ಮುಟ್ಟಿನ ದೋಷ, ಬೊಜ್ಜು ನಿವಾರಣೆಗೆ ರಾಗಿ ಬೀಸುವ ಭಂಗಿಯಲ್ಲಿ ಜಾನು ಶೀರ್ಷಾಸನ...

1223200
Published on

ಇದೊಂದು ರಾಗಿ ಬೀಸುವ ಭಂಗಿಯ ಆಸನವಾಗಿದೆ. ಜಾನು ಎಂದರೆ ಮೊಣಕಾಲು ಎಂದರ್ಥ. ಶೀರ್ಷವೆಂದರೆ ತಲೆ, ತಲೆಯನ್ನು ಬಗ್ಗಿಸಿ ಮೊಣಕಾಲಿನ ಮೇಲೆ ಇಡುವುದರಿಂದ ಈ ಆಸನಕ್ಕೆ ಜಾನು ಶೀರ್ಷಾಸನ ಎಂದು ಹೆಸರು ಬಂದಿದೆ. ಇದೊಂದು ಕುಳಿತುಕೊಂಡು ಅಭ್ಯಾಸ ಮಾಡುವ ಆಸನವಾಗಿದೆ.

ಅಭ್ಯಾಸ ಕ್ರಮ: ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನೂ ಮುಂದಕ್ಕೆ ನೇರವಾಗಿ ಚಾಚಬೇಕು. ಎಡಕಾಲನ್ನು ಬಲತೊಡೆಯ ಮೂಲೆಗೆ (ಬುಡಕ್ಕೆ) ತಾಗುವಂತೆ ಮಡಿಸಬೇಕು. ಬಳಿಕ ಉಸಿರು ಬಿಟ್ಟು ಎರಡು ಕೈಗಳಿಂದಲೂ ಬಲಪಾದದ ಬೆರಳುಗಳನ್ನು ನಿಧಾನವಾಗಿ ಸೊಂಟದಿಂದ ಮುಂದೆ ಬಗ್ಗುತ್ತಾ ಹಿಡಿಯಬೇಕು. ಅನಂತರ ಇನ್ನೂ ಬಾಗುತ್ತಾ ಎರಡು ಕೈಗಳಿಂದ ಬಲಪಾದವನ್ನು ಹಿಡಿದು ಬಲಮಂಡಿಯ ಮೇಲೆ ಆರಂಭದಲ್ಲಿ ಹಣೆ, ಮೂಗು, ಕೊನೆಗೆ ಗದ್ದವನ್ನು ಇರಿಸಬೇಕು. ಈ ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷದವರೆಗೆ ಇರಬೇಕು. ಅನಂತರ ಮೇಲೆ ಹೇಳಿದ ಕ್ರಮದಂತೆ ಬಲ ಕಾಲನ್ನು ಮಡಿಸಿ ಅದೇ ರೀತಿ ಇನ್ನೊಂದು ಬದಿಯಲ್ಲಿ ಈ ಆಸನ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.

ಪ್ರಯೋಜನಗಳು: ಈ ಆಸನದಲ್ಲಿ ಲಿವರ್ ಕಿಡ್ನಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಮೂತ್ರಖಂಡ ಯಕೃತ್ತು ಭಾಗ ಪುನಶ್ಚೇತನಗೊಳ್ಳುತ್ತದೆ. ಭುಜಗಳು, ಬೆನ್ನೆಲುಬು, ಕಶೇರು ಖಂಡವು ತೊಡೆಗಳ ಭಾಗ ಬಲಗೊಳ್ಳುತ್ತದೆ. ಜೀರ್ಣಶಕ್ತಿ ಹೆಚ್ಚುವುದು. ಮನೋಪಾಸ್ ಸಮಸ್ಯೆ ನಿಯಂತ್ರಣವಾಗುತ್ತದೆ. ಒತ್ತಡ, ಆತಂಖ, ಆಯಾಸ ಪರಿಹರಿಸಿಕೊಳ್ಳಲು ಈ ಆಸನಕ್ಕೆ ಸಹಕಾರಿಯಾಗಿದೆ.

ಅಧಿಕ ರಕ್ತದೊತ್ತಡ, ನಿದ್ರಾಹೀನತೆಯ ಸಮಸ್ಯೆಯನ್ನು ನಿಯಂತ್ರಿಸಬಹುದು. ತೊಡೆಯ ಸ್ನಾಯುಗಳು ಹಾಗೂ ಕೀಲುಗಳು ಬಲಗೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ರಾಗಿ ಬೀಸುವ ಕೆಲಸವನ್ನು ಮಾಡಿಕೊಂಡಿದ್ದರು. ಇದರಿಂದಾಗಿ ಹೊಟ್ಟೆಯಭಾಗ, ಗರ್ಭಾಶಯದ ಭಾಗಕ್ಕೆ ಉತ್ತಮ ವ್ಯಾಯಾಮ ದೊರಕಿ ಸ್ತ್ರೀಯರಿಗೆ ಸಂಬಂಧಿಸಿದ ಮುಟ್ಟಿನ ದೋಷ, ಮೆನೋಪಾ¸ ತೊಂದರೆಯನ್ನು ಆ ಆಸನದ ಮೂಲಕ ಸಾಕಷ್ಟು ನಿಯಂತ್ರಿಸಿಕೊಳ್ಳಬಹುದು.

‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ,
ಅಂತರರಾಷ್ಟ್ರೀಯ ತೀರ್ಪುಗಾರರು, ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್​​ಪೆಕ್ಟರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net