ಕೋವಿಡ್ ಎಫೆಕ್ಟ್ ಮಕ್ಕಳಲ್ಲೂ ನಿದ್ರಾಹೀನತೆ

dfgdfgdfgdfgdfg
Published on

|ಪಂಕಜ ಕೆ.ಎಂ. ಬೆಂಗಳೂರು

ಆರೋಗ್ಯಕರ ಜೀವನಕ್ಕೆ ಆಹಾರದಷ್ಟೇ ಸುಖಕರವಾದ ನಿದ್ರೆಯೂ ಮುಖ್ಯ. ಆದರೆ ಬದಲಾದ ಜೀವನ ಶೈಲಿಯಲ್ಲಿ ನಿದ್ರೆ ಮಾಡುವ ಕ್ರಮದಲ್ಲೂ ಬಹಳಷ್ಟು ಬದಲಾವಣೆಗಳಾಗಿವೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ನಿದ್ರೆಯ ಕೊರತೆಯಿಂದ ಮಕ್ಕಳ ಮೇಲಾಗುವ ಪರಿಣಾಮ ಗಂಭೀರವಾಗಿರುತ್ತದೆ. ಸಾಕಷ್ಟು ನಿದ್ರೆ ಮಾಡದ ಮಕ್ಕಳಲ್ಲಿ ಅಭ್ಯಾಸದಲ್ಲಿ ಹಿನ್ನಡೆ, ಖಿನ್ನತೆ, ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ಕೋಪ, ಹಠ ಇತ್ಯಾದಿ ಕಾಣಬಹುದು. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರದೊಂದಿಗೆ ಉತ್ತಮ ನಿದ್ರೆ ಸಿಗುವಂತೆ ಪಾಲಕರು ಗಮನ ಹರಿಸಬೇಕು ಎನ್ನುತ್ತಾರೆ ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ.

ವಿಪರೀತ ವರ್ತನೆ: ಕೆಲ ಮಕ್ಕಳು ನಿದ್ರೆಯಲ್ಲಿ ವಿಪರೀತವಾಗಿ ವರ್ತಿಸುತ್ತಾರೆ. ಹಲ್ಲು ಕಡಿಯುವುದು, ಕೂಗುವುದು, ಕೊರಗುವುದು, ಎದ್ದು ಓಡಾಡುವುದು ಇತ್ಯಾದಿ. ಈ ರೀತಿಯ ವರ್ತನೆಗಳು ಕಂಡುಬಂದಲ್ಲಿ ಹಾಗೂ 5 ವರ್ಷ ವಯಸ್ಸು ಮೀರಿದ ನಂತರವೂ ನಿದ್ರೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ವೈದ್ಯರಲ್ಲಿ ತೋರಿಸಬೇಕು ಎನ್ನುವ ಸಲಹೆ ತಜ್ಞರದ್ದು.

ಮಕ್ಕಳ ನಿದ್ರಾ ಸಮಯ: ನ್ಯಾಷನಲ್ ಸ್ಲೀಪ್ ಫೌಂಡೇಷನ್ ವರದಿ ಪ್ರಕಾರ ದಿನದ 24 ಗಂಟೆಗಳಲ್ಲಿ ನವಜಾತ ಶಿಶುಗಳು 12-18 ತಾಸು ನಿದ್ರಿಸಬೇಕು. 1-3 ವರ್ಷದ ಮಕ್ಕಳು 12-14 ತಾಸು, 3-5 ವರ್ಷದ ಮಕ್ಕಳು 11-13 ತಾಸು, ಶಾಲೆಗೆ ಹೋಗುವ ಮಕ್ಕಳಿಗೆ 10 -11 ತಾಸು ನಿದ್ರೆಯ ಅಗತ್ಯವಿದೆ. ಆದರೆ, 9 ವರ್ಷ ಮೇಲ್ಪಟ್ಟ ಮಕ್ಕಳಿಗೆ 8 ತಾಸು ನಿದ್ರೆ ಸಾಕಾಗುತ್ತದೆ.

ಹಾಸಿಗೆ ನಿರ್ವಹಿಸುವ ಪಾತ್ರ: ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಯಲ್ಲಿ ನಿದ್ರೆಯಷ್ಟೇ, ಹಾಸಿಗೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ಉಲ್ಲಾಸ ಹಾಗೂ ಆರಾಮದಾಯಕವಾಗಿ ನಿದ್ರಿಸಲು ಪೂರಕವಾದ ಹಾಸಿಗೆಗಳನ್ನು ಒದಗಿಸಿ ಎನ್ನುತ್ತಾರೆ ಪೆಪ್ಸ್ ಮ್ಯಾಟ್ರನ್ಸ್​ನ ವ್ಯವಸ್ಥಾಪಕ ನಿರ್ದೇಶಕ ಕೆ. ಮಾಧವನ್.

