ಬಾಯಿ ಆರೋಗ್ಯವಾಗಿದ್ದರಷ್ಟೆ ದೇಹಕ್ಕೆ ಸ್ವಾಸ್ಥ್ಯ...

Mouth
Published on
ಇಂಡಿಯನ್ ಪ್ರೋಸ್ತಾಡಾಂಟಿಕ್ ಸೊಸೈಟಿಯ ಕರ್ನಾಟಕ ಘಟಕವು ಬರುವ ಏಪ್ರಿಲ್ 10 ಮತ್ತು 11ರಂದು ರಾಯಚೂರಿನ ನವೋದಯ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಮ್ಮೇಳನ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಬಾಯಿ ಆರೋಗ್ಯ ಮಹತ್ವ ಕುರಿತ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಡಾ. ಪ್ರಕಾಶ ನಿಡವಣಿ, ಪ್ರಾಧ್ಯಾಪಕರು, ನವೋದಯ ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆ ರಾಯಚೂರು/ಡಾ. ಗೌರಿ ವಿ. ಆನೆಹೊಸೂರ, ಪ್ರಾಧ್ಯಾಪಕರು, ಎಸ್​ಡಿಎಂ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಧಾರವಾಡ.

ಹಲ್ಲುಗಳ ಪ್ರಾಮುಖ್ಯತೆ ನಮ್ಮ ಜೀವನದಲ್ಲಿ ಎಷ್ಟೆಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅತಿ ಅವಶ್ಯಕವಾಗಿದೆ. ಏಕೆಂದರೆ, ನಮ್ಮ ದೇಹದ ಯಾವ ಭಾಗವನ್ನೂ ದೇವರು ಹಾಗೇ ಸುಮ್ಮನೆ ಸೃಷ್ಟಿಸಿಲ್ಲ. ಪ್ರತಿಯೊಂದು ಅಂಗಾಂಗ ಕೂಡ ಅದರದೇ ಆದಂತಹ ಪ್ರಾಮುಖ್ಯತೆ ಹೊಂದಿದೆ. ದೇಹದ ಎಲ್ಲಾ ಭಾಗಗಳು ಮತ್ತು ಅವುಗಳ ಆರೋಗ್ಯ ಒಂದಕ್ಕೊಂದು ಸಂಪರ್ಕ ಹೊಂದಿವೆ. ಬಾಯಿ ನಮ್ಮ ದೇಹದ ಮುಖ್ಯ ದ್ವಾರವಿದ್ದಂತೆ. ಸೇವಿಸುವ ಆಹಾರದ ಬಗ್ಗೆ ಇರುವ ಕಾಳಜಿ ಮನುಷ್ಯನಿಗೆ ಯಾವುದರ ಮೂಲಕ ಆಹಾರ ಸೇವನೆ ಮಾಡುತ್ತೇವೆ ಎಂಬುದರ ಬಗ್ಗೆ ಇಲ್ಲ. ಅದಕ್ಕೇ ಹೇಳುತ್ತಾರೆ ಬಾಯಿ ಆರೋಗ್ಯವಾಗಿದ್ದರೆ ದೇಹ ಆರೋಗ್ಯವಾಗಿರುತ್ತದೆ ಎಂದು.

