ಮಕ್ಕಳಲ್ಲಿ ಭೀತಿಯನ್ನಲ್ಲ ಅದ್ಭುತ ವಿಶ್ವಾಸವನ್ನು ತುಂಬಿ...

yandamuri jan 10 2020
Published on

ತಮ್ಮ ಮಕ್ಕಳು ಬೇರೆ ಮಕ್ಕಳ ಹಾಗಲ್ಲ ಎಂದು ಎಲ್ಲ ಪಾಲಕರು ಪ್ರಾಮಾಣಿಕವಾಗಿ ನಂಬುತ್ತಾರೆ. ಆ ನಂಬಿಕೆಗೆ ಧಕ್ಕೆಯಾದಾಗ ದಿಗ್ಭಾ›ಂತರಾಗುತ್ತಾರೆ. ಹಾಗಾಗಿ, ಮಕ್ಕಳ ನಡವಳಿಕೆ, ಭಾವನೆಗಳನ್ನು ಮೊದಲಿನಿಂದಲೇ ಗಮನಿಸಿ. ಅವರಲ್ಲಿ ವಿಶ್ವಾಸ ತುಂಬಿ. ಕಠಿಣ ಪರಿಸ್ಥಿತಿಗಳಲ್ಲಿ ‘ನಾವು ಜತೆ ಇದ್ದೇವೆ’ ಎಂಬ ನಂಬಿಕೆಯನ್ನು ಅವರಲ್ಲಿ ಬಿತ್ತಿ. ಇದರಿಂದ ಟೀನೇಜ್ ಮಕ್ಕಳಲ್ಲಿ ಭಾರಿ ಬದಲಾವಣೆ ಕಾಣಬಹುದು.

ನನಗೆ ಪರಿಚಯವಿರುವ ಒಬ್ಬ ಹುಡುಗ ವಿಜಯವಾಡಾದಿಂದ ಕಾಕಿನಾಡಾಗೆ ರೈಲಿನಲ್ಲಿ ಹೋದ. ಟಿಕೆಟ್ ಕೊಳ್ಳಲಿಲ್ಲ-ರೈಲ್ವೆಗೆ ಮೋಸ ಮಾಡುವ ಉದ್ದೇಶದಿಂದಲ್ಲ. ಬಸ್​ನಲ್ಲಿರುವ ಹಾಗೆ ರೈಲಿನಲ್ಲಿ ಕಂಡಕ್ಟರ್ ಬಂದು ಟಿಕೆಟ್ ಕೊಡುತ್ತಾನೆ ಎಂದುಕೊಂಡನಂತೆ! ಇದು ನಡೆದಾಗ ಅವನು ಬಿ.ಟೆಕ್ ಮೂರನೇ ವರ್ಷದಲ್ಲಿ ಓದುತ್ತಿದ್ದ.

ಬಾಲ್ಯ ಬೇಗ ಬೇಗ ಮುಗಿದು ಹೋಗುತ್ತದೆ. ಮಕ್ಕಳು ನೋಡುತ್ತಿರುವ ಹಾಗೆ ಕಣ್ಣ ಮುಂದೆಯೇ ಬೆಳೆದು ದೊಡ್ಡವರಾಗಿ ಬಿಡುತ್ತಾರೆ. ಆದ್ದರಿಂದ ಮಕ್ಕಳೇ ನಿಮ್ಮ ಬಾಲ್ಯವನ್ನು ಚೆನ್ನಾಗಿ ಎಂಜಾಯ್ ಮಾಡಿ. ಎಂಜಾಯ್ಮೆಂಟ್ ಅಂದರೆ ತಿರುಪತಿಗೆ ಕರೆದೊಯ್ಯುವುದಲ್ಲ. ಅಲ್ಲೇ ಪಕ್ಕದಲ್ಲಿರುವ ಪಾಪನಾಶಿನಿ ಜಲಪಾತಕ್ಕೆ ಕರೆದೊಯ್ಯಿರಿ. ಅಲ್ಲಿ ಅವರಿಗೆ ಹೈಡ್ರೋಪವರ್ ಬಗ್ಗೆ ವಿವರಿಸಿ ಹೇಳಿರಿ.

