

ಒಬ್ಬ ವ್ಯಕ್ತಿ ಅಥವಾ ಪ್ರಾಣಿಯನ್ನು ನೋಡಿ ಅವರ ಗುಣಸ್ವಭಾವ ಹೇಳಬಲ್ಲ ಮನುಷ್ಯನೊಬ್ಬ ಕೆಲಸ ಕೇಳಿಕೊಂಡು ರಾಜ ದರ್ಬಾರಿಗೆ ಬಂದ. ರಾಜ ಅವನಿಗೆ ತನ್ನ ಕುದುರೆಯನ್ನು ನೋಡಿಕೊಳ್ಳುವ ನೌಕರಿ ಕೊಟ್ಟ. ಅದೊಂದು ದಿನ ರಾಜ ಕೇಳಿದ, ‘ನನ್ನ ಕುದುರೆಯ ಬಗ್ಗೆ ನೀನೇನು ಹೇಳುವೇ?’ ಆತ, ‘ನಿಮ್ಮ ಕುದುರೆ ಒಳ್ಳೆಯ ಜಾತಿಯದಲ್ಲ’ ಎಂದ. ಕುದುರೆ ಕೊಟ್ಟವನನ್ನು ವಿಚಾರಿಸಿದಾಗ, ‘ಕುದುರೆಯೇನೋ ಒಳ್ಳೆಯ ಜಾತಿಯದೇ. ಆದರೆ ಅದರ ತಾಯಿ ಈ ಕುದುರೆ ಹುಟ್ಟುವ ಸಮಯದಲ್ಲಿ ಸತ್ತು ಹೋಯಿತು. ಇದಕ್ಕೆ ನಾವು ಹಸುವಿನ ಹಾಲು ಕುಡಿಸಿ ಬೆಳೆಸಿದೆವು. ಅದು ಆಕಳುಗಳೊಂದಿಗೆ ಬೆಳೆಯಿತು’ ಎಂದ.
ನೌಕರನ ಜಾಣ್ಮೆಗೆ ಖುಷಿ ಪಟ್ಟು, ‘ಇದು ನಿನಗೆ ಹೇಗೆ ತಿಳಿಯಿತು’ ಎಂದು ಕೇಳಿದಾಗ, ‘ಕುದುರೆ ಹುಲ್ಲು ತಿನ್ನುವಾಗ ತಲೆ ಮೇಲೆತ್ತಿ ತಿನ್ನದೇ ಹಸುವಿನಂತೆ ಬಗ್ಗಿ ತಿನ್ನುವುದನ್ನು’ ನೋಡಿದೆ ಎಂದ. ರಾಜ ಆತನ ಗ್ರಹಿಕೆಯನ್ನು ಮೆಚ್ಚಿ ಅವನಿಗೆ ದವಸಧಾನ್ಯ, ಕುರಿ, ಕೋಳಿಗಳನ್ನು ಬಹುಮಾನವಾಗಿ ನೀಡಿ, ರಾಣಿಯ ಅಂತಃಪುರದ ಮೇಲ್ವಿಚಾರಕನನ್ನಾಗಿ ನೇಮಿಸಿದ. ಕೆಲ ದಿನಗಳ ತರುವಾಯ ರಾಣಿಯ ಗುಣಸ್ವಭಾವದ ಬಗ್ಗೆ ವಿಚಾರಿಸಿದಾಗ- ‘ರಾಣಿಯವರೇನೋ ಒಳ್ಳೆಯವರೇ. ಆದರೆ ಅವರು ರಾಜಕುಟುಂಬದಿಂದ ಬಂದವರಲ್ಲ’ ಎಂದ. ರಾಣಿಯ ತಾಯಿಯನ್ನು ರಾಜ ಕೇಳಿದಾಗ, ‘ನನಗೆ ಮಗಳು ಹುಟ್ಟುವಾಗಲೇ ನಿಮ್ಮ ತಂದೆ ನಿಮಗೇ ಅವಳನ್ನು ಮದುವೆ ಮಾಡಿಸಬೇಕು’ ಎಂದು ಮಾತು ಪಡೆದಿದ್ದರು. ಆದರೆ ಹುಟ್ಟಿದ ಮಗಳು ನಾಲ್ಕೇ ತಿಂಗಳಲ್ಲಿ ಸತ್ತು ಹೋದದ್ದರಿಂದ ದನಕಾಯುವವರ ಬಳಿ ಹೆಣ್ಣುಮಗಳನ್ನು ದತ್ತು ಪಡೆದು ಸಾಕಿದೆವು’ ಎಂದಳು. ‘ರಾಣಿ ರಾಜಮನೆತನದವಳಲ್ಲ ಎಂದು ನಿನಗೆ ಹೇಗೆ ತಿಳಿಯಿತು?’ ಎಂದಾಗ, ‘ವೇಷಭೂಷಣ ರಾಣಿಯಂತಿದ್ದರೂ ಅವರಲ್ಲಿ ರಾಜಮನೆತನದ ಘನತೆ, ಗಾಂಭೀರ್ಯದ ಬದಲಿಗೆ ಒಬ್ಬ ಹಳ್ಳಿಹೆಂಗಸಿನ ನಡೆಯನ್ನು ಗಮನಿಸಿದೆ’ ಎಂದ.
