

ನಾವು ಕಂಡ ಕನಸುಗಳು ಸಾಕಾರಗೊಳ್ಳದಿದ್ದಾಗ, ಕೈಗೊಂಡ ಕಾರ್ಯದಲ್ಲಿ ಅನಿರೀಕ್ಷಿತ ಸೋಲು ಉಂಟಾದಾಗ, ಮತ್ತೊಬ್ಬರಿಂದ ಅಹಿತಕರ ಮಾತುಗಳನ್ನು ಕೇಳಿದಾಗ ಬಹುಬೇಗ ಉದ್ವೇಗಕ್ಕೆ ಒಳಗಾಗುತ್ತೇವೆ. ಸಂಕಟ, ಕಿರಿಕಿರಿ ಅನುಭವಿಸುತ್ತೇವೆ. ಮನಸ್ಸಿನಾಳದಲ್ಲಿ ಬೇರೂರಿದ ಮತ್ತದೇ ಭಾವನೆಗಳಿಗೆ ಜೋತುಬಿದ್ದು, ಭಾವನತ್ಮಕ ಬೇಗೆಯಲ್ಲಿ ಬೇಯುತ್ತೇವೆ. ಭಾವನೆಗಳ ಸುಳಿಯಲ್ಲಿ ಸಿಲುಕಿ ನಿರಾಶೆಗೊಂಡಾಗ ಬದುಕೇ ಬೇಡ ಎನಿಸಿಬಿಡುತ್ತದೆ. ಬಹುತೇಕ ಬಾರಿ ಇಂತಹ ನೋವು ನಿಟ್ಟುಸಿರುಗಳಿಗೆ ಘಟಿಸಿದ ಸಂದರ್ಭವೊಂದನ್ನು ನಾವು ಹೇಗೆ ಕಾಣುತ್ತೇವೆ ಮತ್ತು ಪರಿಗಣಿಸುತ್ತೇವೆ ಎಂಬ ಆಯ್ಕೆಯನ್ನು ಅವಲಂಬಿಸಿದೆ ಎನ್ನುವ ಮುಖ್ಯಸಂಗತಿಯನ್ನು ಮರೆತುಬಿಡುತ್ತೇವೆ.
ಗುರುಕುಲದಲ್ಲಿ ಒಂದಷ್ಟು ಶಿಷ್ಯರು ವಿದ್ಯಾಭ್ಯಾಸವನ್ನು ಪೂರೈಸಿ ರಾಜ್ಯಗಳಿಗೆ ಮರಳಿ ಹೋಗಲು ನಿರ್ಧರಿಸಿದರು. ಎಲ್ಲರೂ ಬಿಲ್ವಿದ್ಯೆಯಲ್ಲಿ ವಿಶೇಷ ಪರಿಣಿತರಾಗಿದ್ದರು. ವಿದ್ಯಾಭ್ಯಾಸ ಮಾಡುವ ಕಾಲದಲ್ಲಿ ಗುರುಗಳು ಆನಂದನೆಂಬ ಶಿಷ್ಯನ ಮೇಲೆ ವಿಶೇಷ ಮಮಕಾರ, ಪ್ರೀತಿ ಹೊಂದಿದ್ದರು. ಆನಂದನಷ್ಟೇ ಎಲ್ಲರೂ ಎಲ್ಲದರಲ್ಲೂ ಪರಿಣಿತಿ ಪಡೆದಿದ್ದರೂ ಗುರುಗಳು ಮಾತ್ರ ಆತನಿಗೆ ವಿಶೇಷ ಸ್ಥಾನವನ್ನು ಕೊಟ್ಟಿದ್ದಕ್ಕೆ ಅವರು ಇರಿಸುಮುರಿಸು ಅನುಭವಿಸುತ್ತಿದ್ದರು. ಗುರುಗಳ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದು ಹೊರಡುವ ಸಮಯದಲ್ಲಿ ಒಂದಷ್ಟು ಧೈರ್ಯ ಮಾಡಿ ತಳಮಳಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿ ಕೇಳಿಯೇ ಬಿಟ್ಟರು. ‘ಗುರುಗಳೇ ನಾವು ಆನಂದನಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಹಾಗಿದ್ದರೂ ತಾವು ಮಾತ್ರ ಅವನಿಗೆ ವಿಶೇಷ ಪ್ರೀತಿ, ಗೌರವ ತೋರಿಸಿದ್ದು ಸರಿಯೇ?’ ಎಂದು ಕೇಳಿದರು.