ಸಾಕಷ್ಟು ಜನರಿಗೆ ಅರಿವಿದೆ, ಹಲ್ಲು ನೋಡಲು, ಚೆನ್ನಾಗಿ ಕಾಣಲು ಆತ್ಮವಿಶ್ವಾಸದ ನಗೆ ಬೀರಲು, ಸರಿಯಾಗಿ ಉಚ್ಚರಿಸಲು, ಆಹಾರ ಜಗಿಯಲೂ ಬೇಕು ಅಂತ. ಅದೇ ರೀತಿ ನಾವು ದಂತ ತಜ್ಞರು ಬಾಯಿ ಮತ್ತು ಹಲ್ಲಿನ ಆರೋಗ್ಯ ನೋಡಿ ಅವರ ಸಾಮಾನ್ಯ ಆರೋಗ್ಯದ ಬಗ್ಗೆ ಹೇಳಬಹುದು. ನಮಗೆಲ್ಲ ತಿಳಿದಿರುವಂತೆ ಮನುಷ್ಯರಿಗೆ 20 ಹಾಲು ಹಲ್ಲುಗಳು ಕೇವಲ ಆರು ವರ್ಷದವರೆಗೆ ಇರುತ್ತವೆ. ಅವುಗಳು ಉದುರಿದ ಮೇಲೆ ಬರುವುದು ಶಾಶ್ವತ ಹಲ್ಲುಗಳು. ಅವು 28ರಿಂದ 32 ಇರುತ್ತವೆ. ಇಲ್ಲಿ ಗಮನಿಸಬಹುದು, ಶಾಶ್ವತ ಅಥವಾ ಮನುಷ್ಯ ಇರುವವರೆಗೂ ಬಾಯಿಯಲ್ಲಿ ಹಲ್ಲು ಇರಬೇಕು. ಆದರೆ, ಮನುಷ್ಯರ ನಿಷ್ಕಾಳಜಿ ಮತ್ತು ಸರಿಯಾದ ಜ್ಞಾನವಿಲ್ಲದೆ ಅಥವಾ ಬೇರೆ ಇನ್ನಿತರ ಕಾರಣದಿಂದ ಸರಾಸರಿ ಪ್ರತಿ ಮನುಷ್ಯ ತಮ್ಮ ಜೀವಾವಧಿಯಲ್ಲಿಯೇ ಒಂದು ಅಥವಾ ಹಲವು ಹಲ್ಲುಗಳನ್ನು ಕಳೆದುಕೊಳ್ಳುತ್ತಾನೆ. ಅದರ ಅರ್ಥ ಒಂದು ರೀತಿಯಿಂದ ಅಂಗವಿಕಲನಾಗುತ್ತಾನೆ. ಇದು ಅವರ ಸಾಮಾನ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ.

ಇದಕ್ಕೆ ಪರಿಹಾರ ನೀಡಲು ಕೃತಕ ದಂತ ವಿಭಾಗ ಸತತವಾಗಿ ಕಾರ್ಯನಿರ್ವಹಿಸುತ್ತ ಬರುತ್ತಿದೆ. ಕೃತಕ ದಂತ ವಿಭಾಗ ಒಂದು ವೈದ್ಯಕೀಯ ವಿಭಾಗ. ಅದರಲ್ಲಿ ಒಂದು ಅಥವಾ ಹಲವು ಅಥವಾ ಎಲ್ಲಾ ಹಲ್ಲುಗಳು ಮತ್ತು ಅದರ ಸುತ್ತಮುತ್ತಲಿನ ಅಂಗಾಂಶ ಯಾವುದೇ ಕಾಯಿಲೆ ಹಾಗೂ ಇನ್ನಿತರ ಕಾರಣಗಳಿಂದ ಹಾಳಾಗಿ ಹೋಗಿದ್ದರೆ ಅದನ್ನು ಪುನಃ ಸ್ಥಾಪಿಸುವುದಾಗಿದೆ. ಹಲ್ಲುಗಳನ್ನು ಹೇಗೆ ಪುರ್ನಸ್ಥಾಪಿಸುವುದು? ಅಂದರೆ ಏನೆಲ್ಲ ವಿಧದ ಚಿಕಿತ್ಸೆಗಳಿವೆ ಮತ್ತು ಚಿಕಿತ್ಸೆ ಯಾಕೆ ಅವಶ್ಯಕ ಎಂಬುದರತ್ತ ಗಮನಿಸೋಣ.

