದಲ್ಲಿ ತಮ್ಮದೇ ಆದ ಪಾತ್ರವಹಿಸುತ್ತವೆ. ಇಲ್ಲಿ ಮೇಲು-ಕೀಳಿನ ಪ್ರಶ್ನೆ ಬರುವುದಿಲ್ಲ. ಸಮುದಾಯಗಳ ಸಹಭಾಗಿತ್ವ, ಪರಸ್ಪರ ಹೊಂದಾಣಿಕೆಯಿಂದ ಸಾಮರಸ್ಯದ ನೆಲೆ ಕಾಣಬಹುದು. ಒಗ್ಗಟ್ಟಿನಲ್ಲೇ ಬಲ. ಅಂಥದೊಂದು ಆದರ್ಶ ಸಾಕಾರವಾಗುವಲ್ಲಿ ಜನರು ಮತ್ತು ಆಳುವವರು ಇಬ್ಬರ ಪಾತ್ರವೂ ಇರುತ್ತದೆ ಎಂಬುದನ್ನು ಮರೆಯಬಾರದು.
| ಶಿಲ್ಪಾ ಕುಲಕರ್ಣಿ (ಲೇಖಕಿ ಇಂಜಿನಿಯರ್ ಹಾಗೂ ಹವ್ಯಾಸಿ ಬರಹಗಾರ್ತಿ)