ಟೀನ್ಸ್​ಗಳಲ್ಲಿ ಈಕ್ಯೂ: ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವ ಬುದ್ಧಿಗೆ ಈಕ್ಯೂ ಅನ್ನುತ್ತಾರೆ (Emotional Intelligence Quotient). ಟೀನೇಜ್ ಮಕ್ಕಳಲ್ಲಿ ಇದು ಎಷ್ಟಿದೆಯೆಂದು ಈ ಕೆಳಕಂಡ ಅಂಶಗಳ ಮೂಲಕ ತಿಳಿದುಕೊಳ್ಳಬಹುದು.

ಎ) ಪಾಸಿಟಿವ್/ನೆಗೆಟಿವ್ ರಿಯಾಕ್ಷನ್ಸ್: ಪಾಸಿಟಿವ್, ನೆಗೆಟಿವ್ ಅಂಥ ಎಮೋಷನ್​ಗಳು ಎರಡು ರೀತಿಯವು. ತನ್ನ ಮೂಡ್​ನ್ನು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವುದು, ಇತರರ ಮೂಡ್ ಹೇಗಿದೆ ಎಂದು ಗ್ರಹಿಸಿ ನಡೆದುಕೊಳ್ಳುವುದು ಈಕ್ಯೂನಲ್ಲಿ ಮೊದಲನೆ ಪಾಠ. ನಿಮ್ಮ ಮಕ್ಕಳ ಮೂಡ್ ಹೇಗಿರುತ್ತದೆ? ಸಿಟ್ಟಿನಿಂದ ಮುಖಕ್ಕೆ ಹೊಡೆದಂತೆ ಮಾತಾಡುತ್ತಾರಾ? ಅವರ ಮಾತುಗಳಲ್ಲಿ ನಿರ್ಲಕ್ಷ್ಯ, ವ್ಯಂಗ್ಯ ಪ್ರತಿಫಲಿಸುತ್ತಿದ್ದರೆ ಎಲ್ಲೋ ಯಾವುದೋ ತಪ್ಪು ನಡೆದಿದೆ ಎಂದರ್ಥ.

ಬಿ) ಗುರಿ ವಿಶ್ಲೇಷಣೆ: ಪ್ರೀತಿ, ವೆಹಿಕಲ್, ದುಬಾರಿ ಫೋನ್ ಇವುಗಳೇ ತಮ್ಮ ಗೆಲುವಿಗೆ ಸೂಚನೆಗಳೆಂದು ತಿಳಿದಿದ್ದಾರಾ? ಅದಕ್ಕಿಂತ ದೊಡ್ಡ ಗುರಿ ಇದೆಯಾ?

ಸಿ) ಆತ್ಮವಿಶ್ಲೇಷಣೆ: ಬಲಾಬಲಗಳನ್ನು ಅವರು ತಿಳಿದಿದ್ದಾರಾ? ಅಥವಾ ಬೇರೆಯವರು ಅವರಿಗೆ ಹೇಳಬೇಕಾ? ಸ್ವಲ್ಪ ವಯಸ್ಸಾದ ಮೇಲೂ ಹಿರಿಯರು ಕಲಿಸಿದಷ್ಟನ್ನೇ ಉಳಿಸಿಕೊಂಡಿದ್ದಾರಾ? ಸ್ವಂತ ಅಭಿಪ್ರಾಯ, ನಂಬಿಕೆಗಳನ್ನು ಬೆಳೆಸಿಕೊಂಡಿದ್ದಾರಾ? ತಮ್ಮ ಮಾತಿನಂತೆ ಮಕ್ಕಳು ನಡೆಯದಿದ್ದರೆ ಬಹಳಷ್ಟು ಸಂದರ್ಭಗಳಲ್ಲಿ ದೊಡ್ಡವರು ಒಪ್ಪಿಕೊಳ್ಳುವುದಿಲ್ಲ.

ಡಿ) ಸ್ವಯಂಮಾನ್ಯತೆ: ಅಭಿಪ್ರಾಯಗಳನ್ನು ಬಲವಾಗಿ ನಿರ್ವಿುಸಿಕೊಳ್ಳುತ್ತಿದ್ದಾರಾ? ವಾದಸರಣಿ ಬೆಳೆಸಿಕೊಳ್ಳುತ್ತಿರುವುದು ಸರಿಯಾಗಿದೆಯಾ? ಅದು ವೈಚಾರಿಕವಾಗಿದೆಯಾ? ಅಥವಾ ಮೂರ್ಖರಂತೆ ವಾದಿಸುತ್ತಾರಾ?

