ರಷ್ಯಾದಲ್ಲಿ ನ್ಯುಮೋನಿಕ್ ಪ್ಲೇಗ್​ಗೆ ಮಹಿಳೆ ಬಲಿ! ಅಷ್ಟಕ್ಕೂ ಏನಿದು ಕಾಯಿಲೆ? ನಿಮಗೆ ಗೊತ್ತಿರಲೇಬೇಕಾದ ವಿಷಯಗಳಿವು | Pneumonic Plague

ನ್ಯುಮೋನಿಯಾ ಲಕ್ಷಣಗಳಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅ.2ರಂದು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಸುಮಾರು 200 ಜನರ ಮೇಲೆ ನಿಗಾ ವಹಿಸಲಾಗಿದೆ.
Pneumonic Plague
ರಷ್ಯಾದಲ್ಲಿ ನ್ಯುಮೋನಿಕ್ ಪ್ಲೇಗ್​ಗೆ ಮಹಿಳೆ ಬಲಿ! ಅಷ್ಟಕ್ಕೂ ಏನಿದು ಕಾಯಿಲೆ? ನಿಮಗೆ ಗೊತ್ತಿರಲೇಬೇಕಾದ ವಿಷಯಗಳಿವು | Pneumonic Plague
Published on: 

Pneumonic Plague: ಕೆಲವು ದಿನಗಳ ಹಿಂದೆಯಷ್ಟೇ ನ್ಯುಮೋನಿಕ್ ಪ್ಲೇಗ್‌ ಕಾಯಿಲೆಗೆ ರಷ್ಯಾದಲ್ಲಿ 28 ವರ್ಷದ ಮಹಿಳೆ ಸಾವನ್ನಪ್ಪಿದ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೋಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ಭುಗಿಲೆದ್ದಿವೆ. ಇಷ್ಟೇ ಅಲ್ಲದೆ, ಇದು ಮಹಾಮಾರಿ ಕೋವಿಡ್​ ರೀತಿ ಸಾಂಕ್ರಾಮಿಕ ರೋಗವಾಗಿ ಹಬ್ಬಲಿದೆಯೇ ಎಂಬ ಆಶಂಕ ಸೃಷ್ಟಿಯಾಗಿದೆ.

ರೋಗದಿಂದ ಸಾವನ್ನಪ್ಪಿದ ಮಹಿಳೆ ಆ್ಯಂಟಿ ಪ್ಲೇಗ್ ಇನ್ಸ್ಟಿಟ್ಯೂಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದಲೇ ಸೋಂಕು ಹರಡಿ, ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಂಬಲಾಗಿದೆ. ಆಕಸ್ಮಿಕವಾಗಿ ಸ್ಯಾಂಪಲ್ ಸಂಗ್ರಹಿಸುವ ವೇಳೆ ಸೋಂಕು ತಗುಲಿರಬಹುದು ಎಂಬ ವರದಿಗಳಿವೆ. ನ್ಯುಮೋನಿಯಾ ಲಕ್ಷಣಗಳಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅ.2ರಂದು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಸುಮಾರು 200 ಜನರ ಮೇಲೆ ನಿಗಾ ವಹಿಸಲಾಗಿದೆ.