ಕರೊನಾ ಪರಿಣಾಮ: ಕೋವಿಡ್ ಸಾಂಕ್ರಾಮಿಕದ ನಂತರದ ದಿನಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರ ದಿನಚರಿ ಸಂಪೂರ್ಣ ಬದಲಾಗಿದ್ದು, ನಿದ್ರಿಸುವುದು, ಊಟ ಮಾಡುವುದು, ಬೆಳಗ್ಗೆ ಏಳುವುದು ಎಲ್ಲದರಲ್ಲೂ ವ್ಯತ್ಯಾಸಗಳಾಗಿವೆ. ಲಾಕ್​ಡೌನ್ ಸಂದರ್ಭದಲ್ಲಿ ಅರ್ಧದಷ್ಟು ಮಕ್ಕಳು ಆರೋಗ್ಯವಂತ ನಿದ್ರೆ ಮಾಡಿದರೆ, ಉಳಿದ ಮಕ್ಕಳು ಟಿವಿ, ಮೊಬೈಲ್, ವಿಡಿಯೋ ಗೇಮ್ಳ ಅತಿಯಾದ ಬಳಕೆಯಿಂದ ಅಗತ್ಯ ನಿದ್ರೆಯಿಂದ ವಂಚಿತರಾಗಿದ್ದಾರೆ.

ಮೂತ್ರ ವಿಸರ್ಜನೆ: ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚು. 4-5 ನೇ ವಯಸ್ಸಿನವರೆಗೆ ಮಕ್ಕಳಲ್ಲಿ ಅನಿಯಂತ್ರಿತ ಮೂತ್ರ ವಿಸರ್ಜನೆ ಇರುತ್ತದೆ. ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾರೆ. 5ನೇ ವಯಸ್ಸಿನ ನಂತರ ಮೂತ್ರ ವಿಸರ್ಜನೆ ಮೇಲೆ ನಿಯಂತ್ರಣ ಹೊಂದುತ್ತಾರೆ. ಅಭದ್ರತೆ, ಭಯ, ದುಃಖ, ಕೋಪಕ್ಕೆ ಒಳಗಾದ ಮಕ್ಕಳು ನಿದ್ರೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾರೆ.

ಮಕ್ಕಳಿಗೆ ನಿದ್ರೆಯ ಟಿಪ್ಸ್:

  •   ಮಕ್ಕಳಿಗೆ ಪ್ರತಿದಿನ ಒಂದೇ ಸಮಯದಲ್ಲಿ ನಿದ್ರೆ ಮಾಡುವುದನ್ನು ರೂಢಿಸಿ
  •   ಮಕ್ಕಳಿಗೆ ರಾತ್ರಿ ವೇಳೆ ಹೆಚ್ಚು ದ್ರವ ಪದಾರ್ಥಗಳನ್ನು ನೀಡಬೇಡಿ
  •   ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಲಿ
  •   ಮಲಗುವ ಮೊದಲು ಮೂತ್ರ ವಿಸರ್ಜನೆಗೆ ಕಳುಹಿಸಿ
  •   ಮಗುವಿನ ಆತಂಕ, ಖಿನ್ನತೆ ನಿವಾರಿಸಿ. ಆಸರೆ, ಭರವಸೆ ನೀಡಿ
  •   ರಾತ್ರಿ ವೇಳೆ ಟಿವಿ, ಮೊಬೈಲ್​ಗಳಿಂದ ದೂರ ಇರುವಂತೆ ನೋಡಿಕೊಳ್ಳಿ
  •   ನಿದ್ರೆಗೂ ಮುನ್ನ ಸಂಗೀತ, ಶ್ಲೋಕ ಆಲಿಸು ವುದು, ಧ್ಯಾನ ಮಾಡಿಸುವುದು ಉತ್ತಮ
  •   ಮಲಗಲು ಸರಿಯಾದ ಹಾಸಿಗೆ ಮತ್ತು ದಿಂಬುಗಳನ್ನು ಒದಗಿಸಿ
  •   ರಾತ್ರಿ ವೇಳೆ ಹೊಟ್ಟೆ ಬಿರಿಯುವಷ್ಟು ಊಟ, ತಂಪು ಪಾನೀಯ ಸೇವನೆ ಬೇಡ.
  •   ಮೊಬೈಲ್, ಲ್ಯಾಪ್​ಟ್ಯಾಪ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಸಿಗೆಯಿಂದ ದೂರವಿಡಿ
  •   ತುಂಬ ಆಯಾಸ- ಬಳಲಿಕೆ ಹೊಂದಿದ್ದರೆ ಸ್ನಾನ ಮಾಡಿಸಿ ಮಲಗಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net