ಇ) ಸಮಸ್ಯೆ ನಿವಾರಣಾ ಶಕ್ತಿ: ನಿಮಗೆ ಸಣ್ಣ ಸಮಸ್ಯೆಗಳಾಗಿ ಕಾಣಿಸುವುದು ಮಕ್ಕಳಿಗೆ ಪರ್ವತಗಳ ಹಾಗೆ ಗೋಚರಿಸಬಹುದು. ಸ್ಕೂಲ್​ಗೆ ತೆಗೆದುಕೊಂಡು ಹೋಗಬೇಕಿದ್ದ ಪುಸ್ತಕವನ್ನು ಮನೆಯಲ್ಲೇ ಮರೆತರೂ, ಅದು ಅವರಿಗೆ ದೊಡ್ಡ ಸಮಸ್ಯೆಯೇ. ಅಂತಹ ಸಮಸ್ಯೆ ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾರೆ? ಸಣ್ಣ ಸಣ್ಣ ಸಮಸ್ಯೆಗಳಿಗೇ ನಿದ್ರೆಯಿರದ ರಾತ್ರಿಗಳನ್ನು ಕಳೆಯುತ್ತಿದ್ದಾರಾ? ಅಥವಾ ನಿರಾಳವಾಗಿ ಇರುತ್ತಾರಾ? ಸಣ್ಣ ಅಪಾಯಕ್ಕೇ ಬೆವರು ಸುರಿಯುತ್ತಿದೆಯಾ? ಅಗತ್ಯಕ್ಕಿಂತ ಹೆಚ್ಚು ಚಿಂತೆ ಮಾಡುತ್ತಿದ್ದಾರಾ?

ಎಫ್) ಸಾಮಾಜಿಕ ಜವಾಬ್ದಾರಿ: ಮನೆಯಲ್ಲಿ ಕೆಲಸಗಳನ್ನು ಮಾಡುತ್ತಾರಾ? ತಂದೆ-ತಾಯಿಗೆ ಸಹಾಯ ಮಾಡುತ್ತಾರಾ? ಸ್ಕೂಲ್​ನಲ್ಲಿ ಅವರ ನಡವಳಿಕೆ ಬಗ್ಗೆ ಅವರ ಶಿಕ್ಷಕರು ಏನು ಹೇಳುತ್ತಾರೆ?

ಜಿ) ದೃಷ್ಟಿಕೋನ: ಬೇರೆಯವರ ಅಥವಾ ತಂದೆ-ತಾಯಿ ದೃಷ್ಟಿಯಿಂದ ಸಮಸ್ಯೆಯನ್ನು ನೋಡುತ್ತಾರಾ? ಅಥವಾ ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದ ಮಾಡುತ್ತಾರಾ?

ಎಚ್) ಸ್ಟ್ರೆಸ್: ವಯಸ್ಸನ್ನು ಮೀರಿದ ಸ್ಟ್ರೆಸ್​ಗೆ ಒಳಗಾದಾಗ ಚಿಂತೆಗೆ ಈಡಾಗುತ್ತಾರಾ? ಅಥವಾ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುತ್ತಿದ್ದಾರಾ? ಉದಾಹರಣೆಗೆ ಮನೆಯಲ್ಲಿ ಸಿನಿಮಾ ಪೊ›ಗ್ರಾಂ ಹಾಕಿದರು. ಹೋಂ ವರ್ಕ್ ಬೇಗ ಬೇಗ ಮಾಡಬೇಕು ಆದರೆ ಆಗುತ್ತಿಲ್ಲ. ಮತ್ತೊಂದು ಉದಾಹರಣೆ. ಸ್ಕೂಲ್ ಬಸ್ ಕೆಟ್ಟು ನಿಂತಿತು. ಆಟೋ ಗೊತ್ತು ಮಾಡಿಕೊಂಡು ಬರಬೇಕು! ಇಂತಹ ಸಂದರ್ಭಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳುತ್ತಾರೆ?

