ಮಕ್ಕಳ ನಡವಳಿಕೆಯ ಮೇಲೆ ನಿಗಾ ಇರಲಿ

boy
Published on
ನಿಖಿಲ್ (ಹೆಸರು ಬದಲಿಸಲಾಗಿದೆ) 8ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿ. ತಂದೆ ಹೈಸ್ಕೂಲ್ ಶಿಕ್ಷಕರು, ತಾಯಿ ಮನೆಗೆಲಸದಲ್ಲಿ ನಿಪುಣೆ. ನಿಖಿಲನಿಗೆ ಒಬ್ಬ ತಂಗಿ. ಇದಲ್ಲದೆ ಅವಿಭಕ್ತ ಕುಟುಂಬದ ಅನುಭವ ಬೇರೆ. ಮನೆಯಲ್ಲಿ ಅನೇಕ ಹಿರಿಯರು ಹಾಗೂ ಆಟಕ್ಕೆ ಸಾಕಷ್ಟು ಮಕ್ಕಳು.

ಅಖಿಲನಿಗೆ ಬಾಲ್ಯದಿಂದಲೂ ಸ್ವಲ್ಪ ದೃಷ್ಟಿದೋಷವಿದ್ದ ಕಾರಣ ಅತಿ ದಪ್ಪನೆ ಚಾಳೀಸು ಧರಿಸುತ್ತಿದ್ದ. ಇದರ ಜತೆಗೆ ಕೆಲವೊಮ್ಮೆ ಅಂದರೆ ಮೂರು ನಾಲ್ಕು ತಿಂಗಳಿಗೊಮ್ಮೆ ಮೂರ್ಛೆರೋಗ ಬರುತ್ತಿತ್ತು. ಇದಕ್ಕೆ ಚಿಕಿತ್ಸೆ ನಿರಂತರವಾಗಿ ಚಾಲನೆಯಲ್ಲಿತ್ತು. ಇವನ ಆರೋಗ್ಯದ ಕಿರಿಕಿರಿಯಿಂದ ಮನೆಯಲ್ಲಿ ಎಲ್ಲ ಜನಕ್ಕೆ ಇವನ ಬಗ್ಗೆ ಅತಿಯಾದ ಪ್ರೇಮ ಹಾಗೂ ಕಳಕಳಿ. ಅತಿಯಾದ ಪ್ರೀತಿಯ, ಕಾಳಜಿಯ ಪರಿಣಾಮವಾಗಿ ಶಾಲೆಯಲ್ಲಿ ಅಭ್ಯಾಸದಲ್ಲಿ ಸಾಧಾರಣ. ಆರೋಗ್ಯದ ದೃಷ್ಟಿಯಿಂದ ಯಾರೂ ಅವನ ಅಭ್ಯಾಸದ ಬಗ್ಗೆ ಹೆಚ್ಚು ಒತ್ತು ಕೊಡುತ್ತಿರಲಿಲ್ಲ. ಒಟ್ಟಾರೆ ಅವನು ಖುಷಿಯಾಗಿ ಆರೋಗ್ಯದಿಂದ ಇದ್ದರೆ ಸಾಕು ಎನ್ನುವ ಅಭಿಪ್ರಾಯ.

ನಿಖಿಲ ವಾಸಿಸುವ ಊರು ಧಾರವಾಡದಿಂದ ಸುಮಾರು 100 ಕಿ.ಮೀ. ಆರೋಗ್ಯದ ತಪಾಸಣೆಗಾಗಿ ಅವನು ಧಾರವಾಡಕ್ಕೆ ಹೋಗಬೇಕಾಗುತ್ತಿತು. ಒಂದು ಬಾರಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಎಚ್ಚರ ತಪ್ಪಿ ಬಿದ್ದುಬಿಟ್ಟ. ಅಲ್ಲಿದ್ದ ಪ್ರಯಾಣಿಕರೆಲ್ಲ ಸ್ವಲ್ಪ ಗಾಬರಿಯಿಂದ ಬಸ್ ನಿಲ್ಲಿಸಿ ಚೆನ್ನಾಗಿ ಗಾಳಿ ಹಾಕಿ ಕುಡಿಯಲು ನೀರು ಕೊಟ್ಟು ಮತ್ತು ವಿಶ್ರಾಂತಿಗೆ ಸ್ಥಳ ಮಾಡಿಕೊಟ್ಟರು. ಚಿಕಿತ್ಸೆ ಶುರುವಿದ್ದರೂ ತಮ್ಮ ಮಗನಿಗೆ ಏಕೆ ಈ ತರಹ ತೊಂದರೆಯಾಯಿತು? ಬಸ್​ನಲ್ಲಿ ಪ್ರಯಾಣ ಮಾಡುವಾಗ ಮೂರ್ಛೆರೋಗ ಮತ್ತೆ ಯಾಕೆ ಬಂದಿತು? ಎಂದು ತಂದೆ-ತಾಯಿಗೆ ಆತಂಕ. ಆಗ ಅವರು ತಕ್ಷಣ ಡಾಕ್ಟರ್ ಬಳಿಗೆ ತಮ್ಮ ಕೊರಗನ್ನು ತೋಡಿಕೊಂಡರು.

