

ದಿನನಿತ್ಯ ಬಳಸಲ್ಪಡುವ ಹಸಿರು ಸೊಪ್ಪುಗಳಲ್ಲೊಂದು ಪುದಿನ. ಅಡುಗೆಯ ರುಚಿಯನ್ನು ಹೆಚ್ಚಿಸುವ ಇದು ಆರೋಗ್ಯದ ದೃಷ್ಟಿಯಿಂದ ಕೂಡ ತುಂಬ ಒಳ್ಳೆಯದು. ಪಲಾವ್, ಚಟ್ನಿ, ತಂಬುಳಿ ಮುಂತಾದ ಆಹಾರಪದಾರ್ಥಗಳಲ್ಲಿ ಪುದಿನ ಎಲೆಗಳನ್ನು ಬಳಸುತ್ತಾರೆ. ಮಾಂಸದ ಅಡುಗೆಗಳಲ್ಲೂ ಇದರ ಬಳಕೆಯಿದೆ.
ಪುದಿನ ಬಳಸಿ ಎಣ್ಣೆಯನ್ನು ತಯಾರಿಸುತ್ತಾರೆ. ಅನೇಕ ರೋಗಗಳ ನಿವಾರಣೆಗೆ ಸಹಕಾರಿಯಾದ ಪುದಿನ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಸುಗಂಧಭರಿತ ಪುದಿನ ಸಸ್ಯವು ಸ್ವಾಭಾವಿಕವಾಗಿಯೇ ರೋಗಾಣುಗಳನ್ನು ಹೊಡೆದೋಡಿಸುವ ಗುಣವುಳ್ಳದ್ದು. ಸೋಪು, ಟೂತ್ ಪೇಸ್ಟ್ ಮತ್ತು ಮೌತ್ ವಾಷ್ಗಳ ತಯಾರಿಕೆಯಲ್ಲಿ ಕೂಡ ಇದನ್ನು ಉಪಯೋಗಿಸಲಾಗುತ್ತದೆ.