ಐ) ಸಂಬಂಧಗಳು: ಅತಿಥಿಗಳು, ಹೊಸಬರು ಮನೆಗೆ ಬಂದಾಗ ನಿಮ್ಮ ಮಕ್ಕಳು ಹೇಗೆ ನಡೆದುಕೊಳ್ಳುತ್ತಾರೆ? ತಾವಾಗಿ ಬಂದು ಪರಿಚಯ ಮಾಡಿಕೊಂಡು ಮಾತನಾಡುತ್ತಾರಾ? ಕೋಣೆಯಲ್ಲೇ ಕುಳಿತಿರುತ್ತಾರಾ? ಅಕ್ಕಪಕ್ಕದ ಮನೆಯವರ ಜೊತೆ ಹೇಗಿದ್ದಾರೆ? ಫ್ಲಾಟ್ಸ್ ಅಸೋಷಿಯನ್ ಅಥವಾ ಕಾಲನಿ ಅಸೋಸಿಯೇಷನ್ ಏರ್ಪಡಿಸುವ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಾ?

ದೊಡ್ಡವರ ಬಲಹೀನತೆಗಳು: ‘ಮನುಷ್ಯನ ಬದುಕಿನಲ್ಲಿ ಮೊದಲ ಅರ್ಧ ತಂದೆ-ತಾಯಿಗಳಿಂದ, ಇನ್ನರ್ಧ ಮಕ್ಕಳಿಂದ ವ್ಯರ್ಥವಾಗುತ್ತದೆ’ ಎಂದು ಒಂದು ಸ್ಕಾಂಡನೇವಿಯನ್ ನಾಣ್ಣುಡಿ ಇದೆ. ಉದ್ರೇಕ ತಗ್ಗಿಸುವುದು (Diffuse), ನಂಬಿಕೆಯನ್ನು ವಿಸ್ತರಿಸುವುದು(Enhance), ಕಮ್ಯುನಿಕೇಶನ್ ಗ್ಯಾಪ್ ನಿವಾರಿಸುವುದು (Avoid), ಸಾಮರಸ್ಯದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು (Resolve) ಎಂಬ ನಾಲ್ಕು ಹೊಣೆಗಾರಿಕೆಗಳನ್ನು ನೆರವೇರಿಸಿದರೆ ನಮ್ಮ ಬದುಕಿನ ಎರಡನೇ ಭಾಗವು ಮಕ್ಕಳ ಕೈಯಲ್ಲಿ ವ್ಯರ್ಥವಾಗುತ್ತದೆ ಎಂಬ ಆ ನಾಣ್ಣುಡಿಯ ಅರ್ಧಭಾಗವನ್ನು ಬದಲಾಯಿಸಬಹುದು. ಹಾಗೆ ಬದಲಾಯಿಸಲು ಆಗದ ಪೇರೆಂಟ್ಸ್ ಆರು ರೀತಿಯ ಬಲಹೀನತೆಗಳಿಂದ ಬಳಲುತ್ತಾರೆ.

1. ಅತಿ ನಂಬಿಕೆ: ತಮ್ಮ ಮಕ್ಕಳು ಬೇರೆ ಮಕ್ಕಳ ಹಾಗಲ್ಲ ಎಂದು ಎಲ್ಲ ಪಾಲಕರು ಪ್ರಾಮಾಣಿಕವಾಗಿ ನಂಬುತ್ತಾರೆ. ಆ ನಂಬಿಕೆಗೆ ಧಕ್ಕೆಯಾದಾಗ ದಿಗ್ಭಾ›ಂತರಾಗುತ್ತಾರೆ. ಕಾರ್ಪೇರೇಟ್ ಕಾಲೇಜಿನಲ್ಲಿ ಐಐಟಿ ಟ್ರೇನಿಂಗ್ ಪಡೆದ ಹುಡುಗ ಸಿಇಟಿಯಲ್ಲಿ ಫೇಲಾಗಿದ್ದು ಇದಕ್ಕೊಂದು ಉದಾಹರಣೆ. ಹೆಣ್ಣುಮಕ್ಕಳು ಮನೆಯಿಂದ ದೂರದ ಪಟ್ಟಣಗಳಲ್ಲಿ ಓದುತ್ತಿರುತ್ತಾರೆ. ಖಾಲಿ ಸಮಯ ಹೆಚ್ಚಿರುವುದು, ಮನೆಯ ಕಡೆಗಿನ ಸೆಳೆತ ಅವರನ್ನು ಒಂಟಿಯಾಗಿಸುತ್ತದೆ. ಸಣ್ಣ ಸಮಾಧಾನದ ಮಾತಿಗೇ ಅವರು ಆಕರ್ಷಿತರಾಗುತ್ತಾರೆ.

