

ಮಕ್ಕಳು ಏನು ಓದಬೇಕೆಂದು ಮೊದಲೇ ನಿರ್ಧಾರ ಮಾಡುವುದು ಸರಿಯಲ್ಲ. ‘ನಮ್ಮ ಮಗನನ್ನು ನ್ಯೂರೋ ಸರ್ಜನ್ ಮಾಡಬೇಕೆಂದಿದ್ದೇನೆ’ ಎಂದು ಎಲ್ಲರ ಮುಂದೆ ಹೇಳುವುದರಿಂದ
ಮಕ್ಕಳಿಗೆ ಉಳಿದೆಲ್ಲ ಕೋರ್ಸಗಳು ತೀರಾ ಸಣ್ಣವು ಎನಿಸುತ್ತವೆ. ಮುಂದೆ ಸರ್ಜರಿ ಕೋರ್ಸ್ ಮಾಡಲು ಅವಕಾಶ ಸಿಗದಿದ್ದರೆ ಕೊರಗಿ ಕೃಶರಾಗುತ್ತಾರೆ.
ಆಂಧ್ರದ ಒಂದೂರಿನಲ್ಲಿ ನಡೆದ ಘಟನೆ ಇದು. ’ಠಜ್ಞಿ/ಟಠ ಎಷ್ಟು’ ಎಂಬ ಪ್ರಶ್ನೆಗೆ ಸಂದೇಹಪಡುತ್ತ ‘ಒಂದು’ ಎಂದು ಉತ್ತರಿಸಿದ ವಿದ್ಯಾರ್ಥಿಯನ್ನು ತಂದೆ-ತಾಯಿ ಐಐಟಿ ಸಿದ್ಧತೆಗಾಗಿ ಸೇರಿಸಿದರು. ಕ್ಲಾಸ್ನಲ್ಲಿ ಲೆಕ್ಚರರ್ಗಳು ‘ಸ್ಟುಪಿಡಿಟಿಗೆ ಇನ್ನೊಂದು ಹೆಸರು’ ಎಂದು ಗೇಲಿ ಮಾಡಿದ್ದರಿಂದ ಹುಡುಗ ಡಿಪ್ರೆಷನ್ಗೆ ಗುರಿಯಾದ. ಮತಿಭ್ರಮಣೆ ಸ್ಥಿತಿಯಲ್ಲಿ ಕ್ಲಿನಿಕ್ಗೆ ಕರೆತರಲಾದ ಅವನನ್ನು ಗುಣಪಡಿಸಲು ಆರು ತಿಂಗಳು ಹಿಡಿಯಿತು.
ರುಚಿ, ಶುಚಿ ಇಲ್ಲದ ಆಹಾರ, ನಾಜೀ ಯುದ್ಧ ಕೈದಿಗಳ ಹಾಗೆ ಕೈಯಲ್ಲಿ ತಟ್ಟೆ ಹಿಡಿದು, ಜೋಲುಮುಖ ಹೊತ್ತು, ಕ್ಯೂನಲ್ಲಿ ನಿಂತು ಊಟಕ್ಕೆ ಹೋಗುತ್ತಾರೆ. ಚಳಿಗಾಲದಲ್ಲೂ ಬೆಳಗಿನ ಜಾವ ಐದು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡುವುದು, ಸಣ್ಣಕೋಣೆಯಲ್ಲಿ ಮಂಚ, ಆಟದ ಮೈದಾನವಿಲ್ಲದ ನಿಸ್ತೇಜ ಸಂಜೆಗಳು, ತಂದೆ-ತಾಯಿಯ ಕುರಿತು ಚಿಂತೆ, ಒಂಟಿ ರಾತ್ರಿಗಳು, ಬಾತ್ರೂಂ ಪಕ್ಕದ ವರಂಡಾದಲ್ಲಿ ಅವರ ಸ್ಟಡಿಅವರ್ಸ್... ಓದುತ್ತ ನಿದ್ರೆಗೆ ಜಾರುತ್ತಾರೆ. ಹತ್ತರ ನಂತರ ಮಂಚ ಸೇರಿ, ಮನೆ ನೆನಪಾಗಿ ಸ್ವಲ್ಪ ಹೊತ್ತು ಅತ್ತು ನಿದ್ರೆಗೆ ಜಾರುತ್ತಾರೆ. ಕನಸು ಪೂರ್ತಿಯಾಗುವ ಮೊದಲೇ ಮತ್ತೆ ಏಳುತ್ತಾರೆ. ಮಕ್ಕಳಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ಬೇರ್ಯಾವುದಿದೆ? ಇದಕ್ಕೆ ದೊಡ್ಡವರು ಮಾಡಿಕೊಳ್ಳುವ ಆತ್ಮವಂಚನೆ-‘ಕಷ್ಟಪಡದಿದ್ದರೆ ಹೇಗೆ’ ಎಂದು! ಮತ್ತೆ ಅವರು ಯಾಕೆ ಆ ವಯಸ್ಸಿನಲ್ಲಿ ಕಷ್ಟಪಡಲಿಲ್ಲ? ಇದಕ್ಕೆ ಅವರಲ್ಲಿ ಉತ್ತರ ಇಲ್ಲ.
