2024 ಆರೋಗ್ಯದ ವರ್ಷವಾಗಲಿ

health
Published on

ಇಂದು 2024ರ ಮೊದಲ ದಿನ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ನಮಗೆಲ್ಲರಿಗೂ ಆರೋಗ್ಯದ ವರ್ಷವಾಗಲಿ. ಅದಕ್ಕಾಗಿ ನಾವು ಇಡಬೇಕಾದ ಕೆಲವು ಪ್ರಮುಖ ಹೆಜ್ಜೆಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿ ಜೈವಿಕ ಗಡಿಯಾರವಿದೆ; ಅದು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರಕಿದೆ. ಹಾಗಾಗಿ ನಾವು ಆ ಗಡಿಯಾರಕ್ಕೆ ಅನುಗುಣವಾಗಿ ದಿನಚರಿಯನ್ನು ಇಟ್ಟುಕೊಳ್ಳಬೇಕು. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದಿನಚರಿಯನ್ನು ಪ್ರಾರಂಭಿಸಿದರೆ ಇಡೀ ದಿನ ಉತ್ಸಾಹಭರಿತರಾಗಿ ಇರಲು ಸಾಧ್ಯ ವಾಗುತ್ತದೆ. ಆಯುರ್ವೆದದ ದಿನಚರಿಯಲ್ಲಿ ಹೇಳಿದ ಆಯಿಲ್ ಫುಲ್ಲಿಂಗ್, ಜಿಹ್ವಾ ನಿರ್ಲೆಖನ (ನಾಲಿಗೆ ಸ್ವಚ್ಛಗೊಳಿಸುವುದು), ಅಭ್ಯಂಗ, ವ್ಯಾಯಾಮ ಮುಂತಾದವುಗಳನ್ನು ನಿತ್ಯವೂ ಅಭ್ಯಾಸ ಮಾಡಿದರೆ ಒಳ್ಳೆಯದು. ನಮ್ಮ ಆಹಾರ ಸೇವನೆಯನ್ನು ಕೂಡ ನಿತ್ಯವೂ ಒಂದೇ ಸಮಯಕ್ಕೆ ಮಾಡಿದರೆ ಹೆಚ್ಚು ಒಳ್ಳೆಯದು. ರಾತ್ರಿಯ ಊಟವನ್ನು ತುಂಬಾ ತಡವಾಗಿ ಮಾಡುವುದರಿಂದಾಗಿ ಹಲವಾರು ಕಾಯಿಲೆಗಳು ಬರುತ್ತವೆ ಎಂಬುದನ್ನು ಆಧುನಿಕ ವಿಜ್ಞಾನ ಸಾಬೀತು ಮಾಡಿದೆ. ಭಾರತೀಯ ವೈದ್ಯ ಪದ್ಧತಿ ಕೂಡ ಸೂರ್ಯಾಸ್ತದ ನಂತರ ನಮ್ಮ ದೇಹದ ಒಳಗೆ ಇರುವ ಜಠರಾಗ್ನಿಯು ತನ್ನ ಬಲವನ್ನು ಕಳೆದುಕೊಳ್ಳುತ್ತಾ ಹೋಗುವ ಕಾರಣದಿಂದ ರಾತ್ರಿ ತಡವಾಗಿ ಊಟ ಮಾಡಬಾರದು ಎನ್ನುತ್ತದೆ. ರಾತ್ರಿ 10 ಗಂಟೆಯ ಒಳಗೆ ನಿದ್ದೆಗೆ ಹೋಗುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಹಿತಕರ. ಹಾಗಾಗಿ ದಿನಚರಿಯಲ್ಲಿ ಶಿಸ್ತನ್ನು ತಂದುಕೊಳ್ಳೋಣ. ಇದರಿಂದ ಎಂತಹ ದೊಡ್ಡ ಬದಲಾವಣೆ ನಮ್ಮ ಆರೋಗ್ಯದಲ್ಲಿ ಆಗುತ್ತದೆ ಎಂಬುದು ನಮ್ಮ ಗಮನಕ್ಕೆ ಬಂದೇ ಬರುತ್ತದೆ.

ಆರೋಗ್ಯಕ್ಕಾಗಿ ಮಾತ್ರ ಆಹಾರ: ಬಾಯಿ ಚಪಲಕ್ಕಾಗಿ ಆಹಾರ ಸೇವಿಸುವ ರೂಢಿ ಬಿಟ್ಟು ಆರೋಗ್ಯಕ್ಕಾಗಿ ಆಹಾರವನ್ನು ಸೇವಿಸುವುದನ್ನು ಕಲಿತುಕೊಳ್ಳೋಣ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿ, ಸೊಪ್ಪು, ಒಣಹಣ್ಣುಗಳನ್ನು ಸೇವಿಸೋಣ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಹೆಚ್ಚಿರುವ, ಕರಿದ ಪದಾರ್ಥಗಳನ್ನು ಕಡಿಮೆ ಮಾಡೋಣ. ರಾಸಾಯನಿಕಗಳು ಬಳಕೆಯಾಗುವ ಹೊರಗಿನ ತಿಂಡಿ ತಿನಿಸುಗಳನ್ನು ಸೇವಿಸದಿರೋಣ. ವಾರಕ್ಕೆ ಒಂದು ದಿನವಾದರೂ ಉಪವಾಸ ಮಾಡುವ ರೂಢಿ ಬೆಳೆಸಿಕೊಳ್ಳೋಣ. ಇದರಿಂದ ನಮ್ಮ ದೇಹಕ್ಕೆ ಅದ್ಭುತ ಟಾನಿಕ್ ಕೊಟ್ಟಂತಾಗುತ್ತದೆ. ಉಪವಾಸದ ದಿನಗಳಲ್ಲಿ ಹಣ್ಣಿನ ಜ್ಯೂಸ್ ಅಥವಾ ನೀರನ್ನು ಕುಡಿಯುಬಹುದು.