ಕರೀಂ ನಗರದಲ್ಲಿ ನಡೆದ ಘಟನೆ. ಆರು ವರ್ಷಗಳ ಹಿಂದೆ ಒಂದು ವ್ಯಾನ್ ಮಧ್ಯರಾತ್ರಿ ಹೊತ್ತಿನಲ್ಲಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಯಿತು. ಅದರಲ್ಲಿದ್ದ ಹತ್ತು ಮಂದಿ ಮೃತಪಟ್ಟರು. ಆ ವ್ಯಾನ್ ಒಬ್ಬ ಹುಡುಗನದು. ಅದರಲ್ಲಿ ನಾಲ್ವರು ಹುಡುಗಿಯರಿದ್ದರು. ಸ್ಕೂಲ್​ನವರು ತಮ್ಮನ್ನೆಲ್ಲ ಟ್ರಿಪ್ ಕಳಿಸುತ್ತಿದ್ದಾರೆಂದು ಅವರೆಲ್ಲ ಸುಳ್ಳು ಹೇಳಿದ್ದರು. ಶವಗಳ ಜೊತೆ ಆ ವ್ಯಾನ್​ನಲ್ಲಿ ಖಾಲಿ ವಿಸ್ಕಿ ಬಾಟಲ್​ಗಳು ದೊರೆತವು. ಆ ಮಕ್ಕಳ ಸರಾಸರಿ ವಯಸ್ಸು ಹದಿನೇಳು ವರ್ಷ. ‘ಅದರಲ್ಲಿ ತಪ್ಪೇನಿದೆ?’ ಎಂದು ಒಬ್ಬರು ಪಾಲಕರು ಪೇರೆಂಟ್ ಮೀಟಿಂಗ್​ನಲ್ಲಿ ಕೇಳಿದರು!

2. ಆತುರ-ಅಪನಂಬಿಕೆ: ಮಕ್ಕಳ ಸಾಮರ್ಥ್ಯದ ಬಗ್ಗೆ ಸಂದೇಹಪಡುವ ಹಿರಿಯರು ಇವರು. 1996ರಲ್ಲಿ ಪ್ರತಿ ಕಾಲೇಜಿನ ಇಬ್ಬರು ಟಾಪರ್​ಗಳನ್ನು ನೇಪಾಳಕ್ಕೆ ಎಜುಕೇಶನ್ ಟೂರ್​ಗೆ ಕಳಿಸಲು ಸರ್ಕಾರ ತೀರ್ಮಾನಿಸಿತು. ಮೆರಿಟ್ ಆಧಾರವಾಗಿ ಸಿಗುವ ಅಪರೂಪದ ಅವಕಾಶ ಅದು. ಕೇವಲ ಹುಡುಗರ ಜೊತೆ ಕಳಿಸಬೇಕು ಎಂಬ ಒಂದು ಕಾರಣಕ್ಕೆ ಕೆಲ ಪೇರೆಂಟ್ಸ್ ನಿರಾಕರಿಸಿದರು.

ಕ್ಲಿನಿಕ್​ಗೆ ಬಂದ ಅಂತಹ ಇನ್ನೊಂದು ಕೇಸ್​ನ ಬಗ್ಗೆ ಈಗ ತಿಳಿದುಕೊಳ್ಳೋಣ. ಮದುವೆ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಒಬ್ಬ ಹುಡುಗಿಯನ್ನು ಕೌನ್ಸೆಲಿಂಗ್​ಗೆ ಕರೆತಂದರು. ಅದು ಒಂದು ಲವ್ ಫೇಲ್ಯೂರ್ ಕೇಸ್ ಅಂದುಕೊಂಡೆವು. ಆದರೆ ಅವಳ ಅಕಾಡೆಮಿಕ್ ರೆಕಾರ್ಡ್ ಪರಿಶೀಲಿಸಿದ ಮೇಲೆ ನಮ್ಮ ಅಭಿಪ್ರಾಯವನ್ನು ಬದಲಾಯಿಸಿ ಕೊಳ್ಳಬೇಕಾಯ್ತು. ಎಸ್ಸೆಸ್ಸೆಲ್ಸಿ ಟಾಪರ್, ನ್ಯೂಕ್ಲಿಯರ್ ಇಂಜನಿಯರಿಂಗ್​ನಲ್ಲಿ ಗೋಲ್ಡ್ ಮೆಡಲಿಸ್ಟ್. ಅಟಾಮಿಕ್ ನ್ಯೂಕ್ಲಿಯೈ, ರೇಡಿಯೋ ಆಕ್ಟಿವ್ ವೇಸ್ಟ್ ಮತ್ತು ಪೊ›ಲಿಫರೇಷನ್ ಕುರಿತು ರೀಸರ್ಚ್ ಮಾಡಬೇಕೆಂದುಕೊಂಡಿದ್ದಾಳೆ. ತನ್ನ ಗುರಿ ನೊಬೆಲ್ ಪ್ರೖೆಸ್ ಎಂದು ಹೇಳಿದಳು. ನಾವು ನಗಲಿಲ್ಲ. ಆದರೆ ‘ನೊಬೆಲ್ ಪ್ರೖೆಸ್ ಪಡೆದವರು ಕೂಡ ಮದುವೆಯಾದವರೇ ಅಲ್ಲವೇ?’ ಎಂದು ಕೇಳಿದೆವು.

