ಎಲ್ಲರೂ ಮಿತವಾಗಿ ಬಳಸಬಹುದಾದ ಮನೆ ಮದ್ದು ಕಾಮ ಕಸ್ತೂರಿ

Kama Kasthuri
Published on

ದೇಹಕ್ಕೆ ಉಷ್ಣವಾದಾಗ ಬಹುತೇಕ ಮನೆಗಳಲ್ಲಿ ಅಜ್ಜಿಯಂದಿರು ದೇಹವನ್ನು ತಂಪು ಮಾಡುವ ಮನೆಮದ್ದಾಗಿ ಬಳಸುವ ಮೊದಲನೇ ಔಷಧವೆಂದರೆ ಅದು ಕಾಮಕಸ್ತೂರಿ. ಕಾಮಕಸ್ತೂರಿ ಬೀಜವು ದೇಹವನ್ನು ತಂಪು ಮಾಡುವುದಷ್ಟೇ ಅಲ್ಲ, ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನೂ ಹೊಂದಿದೆ. ಆಯುರ್ವೇದದಲ್ಲಿ ಕಾಮಕಸ್ತೂರಿಯನ್ನು ಕೆಮ್ಮು, ತಲೆ ನೋವು, ಭೇದಿ, ಜಂತುಹುಳುಗಳ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಬಳಸುತ್ತಾರೆ. ಭಾವಪ್ರಕಾಶ ನಿಂಟು ಎಂಬ ಆಯುರ್ವೇದ ಗ್ರಂಥದ ಪ್ರಕಾರ ಕಾಮಕಸ್ತೂರಿ ದೇಹವನ್ನು ತಂಪುಗೊಳಿಸಲು ಅತ್ಯಂತ ಸಹಕಾರಿ. ಕಾಮಕಸ್ತೂರಿಯ ವಿಶೇಷತೆ ಯೇನೆಂದರೆ ಇದು ಶೀತ ಗುಣವನ್ನು ಹೊಂದಿದ್ದರೂ ಅಲರ್ಜಿ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಏಕೆಂದರೆ ಇದಕ್ಕೆ ಕಫ ಮತ್ತು ವಾತ ದೋಷಗಳನ್ನು ನಿಯಂತ್ರಿಸುವ ಗುಣವಿದೆ ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಕಫದ ಭಯವಿಲ್ಲದೆ ಇದನ್ನು ಬಳಸಬಹುದು.

ಕಾಮಕಸ್ತೂರಿಗೆ ರಕ್ತಶುದ್ಧಿ ಮಾಡುವ ಗುಣವೂ ಇದೆ. ಹಾಗಾಗಿ ಇದನ್ನು ಚರ್ಮರೋಗಗಳಲ್ಲಿ ವಿಶೇಷವಾಗಿ ತುರಿಕೆಯನ್ನು ಕಡಿಮೆಮಾಡಲು ಬಳಸಬಹುದು.
ನಿತ್ಯವೂ ನಾವು ಹಲವಾರು ರೀತಿಗಳಲ್ಲಿ ವಿಷವನ್ನು ಸೇವಿಸುತ್ತೇವೆ. ಈ ವಿಷಗಳ ಕಾರಣದಿಂದಾಗಿ ನಿಧಾನವಾಗಿ ನಮ್ಮಲ್ಲಿ ಹಲವು ರೀತಿಯ ರೋಗಗಳ ಉತ್ಪತ್ತಿಯಾಗುತ್ತದೆ. ಕಾಮಕಸ್ತೂರಿಗೆ ವಿಷವನ್ನು ನಿವಾರಿಸುವ ಗುಣವಿರುವ ಕಾರಣ ಇದನ್ನು ಆಗಾಗ ಬಳಸುತ್ತಿದ್ದರೆ ದೇಹವನ್ನು ರೋಗಗಳಿಂದ ಕಾಪಾಡಿಕೊಳ್ಳಬಹುದು. ಕೈಯದೇವ ನಿಂಟು ಎಂಬ ಗ್ರಂಥದಲ್ಲಿ ಕಾಮ ಕಸ್ತೂರಿಯನ್ನು ವಿವರಿಸುವಾಗ ದಾಹಶೋಷನಾಶಕ ಎಂದಿದ್ದಾರೆ. ಅಂದರೆ ಇದು ದೇಹದ ಯಾವುದೇ ಭಾಗದಲ್ಲಿ ಉರಿಯಿದ್ದರೂ ಅದನ್ನು ಶಮನಗೊಳಿಸುತ್ತದೆ ಮತ್ತು ಧಾತುಗಳ ದೌರ್ಬಲ್ಯವನ್ನು ನಿವಾರಿಸುತ್ತದೆ ಎಂದರ್ಥ. ಕಾಮಕಸ್ತೂರಿಯು ಮೂತ್ರಾಂಗವ್ಯೂಹದ ಮೇಲೆ ತುಂಬಾ ಒಳ್ಳೆಯ ಕೆಲಸ ಮಾಡುತ್ತದೆ. ಮೂತ್ರಕೋಶ ಅಥವಾ ಮೂತ್ರಪಿಂಡದಲ್ಲಿನ ಕಲ್ಲುಗಳು, ಉರಿಮೂತ್ರ, ಮೂತ್ರದಲ್ಲಿ ವೀರ್ಯ ಹೋಗುವುದು, ಮೂತ್ರ ಮಾಡುವಾಗ ಸರಿಯಾಗಿ ಮೂತ್ರ ಬರದಿರುವುದು ಮುಂತಾದ ಸಮಸ್ಯೆಗಳನ್ನು ಇದು ಗುಣಪಡಿಸುತ್ತದೆ. ಯಾವುದೇ ರೀತಿಯ ಮಾನಸಿಕ ತೊಂದರೆಗಳನ್ನು ಅನುಭವಿ ಸುತ್ತಿರುವವರು ಕಾಮಕಸ್ತೂರಿ ಬೀಜವನ್ನು ನಿತ್ಯವೂ ಬಳಸಬಹುದು. ಇದರಿಂದ ಮಾನಸಿಕ ಒತ್ತಡ ಮತ್ತು ದೌರ್ಬಲ್ಯ ಸರಿಯಾಗುತ್ತದೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನಿತ್ಯವೂ ಒಂದೆರಡು ಗ್ರಾಂ ಬೀಜಗಳನ್ನು ಹಾಲಿನ ಜೊತೆ ಸಂಜೆ ಊಟದ ಒಂದು ತಾಸು ಮೊದಲು ಸೇವಿಸಬೇಕು.