ಅಷ್ಟು ವರ್ಷ ಒತ್ತಡದಲ್ಲಿಯೇ ಓದಿದ ಮಕ್ಕಳಿಗೆ ಐಐಟಿ/ಮೆಡಿಸಿನ್ ಸೀಟ್ ಸಿಗದಿದ್ದರೆ, ಸಣ್ಣ ಕಾಲೇಜ್ನಲ್ಲಿ ಸೇರಿದಾಗ ಅಂಡಮಾನ್ ಜೈಲಿಗೆ ಸೇರಿದ ಕೈದಿಯ ಹಾಗಿರುತ್ತದೆ ಅವರ ಪರಿಸ್ಥಿತಿ. ಒಂದು ಕಡೆ ಕರಗಿಹೋದ ಕನಸುಗಳು, ಇನ್ನೊಂದು ಕಡೆ ಹೊಸದಾಗಿ ಲಭಿಸಿದ ಸ್ವೇಚ್ಛೆ! ಇದರಲ್ಲೇ ಅವರು ಬದುಕಿಗೊಂದು ಹೊಸ ಅರ್ಥವನ್ನು ಹುಡುಕುತ್ತಾರೆ.
‘ಹಾಗಾದರೆ ಏನು ಮಾಡಬೇಕಂತೀರಿ? ನಮ್ಮ ಮಕ್ಕಳನ್ನು ಸ್ಕೂಲ್ ಬಿಡಿಸೋಣವೇನು?’ ಎಂದು ಸಿಟ್ಟಾಗಬೇಡಿ. ಅರ್ಹತೆಗೆ ತಕ್ಕ ಕೋರ್ಸ್ ಆಯ್ಕೆ ಮಾಡಬೇಕು ಎಂದು ಹೇಳುವುದು ನಮ್ಮ ಉದ್ದೇಶ. ಐಐಟಿ ಕೋಚಿಂಗ್ಗಿಂತ ಐಎಎಸ್ ಕೋಚಿಂಗ್ ಒಳ್ಳೆಯದೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಡಿ.ಸಿ. ಆಗದಿದ್ದರೂ ಲೋಕಜ್ಞಾನ ಬರುತ್ತದೆ. ಕೆಲವು ಕಾರ್ಪೇರೇಟ್ ಕಾಲೇಜ್ಗಳಲ್ಲಿ ಐಎಎಸ್ ಕೋಚಿಂಗ್ ಬಹಳ ಚೆನ್ನಾಗಿರುತ್ತದೆ.