ತಂದೆ-ತಾಯಿ ನಮ್ಮ ಮಾತನ್ನು ಮೆಚ್ಚಿಕೊಂಡರು. ಆಗ ಅವಳು ಒಂದು ಪ್ರಶ್ನೆ ಕೇಳಿದಳು. ನಾವು ಬಹಳ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಪ್ರಶ್ನೆ ಅದು. ‘ಒಂದು ವೇಳೆ ಒಬ್ಬ ಹುಡುಗ ಮದುವೆ ಪ್ರಸ್ತಾಪ ಮುಂದೂಡಿ ರೀಸರ್ಚ್​ಗೆಂದು ಅಮೆರಿಕಕ್ಕೆ ಹೋಗುತ್ತೇನೆ ಅಂದಾಗಲೂ ನೀವು ಅವನಿಗೆ ಇದೇ ಸಲಹೆ ಕೊಡುತ್ತೀರೇನು?’ ಎಂದು ಕೇಳಿದಳು. ನಾವು ಉತ್ತರಿಸುವ ಮೊದಲೇ, ‘ನಾನು ಫ್ಯಾಮಿಲೀ ಟೈಪ್ ಅಲ್ಲ. ಮದುವೆ-ಸಂಸಾರಗಳಿಗೆ ಗಮನ ಕೊಡಲಾರೆ, ಪ್ಲೀಸ್ ಅರ್ಥಮಾಡಿಕೊಳ್ಳಿ’ ಎಂದಳು. ಅವಳ ಮಾತು ಸರಿ ಎನಿಸಿತು. ಆಕೆಗೆ ಮದುವೆ ಈಗಲೇ ಬೇಡ, ರೀಸರ್ಚ್ ಮಾಡಲು ಕಳಿಸಿ ಎಂದು ಪೇರೆಂಟ್ಸ್​ಗೆ ಸಲಹೆ ಕೊಟ್ಟೆವು. ಈಗ ಆಕೆ North Carolina State University ಯಲ್ಲಿ ‘Engineering Application of Radio Isotapes’ ಕುರಿತು ರೀಸರ್ಚ್ ಮಾಡುತ್ತಿದ್ದಾಳೆ.

ಮತ್ತೊಂದು ಉದಾಹರಣೆ ಡ್ರೈವಿಂಗ್. ಡ್ರೈವಿಂಗ್ ಬಗ್ಗೆ ಮಕ್ಕಳಿಗಿರುವ ಅತ್ಯಾಸಕ್ತಿ ಕುರಿತು ಪೇರೆಂಟ್ಸ್ ಸಿಟ್ಟಾಗಿ ಪರಿಮಿತಿಗಳನ್ನು ವಿಧಿಸುತ್ತಾರೆ. ವಾಹನ ಮುಟ್ಟುವುದಕ್ಕೇ ಅನುಮತಿ ಕೊಡುವುದಿಲ್ಲ. ಟೀನೇಜರ್ಸ್​ಗೆ ಡ್ರೖೆವಿಂಗ್ ಅಂದರೆ ಕೇವಲ ಗಾಡಿ ಓಡಿಸುವುದಲ್ಲ ಅದು ಅವರಿಗೆ ಸ್ವೇಚ್ಛೆ, ಸ್ವಾತಂತ್ರ್ಯ! ಒಂದು ಸಿಂಬಾಲಿಕ್ ಗೆಲುವು! ಮನಸ್ಥಿತಿಗೆ ಸಂಬಂಧಿಸಿದ ಅಂಶ ಇದು. ಅಲ್ಲಿಯವರೆಗೆ ಅವರು ಹೇಳಿದಂತೆ ಕೇಳುವವರು ಯಾರೂ ಇರಲಿಲ್ಲ. ತಾವು ಹೇಳಿದ ಹಾಗೆ ಮಾಡುವುದರ ಸಲುವಾಗಿ ಅವರು ತುಡಿಯುತ್ತಿರುತ್ತಾರೆ. ಈಗ ಕೈಗೊಂದು ವಾಹನ ಸಿಕ್ಕಿದೆ. ಆಕ್ಸಿಲರೇಟರ್ ಹೆಚ್ಚು ಮಾಡಿದರೆ ಗಾಡಿಯ ವೇಗವೂ ಹೆಚ್ಚಾಗುತ್ತದೆ. ಸ್ಟೀರಿಂಗ್ ಹೇಗೆ ತಿರುಗಿಸಿದರೆ ವಾಹನ ಹಾಗೆ ತಿರುಗುತ್ತದೆ. ಸಿಂಬಾಲಿಕ್ ಗೆಲುವು ಅಂದರೆ ಅದೇನೇ.