ವ್ಯಾಯಾಮ: ವ್ಯಾಯಾಮಕ್ಕೆಂದೇ ನಾವು ಸಮಯವನ್ನು ಮೀಸಲಿಡಬೇಕು. ನಿತ್ಯವೂ ಯೋಗಾಸನ, ನಡಿಗೆ, ಜಾಗಿಂಗ್ ಅಥವಾ ಜಿಮ್ಲ್ಲಿ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಹೆಚ್ಚಾದ ಕೊಬ್ಬು ಕರಗಿ ನಮ್ಮ ಮಾಂಸಖಂಡಗಳು ಬಲಿಷ್ಠವಾಗಲು ಸಹಾಯವಾಗುತ್ತದೆ. ಊಟ ಬೇಕಾದರೂ ಬಿಟ್ಟೇನು ವ್ಯಾಯಾಮವನ್ನು ಬಿಡುವುದಿಲ್ಲ ಎಂಬ ಶಪಥದೊಂದಿಗೆ ಈ ವರ್ಷವನ್ನು ಪ್ರಾರಂಭಿಸೋಣ. ಅತಿ ವ್ಯಾಯಾಮವೂ ಸಲ್ಲ. ಆದರೆ ದಿನದಲ್ಲಿ ಕನಿಷ್ಠ ಅರ್ಧ ಗಂಟೆ ವ್ಯಾಯಾಮವನ್ನು ಮಾಡಲೇಬೇಕು.

ಪ್ರಾಣಾಯಾಮ/ಧ್ಯಾನ: ಕಪಾಲಭಾತಿ, ಭಸ್ತ್ರಿಕಾ, ನಾಡಿ ಶುದ್ಧಿ, ಅನುಲೋಮ ವಿಲೋಮ, ಉಜ್ಜಾಯಿ, ಭ್ರಾಮರಿ ಪ್ರಾಣಾ ಯಾಮಗಳನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ಅದೆಷ್ಟೋ ಕಾಯಿಲೆಗಳನ್ನು ದೂರವಿಡಬಹುದು. ಪ್ರಾಣಾಯಾಮವು ಮುಪ್ಪನ್ನು ದೂರ ಮಾಡುತ್ತದೆ. ಹಾಗಾಗಿ ನಾವು ಕನಿಷ್ಠ 20 ನಿಮಿಷ ಸಮಯವನ್ನು ಪ್ರಾಣಾಯಾಮಕ್ಕಾಗಿ ಈ ವರ್ಷ ಮೀಸಲಿಡೋಣ. ನಮಗೆ ತಿಳಿದ ರೀತಿಯಲ್ಲಿ ಧ್ಯಾನ ಮಾಡಿದರೂ ಇಡೀ ದಿನ ಸುಂದರವಾಗಿ ಇರಲು ಸಾಧ್ಯವಾಗುತ್ತದೆ. ಕನಿಷ್ಠ 10 ನಿಮಿಷ ಧ್ಯಾನ ಮಾಡುವ ರೂಢಿ ಬೆಳೆಸಿಕೊಳ್ಳೋಣ.

ಮಾನಸಿಕ ಶಾಂತಿ: ಈ ವರ್ಷ ಎಷ್ಟೇ ಕಷ್ಟ ಬಂದರೂ ನನ್ನೊಳಗೆ ಅಲೆಗಳು ಏಳುವುದಿಲ್ಲ ಎಂದು ನಿರ್ಧರಿಸೋಣ. ಅಂದರೆ ಹೊರಗಡೆಯಿಂದ ಯಾವುದೇ ಕ್ರಿಯೆಗಳಿದ್ದರೂ ನನ್ನ ಪ್ರತಿಕ್ರಿಯೆ ಶಾಂತವಾಗಿರುತ್ತದೆ ಎಂಬ ನಿರ್ಧಾರಕ್ಕೆ ಬರೋಣ. ಅನವಶ್ಯಕ ಆಸೆ, ಅಸೂಯೆಗಳಿಂದ ನಾವು ಒದ್ದಾಡುತ್ತಿರುತ್ತೇವೆ. ಇವುಗಳಿಂದ ದೂರವಿರಲು ನಾವು ನಿನ್ನೆ ಮತ್ತು ನಾಳೆಗಳ ಯೋಚನೆಯನ್ನು ಸಾಧ್ಯವಾದಷ್ಟು ಬಿಡಬೇಕು. ಇಂದು ನಾನೇನು ಮಾಡಬಹುದು ಎಂಬುದನ್ನು ಮಾತ್ರ ಯೋಚಿಸಬೇಕು. ಆಗ ಮಾತ್ರ ಮನಸ್ಸು ಅಲ್ಲೋಲ ಕಲ್ಲೋಲಗೊಳ್ಳುವುದಿಲ್ಲ. ಅನವಶ್ಯಕ ಒತ್ತಡಗಳಿಂದಲೇ ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳು ಬರುತ್ತಿವೆ. ದಿನದಲ್ಲಿ ಒಮ್ಮೆಯಾದರೂ ಶ್ರದ್ಧೆ ಹಾಗೂ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಈ ವರ್ಷ ನಮಗೆ ಆರೋಗ್ಯವನ್ನು ತಂದು ಕೊಡಲಿ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net