ಉನ್ನತ ನೌಕರಿಗಳನ್ನು ಸಂಪಾದಿಸುವುದಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಕೋಚಿಂಗ್ ಸೆಂಟರ್ಗಳಿಗೆ ಸೇರಿಸುವ ಆರ್ಥಿಕವಾಗಿ ಬಲಹೀನರಾದ ಪಾಲಕರಿಗೆ ಒಂದು ಸಲಹೆ. ಉನ್ನತಿ ಎನ್ನುವುದು ಐಐಟಿ, ಐಎಎಸ್ಗಳಲ್ಲಿಲ್ಲ. ಬೇರೆ ರೀತಿಗಳಲ್ಲಿ ಸಾಧನೆ ಮಾಡಬಹುದು. ಇಂಟರ್ಸ್ಟೇಟ್ ರ್ಯಾಂಕ್ ಬಂದ ನಮ್ಮ ಹುಡುಗನಿಗೆ, ‘ನೀನು ಐಐಟಿಗೆ ಸೇರಿದರೆ ಬುದ್ಧಿವಂತರಲ್ಲಿ ಒಬ್ಬನಾಗಿ ಉಳಿದುಬಿಡುತ್ತೀಯ. ಅದೇ ಕಾಮರ್ಸ್ ಸೇರಿದರೆ, ಟಾಪ್ ಟೆನ್ನಲ್ಲಿ ಒಬ್ಬನಾಗುತ್ತೀಯ. ಐಐಟಿ ಓದಿದವರೆಲ್ಲರೂ ಲಕ್ಷಗಟ್ಟಲೇ ಗಳಿಸುತ್ತಿಲ್ಲ. ಮತ್ತೊಂದು ವಿಷಯ. ಈ ಪ್ರಪಂಚದಲ್ಲಿ ಎಷ್ಟೋ ಮಂದಿಗೆ ರಾಶಿಗಟ್ಟಲೇ ದುಡ್ಡಿದೆ. ಆದರೆ ಆ ದುಡ್ಡಿರುವವರಿಗೆ ಸಲಹೆಗಳನ್ನು ಕೊಡುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆ ಲೈನ್ನಲ್ಲಿ ನೀನು ಹೋದರೆ ನಿನಗೆ ದುಡ್ಡಿನೊಂದಿಗೆ ಹೆಸರೂ ಸಿಗುತ್ತದೆ’ ಎಂದು ಹೇಳಿದೆ. ಆ ನಂತರ ಅವನು ‘ಬೇಸ್ ಕನ್ಸಲ್ಟೆಂಟ್ಸ್’ ಎಂಬ ಸಂಸ್ಥೆ ಸೇರಿ ಐದು ವರ್ಷ ಕಾಲ ದೊಡ್ಡ ಕಂಪನಿಗೆ ಸಲಹೆಗಾರನಾಗಿ ಇಡೀ ಪ್ರಪಂಚ ಸುತ್ತುತ್ತ ಕೆಲಸ ಮಾಡಿದ.
ಸೆಲ್ಪ್ ಡೈರೆಕ್ಷನ್: ಮಕ್ಕಳು ತಮ್ಮ ಗಮ್ಯವನ್ನು ತಾವೇ ನಿರ್ವಹಿಸುವಂತೆ ಮಾಡಬೇಕು. ಹಾಗೆಂದು ಎಲ್ಲವನ್ನೂ ಅವರ ಮೇಲೆ ಬಿಡಬಾರದು. ಅವರು ತಮ್ಮ ಗೆಳೆಯರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗ, ‘ನಾನು ಆಸ್ಟ್ರೋನಾಟಿಕ್ ಇಂಜಿನಿಯರಿಂಗ್ ಓದಿ ಗಗನಯಾತ್ರಿಯಾಗುತ್ತೇನೆ’ ಎನ್ನುತ್ತಾನೆ. ‘ರಾಕೆಟ್ನಲ್ಲಿ ಪ್ರಯಾಣ ಮಾಡುವುದಕ್ಕೂ, ಇಂಜಿನಿಯರಿಂಗ್ಗೂ ಸಂಬಂಧವಿಲ್ಲ. ಆದರೂ ಇತ್ತೀಚೆಗೆ ಯಾವ ದೇಶವೂ ಅಷ್ಟು ಖರ್ಚು ಮಾಡಿ ಗಗನಯಾತ್ರಿಗಳನ್ನು ಕಳಿಸುತ್ತಿಲ್ಲ’ ಎಂದು ತಂದೆ ತನಗಿರುವ ವಿಜ್ಞಾನದ ಪ್ರದರ್ಶನ ಮಾಡಿದಾಗ, ಮಗ ಎದ್ದು ನಿಂತು ‘ಅದೆಲ್ಲ ನನಗೆ ಗೊತ್ತಿಲ್ಲ, ನಾನೂ ನನ್ನ ಸ್ನೇಹಿತ ಆ ನಿರ್ಧಾರ ತೆಗೆದುಕೊಂಡಾಗಿದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋದ.
ಮಕ್ಕಳು ಏನು ಓದಬೇಕೆಂದು ಮೊದಲೇ ನಿರ್ಧಾರ ಮಾಡುವುದು ಸರಿಯಲ್ಲ. ‘ನಮ್ಮ ಮಗನನ್ನು ನ್ಯೂರೋ ಸರ್ಜನ್ ಮಾಡಬೇಕೆಂದಿದ್ದೇನೆ’ ಎಂದು ಎಲ್ಲರ ಮುಂದೆ ಹೇಳುವುದರಿಂದ ಮಕ್ಕಳಿಗೆ ಉಳಿದೆಲ್ಲ ಕೋರ್ಸಗಳು ತೀರಾ ಸಣ್ಣವು ಎನಿಸುತ್ತವೆ. ಮುಂದೆ ಸರ್ಜರಿ ಕೋರ್ಸ್ ಮಾಡಲು ಅವಕಾಶ ಸಿಗದಿದ್ದರೆ ಕೊರಗಿ ಕೃಶರಾಗುತ್ತಾರೆ.