ನ್ಯುಮೋನಿಕ್ ಪ್ಲೇಗ್ ಎಂಬುದು ಶ್ವಾಸಕೋಶದ ಕಾಯಿಲೆಯಾಗಿದ್ದು, ಚಿಕಿತ್ಸೆ ನೀಡಲು ಸುಲಭವಲ್ಲ ಎನ್ನಲಾಗಿದೆ. ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗ ಹರಡುತ್ತದೆ. ಸಾಮಾನ್ಯ ಪ್ಲೇಗ್​ನಿಂದ ಭಿನ್ನವಾಗಿದೆ. ಇದು ಮುಖ್ಯವಾಗಿ ಉಸಿರಾಟದ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಇನ್ನು, ಈ ಸೋಂಕು ಪ್ರಾಣಿಗಳ ಮೂಲಕ ಹರಡುತ್ತದೆ ಎಂದೂ ಹೇಳಲಾಗಿದೆ. ಬ್ಯಾಕ್ಟೀರಿಯಾಗಳು ಸಣ್ಣ ಸಸ್ತನಿಗಳು ಮತ್ತು ಚಿಗಟಗಳಲ್ಲಿ ಇರುತ್ತವೆ. ಇವು ಇತರ ಪ್ರಾಣಿಗಳಿಗೆ ಹರಡಿ, ಅವುಗಳ ಸಂಪರ್ಕಕ್ಕೆ ಬರುವ ಮನುಷ್ಯರು ಸೋಂಕಿಗೆ ತುತ್ತಾಗುತ್ತಾರೆ ಎಂದು ವಿವರಿಸಲಾಗಿದೆ.

ರೋಗ ಲಕ್ಷಣಗಳೇನು?

ಒಮ್ಮೆ ಸೋಂಕಿಗೆ ಒಳಗಾದ ನಂತರ, ರೋಗವು 24 ಗಂಟೆಯೊಳಗೆ ಹರಡುತ್ತದೆ. ಇದು ದೇಹದ ಸ್ಥಿತಿಯನ್ನು ಹಂತ ಹಂತವಾಗಿ ಹದಗೆಡಿಸುತ್ತದೆ ಮತ್ತು ಸಾವಿಗೂ ಕಾರಣವಾಗಬಹುದು. ರೋಗಲಕ್ಷಣಗಳನ್ನು ಗುರುತಿಸುವ ಮೂಲಕ ಆರಂಭಿಕ ಹಂತದಲ್ಲೇ ತಡೆಗಟ್ಟುವುದು ಒಳ್ಳೆಯ ಕೆಲಸ.

1. ನಿರಂತರ ಕೆಮ್ಮು: ಕಫ ಮತ್ತು ರಕ್ತವನ್ನು ಹೊಂದಿರುವ ಕೆಮ್ಮಿನ ಬಗ್ಗೆ ಎಚ್ಚರ ವಹಿಸಿ

2. ಉಸಿರಾಟದ ತೊಂದರೆ: ರೋಗವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಸೋಂಕು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

3. ಜ್ವರ ಮತ್ತು ಶೀತ

4. ತಲೆನೋವು

5. ಮೈಕೈ ನೋವು

6. ಆಯಾಸ

7. ಎದೆ ನೋವು

ಕೆಮ್ಮಿನ ಮೂಲಕ ರೋಗ ಹರಡುವಿಕೆ

ನ್ಯುಮೋನಿಕ್ ಪ್ಲೇಗ್ ಮುಖ್ಯವಾಗಿ ಕೆಮ್ಮಿನಿಂದ ವೇಗವಾಗಿ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಬ್ಯಾಕ್ಟೀರಿಯಾವು ಹತ್ತಿರದ ಜನರಿಗೆ ಹರಡುತ್ತದೆ ಮತ್ತು ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತದೆ. ಸೋಂಕಿತರ ದೇಹದ ದ್ರವಗಳ ಮೂಲಕವೂ ರೋಗ ಹರಡಬಹುದು. ಇದು ಗಂಭೀರ ಕಾಯಿಲೆಯಾಗಿದ್ದು, ದೇಹದಲ್ಲಿನ ವಿವಿಧ ಅಂಗಗಳ ಕಾರ್ಯನಿರ್ವಹಣೆಯ ಅಡ್ಡಿ, ಉಸಿರಾಟದ ತೊಂದರೆ ಮತ್ತು ದೇಹದಾದ್ಯಂತ ಸೋಂಕನ್ನು ಉಂಟುಮಾಡಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ, ಅದು ಸಾವಿಗೂ ತಿರುಗಬಹುದು. ಇರಲಿ ಎಚ್ಚರ.

ದಯವಿಟ್ಟು ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net