ನಿಮಗೆಲ್ಲ ತಿಳಿದಿರುವ ಹಾಗೆ ಮುಂದಿನ ಹಲ್ಲು ನಮಗೆ ಆಹಾರ ಕಡಿಯಲು ಸರಿಯಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಲು ಎಲ್ಲಕ್ಕಿಂತ ಮುಖ್ಯವಾಗಿ ಸುಂದರವಾಗಿ ಕಾಣಲು, ಆತ್ಮಸ್ಥೈರ್ಯ ಹೆಚ್ಚಿಸಲು ಉಪಯೋಗವಾಗುತ್ತದೆ. ಮುಂದಿನ ಹಲ್ಲುಗಳು ಒಂದು ವೇಳೆ ಹೋದರೆ ಮೊಟ್ಟಮೊದಲು ಇದು ಮಾನಸಿಕ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ ಮತ್ತು ವಯಸ್ಸಿಗಿಂತ ಮೊದಲೇ ವಯಸ್ಸಾದಂತೆ ಕಾಣಿಸುತ್ತದೆ. ಹಾಗಾಗಿ ಸಾಮಾನ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕೃತಕ ಚಿಕಿತ್ಸೆ ಬಹಳ ಉಪಯೋಗಕಾರಿಯಾಗಿದೆ. ಅದೇ ರೀತಿ ಹಿಂದಿನ ಹಲ್ಲುಗಳು ಅಂದರೆ ದವಡೆ ಹಲ್ಲುಗಳು ಇಲ್ಲವಾದಲ್ಲಿ ಆಹಾರ ನುರಿಸಲು ಕಷ್ಟವಾಗುತ್ತದೆ. ಹಾಗಾಗಿ ಎಲ್ಲ ವಿಧದ ಆಹಾರ ಸೇವನೆಯಾಗದೆ ಕೇವಲ ಮೃದು ಮತ್ತು ನಿಗದಿತ ಆಹಾರಕ್ಕೆ ಋಣಿಯಾಗಬೇಕಾಗುತ್ತದೆ. ಹೀಗಾಗಿ, ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳು ಸಿಗದೇ ದೇಹ ದುರ್ಬಲವಾಗುತ್ತದೆ. ಆದ್ದರಿಂದ ಪ್ರತಿ ಹಲ್ಲಿನ ಚಿಕಿತ್ಸೆಯನ್ನು ಅವು ಇರುವಾಗ ಹಾಗೂ ಇಲ್ಲದೆ ಇರುವಾಗ ಮಾಡಿಸುವುದು ಬಹಳ ಮುಖ್ಯವಾಗಿದೆ.

ಕೃತಕ ದಂತ ಚಿಕಿತ್ಸೆಯನ್ನು ನಾವು ಜನಸಾಮಾನ್ಯರಿಗೆ ಸರಳವಾಗಿ ತಿಳಿಯಲು ಹೀಗೆ ಹೇಳಬಹುದು:

1) ತೆಗೆದು ಹಾಕಲು ಬರುವ ಚಿಕಿತ್ಸೆ.
2) ಶಾಶ್ವತ ಚಿಕಿತ್ಸೆ (ಫಿಕ್ಸ್ಡ್ ರಿಮೂವೆಬಲ್).

ತೆಗೆದು ಹಾಕಲು ಬರುವ ಚಿಕಿತ್ಸೆ

ಒಂದು ಅಥವಾ ಹಲವು ಅಥವಾ ಎಲ್ಲ ಹಲ್ಲುಗಳು ಇರದೇ ಇದ್ದಾಗ ಒಂದು ಸೆಟ್ಟಿನ ಮುಖಾಂತರ ಬೇಕಿರುವ ಹಲ್ಲುಗಳನ್ನು, ಬಾಯಲ್ಲಿ ಉಳಿದಿರುವ ಹಲ್ಲುಗಳ ಅಥವಾ ಕೆಳಗಿರುವ ಅಂಗಾಂಶದ ಮೇಲೆ ಹಲ್ಲುಗಳ ಸೆಟ್ಟನ್ನು ಇರಿಸುವುದಾಗಿದೆ. ಇಲ್ಲಿ ಸೆಟ್ಟನ್ನು ರಾತ್ರಿ ಮಲಗುವಾಗ ನೀರಿನಲ್ಲಿ ಇಡುವುದು ಹಾಗೂ ಬೆಳಗ್ಗೆ ಅದನ್ನು ಸರಿಯಾಗಿ ತೊಳೆದು ಬಾಯಲ್ಲಿ ಹಾಕಿಕೊಳ್ಳುವುದು ಕ್ರಮ.

ಶಾಶ್ವತ ಚಿಕಿತ್ಸೆ

ಇದರಲ್ಲಿ ಒಂದು ಸಲ ಚಿಕಿತ್ಸೆ ಕೊಟ್ಟಾದ ಮೇಲೆ ಅದನ್ನು ತೆಗೆಯಲು ಚಿಕಿತ್ಸೆ ಪಡೆದುಕೊಂಡವರಿಗೆ ಬರುವುದಿಲ್ಲ. ಇದರಲ್ಲಿ ಹಲವು ವಿಧದ ಚಿಕಿತ್ಸೆಗಳಿವೆ. ಅವು ಈ ಮುಂದಿನಂತಿವೆ.

