ನಂದೊಂದು ಕಥೆ: ಎಲ್ಲವೂ ಹಂಗಿಸುತ್ತಿವೆ, ಏನು ಮಾಡಲಿ?

Nandondu Kathe 27 Jan 20
Published on

ಹೆಂಡತಿ ಹಾಗೂ ಮಗನ ಜತೆ ನನ್ನದು ಸುಖಿ ಕುಟುಂಬ. ಒಂದು ಮೂರ್ಖ ಕೆಲಸದಿಂದ ಈಗ ಚಿಂತಿಸುವಂತೆ ಆಗಿದೆ. ನಮ್ಮದು ಬಡ ಕುಟುಂಬವಾದರೂ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಬೇಕೆನ್ನುವ ಕನಸು. ಯಾರಿಗೋ ಒಂದು ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದೇನೆ. ನನ್ನ ಹೆಂಡತಿ ಸಮಾಧಾನ ಮಾಡುತ್ತಾಳೆ. ನಾನೂ ಈಗ ಸಮಾಧಾನ ಮಾಡಿಕೊಂಡಿದ್ದೇನೆ. ಆದರೆ ನನ್ನ ಸುತ್ತ ಕೆಲವು ವಿಚಿತ್ರ ಘಟನೆಗಳು ನಡೆಯುತ್ತಿವೆ ಎನಿಸುತ್ತಿದೆ.

1) ದಿನಕ್ಕೊಮ್ಮೆಯಾದರೂ ಯಾರಾದರೂ ಸೈಟು ಮನೆಗಳ ಬಗ್ಗೆ ನನ್ನ ಹತ್ತಿರವೇ ಮಾತಾಡುತ್ತಾರೆ. 2) ನಮ್ಮ ಮನೆಗೆ ಬರುವ ದಿನ ಪತ್ರಿಕೆಯಲ್ಲಿ ಪ್ರತಿನಿತ್ಯ ಸೈಟು ಮನೆಗಳ ಜಾಹೀರಾತುಗಳ ಕರಪತ್ರಗಳು ಬಂದು ಬೀಳುತ್ತವೆ. 3) ನನಗಿಂತ ಕಡಿಮೆ ಸಂಬಳ ಇರುವವನು ಗೃಹಪ್ರವೇಶಕ್ಕೆ ಕರೆಯುತ್ತಾನೆ. 4) ಹೊಸವರ್ಷದ ಕ್ಯಾಲೆಂಡರ್ ಹಿಂದೆ ಇರುವ ವರ್ಷ ಭವಿಷ್ಯದಲ್ಲಿ ನನ್ನ ರಾಶಿಗೆ ಈ ವರ್ಷ ಹೊಸಮನೆ ಕಟ್ಟುವ ಯೋಗ ಎಂದಿದೆ. ಹೀಗೇ ಇನ್ನೂ ಏನೇನೋ... ಈ ಘಟನೆಗಳೆಲ್ಲಾ ನೀನು ಮೂರ್ಖ ದುಡ್ಡು ಕಳಕೊಂಡೆ ಎಂದು ಹಂಗಿಸುತ್ತಿವೆಯೇ? ಅಥವಾ ಸ್ವಂತ ಮನೆಯಾಗುವ ಯೋಗವಿದೆ ಎಂದೇ ಹೇಳುತ್ತಿವೆಯೇ? ಇಂಥ ಪ್ರಶ್ನೆಗಳಿಂದ ಕೆಲಸದಲ್ಲಿ ಗಮನ ಹರಿಸಲು ಕಷ್ಟವಾಗುತ್ತಿದೆ. ರಾತ್ರಿ ನಿದ್ದೆ ಬರುವುದಿಲ್ಲ. ಊಟ ಸೇರುತ್ತಿಲ್ಲ. ನನಗೆ ಮಾನಸಿಕ ರೋಗವೇನಾದರೂ ಬರುತ್ತಿದೆಯೇ?

