

| ರಶ್ಮಿ ಹೆಗಡೆ
ಮೂವತ್ತರ ವಯಸ್ಸಿನಲ್ಲಿಯೇ ಯಶಸ್ವಿ ಕೈಗಾರಿಕೋದ್ಯಮಿ ಎನಿಸಿಕೊಂಡು, ಅಮೆರಿಕದ ಶ್ರೀಮಂತರಲ್ಲೊಬ್ಬರಾದವರು ಆಂಡ್ರೂವ್ ಕಾರ್ನೆಗಿ. ಅವರು ಮರಣಕಾಲದಲ್ಲೊಮ್ಮೆ ತಮ್ಮ ಸೆಕ್ರೆಟರಿಯನ್ನು ಪ್ರಶ್ನಿಸುತ್ತ, ‘ಸರಿಯಾಗಿ ಯೋಚಿಸಿ ಪ್ರಾಮಾಣಿಕವಾಗಿ ಹೇಳು. ದೇವರು ನಿನ್ನೆದುರು ಬಂದು, ನೀನು ಸೆಕ್ರೆಟರಿಯಾಗೇ ಇರಲು ಬಯಸುವೆಯೋ ಅಥವಾ ಕಾರ್ನೆಗಿಯಾಗಲು ಬಯಸುವೆಯೋ ಎಂದು ಕೇಳಿದರೆ ಏನೆಂದು ಉತ್ತರಿಸುವೆ?’ ಎಂದಾಗ ಆತ ‘ಸರ್, ಸತ್ಯವನ್ನೇ ಹೇಳುತ್ತೇನೆ. ನಾನು ಸೆಕ್ರೆಟರಿಯೇ ಆಗಿರಲು ಬಯಸುವೆ. ಪ್ರತಿದಿನ ಆಫೀಸಿಗೆ ಎಲ್ಲರಿಗಿಂತ ಮುಂಚೆ ಬಂದು, ಎಲ್ಲರಿಗಿಂತ ಕೊನೆಯಲ್ಲಿ ಹೋಗುತ್ತೀರಿ. ಸರಿಯಾಗಿ ಊಟ ನಿದ್ರೆ, ವಿಶ್ರಾಂತಿಗಳಿಲ್ಲದೆ ಕೆಲಸದಲ್ಲಿ ತಲ್ಲೀನರಾಗಿರುತ್ತೀರಿ. ಎಷ್ಟೊಂದು ಕಷ್ಟ ಪಡುತ್ತೀರಿ. ಗಳಿಸಿರುವುದಕ್ಕಿಂತ ಹೆಚ್ಚಿನ ಹೆಸರು ಮತ್ತು ಹಣ ಗಳಿಸಲು ಸದಾ ಯೋಚನೆ, ಚಿಂತೆಯಲ್ಲಿ ಮುಳುಗಿರುತ್ತೀರಿ. ಸಮಾಧಾನದ ಜೀವನ ಕೊಡದ ಶ್ರೀಮಂತಿಕೆ ಇದ್ದರೆಷ್ಟು ಬಿಟ್ಟರೆಷ್ಟು? ನಾನಂತೂ ಈ ಜನುಮದಲ್ಲಿ ಕಾರ್ನೆಗಿ ಆಗಲಾರೆ’ ಎಂದ.
ಅದಕ್ಕೆ ಕಾರ್ನೆಗಿ ‘ನಿಜ, ನಿನ್ನ ಅನಿಸಿಕೆಯನ್ನು ಒಪ್ಪಿದೆ. ನನ್ನ ಕೈಗಾರಿಕಾ ಸಾಮ್ರಾಜ್ಯವನ್ನು ವಿಸ್ತರಿಸಿ, ಇನ್ನೂ ಹೆಚ್ಚಿನ ಹಣಗಳಿಸುವ ಗುರಿಯನ್ನು ತಲುಪುವುದಕ್ಕೋಸ್ಕರ ಅನೇಕ ವಿಷಯಗಳನ್ನು ತ್ಯಾಗ ಮಾಡಿದ್ದೇನೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆದಿಲ್ಲ, ಹವ್ಯಾಸಗಳಿಗೆ ರೆಕ್ಕೆ ಕಟ್ಟಿ ನನ್ನೊಂದಿಗೂ ನಾನು ಜೀವಿಸಿಲ್ಲ. ಸರಿಯಾಗಿ ಊಟ ನಿದ್ರೆಯಿಲ್ಲದೆ ಜೀವನ ಕಳೆದುಬಿಟ್ಟೆ. ಛೇ, ಇಷ್ಟಾದರೂ ನನ್ನ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿಲ್ಲ. ಈಗಿರುವ ಆಸ್ತಿಯ ಮೂರು ಪಟ್ಟು ವೃದ್ಧಿಸಬೇಕೆಂಬ ಕನಸು ಇನ್ನೂ ಹಾಗೆಯೇ ಉಳಿದಿದೆ. ಅದನ್ನು ನನಸಾಗಿಸುವುದೇ ನನ್ನ ಮುಂದಿನ ಗುರಿ’ ಎಂದು ಆ ವಯಸ್ಸಿನಲ್ಲೂ ಉತ್ಸಾಹದಿಂದ ಹೇಳಿದನಂತೆ.
ಯಶಸ್ಸೆಂಬುದು ಅವರವರ ಇತಿಮಿತಿಗೆ, ಭಾವಕ್ಕೆ ಬಿಟ್ಟಿದ್ದು. ಪ್ರೀತಿಸಿದವಳನ್ನು ಮದುವೆಯಾಗಿ, ಎರಡು ಮಕ್ಕಳ ತಂದೆಯಾಗಿ ಪುಟ್ಟ ಸಂಸಾರ ಹೊಂದಿ ಬದುಕುವುದು ಒಬ್ಬನಿಗೆ ಸಾಧನೆ ಎನಿಸಿದರೆ, ಒಂದು ಹೊತ್ತಿನ ಊಟ ಸಿಕ್ಕಿ ಹಾಯಾಗಿ ನಿದ್ರಿಸಿದರೆ ಅದು ಭಿಕ್ಷುಕನ ಪಾಲಿನ ಯಶಸ್ಸು, ಒಲಂಪಿಕ್ ಪದಕ ಗೆದ್ದು ಬರುವುದು ಇನ್ನೊಬ್ಬನ ಸಾಧನೆ. ಯಶಸ್ಸು ಮತ್ತು ಸಾಧನೆಗೆ ಇಂಥದ್ದೇ ವ್ಯಾಖ್ಯಾನ ಎಂಬುದಿಲ್ಲ.
ಗುರಿಸಾಧನೆಗಾಗಿ ಜೀವನದ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸದೆ ಸದಾ ಓಟದಲ್ಲೇ ಇರುತ್ತೇವೆ ನಿಜ. ಆದರೆ, ಯಶಸ್ಸೆಂಬುದು ಸೋಮಾರಿಯ ಸ್ವತ್ತಲ್ಲ, ಅದೊಂದು ನಿರಂತರ ಸಾಧನೆ. ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದಂತೆ, ‘ಸೂರ್ಯನಂತೆ ಹೊಳೆಯುವ ಆಸೆಯಿದ್ದರೆ ಮೊದಲು ಆತನಂತೆ ಸದಾ ಉರಿಯುತ್ತಿರುವುದನ್ನು ಕಲಿಯಬೇಕು’. ಕೊರಡನ್ನು ಉಜ್ಜಿ ತೇಯ್ದಾಗಲೇ ಸುಗಂಧಭರಿತ ಶ್ರೀಗಂಧ ಸಿಗುವುದು. ಸತತ ಪ್ರಯತ್ನ, ಒಂದಿಷ್ಟು ತ್ಯಾಗಗಳಿಲ್ಲದೆ ಯಶಸ್ಸು ನಮ್ಮದಾಗಲಾರದು. ದಿಟ್ಟವಾಗಿಟ್ಟ ಹೆಜ್ಜೆಗೆ ಇತಿಹಾಸವನ್ನೇ ಸೃಷ್ಟಿಸುವ ತಾಕತ್ತಿದೆ. ಕಠಿಣ ಪರಿಶ್ರಮದೊಂದಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟಾಗ ಯಶಸ್ಸು ನಮ್ಮದಾಗುತ್ತದೆ. ಆ ಯಶಸ್ಸಿನ ಜತೆಗೆ ಸಂತೃಪ್ತಿಯನ್ನೂ ನಮ್ಮದಾಗಿಸಿಕೊಳ್ಳೋಣ.
(ಲೇಖಕಿ ಹವ್ಯಾಸಿ ಬರಹಗಾರ್ತಿ)