ಕಾಮಕಸ್ತೂರಿ ಬೀಜಗಳಲ್ಲಿ ಒಮೆಗಾ 3 ಕೂಡ ಹೇರಳವಾಗಿದೆ; ದೊಡ್ಡ ಪ್ರಮಾಣದಲ್ಲಿ ನಾರಿನಂಶವಿದೆ. ಹಾಗಾಗಿ ಇದನ್ನು ಬಳಸುತ್ತಿದ್ದರೆ ಕರುಳು ಮತ್ತು ಮಿದುಳು ಎರಡರ ಆರೋಗ್ಯವೂ ಚೆನ್ನಾಗಿರುತ್ತದೆ. ನಾರಿನಂಶವಿರುವ ಕಾರಣ ಮಲಬದ್ಧತೆಯಲ್ಲಿ ಇದು ತುಂಬಾ ಅನುಕೂಲಕರ. ಸಂಜೆಯ ಸಮಯದಲ್ಲಿ ಇದನ್ನು ಸೇವಿಸಿದರೆ ಮರುದಿನ ಸುಲಭವಾಗಿ ಮಲವಿಸರ್ಜನೆ ಆಗುತ್ತದೆ. ತೂಕ ಇಳಿಸಿಕೊಳ್ಳಲು ಡಯಟ್​ ಮಾಡುತ್ತಿರುವವರಿಗೆ ಅಸಿಡಿಟಿಯ ಸಮಸ್ಯೆ ಕಾಡಿದರೆ ಕಾಮಕಸ್ತೂರಿ ಬೀಜವನ್ನು ಸೇವಿಸುವುದು ಅತ್ಯುತ್ತಮವಾದ ಆಯ್ಕೆ. ಇದರಿಂದ ಹೊಟ್ಟೆ ತುಂಬಿದಂತೆ ಎನಿಸಿ ಹೊಟ್ಟೆ ಉರಿಯು ಕಡಿಮೆಯಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಉಷ್ಣತೆಯಿಂದ ಬಳಲುತ್ತಿರುವವರು ಗುಲ್ಕಂದ್​ ಜತೆ ಇವನ್ನು ಸೇವಿಸಿದರೆ ದೇಹವು ಸದಾ ತಂಪಾಗಿರುತ್ತದೆ. ಈ ಬೀಜಗಳಲ್ಲಿ ವಿಟಮಿನ್​ ಕೆ ಇರುವ ಕಾರಣದಿಂದ ಮೂಳೆ, ಕೂದಲು ಮತ್ತು ಚರ್ಮದ ಆರೋಗ್ಯ ಚೆನ್ನಾಗಿ ರುತ್ತದೆ. ಇದರಲ್ಲಿ ಕಬ್ಬಿಣಾಂಶವು ಇರುವ ಕಾರಣ ರಕ್ತಹಿನತೆಯಲ್ಲಿಯೂ ಅನುಕೂಲಕರ. ಆಂಟಿಆಕ್ಸಿ ಡೆಂಟ್​ ಗಳಿಂದಾಗಿ ಕ್ಯಾನ್ಸರ್​ ಮತ್ತು ಅಲ್ಜೆಮರ್​ ನಂತಹ ರೋಗಗಳನ್ನು ದೂರವಿಡಲು ಇದು ಸಹಕರಿಸುತ್ತದೆ. ಇಷ್ಟು ಒಳ್ಳೆಯ ವಸ್ತುವಾದರೂ ಅತಿಯಾದ ಬಳಕೆ ಸರಿಯಲ್ಲ. ನಿತ್ಯ ಮೂರರಿಂದ ನಾಲ್ಕು ಗ್ರಾಂನಷ್ಟು ಬೀಜಗಳನ್ನು ಬಳಕೆ ಮಾಡಬಹುದು. ತರಕಾರಿ ಸಲಾಡ್​ಗಳಲ್ಲಿ, ಹಣ್ಣುಗಳಲ್ಲಿ, ಪಲ್ಯದಲ್ಲಿ, ಹಾಲಿನಲ್ಲಿ ಅಥವಾ ನೀರಿನಲ್ಲಿ ಹಾಕಿ ಸೇವಿಸಬಹುದು. ಗರ್ಭಾವಸ್ಥೆಯಲ್ಲಿ, ಚಿಕ್ಕ ಮಕ್ಕಳಲ್ಲಿ ಮತ್ತು ಎದೆಹಾಲು ಕೊಡುವ ಸಂದರ್ಭಗಳಲ್ಲಿ ಕಾಮ ಕಸ್ತೂರಿಯನ್ನು ವೈದ್ಯರ ಸಲಹೆಯ ಮೇರೆಗೇ ಬಳಸಬೇಕು.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net