

ಯುವಕನೊಬ್ಬ ಬಟ್ಟೆ ಅಂಗಡಿಯ ಮುಂದಿರುವ ಕಟ್ಟೆಯ ಮೇಲೆ ಹೊಲಿಗೆ ಯಂತ್ರ ಇಟ್ಟುಕೊಂಡು ಬಟ್ಟೆಗಳನ್ನು ಹೊಲಿಯುವ, ರಿಪೇರಿ ಮಾಡುವ ಕೆಲಸವನ್ನು ಮಾಡಿಕೊಂಡಿದ್ದ. ಒಬ್ಬ ಶ್ರೀಮಂತ ಹುಡುಗಿ ಅವನ ಹತ್ತಿರ ಬಟ್ಟೆ ಹೊಲಿಸಿಕೊಳ್ಳಲು ಬಂದಾಗ ಅವನ ಸಮಯಪಾಲನೆ, ಒಳ್ಳೆಯ ಕೆಲಸ, ಚಂದದ ಮಾತು ಅವಳಿಗೆ ಮೆಚ್ಚುಗೆ ಆಯಿತು. ಮುಂದೆ ಮೂರ್ನಾಲ್ಕು ಸಲ ಕೆಲಸಕ್ಕೆಂದು ಅವನ ಹತ್ತಿರ ಬಂದಾಗ ಪರಿಚಯ ಹೆಚ್ಚಾಗಿ ಅವನತ್ತ ಆಕರ್ಷಿತಳಾಗಿ ತಕ್ಕ ಮಟ್ಟಿಗೆ ಸುಂದರನೂ ಆದ ಅವನಿಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದಳು. ಅದಕ್ಕವನು, ‘ನಾನಿನ್ನೂ ನಾಲ್ಕು ಕಾಸು ಗಳಿಸಬೇಕು. ಆಮೇಲೆ ಮದುವೆ ಯೋಚನೆ. ಅಷ್ಟಕ್ಕೂ ನಿನ್ನ ಹೆತ್ತವರು ಇದಕ್ಕೆ ಒಪ್ಪುತ್ತಾರೆಯೇ’ ಎಂದ.
ಅವಳು ‘ನನ್ನಪ್ಪ ತುಂಬ ಶ್ರೀಮಂತ. ನಮ್ಮಿಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಬಲ್ಲ. ನಾಳೆ ಸಂಜೆಯೇ ಅಪ್ಪ ನಿನ್ನನ್ನು ನಮ್ಮ ಮನೆಗೆ ಬರಹೇಳಿದ್ದಾನೆ’ ಎಂದಳು. ಮರುದಿನ ಆ ಯುವಕ ಅವಳ ಭವ್ಯವಾದ ಬಂಗ್ಲೆಗೆ ಹೋದ. ಅವಳಪ್ಪ ಅವನನ್ನು ನೋಡಿ, ‘ಮಗಳಿಗೆ ಇಷ್ಟವಾದ ಮೇಲೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಒಂದು ಷರತ್ತು. ನಿನಗೆ ಈಗ ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ಅದನ್ನು ಎರಡು ದಿನದಲ್ಲಿ ಖರ್ಚು ಮಾಡಿಕೊಂಡು ಬರಬೇಕು’ ಎಂದ.
ಹಣ ತೆಗೆದುಕೊಂಡು ಹೊರಟ ಯುವಕ, ಬಾಕಿ ಇರುವ ಮನೆಬಾಡಿಗೆ ಕೊಟ್ಟ, ಬಟ್ಟೆ, ಪಾತ್ರೆ ಇತ್ಯಾದಿ ತೆಗೆದುಕೊಂಡ, ಭರ್ಜರಿ ಊಟ ಮಾಡಿದ. ಎಷ್ಟೇ ಪ್ರಯತ್ನಿಸಿದರೂ ಎಲ್ಲ ಸೇರಿ ಎರಡು ದಿನದಲ್ಲಿ ಮೂವತ್ತು ಸಾವಿರ ರೂ. ಖರ್ಚಾಯಿತು. ಉಳಿದ ಎಪ್ಪತ್ತು ಸಾವಿರ ರೂ. ತಂದು ತಿರುಗಿ ಕೊಟ್ಟ.
ಕೂಡಲೇ ಆ ಶ್ರೀಮಂತ ತನ್ನ ಮಗನನ್ನು ಕರೆದು ಒಂದು ಲಕ್ಷ ರೂಪಾಯಿ ಕೊಟ್ಟು ಆ ಯುವಕನಿಗೆ ಹೇಳಿದ ಹಾಗೆ ಅವನಿಗೂ ಹೇಳಿದ. ಮರುದಿನವೇ ಮಗ ಬಂದು ಹೇಳಿದ, ‘ಅಪ್ಪ ನೀನು ಕೊಟ್ಟ ದುಡ್ಡು ಎಲ್ಲ ಖರ್ಚಾಯಿತು’. ‘ಹೇಗೆ ಖರ್ಚು ಮಾಡಿದೆ?’ ಎಂದಾಗ ಮಗ ಉತ್ತರಿಸಿದ- ‘ಸುವರ್ಣಭಸ್ಮವು ಆರೋಗ್ಯಕ್ಕೆ ಒಳ್ಳೆಯದೆಂದು ಯಾರೋ ಹೇಳಿದ್ದು ನೆನಪಾಯಿತು. ನೀನು ಕೊಟ್ಟ ಒಂದು ಲಕ್ಷದ ಬಂಗಾರ ಖರೀದಿಸಿ, ಕರಗಿಸಿ ಬೂದಿ ಮಾಡಿ ಎದುರಿಗಿರುವ ಪಾನ್ ಅಂಗಡಿಯ ಬೀಡಾದಲ್ಲಿ ಸೇರಿಸಿ ತಿಂದೆ’. ಆ ಯುವಕ ಕಣ್ಣು ಪಿಳಿಪಿಳಿ ಬಿಡುತ್ತ, ‘ಇದು ನನ್ನಿಂದಾಗದ ಮಾತು. ನಿಮ್ಮ ಉಸಾಬರಿಯೂ ಬೇಡ, ನಿಮ್ಮ ಮಗಳೂ ಬೇಡ’ ಎಂದು ಹೊರಟುಬಿಟ್ಟ.
ಹಣ ಗಳಿಸಲು ಬೇಕಾಗುವ ಚಾಕಚಕ್ಯತೆ ಎಲ್ಲರಿಗೂ ಬರುವದು ಕಷ್ಟ. ಆದರೆ ಗಳಿಸಿದ ದುಡ್ಡನ್ನು ಖರ್ಚು ಮಾಡಿ ಆನಂದಿಸುವ ಧಾರಾಳತೆ ಬರುವುದು ಇನ್ನೂ ಕಷ್ಟ. ಇದರಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ಅವೆರಡೂ ವಿಭಿನ್ನ ಜೀವನಶೈಲಿಗಳು ಎನ್ನಬೇಕಷ್ಟೆ. ಸಾಮಾನ್ಯರಲ್ಲಿಯೇ ಇಷ್ಟು ಅಂತರ ಇರಬೇಕಾದರೆ ಸರ್ವಸಂಗ ತ್ಯಾಗಿ ಹಾಗೂ ಸದಾಕಾಲ ಭೋಗ ಬಯಸುವ ವ್ಯಕ್ತಿಗಳ ನಡುವಿನ ದೂರವನ್ನು ಅಳೆಯುವುದು ಆಗದ ಮಾತು.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ, ಹವ್ಯಾಸಿ ಬರಹಗಾರರು)