ರಾಜ ಖುಷಿಯಿಂದ, ತನ್ನ ಮೇಲ್ವಿಚಾರಣೆ ನೋಡಿಕೊಳ್ಳುವ ಹೊಣೆ ವಹಿಸಿದ. ರಾಜ ಒಂದು ದಿನ, ‘ನನ್ನ ಬಗ್ಗೆ ನಿನಗೇನನಿಸುತ್ತದೆ’ ಎಂದು ಕೇಳಿದ. ಆತ ಭಯದಿಂದಲೇ, ‘ಸ್ವಾಮಿ ನೀವು ರಾಜನ ಮಗನಲ್ಲ, ರಾಜನಿಗಿರುವ ಮೂಲಗುಣ ನಿಮ್ಮಲ್ಲಿಲ್ಲ’ ಎಂದ. ರಾಜ ತಾಯಿಯ ಬಳಿ ವಿಚಾರಿಸಲಾಗಿ,
ಆಕೆ- ‘ನಮಗೆ ಮಕ್ಕಳಿರಲಿಲ್ಲ, ಒಬ್ಬ ಕುರಿ ಕಾಯುವವನಿಂದ ನಿನ್ನನ್ನು ದತ್ತು
ಪಡೆದೆವು’ ಎಂದಳು. ರಾಜ ನೌಕರನಿಗೆ ‘ಇದು ನಿನಗೆ ಹೇಗೆ ತಿಳಿಯಿತು?’ ಎಂದಾಗ ಆತ, ‘ನೀವು ಸಭ್ಯರೇನೋ ಹೌದು. ಆದರೆ ರಾಜನ ಸ್ವಭಾವ ನಿಮ್ಮಲ್ಲಿಲ್ಲ. ಯಾಕೆಂದರೆ ರಾಜನಾದವನು ಬಹುಮಾನ ಕೊಡುವಾಗ ಮುತ್ತು, ರತ್ನ,
ವಜ್ರ ವೈಡೂರ್ಯಗಳನ್ನು ನೀಡುತ್ತಾನೆ. ಆದರೆ ತಾವು ನನಗೆ ಕುರಿ,
ಕೋಳಿ, ಹಸು, ದವಸಧಾನ್ಯಗಳನ್ನು ಕೊಟ್ಟಿರಿ’ ಎಂದ.
ಹೌದು, ವ್ಯಕ್ತಿ ಅದೆಷ್ಟೇ ಸುಖ-ಸಂಪತ್ತುಳ್ಳವನಾಗಿದ್ದರೂ ಆತನ ಮೂಲಗುಣ ಅವನಲ್ಲಿ ಬಿಟ್ಟು ಹೋಗುವುದಿಲ್ಲ. ನಮ್ಮ ಗುಣಾವಗುಣಗಳು ಸಮಯ ಸಂದರ್ಭದಲ್ಲಿ ಅಭಿವ್ಯಕ್ತಿಸುತ್ತವೆ. ನಿಜವಾದ ಅವರ ಗುಣಗಳು ಒಂದಷ್ಟು ವಂಶವಾಹಿಯಾಗಿಯೂ ಬರುತ್ತದೆ ಎನ್ನುವುದು ಅವರ ವರ್ತನೆಯಿಂದ ಗುರುತಿಸಬಹುದು ಮತ್ತು ಆಯಾ ವೃತ್ತಿ
ಮತ್ತು ಸ್ಥಾನಕ್ಕೆ ಅದರದ್ದೇ ಗಾಂಭೀರ್ಯ ಇರಬೇಕೆನ್ನುವುದು ಅಪೇಕ್ಷಣೀಯ ಅಲ್ಲವೇ?!
(ಲೇಖಕರು ಅಧ್ಯಾಪಕರು)