ನಿಮಗೆ ಸದ್ಯಕ್ಕೆ ಯಾವ ಮಾನಸಿಕ ರೋಗವೂ ಇಲ್ಲ. ಮಧ್ಯಮ ವರ್ಗದ ಜನರಿಗೆ ಲಕ್ಷ ರೂಪಾಯಿ ಕಳೆದುಕೊಳ್ಳುವುದು ನೋವಿನ ಸಂಗತಿಯೇ. ಆದರೆ ನೀವು ಆ ಆಘಾತವನ್ನು ದಾಟಿ ಬಂದಿದ್ದೀರಿ. ನಿಮ್ಮ ಅದೃಷ್ಟಕ್ಕೆ ಹೆಂಡತಿಯೂ ಸಮಾಧಾನ ಮಾಡಿದ್ದಾರೆ. ಆದರೂ ನಿಮ್ಮ ಒಳ ಮನಸ್ಸಿನಲ್ಲಿ ಎರಡು ನೋವು ಉಳಿದುಬಿಟ್ಟಿದೆ. ಮನೆಕಟ್ಟುವ ಆಸೆಗೆ ಪೆಟ್ಟು ಬಿದ್ದದ್ದೊಂದಾದರೆ, ಹಣ ಕಳೆದು ಹೋದದ್ದು ಮತ್ತೊಂದು. ಆದ್ದರಿರಂದ ನಿಮ್ಮ ಮೆದುಳು ಸುತ್ತ ನಡೆಯುವ ಎಲ್ಲಾ ವ್ಯವಹಾರಗಳಲ್ಲಿ ಮನೆಗೆ ಸಂಬಂಧಿಸಿದ ವಿಷಯವನ್ನೇ ಗಮನಿಸಲು ಪ್ರೇರೇಪಿಸುತ್ತಿದೆ. ನಮ್ಮ ಬದುಕಿನಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿಮಿಷಕ್ಕೊಂದರಂತೆ ಲಕ್ಷಗಟ್ಟಲೇ ಬದುಕಿನ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ. ಆದರೆ ಅದಕ್ಕೆ ನಾವು ಪ್ರಾಮುಖ್ಯ ಕೊಡುವುದಿಲ್ಲ. ಆದರೆ ಮನಸ್ಸಿನಲ್ಲಿ ಒಂದು ವಿಷಯ ಗಟ್ಟಿಯಾಗಿ ಕೂತಿದ್ದಾಗ ನಮ್ಮ ಸುತ್ತ ನಡೆಯುತ್ತಿರುವುದಕ್ಕೆ ಮನಸ್ಸು ಅದಕ್ಕೆ ಥಳಕು ಹಾಕುತ್ತದೆ. ಉದಾಹರಣೆಗೆ ಮದುವೆಗೆಂದು ನಿಮಗೆ ಒಂದು ಹೆಣ್ಣನ್ನು ತೋರಿಸಿರುತ್ತಾರೆ, ನೀವೂ ಒಪ್ಪಿಗೆ ಕೊಟ್ಟಿರುತ್ತೀರಿ, ಆ ನಂತರ ರಸ್ತೆಯಲ್ಲಿ ಹೋಗುವ ಹುಡುಗಿಯರಲ್ಲಿ ಕೆಲವರು ನೀವು ಮೆಚ್ಚಿದ ಹುಡುಗಿಯ ಹಾಗೇ ಕಾಣುತ್ತಾರೆ. ಅಯ್ಯೋ ಎಷ್ಟೊಂದು ಜನ ಹುಡುಗಿಯರು ಅವಳ ಹಾಗೇ ಇದ್ದಾರಲ್ಲ? ಎಂದು ಅಚ್ಚರಿಗೊಳ್ಳುತ್ತೀರಿ. ಸ್ಕೂಟರ್ ತೆಗೆದುಕೊಂಡಿರುತ್ತೀರಿ, ಅದನ್ನು ರಸ್ತೆಯಲ್ಲಿ ಓಡಿಸುವಾಗ ಅದೇ ಕಂಪನಿಯ ಮತ್ತು ಅದೇ ಬಣ್ಣದ ಹಲವಾರು ಸ್ಕೂಟರ್ ಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಛೇ ಅಪರೂಪದ ಬಣ್ಣವೆಂದು ಇದನ್ನು ಆರಿಸಿದರೆ, ಇದೇ ಬಣ್ಣದ್ದು ಎಷ್ಟೊಂದು ಇವೆಯಲ್ಲ ಎಂದು