‘ನೀವೆಲ್ಲ ಬಿಲ್ವಿದ್ಯೆಯಲ್ಲಿ ತುಂಬ ಪಾರಂಗತರಾಗಿದ್ದೀರಿ. ಒಂದು ಗುರಿಯನ್ನು ನಿರ್ಧರಿಸಿ ಬಾಣ ಬಿಡುತ್ತೀರಿ, ಒಂದು ವೇಳೆ ಗುರಿ ತಪ್ಪಿ ಬೇರೆ ಗುರಿಗೆ ಬಾಣ ನಾಟಿದರೆ ಏನು ಮಾಡುತ್ತೀರಿ?’ ಎಂದರು. ‘ಸಾಧ್ಯವೇ ಇಲ್ಲ ಗುರುಗಳೇ, ನಾವು ನಿಮ್ಮ ಶಿಷ್ಯರು. ನಾವು ಹೂಡಿದ ಬಾಣದ ಗುರಿ ಎಂದಿಗೂ ತಪ್ಪದು. ಒಂದು ವೇಳೆ ತಪ್ಪಿದರೆ ನಾವು ಕಲಿತದ್ದೆಲ್ಲ ವ್ಯರ್ಥ ಎಂದು ಭಾವಿಸಿ, ಆ ಕ್ಷಣದಿಂದಲೇ ಬಿಲ್ಲಿಗೆ ಬಾಣ ಹೂಡುವುದನ್ನು ಬಿಟ್ಟುಬಿಡುತ್ತೇವೆ’ ಎಂದರು ಹುಮ್ಮಸ್ಸಿನಿಂದ. ಅಲ್ಲಿಯೇ ಇದ್ದ ಆನಂದನಿಗೆ ‘ಅಂತಹ ಸಂದರ್ಭದಲ್ಲಿ ನೀನೇನು ಮಾಡುತ್ತೀಯಾ?’ ಎಂದರು. ಆನಂದ ಅತ್ಯಂತ ವಿನಯದಿಂದ ‘ಗುರುಗಳೇ ಒಂದು ವೇಳೆ ಬಾಣ ಗುರಿ ತಪ್ಪಿ ಬೇರೆ ಗುರಿಯನ್ನು ಮುಟ್ಟಿದರೆ, ಮುಟ್ಟಿದ ಗುರಿಯನ್ನೇ ನಾನಿಟ್ಟ ಗುರಿ ಎಂದು ಭಾವಿಸುತ್ತೇನೆ. ಆ ಕ್ಷಣದ ಉದ್ವೇಗದಿಂದ, ಒತ್ತಡದಿಂದ ಹೊರಬರುವ ಪ್ರಯತ್ನ ಮಾಡುತ್ತೇನೆ. ವಿಫಲತೆಗೆ ಕಾರಣವನ್ನು ಹುಡುಕಿ ಮತ್ತೆ ಪ್ರಯತ್ನಿಸುತ್ತೇನೆ’ ಎಂದ. ಗುರುಗಳಿಗೆ ಮಾತ್ರವಲ್ಲದೆ ಉಳಿದ ಶಿಷ್ಯರಿಗೆ ಆನಂದನ ಉತ್ತರದಿಂದ ಆನಂದವಾಯಿತು. ತಮ್ಮ ಪ್ರಶ್ನೆಗೆ ಉತ್ತರವನ್ನು ಅವರು ಪಡೆದಿದ್ದರು.
ನಮಗಿಷ್ಟವಲ್ಲದ ಸಂದರ್ಭ ಘಟಿಸಿದಾಗ ಬೇಸರಪಡದೆ, ಉದ್ರಿಕ್ತರಾಗದೆ ಆ ಕ್ಷಣಕ್ಕೆ ಅದರ ಒತ್ತಡದಿಂದ ಹೊರಬರುವುದು ಮೊದಲ ಆದ್ಯತೆಯಾಗಬೇಕು. ಒತ್ತಡಗಳಿಂದ ವಿಚಲಿತರಾಗದಿದ್ದಾಗ ಮಾತ್ರವೇ ವಿವೇಚನೆಯಿಂದ ವರ್ತಿಸುವುದು ಸಾಧ್ಯ. ಇಂತಹ ಒತ್ತಡವನ್ನು ಹಿಮ್ಮೆಟ್ಟಿಸಲು ನಾವು ಯಾವುದನ್ನು ನಿರಾಕರಿಸದೆ, ಯಾರನ್ನು ನಿಂದಿಸದೆ, ಯಾವುದನ್ನೂ ಸಮರ್ಥಿಸದೆ ಏನಾಗುತ್ತದೆಯೋ ಅದನ್ನು ಒಪ್ಪಿಕೊಳ್ಳುವ, ಎಲ್ಲ ಸಾಧ್ಯತೆಗಳಿಗೆ ಮನಸ್ಸನ್ನು ಮುಕ್ತಗೊಳಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ನೈಜವಾದ ಸ್ವಾತಂತ್ರ್ಯ ಸಿಗುತ್ತದೆ. ಇಂತಹ ಸ್ಥಿತಿ ಮಾತ್ರವೇ ಸಮಚಿತ್ತ ಭಾವವನ್ನು ಬಿತ್ತಲು ಸಾಧ್ಯ.
| ಮಹಾದೇವ ಬಸರಕೋಡ
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)