ವೈದ್ಯರು ಅವರಿಗೆ ಸಮಾಧಾನವಾಗುವಂತೆ ಆಶ್ವಾಸನೆ ನೀಡುತ್ತ ನಿಖಿಲನನ್ನು ವಿಚಾರಿಸಿದರು. ಸ್ವಲ್ಪ ವಿಚಾರಣೆಯ ನಂತರ ಪಾಲಕರನ್ನು ಹೊರಗೆ ಕಳುಹಿಸಿ ಮಗುವಿನೊಂದಿಗೆ ಚರ್ಚೆ ನಡೆಸುವಾಗ ಡಾಕ್ಟರ್​ರ ಮೊದಲ ಪ್ರಶ್ನೆ ಏನೆಂದರೆ ನಿಖಿಲನಿಗೆ ಬಸ್​ನಲ್ಲಿ ಕೂಡಲು ಸ್ಥಳಾವಕಾಶ ಸಿಕ್ಕಿರಲಿಲ್ಲವೆ? ತಕ್ಷಣ ಸ್ವಲ್ಪ ಗಾಬರಿಯಿಂದ, ‘ಅಲ್ಲ ಡಾಕ್ಟರ್! ಬಸ್​ನಲ್ಲಿ ನನಗೆ ಸ್ಥಳ ಸಿಕ್ಕದಿರುವುದು ನಿಮಗೆ ಹೇಗೆ ತಿಳಿಯಿತು?’ ಎಂದು ಕೇಳಿದ. ನಂತರ ಅವನು ತನ್ನ ಉಪಾಯವನ್ನು ವಿವರಿಸಿದ; ‘ಡಾಕ್ಟರೇ! ನೀವು ಯಾರ ಮುಂದೆಯೂ ಹೇಳಬೇಡಿ, ಬಸ್ ಫುಲ್ ಇತ್ತು. ನಿಲ್ಲಲು ಕೂಡ ಸರಿಯಾದ ಜಾಗವಿರಲಿಲ್ಲ. ಹೀಗಾಗಿ ಮೂರ್ಛೆರೋಗದ ಅನುಭವವಿರುವ ನಾನು ಚಾಣಾಕ್ಷತನ ಉಪಯೋಗಿಸಿ ಚಕ್ಕರ್ ಬಂದಂತೆ ನಟಿಸಿದೆ. ಅದರ ಪರಿಣಾಮ ಎಲ್ಲರ ಅನುಕಂಪ, ಕಾಳಜಿ ಹಾಗೂ ಪ್ರೀತಿ - ಮೇಲಾಗಿ ಕೂಡಲಿಕ್ಕೆ ಅಷ್ಟೇ ಅಲ್ಲದೆ ಮಲಗಿಕೊಂಡು ಧಾರವಾಡಕ್ಕೆ ಬಂದೆ. ಹೇಗಿದೆ ಡಾಕ್ಟರ್ ನನ್ನ ಉಪಾಯ?’

ಮಕ್ಕಳು ಈ ರೀತಿಯಾಗಿ ಎಲ್ಲರನ್ನೂ ಮೂರ್ಖರನ್ನಾಗಿಸುವುದು ಸಾಮಾನ್ಯ. ಎಲ್ಲ ಪಾಲಕರು, ಶಿಕ್ಷಕರು ಹಾಗೂ ವೈದ್ಯವೃಂದದವರು ಮಾನಸಿಕ ಅಂಶಗಳನ್ನು, ಮನಸ್ಸಿನ ರೂಪಕಗಳನ್ನು ಲಕ್ಷ್ಯಲ್ಲಿಡುವುದು ಅವಶ್ಯಕ.

ಈ ಮಗುವಿಗೆ ಸರಿಯಾದ ಮಾರ್ಗದರ್ಶನ ನೀಡಿ ಪಾಲಕರಿಗೆ ಸೂಕ್ತ ಸಲಹೆ ನೀಡಿ ಕಳುಹಿಸಲಾಯಿತು. ತದನಂತರ ನಿಜವಾದ ಮೂರ್ಛೆರೋಗ ಬಂದಿರಬಹುದು. ಆದರೆ ಈ ರೀತಿಯಾಗಿ ಜನರ ಹಾಗೂ ಅನುಕಂಪ ಸಮಯ ಸಾಧನೆಯನ್ನು ಮಾಡುವುದನ್ನು ಬಿಟ್ಟು ಚೆನ್ನಾಗಿ ಒಬ್ಬ ಒಳ್ಳೆಯ ವಿಧ್ಯಾರ್ಥಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಈಗ ನಿಖಿಲ ಆರೋಗ್ಯದಿಂದಿದ್ದು ಕಾಲೇಜಿನಲ್ಲಿ ಓದುತ್ತಿದ್ದಾನೆ. ಈಗ ಯಾವಾಗಲಾದರೂ ನಾನು ಕಾಲೇಜಿಗೆ ಉಪನ್ಯಾಸಕ್ಕಾಗಿ ಹೋದಾಗ ನೋಡಿ ಮುಜುಗರದಿಂದ ಮುಗುಳ್ನಗೆ ಕೊಡುತ್ತಾನೆ. ಮಕ್ಕಳು ಅನುಕಂಪ ಬಯಸುವುದು ಸಾಮಾನ್ಯ ಇದನ್ನು ಮನದಲ್ಲಿಟ್ಟುಕೊಂಡು ಅವರ ನಡವಳಿಕೆಯನ್ನು ಪರೀಕ್ಷಿಸುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net