ವಾಹನ ಚಲಾಯಿಸಿದಷ್ಟು ವಿಮೆ ಕಂತು!

sdfsf
Published on

ವಾಹನಗಳ ವಿಮಾ ಪ್ರೀಮಿಯಂ ಇನ್ನು ಮುಂದೆ ಬದಲಾಗಲಿದ್ದು, ವಾಹನಗಳನ್ನು ಓಡಿಸಿದ್ದಷ್ಟಕ್ಕೇ ವಿಮೆ ಪಾವತಿಸುವಂಥ (ಪೇ ಆಸ್ ಯು ಡ್ರೖೆವ್) ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ನೆರವನ್ನು ಪಡೆಯಲಾಗುತ್ತದೆ. ವಾಹನ ಬಳಕೆ ಹಾಗೂ ಚಾಲನಾ ಇತಿಹಾಸದ ಆಧಾರದಲ್ಲಿ ಅವರಿಂದ ಡ್ಯಾಮೇಜ್ ವಿಮೆ ಪಡೆಯಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎ) ವಿಮಾ ಕಂಪನಿಗಳಿಗೆ ಅವಕಾಶ ಕಲ್ಪಿಸಿದೆ. ಇದರೊಂದಿಗೆ ವ್ಯಕ್ತಿಗಳು, ಅಂದರೆ ವಾಹನ ಮಾಲಿಕರು ತಮ್ಮ ಪ್ರತಿಯೊಂದು ವಾಹನಕ್ಕೆ ಪ್ರತ್ಯೇಕವಾಗಿ ವಿಮೆ ಪಡೆಯುವ ಬದಲು ವಿವಿಧ ವಾಹನಗಳು, ಅಂದರೆ ಬೈಕ್ ಮತ್ತು ಕಾರುಗಳಿಗೆ ಫ್ಲೋಟರ್ ಪಾಲಿಸಿಗಳನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಈ ಸಂಬಂಧ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಮೂರು ವಿಧ: ಮೋಟರ್ ಓನ್ ಡ್ಯಾಮೇಜ್ (ಒಡಿ) ಕವರ್​ನ ಮೂರು ವಿಭಾಗಗಳನ್ನು ಐಆರ್​ಡಿಎ ಪರಿಚಯಿಸಿದ್ದು ಜನರಲ್ ವಿಮಾ ಕಂಪನಿಗಳು ತಂತ್ರಜ್ಞಾನ ಆಧಾರಿತ ಪಾಲಿಸಿಗಳನ್ನು ನೀಡಬಹುದಾಗಿದೆ. ‘ಪೇ ಆಸ್ ಯು ಡ್ರೖೆವ್’, ‘ಪೇ ಹೌ ಯು ಡ್ರೖೆವ್’ ಮತ್ತು ‘ಫ್ಲೋಟರ್ ಪಾಲಿಸಿ’ ಇವೇ ಆ ಮೂರು ವಿಧಗಳಾಗಿವೆ.

ಬಳಕೆಯಂತೆ ವಿಮೆ: ‘ಪೇ ಆಸ್ ಯು ಡ್ರೖೆವ್’ ಹೆಸರೇ ಹೇಳುವಂತೆ ವ್ಯಕ್ತಿಗಳು ತಮ್ಮ ವಾಹನಗಳನ್ನು ಬಳಸಿದ್ದಷ್ಟಕ್ಕೆ ಮಾತ್ರ ವಿಮೆಯನ್ನು ಪಾವತಿಸುವ ವಿಧಾನವಾಗಿದೆ. ಜಿಯೋ ಟ್ಯಾಗಿಂಗ್​ನೊಂದಿಗಿನ ಆಪ್ ಸಹಾಯದಿಂದ ವಾಹನದ ಬಳಕೆಯನ್ನು ಟ್ರಾ್ಯಕ್ ಮಾಡಿ ವಿಮೆ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಆದರೆ, ಘೋಷಿತ ಬಳಕೆಗಿಂತ ಹೆಚ್ಚಿನ ಬಳಕೆ ಮಾಡಿದ್ದರೆ ಗ್ರಾಹಕರು ಕ್ಲೇಮು ಸಲ್ಲಿಸುವಾಗ ಅದಕ್ಕೆ ವಿವರಣೆ ನೀಡುವುದು ಅಗತ್ಯವಾಗುತ್ತದೆ ಎಂದು ಆನಂದ ರತಿ ಇನ್ಷೂರೆನ್ಸ್ ಬ್ರೋಕರ್ಸ್​ನ ನಿರ್ದೇಶಕಿ ಸುಪ್ರಿಯಾ ರತಿ ಹೇಳಿದ್ದಾರೆ.

ಫ್ಲೋಟರ್ ಪಾಲಿಸಿ: ಫ್ಲೋಟರ್ ಆರೋಗ್ಯ ಪಾಲಿಸಿಯಂತೆ ವಾಹನ ವಿಮಾ ಕ್ಷೇತ್ರದಲ್ಲೂ ಫ್ಲೋಟರ್ ಪಾಲಿಸಿ ಜಾರಿಗೆ ತರಲಾಗುತ್ತಿದೆ. ಇದರನ್ವಯ, ದ್ವಿಚಕ್ರ ವಾಹನ ಮತ್ತು ಕಾರ್ ಹೊಂದಿರುವವರು ಎರಡೂ ವಾಹನಕ್ಕೆ ಕವರ್ ಆಗುವಂತೆ ಒಂದೇ ಮೋಟರ್ ವಿಮೆ ಪಡೆಯಲು ಅವಕಾಶವಿರುತ್ತದೆ.

ಚಾಲನಾ ವರ್ತನೆ ಆಧಾರ: ಪೇ ಹೌ ಯು ಡ್ರೖೆವ್ ವಿಧಾನದಲ್ಲಿ ವಾಹನ ಮಾಲೀಕರ ಚಾಲನಾ ವರ್ತನೆಯನ್ನು ಆಧರಿಸಿ ವಿಮೆ ಇರುತ್ತದೆ. ವೇಗ ಮತ್ತು ಬಳಕೆ ಮತ್ತಿತರ ಮಾನದಂಡಗಳನ್ನು ಟ್ರಾ್ಯಕ್ ಮಾಡುವಂಥ ವಿಧಾನವನ್ನು ಆಯ್ಕೆ ಮಾಡುವ ಅವಕಾಶ ಇದರಲ್ಲಿ ಇರುತ್ತದೆ.

ವಾಹನ ಮಾಲೀಕರಿಗೆ ಅನುಕೂಲ: ಎರಡು ವರ್ಷದಷ್ಟು ದೀರ್ಘ ಕಾಲ ಕರೊನಾ ಸಾಂಕ್ರಾಮಿಕತೆಯ ವೇಳೆ ಸಾವಿರಾರು ಜನರು ನಿಯಮಿತವಾಗಿ ಕಾರು ಬಳಸುವುದನ್ನು ಬಿಟ್ಟಿದ್ದಾರೆ. ಆದರೂ ಅವರು ಭಾರಿ ಮೊತ್ತದ ವಾರ್ಷಿಕ ಪ್ರೀಮಿಯಂ ಕಟ್ಟಲೇ ಬೇಕಾಗುತ್ತದೆ. ಆದರೆ, ಹೊಸ ನಿಯಮ ಜಾರಿಯಿಂದ ವಾಹನ ಮಾಲಿಕರಿಗೆ ವಿಮಾ ಪ್ರೀಮಿಯಂ ಮೇಲೆ ನಿಯಂತ್ರಣ ಸಾಧಿಸಲು ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net