ಇಂಪ್ಲಾಂಟ್

ಇದರಲ್ಲಿ ಇಲ್ಲದ ಹಲ್ಲಿನ ಜಾಗದಲ್ಲಿ ಒಂದು ಸ್ಕ್ರೀವ್ (ಮೊಳೆ) ಒಳಗಡೆ ಹಾಕಲಾಗುತ್ತದೆ. ಅದು ಹಲ್ಲಿನ ಬೇರಿನ ಹಾಗೆ ಮೊಳೆ ಜತೆ ಸೇರಿಕೊಳ್ಳುತ್ತದೆ. ಮತ್ತು ಇದರ ಮೇಲೆ ಕ್ಯಾಪ್ ಬರುತ್ತದೆ.

ಕ್ರೌನ್ ಮತ್ತು ಬ್ರಿಡ್ಜ್

ಇದರಲ್ಲಿ ಹಲ್ಲು ಇರದ ಜಾಗದಲ್ಲಿ ಹಲ್ಲು ಕೂರಿಸಲು ಅಕ್ಕಪಕ್ಕದ ಆರೋಗ್ಯವಾದ/ ಗಟ್ಟಿ ಹಲ್ಲುಗಳ ಸಹಾಯದಿಂದ ಒಂದು ಬ್ರಿಡ್ಜ್ ಕೊಡಲಾಗುತ್ತದೆ. ಸಂಗಲ್ ಕ್ರೌನ್ (ವೈಯಕ್ತಿಕ) ಕೂಡ ರೂಟ್ ಕೆನಾಲ್ ಟ್ರೀಟ್​ವೆುಂಟ್ ಆದ ಮೇಲೆ ಕೊಡುವುದರಿಂದ ಚಿಕಿತ್ಸೆಗೆ ಒಳಗಾದ ಹಲ್ಲನ್ನು ಕಾಪಾಡಬಹುದು.

ಮತ್ತೊಂದು ಚಿಕಿತ್ಸೆ ಎಂದರೆ ಬಾಯಿ ಮುಖಾಂಗದ ಪ್ರೋಸ್ತೆಸಿಸ್. ಇದರಲ್ಲಿ, ಕ್ಯಾನ್ಸರ್ ಹಾಗೂ ಇನ್ನಿತರ ಕಾರಣಗಳಿಂದ ಬಾಯಿ ಮತ್ತು ಮುಖಾಂಗದ ಭಾಗವನ್ನು ತೆಗೆದಿದ್ದರೆ ಅದನ್ನು ಕೂಡ ಪುನರ್​ಸ್ಥಾಪಿಸಬಹುದು. ಕೃತಕ ದಂತ ಚಿಕಿತ್ಸೆ ಒಂದು ತರಹದ ದೇವರ ಸೃಷ್ಟಿಯನ್ನು ದುರದೃಷ್ಟವಶಾತ್ ಕಳೆದುಕೊಂಡವರಿಗೆ ಅದನ್ನು ಪುನರ್​ಸೃಷ್ಟಿಸಿ ಗುಣಮಟ್ಟದ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.

ಏಪ್ರಿಲ್ 10, 11ರಂದು ಸಮ್ಮೇಳನ

ಇಂಡಿಯನ್ ಪ್ರೋಸ್ತಾಡಾಂಟಿಕ್ ಸೊಸೈಟಿಯ ಕರ್ನಾಟಕ ಘಟಕವು ಈ ವರ್ಷದ ಏಪ್ರಿಲ್ 10, 11ರಂದು ರಾಯಚೂರಿನ ನವೋದಯ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಮ್ಮೇಳನ ಹಮ್ಮಿಕೊಂಡಿದೆ. ಪ್ರೋಸ್ತಾಡಾಂಟಿಕ್ ಕ್ಷೇತ್ರದಲ್ಲಿನ ತಜ್ಞರು ಈ ಸಮ್ಮೇಳನದಲ್ಲಿ ತಮ್ಮ ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತು ರ್ಚಚಿಸುವರು. ಈ ಸಂದರ್ಭದಲ್ಲಿ ಪ್ರೋಸ್ತಾಡಾಂಟಿಕ್ ವಿಭಾಗಕ್ಕೆ ಸಂಬಂಧಿಸಿದ ಇತ್ತೀಚಿನ ವಸ್ತುಗಳು, ಗ್ಯಾಜೆಟ್​ಗಳ ಪ್ರದರ್ಶನ ಸಹ ನಡೆಯಲಿದೆ. ಆಸಕ್ತರು ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845719123 ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net