ಅದಕ್ಕೇ ಟೀನೇಜರ್ಸ್ ಬೈಕ್​ಗಾಗಿ ಕಾಡುತ್ತಾರೆ. ನೀವು ಇಲ್ಲ ಎಂದರೆ ಅವರು ಬೇರೆ ಮಾರ್ಗ ಹುಡುಕುತ್ತಾರೆ. ಸ್ನೇಹಿತರನ್ನು ಬೇಡುತ್ತಾರೆ. ಅದರ ಬದಲು ಅವರ ಜತೆ ನೀವೂ ಹೋಗಿರಿ. ಅವರ ಹಿಂದೆ ಕುಳಿತು ಅವರಲ್ಲಿ ವಿಶ್ವಾಸ ತುಂಬಿ. ಸಲಹೆ ಕೊಡಿ. ರ‍್ಯಾಷ್ ಡ್ರೖೆವಿಂಗ್​ನಿಂದ ಅಗುವ ಅನಾಹುತಗಳನ್ನು ವಿವರಿಸಿ ಹೇಳಿ. ಎಲ್ಲಕ್ಕಿಂತ ಮುಖ್ಯವಾಗಿ ನೀವೂ ಕೂಡ ಅವರ ಥ್ರಿಲ್​ನಲ್ಲಿ ಭಾಗಿಯಾಗಿ. ‘ನಮ್ಮಮ್ಮ ನನಗೆ ಡ್ರೖೆವಿಂಗ್ ಕಲಿಸಿದಳು. ನಮ್ಮಪ್ಪ ಹಿಂದೆ ಕುಳಿತು ಬೈಕ್ ಓಡಿಸುವುದನ್ನು ಕಲಿಸಿದರು’ ಎನ್ನುವ ಫೀಲಿಂಗ್ ಅವರಿಗೆ ಹಿತವಾಗಿರುತ್ತದೆ.

ಬದುಕಿನಲ್ಲಿ ಒಂದೇ ಒಂದು ಬಾರಿ ಬರುವ ಇನ್ವೆಸ್ಟ್​ಮೆಂಟ್ ಇದು. ದಿನದಲ್ಲಿ ಒಂದು ಗಂಟೆಯ ಹಾಗೆ ಒಂದು ತಿಂಗಳು ಕೆಲಸ ಮಾಡುವುದರಿಂದ, ಅವರು ಇಡೀ ಜೀವಮಾನ ನಿಮ್ಮನ್ನು ನೆನಪಿನಲ್ಲಿಡುತ್ತಾರೆ. ಮುಂದೆ ಡ್ರೖೆವಿಂಗ್ ಸ್ಕೂಲ್ಸ್ ಇದ್ದೇ ಇವೆ.

ಪೇರೆಂಟ್ಸ್​ನ ಮತ್ತಷ್ಟು ಬಲಹೀನತೆಗಳ ಬಗ್ಗೆ ಮುಂದಿನ ಅಂಕಣದಲ್ಲಿ ಅರಿಯೋಣ.

(ಲೇಖಕರು ಖ್ಯಾತ ಕಾದಂಬರಿಕಾರರು, ವ್ಯಕ್ತಿತ್ವ ವಿಕಸನ ತರಬೇತುದಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net