‘ನನಗೆ ಪರಿಚಯ ಇರುವವರ ಪಕ್ಕದ ಮನೆಯವರ ಅಳಿಯನ ತಮ್ಮ ಅಫ್ಘಾನಿಸ್ತಾನದಲ್ಲಿ ಓಷಿಯನೋಗ್ರಾಫಿ ಓದಿ ಈಗ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾನಂತೆ. ನೀನೂ ಅದೇ ಮಾಡು’ ಎನ್ನುತ್ತಾರೆ ಕೆಲವರು. ಅಫ್ಘಾನಿಸ್ತಾನದಲ್ಲಿ ಸಮುದ್ರ ಇಲ್ಲ ಎಂದರೂ ಕೇಳುವುದಿಲ್ಲ. ‘ಏನು ಓದಬೇಕು?’ ಎನ್ನುವುದು ಮಕ್ಕಳಿಗೂ, ‘ಏನು ಓದಿಸಬೇಕು’ ಎನ್ನುವುದು ದೊಡ್ಡವರಿಗೂ ಸದಾ ಇರುವ ಸಮಸ್ಯೆಯೇ. ಕೆಲವು ಮಕ್ಕಳಿಗೆ ಕ್ರಿಕೆಟ್ ಎಂದರೆ ಪ್ರಾಣ. ಆದರೆ ಆ ಹುಡುಗನನ್ನು (ಕಲಿಕೆಯ ಪ್ರಾಮುಖ್ಯ ಕಡಿಮೆ ಮಾಡಿ) ಆ ಕಡೆಗೆ ಕಳಿಸಿದರೆ ಕಡೇ ಪಕ್ಷ ರಾಜ್ಯದ ಟೀಂನಲ್ಲಿಯಾದರೂ ಆಡುತ್ತಾನಾ ಎನ್ನುವುದು ಅನುಮಾನವೇ. ಆ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಷ್ಟ. ‘ನೀನು ಪ್ಲೇಯರ್ ಆಗುತ್ತೀಯಾ? ಅಥವಾ ಚೆನ್ನಾಗಿ ಓದುತ್ತೀಯಾ? ಇದರಲ್ಲಿ ಹಾಬಿ ಯಾವುದು? ‘ಮೇನ್’ ಯಾವುದು? ಸರಿಯಾಗಿ ಡಿಸೈಡ್ ಮಾಡದಿದ್ದರೆ ಮುಂದೆ ಸಫರ್ ಆಗುತ್ತೀಯ’ ಎಂದು ಎಚ್ಚರಿಸಬೇಕು.
ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಗುರಿಯತ್ತ ಸಾಗಲು ಮಕ್ಕಳಿಗೇ ಅವಕಾಶ ಕಲ್ಪಿಸುವುದು ಒಳ್ಳೆಯದು. ಆದರೆ ಒಮ್ಮೊಮ್ಮೆ ಅವರ ಗುರಿ ಸರಿಯಾಗಿರುವುದಿಲ್ಲ. ಗಣಿತದಲ್ಲಿ ಪ್ರವೀಣನಾದ ಹುಡುಗ ‘ನನ್ನ ಫ್ರೆಂಡ್ಸ್ ಆ ಕಾಲೇಜ್ ಸೇರುತ್ತಾರಂತೆ. ನಾನೂ ಅಲ್ಲೇ ಸೇರುತ್ತೇನೆ’ ಎಂದು ಹಟ ಹಿಡಿಯುವುದು ಇದಕ್ಕೊಂದು ಉದಾಹರಣೆ. ಹತ್ತನೇ ತರಗತಿಯಲ್ಲಿ ಗಣಿತದಲ್ಲಿ ಶೇಕಡ 100 ಅಂಕ ಪಡೆದಿದ್ದ ನನ್ನನ್ನು ನಮ್ಮಮ್ಮ ಬಲವಂತದಿಂದ ಮೆಡಿಸಿನ್ಗೆ ಸೇರಿಸಿದರು. ಬುದ್ಧಿಶಕ್ತಿ ಬೇರೆ-ಜ್ಞಾಪಕ ಶಕ್ತಿ ಬೇರೆ. ಬಾಟನಿ, ಜೂವಾಲಜೀ ಜ್ಞಾಪಕ ಇಟ್ಟುಕೊಳ್ಳಬೇಕೆಂದರೆ ಮಾಮೂಲು ಶಕ್ತಿ ಸಾಲದು. ಅದೃಷ್ಟವಶಾತ್ ಗಣಿತಕ್ಕೆ ಸಂಬಂಧಿಸಿದ ಕೋರ್ಸ್ಗೆ ಸೇರಿದೆ. ಅಭಿರುಚಿಗಳಿಗೆ ತಕ್ಕಂತೆ ಯಾವ ಕ್ಷೇತ್ರದಲ್ಲಿ ಯಶಸ್ವಿ ಆಗುತ್ತೇವೆ ಎಂದು ಅರಿತುಕೊಳ್ಳುವುದನ್ನೇ ‘ಕೆರಿಯರ್ ಪ್ಲಾನಿಂಗ್’ ಎನ್ನುತ್ತಾರೆ.
