

ಹಿಂಗಾರು ಮಳೆ ಮುಗಿದು ಚಳಿ ಹೆಚ್ಚಳವಾಗಿರುವ ಪರಿಣಾಮ ರಾಜಧಾನಿಯಲ್ಲಿ ಅನಾರೋಗ್ಯ ಸಮಸ್ಯೆ ಉಲ್ಬಣಗೊಂಡಿದೆ. ವೈರಾಣು ಜ್ವರ ಹಾಗೂ ಶೀತ ಸಂಬಂಧಿ ಸಮಸ್ಯೆಯಿಂದಾಗಿ ಮಕ್ಕಳ ಸಹಿತ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಶೇ.40ರಷ್ಟು ಏರಿಕೆ ಆಗಿದೆ. ಕಳೆದ ಎರಡು ವಾರಗಳಿಂದ ಮಧ್ಯಾಹ್ನದ ವೇಳೆ ಬಿಸಿಲಿದ್ದರೂ, ಬೆಳಗ್ಗೆ ಮತ್ತು ಸಂಜೆ ತೀವ್ರ ಚಳಿ ಕಾಡುತ್ತಿದೆ. ಇದರಿಂದಾಗಿ ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವು, ಜ್ವರ, ಉಸಿರಾಟದ ತೊಂದರೆ ಜನರನ್ನು ಕಾಡುತ್ತಿದೆ. ಮಕ್ಕಳಲ್ಲಿ ಬ್ರಾಂಕೋಲೈಟಿಸ್ (ಕಿರಿದಾದ ಶ್ವಾಸಕೋಶ ನಾಳಗಳಲ್ಲಿ ಉರಿಯೂತ) ಹಾಗೂ ವೈರಲ್ ಬ್ರಾಂಕೋ ನ್ಯೂಮೊನಿಯಾದಂತಹ ಸಮಸ್ಯೆಗಳು ವರದಿಯಾಗುತ್ತಿವೆ.
ಚಳಿಗಾಲದಲ್ಲಿ ವೈರಾಣು ಸೋಂಕು ಹೆಚ್ಚುವುದಲ್ಲದೆ, ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಇದರಿಂದ ಒಬ್ಬರಿಗೆ ಶೀತ ಕಾಣಿಸಿಕೊಂಡರೆ ಮನೆ ಮಂದಿಗೆಲ್ಲ ಸಮಸ್ಯೆ ಆಗುತ್ತಿದೆ. ತಣ್ಣನೆ ವಾತಾವರಣದಿಂದ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಹೀಗಾಗಿ ಮಕ್ಕಳು, ವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಚಳಿಗಾಲದಲ್ಲಿ ಶೀತ ಬಾಧೆಯೊಂದಿಗೆ ಚರ್ಮದ ಸಮಸ್ಯೆಯೂ ಹೆಚ್ಚಾಗಿದೆ. ಅಟೊಪಿಕ್ ಡರ್ವಟೈಟಿಸ್, ಸೋರಿಯಾಸಿಸ್, ಬ್ರಾಂಕ್ರೖೆಟಿಸ್, ಸೈನೋಸೈಟಿಸ್ ಹಾಗೂ ಸಿಕ್ ಬಿಲ್ಡಿಂಗ್ ಸಿಂಡ್ರೋಮ್ಂತದ ಚರ್ಮದ ಸಮಸ್ಯೆಗಳು ಹೆಚ್ಚಿದ್ದು, ಈ ತೊಂದರೆಗಳಿಂದಾಗಿ ನಗರದ ಇಎಸ್ಐ ಆಸ್ಪತ್ರೆಗೆ ನಿತ್ಯ 50-60 ಮಂದಿ ಚಿಕಿತ್ಸೆಗೆ ಬರುತ್ತಿದ್ದಾರೆ. ಹೀಗಾಗಿ ವೈದ್ಯರ ಸಲಹೆ ಪಡೆದು ತಮ್ಮ ಚರ್ಮಕ್ಕೆ ಹೊಂದಿಕೆಯಾಗುವಂತಹ ಲೋಷನ್ಗಳನ್ನು ಬಳಕೆ ಮಾಡುವುದು ಸೂಕ್ತ ಎನ್ನುತ್ತಾರೆ ಇಎಸ್ಐ ಆಸ್ಪತ್ರೆ ಚರ್ಮರೋಗ ತಜ್ಞ ಡಾ. ಗಿರೀಶ್.
ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಶೇ. 40 ಹೆಚ್ಚಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬ್ರಾಂಕೋಲೈಟಿಸ್ ಹಾಗೂ ವೈರಲ್ ಬ್ರಾಂಕೋ ನ್ಯೂಮೊನಿಯಾದಿಂದ ನಿತ್ಯ 10-15 ಮಕ್ಕಳು, ವಾಣಿವಿಲಾಸ ಆಸ್ಪತ್ರೆಯಲ್ಲಿ 5-10, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 5-10 ಮಕ್ಕಳು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.
ನಿರಂತರ ಜ್ವರ, ಕೆಮ್ಮು, ನೆಗಡಿ, ಮೈಬಣ್ಣ ನೀಲಿ ಆಗುವುದು, ಆಹಾರ ಸೇವನೆ ನಿಲ್ಲಿಸುವುದು, ಉಬ್ಬಸ, ಪಕ್ಕೆಗಳಲ್ಲಿ ಎಳೆತ, ಉಸಿರಾಟ ವೇಗವಾಗುವುದು, ವಾಂತಿ, ನಿತ್ರಾಣಗೊಳ್ಳುವುದು, ಪ್ರಜ್ಞೆ ಕಳೆದುಕೊಳ್ಳುವುದು ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೆ ಮಕ್ಕಳನ್ನು ವೈದ್ಯರಿಗೆ ತೋರಿಸಬೇಕು.
ಬ್ರಾಂಕೋಲೈಟಿಸ್ ಎಂದರೆ ಕಿರಿದಾದ ಶ್ವಾಸಕೋಶದ ನಾಳಗಳಲ್ಲಿ ಉರಿಯೂತ ಉಂಟಾಗುವುದು. ರೆಸ್ಪಿರೇಟರಿ ಸಿನ್ಪೀಶಿಯಲ್ ವೈರಸ್ (ಆರ್ಎಸ್ವಿ) ನಿಂದ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕೇವಲ ಶ್ವಾಸಕೋಶ ವನ್ನು ಇಷ್ಟಪಡುವ ವೈರಸ್ ಆಗಿದ್ದು, ಇದು ನವಜಾತ ಶಿಶುಗಳಲ್ಲಿ (1ವರ್ಷದೊಳಗಿನ ಮಕ್ಕಳು) ಹೆಚ್ಚು ಕಾಣಿಸಿಕೊಳ್ಳುತ್ತದೆ.
ವೈರಲ್ ಬ್ರಾಂಕೋ ನ್ಯುಮೋನಿಯಾ (ಶ್ವಾಸಕೋಶ ಗಟ್ಟಿಯಾಗುವುದು)ದಿಂದಾಗಿ ಮಕ್ಕಳಿಗೆ ಉಸಿರಾಡಲು ಕಷ್ಟವಾಗುತ್ತದೆ. ಇದು 7 ವರ್ಷದವರೆಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. ಆರ್ಎಸ್ವಿ ವೈರಾಣು ವಿನ ಜೊತೆಗೆ ಇನ್ಫ್ಲೂಯೇಂಜಾ ಸೇರಿ ಇತರೆ ವೈರಾಣು ಗಳಿಂದ ಕಾಣಿಸಿಕೊಳ್ಳುತ್ತದೆ. ಇದರಿಂದ ಮಕ್ಕಳು ಆಸ್ಪತ್ರೆಯಲ್ಲಿ ಆಮ್ಲಜನಕ ಸಂಪರ್ಕ ಪಡೆಯಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಶೀತಕಾಲದಲ್ಲಿ ಮಕ್ಕಳಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆ ಕಾಡುವುದು ಸಾಮಾನ್ಯ. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಈ ಬಾರಿ ಪ್ರಕರಣಗಳ ಸಂಖ್ಯೆ ಶೇ. 20 ಏರಿಕೆಯಾಗಿದೆ. ಹಾಗಾಗಿ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾದರೂ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ. | ಡಾ. ಬಸವರಾಜು, ಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ https://www.vijayavani.net/max-collections-takes-another-big-step