ಬೇಸರಗೊಳ್ಳುತ್ತೀರಿ. ತಿರುಪತಿಗೆ ಹೋಗಬೇಕೆಂದು ಅಂದುಕೊಂಡಿರುತ್ತೀರಿ, ರಜೆ ಸಿಕ್ಕಿಲ್ಲ, ಅಂದೇ ನೆರೆಮನೆಯವರು ತಿರುಪತಿಯ ಲಡ್ಡು ಪ್ರಸಾದ ಕೊಡುತ್ತಾರೆ, ಯಾರೋ ಹೊಸ ಕ್ಯಾಲೆಂಡರ್ ಕೊಡುತ್ತಾರೆ, ಅದರಲ್ಲಿ ತಿರುಪತಿಯ ತಿಮ್ಮಪ್ಪನ ಫೋಟೊ! ಇದೇನು ಭಗವಂತ ಪದೇಪದೇ ನನಗೆ ನೀನು ಮರೆತಿದ್ದೀಯಾ ಎಂದು ನೆನಪಿಸುತ್ತಿದ್ದಾನೆಯೇ? ಎಂದು ಕಳವಳ ಗೊಳ್ಳುತ್ತೀರಿ. ಇದನ್ನು ಸೈಕಾಲಜಿಯಲ್ಲಿ ಜ್ಞಿ್ಛ್ಟಚಠಿಜಿಟ್ಞ ಚಿಜಿಚಠ ಛ್ಛಿ್ಛ್ಚ ಎನ್ನುತ್ತಾರೆ. ನಾವು ಯಾವ ವಿಚಾರವನ್ನು ಮುಖ್ಯವೆಂದು ಪರಿಭಾವಿಸುತ್ತೇವೆಯೋ ಭಾವಿಸುತ್ತೇವೋ, ಅದು ಮರೆಯಲಾಗದ ಒಂದು ಸಂಗತಿಯಾಗಿ ಹೀಗೆ ನಮ್ಮ ಗಮನವನ್ನು ಸೆಳೆಯುತ್ತದೆ. ನಿಮ್ಮ ಒಳಮನಸ್ಸಿಗೆ ಮನೆಕಟ್ಟುವ ಆಸೆ ನುಚ್ಚುನೂರಾದದ್ದು ಮತ್ತು ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದು ಎರಡನ್ನೂ ಮರೆಯಲು ಇಷ್ಟವಿಲ್ಲದೇ ಮುಖ್ಯವಾಗಿ ಕುಳಿತಿದೆ. ಅದಕ್ಕೇ ನಿಮ್ಮ ಗಮನವನ್ನು ಹೀಗೆ ಮತ್ತೆ ಮತ್ತೆ ಹೊಸಮನೆಯ ಸಾಧ್ಯತೆಯ ಬಗ್ಗೆ ಸೆಳೆಯುತ್ತಿದೆ.

ನೀವೀಗ ಮುಖ್ಯವಾಗಿ ನಿಮ್ಮ ಮನಸ್ಸಿಗೆ ಒಂದು ಟ್ರೖೆನಿಂಗ್ ಕೊಡಬೇಕಾಗಿದೆ. ನಿಮಗಿನ್ನೂ 38 ವರ್ಷ. ಮುಂದಿನ ಬದುಕು ವಿಶಾಲವಾಗಿಯೇ ಇದೆ. ಇನ್ನೊಂದು ನಾಲ್ಕು ವರ್ಷದ ನಂತರ ಮನೆಕಟ್ಟುವ ಸಾಧ್ಯತೆ ಖಂಡಿತಾ ಬರಬಹುದು. ಗಂಡಹೆಂಡತಿ ಇಬ್ಬರೂ ಉದ್ಯೋಗದಲ್ಲಿರುವುದರಿಂದ ಬ್ಯಾಂಕಿನಲ್ಲಿ ಸಾಲ ತೆಗೆದರೂ ತಿಂಗಳು ತಿಂಗಳಿಗೆ ಕಂತು ಕಟ್ಟುವುದು ಕಷ್ಟವೇನಾಗಲಾರದು. ಇಂಥ ಸಕಾರಾತ್ಮಕ ಕನಸುಗಳನ್ನು ನೀವು ಯೋಚಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸುತ್ತಲಿನ ಪರಿಸರ ನಿಮಗೆ ಯಾವ ಸಂದೇಶವನ್ನೂ ಕೊಡುತ್ತಿಲ್ಲ ಎನ್ನುವುದನ್ನು ಮನಗಾಣಬೇಕು. ಆಫೀಸಿನಲ್ಲಿ ಸೈಟು ಮನೆ ಬಗ್ಗೆ ಮಾತಾಡುವುದು, ದಿನಪತ್ರಿಕೆಯಲ್ಲಿ ಕರಪತ್ರ ಬರುವುದು, ನೆಂಟರು ಗೃಹಪ್ರವೇಶಕ್ಕೆ ಆಹ್ವಾನಿಸುವುದು, ವರ್ಷಭವಿಷ್ಯದಲ್ಲಿ ಮನೆಯ ಬಗ್ಗೆ ಇರುವುದು ಇವು ಯಾವುವೂ ನಿಮಗಾಗಿಯೆಂದು ಈಗ ಹುಟ್ಟಿದ ವಿಷಯಗಳಲ್ಲ. ಇವು ದಿನನಿತ್ಯದ ವಿದ್ಯಮಾನಗಳು. ಅದಕ್ಕೂ ನೀವು ಸೈಟಿನ ಬಗ್ಗೆ ಚಿಂತಿಸುವುದಕ್ಕೂ ಆದಷ್ಟು ಥಳಕು ಹಾಕುವುದನ್ನು ಪ್ರಯತ್ನ ಪೂರ್ವಕವಾಗಿ ನಿಲ್ಲಿಸಬೇಕಾಗುತ್ತದೆ. ‘ಇಂಥ ವಿಷಯಗಳಿಗೆ ನಾನು ಹೆಚ್ಚು ಗಮನವನ್ನು ಕೊಡುವುದಿಲ್ಲ, ಇವು ನನಗಾಗಿ ಹುಟ್ಟಿದ ವಿಷಯಗಳಲ್ಲ, ಸಹಜವಾಗಿ ಇಂಥ ವಿದ್ಯಮಾನಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ’ ಎಂದು ಪದೇಪದೇ ಹೇಳಿಕೊಳ್ಳುತ್ತಿರಬೇಕು. ನಿಮ್ಮ ಎರಡು ಮಾತು ಸ್ವಲ್ಪ ಗಂಭೀರವಾಗಿದೆ. ರಾತ್ರಿ ನಿದ್ದೆ ಬರುತ್ತಿಲ್ಲವೆನ್ನುವುದು ಮತ್ತು ಊಟ ಬೇಡವೆನಿಸುವುದು ಒಳ್ಳೆಯ ಲಕ್ಷಣವಲ್ಲ. ಈ ಬಗ್ಗೆ ಒಮ್ಮೆ ವೈದ್ಯರನ್ನು ಕಾಣಬೇಕಾಗುತ್ತದೆ. ಅಲಕ್ಷ್ಯ ಮಾಡಿದರೆ ಒತ್ತಡ ಜಾಸ್ತಿಯಾಗಿ ಮನೋವೈದ್ಯರ ಹತ್ತಿರ ಹೋಗಬೇಕಾಗುತ್ತದೆ. ಈಗ ಜನರಲ್ ಫಿಸಿಷಿಯನ್ ಹತ್ತಿರ ಹೋಗಿ ನಿದ್ದೆ ಬರಲು ಮತ್ತು ಊಟ ಸೇರಲು ಮಾತ್ರೆಗಳನ್ನು ಕೊಡುತ್ತಾರಾ ವಿಚಾರಿಸಿ.

ಶಾಂತಾ ನಾಗರಾಜ್ ಅವರಿಂದ ಉಚಿತ ಸಲಹೆಗಾಗಿ (ಸಂಜೆ 6ರಿಂದ 8) ಈ ಕೆಳಗಿನ ವಿಳಾಸದಲ್ಲಿ ನೇರವಾಗಿ ಭೇಟಿ ಮಾಡಬಹುದು. ಮೊದಲೇ ಅಪಾಯಿಂಟ್​ವೆುಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಪ್ರತಿ ಸೋಮವಾರ: ಅರುಣಚೇತನ, ಕ್ಲೂನಿ ಕಾನ್ವೆಂಟ್ ಎದುರು, ಎಂ.ಇ.ಎಸ್ ಕಾಲೇಜ್ ಹಿಂಭಾಗ, ಮಲ್ಲೇಶ್ವರ, ಬೆಂಗಳೂರು. ಪ್ರತಿ ತಿಂಗಳ ಕೊನೆಯ ಗುರುವಾರ: ನಚಿಕೇತ ಮನೋವಿಕಾಸ ಕೇಂದ್ರ, 14ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು. ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net