ಒಳ್ಳೆಯ ವಿದ್ಯೆ: ವಿಶ್ವಸಂಸ್ಥೆಯ ಸಂಶೋಧನೆಯಿಂದ ಪ್ರಪಂಚದ ಮಕ್ಕಳೆಲ್ಲರಲ್ಲಿ ಫಿನ್ಲ್ಯಾಂಡ್ ಮಕ್ಕಳು ಬಹಳ ಸಂತೋಷವಾಗಿ ಇದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಫಿನ್ಲ್ಯಾಂಡ್ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುವುದಕ್ಕೆ, 56 ದೇಶಗಳ ಒಟ್ಟು 1500 ಶಿಕ್ಷಣ ತಜ್ಞರು ಪ್ರತಿ ವರ್ಷ ಅಲ್ಲಿಗೆ ಹೋಗುತ್ತಿದ್ದಾರೆ. ಕೆಳಗೆ ಕೊಟ್ಟಿರುವ ಪ್ರತಿ ಅಂಶವನ್ನು ಗಮನಿಸಿದರೆ ಅದು ಹೇಗೆ ಸಾಧ್ಯವಾಗುತ್ತದೆ ಎಂದು ಅರ್ಥವಾಗುತ್ತದೆ.
* ಆ ದೇಶದಲ್ಲಿ ಮಕ್ಕಳನ್ನು ಏಳು ವರ್ಷ ತುಂಬಿದ ಮೇಲೆ ಶಾಲೆಗೆ ಸೇರಿಸುತ್ತಾರೆ. ಇಲ್ಲಿಯ ಹಾಗೇ ಮೂರು ವರ್ಷದ ಮಗುವಿಗೆ ಟಾರ್ಚರ್ ಪ್ರಾರಂಭ ಆಗುವುದಿಲ್ಲ. ಮಕ್ಕಳು ಏಳು ವರ್ಷದ ನಂತರ ಶೇಕಡ 50 ರಷ್ಟು ಸಮಯ ಶಾಲೆಯಲ್ಲಿ, ಶೇಕಡ 50 ರಷ್ಟು ಸಮಯ ಮನೆಯಲ್ಲಿ ಕಳೆಯುತ್ತಾರೆ.
* ಶಾಲೆಯಲ್ಲಿ ಸಂಗೀತ, ಕಲೆ, ಆಟಗಳಿಗೆ ಸಮಾನ ಪ್ರಾಮುಖ್ಯ ಕೊಡುತ್ತಾರೆ. ಯಾವಾಗ ಬೇಕೆಂದರೆ ಆಗ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆಂದೇ ವಿಶ್ರಾಂತಿ ಕೋಣೆಗಳಿರುತ್ತವೆ.
* ಹದಿಮೂರು ವರ್ಷದವರೆಗೆ ರ್ಯಾಂಕ್/ ಗ್ರೇಡ್ಗಳ ಹಂಗು ಇರುವುದಿಲ್ಲ. ಆದ್ದರಿಂದ ಮಕ್ಕಳ ಮೇಲೆ ಒತ್ತಡ ಇರುವುದಿಲ್ಲ. ಪೊ›ಗ್ರೆಸ್ ರಿಪೋರ್ಟ್, ಹೋಂವರ್ಕ್ ಇರುವುದಿಲ್ಲ. ತಮ್ಮ ಮಕ್ಕಳ ಪೊ›ಗ್ರೆಸ್ ಬಗ್ಗೆ ತಂದೆ-ತಾಯಿ ತಿಳಿಯಬಯಸಿದರೆ ಶಾಲೆಗೆ ಹೋಗಿ ವಿಚಾರಿಸಬಹುದು.
* ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ಇಡಲು ಪ್ರತಿ ಶಾಲೆಯಲ್ಲಿ ಒಬ್ಬ ಡಾಕ್ಟರ್ ಇರುತ್ತಾರೆ.
* ಆ ದೇಶದಲ್ಲಿ ಖಾಸಗಿ ಶಾಲೆಗಳೇ ಇಲ್ಲ. ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಒಂದು ಶಾಲೆಯಲ್ಲಿ 600ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ.
* ಶಾಲೆಯ ಕಟ್ಟಳೆ, ನೀತಿ, ರೀತಿಗಳಲ್ಲಿ ಪ್ರಧಾನ ಪಾತ್ರ ಅಲ್ಲಿನ ಶಿಕ್ಷಕರದೇ. ಅಲ್ಲಿನ ಟೀಚರ್ ನೌಕರಿ ಇಲ್ಲಿನ ಐಎಎಸ್ಗೆ ಸಮಾನ. ದೇಶದ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಒಬ್ಬನು ಮುಂದೆ ಉಪಾಧ್ಯಾಯನಾಗಲು ಬಯಸುತ್ತಾನೆ. ಆದರೆ ಆ ನೌಕರಿ ಸಿಗುವುದು ಸುಲಭವಲ್ಲ. ಕೆಲಸಕ್ಕೆ ಸೇರಿದ ಕೂಡಲೇ ಸೈನ್ಯದಲ್ಲಿ ಆರು ತಿಂಗಳು ಸೇವೆ ಸಲ್ಲಿಸಬೇಕು. ಜೊತೆಗೆ ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ದಳಗಳಲ್ಲಿ ಐದು ವರ್ಷ ಶಿಕ್ಷಣ ಪಡೆಯಬೇಕು. ನಂತರವೇ ಶಾಲೆ!
ನಮ್ಮಲ್ಲಿ ಸಮಸ್ಯೆಯೆಂದರೆ, ತಮ್ಮ ಮಕ್ಕಳಲ್ಲಿ ಕ್ರಿಯೇಟಿವಿಟಿ ಇದೆಯೆಂದು ಕೆಲವರು ನಂಬುವುದಿಲ್ಲ. ಕೇವಲ ವಿದ್ಯೆಗಾಗಿ ಹುಟ್ಟಿದ್ದಾರೆಂದು ಬಲವಾಗಿ ನಂಬುತ್ತಾರೆ. ನಮ್ಮ ಬಗ್ಗೆ ನಮ್ಮಲ್ಲಿ ಪ್ರೀತಿ ಬೆಳೆಸುವುದೇ ಕ್ರಿಯೇಟಿವಿಟಿ. ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಬೆಳೆಸಿಕೊಳ್ಳದೆ, ಸೃಷ್ಟಿಸುವ ವ್ಯಕ್ತಿಗಳು ಬೇರೆ ಇದ್ದಾರೆಂಬ ಭ್ರಮೆಯಲ್ಲಿ ಕೆಲವರಿರುತ್ತಾರೆ. ಪ್ರಯತ್ನವನ್ನೇ ಮಾಡದಿರುವುದರಿಂದ ಅವರು ಜಡವಸ್ತುಗಳ ಹಾಗೆ ಇದ್ದುಬಿಡುತ್ತಾರೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿದರೆ ಅವರು ತಮ್ಮೊಂದಿಗೆ ತಾವು ಸ್ನೇಹ ಬೆಳೆಸಿಕೊಂಡು, ತಮ್ಮ ಲೋಕದಲ್ಲಿ ತಾವಿರುತ್ತ, ಹೊರಗೆ ಸ್ನೇಹಿತರನ್ನು, ಟಿ.ವಿ.ಯನ್ನು, ಚಾಟಿಂಗ್ ಅನ್ನು ಕಡಿಮೆ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡರೆ ಸಮಸ್ಯೆಯ ಪರಿಹಾರ ಸರಳವಾಗುತ್ತದೆ.