

ವ್ಯಾಧಿಯೆಂಬುದು ಸಹಜತೆಯಲ್ಲ, ಅದೊಂದು ವಿಕೃತಿ. ಹಾಗಾಗಿ ದೇಹದಲ್ಲಿ ಏನಾದರೂ ಏರುಪೇರಾದರೆ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಕೆಲವರು ಒಂದು ಪುಟ್ಟರೋಗ ಬಂದರೂ ಚಡಪಡಿಸುತ್ತಾರೆ. ಮುಂದೆ ದಾರಿಯೇ ಇಲ್ಲವೆಂಬಂತೆ ವರ್ತಿಸುವವರೂ ಇರುತ್ತಾರೆ. ಇವರೆಲ್ಲರ ಮನಸ್ಸಿನಲ್ಲಿ ಒಂದೇ ರೀತಿಯ ಭಾವನೆಯಿರುತ್ತದೆ. ಉಳಿದವರೆಲ್ಲರೂ ಚೆನ್ನಾಗಿದ್ದಾರೆ, ನನಗ್ಯಾಕೆ ಇಂತಹ ರೋಗ ಬಂತೆಂದು ಹಲುಬುತ್ತಿರುತ್ತಾರೆ. ರಸ್ತೆಯಲ್ಲಿ ಹೋಗುತ್ತಾ ಉಳಿದ ಜನರನ್ನು ನೋಡಿ ಅವರೆಲ್ಲ ಆರೋಗ್ಯವಂತರು ಎಂದೆಣಿಸುತ್ತೇವೆ. ಆದರೆ ಇದು ವಾಸ್ತವವಲ್ಲ. ಇದನ್ನು ಪರೀಕ್ಷಿಸಬೇಕಾದರೆ ಯಾವುದಾದರೂ ಚಿಕಿತ್ಸಾಲಯಕ್ಕೆ ಹೋದರೆ ಸಾಕು. ಅಲ್ಲಿ ಕೆಲವು ಮಂದಿ ರೋಗದಿಂದ ವಿಲವಿಲನೆ ಪರಿತಪಿಸುವವರು ಕಾಣಸಿಗುತ್ತಾರೆ. ಆಶ್ಚರ್ಯವೆಂದರೆ ಅಲ್ಲಿರುವ ಬಹುತೇಕರು ಯಾವುದೇ ಕಾಯಿಲೆ ಇಲ್ಲದವರಂತೆಯೆ ಕಾಣುತ್ತಾರೆ! ಹಾಗೆಂದು ಅವರೆಲ್ಲ ಬಂದಿರುವುದು ಚಿಕಿತ್ಸೆಗಾಗಿಯೇ ತಾನೆ? ಈ ವಿಚಾರವನ್ನು ನಾವು ವಿಮಶಿಸದೆ ಕೂಪಮಂಡೂಕಗಳಂತೆ ಕಾಯಿಲೆಯಿರುವುದು ನಮಗೆ ಮಾತ್ರ ಎಂಬಂತೆ ಆಡುವುದು ಬದುಕಿನ ವಿಪರ್ಯಾಸ.
ಹತ್ತು ವಿಚಾರಗಳು ಈ ವ್ಯಾಧಿಕ್ಷಮತ್ವದ ಕುರಿತಂತೆ ಮಹತ್ವಪೂರ್ಣವಾಗುತ್ತವೆ. ಪ್ರಾಕೃತಿಕವಾಗಿ ರೋಗನಿರೋಧಕ ಶಕ್ತಿ ಅಧಿಕವಿರುವ ಪ್ರದೇಶದಲ್ಲಿ ಜನನ, ವ್ಯಕ್ತಿಯ ಬಲ ಹೆಚ್ಚಾಗಿರುವಂಥ ಕಾಲದಲ್ಲಿ ಹುಟ್ಟುವುದು, ದೇಹಕ್ಕೆ ಹಿತಕರವಾದ ವಾತಾವರಣ ಇರುವ ಸಮಯದಲ್ಲಿ ಜನಿಸುವುದು, ಮಾತಾಪಿತರ ಅಂಡಾಣು ವೀರ್ಯಾಣುಗಳು ಅತ್ಯುತ್ತಮವಾಗಿರುವುದು, ಸಮ್ಯಕ್ ಆಹಾರದ ಪೋಷಣೆ, ಶರೀರದ ಧಾತುಗಳು ಸದೃಢವಾಗಿರುವುದು, ಪ್ರಬಲ ಮನಸ್ಸು, ಏಳು ಧಾತುಗಳ ಸಾರರೂಪವಾದ ಓಜಸ್ಸು ಉತ್ತಮ ಪ್ರಮಾಣದಲ್ಲಿರುವುದು, ವಂಶವಾಹಿಯಲ್ಲಿ ಸಹಜವಾಗಿ ಬಂದಿರುವ ರೋಗ ಪ್ರತಿಬಂಧಕ ಅಂಶಗಳು, ಜನ್ಮೋತ್ತರ ಆಹಾರ ಪದ್ಧತಿ, ಜೀವನದಲ್ಲಿ ಅಳವಡಿಸಿಕೊಂಡ ವ್ಯಾಯಾಮ-ವಿಹಾರಾದಿಗಳು ರೋಗನಿರೋಧಕ ಶಕ್ತಿಯ ಮಟ್ಟವನ್ನು ನಿರ್ಧರಿಸುತ್ತವೆ. ಆಡು, ನಾಯಿಗಳಿಗೆ ಕ್ಷಯರೋಗವೇ ಬರುವುದಿಲ್ಲ, ಕೋಳಿಗಳಿಗೂ ಧನುರ್ವಾತ ಬಾಧಿಸುವುದೇ ಇಲ್ಲವಲ್ಲ! ಅತಿ ಬೊಜ್ಜು, ಕ್ಷೀಣದೇಹ, ದೋಷಪೂರಿತ ರಕ್ತ, ಬಲಹೀನ ಮಾಂಸಖಂಡ, ಮೂಳೆಯ ತೊಂದರೆ, ದುರ್ಬಲ ಶರೀರ, ಸರಿಯಿಲ್ಲದ ಆಹಾರದ ಪೋಷಣೆ, ದುರ್ಬಲ ಮನಸ್ಸು - ಈ ಎಂಟು ಅಂಶಗಳು ವ್ಯಾಧಿಕ್ಷಮತ್ವವನ್ನು ಕಡಿಮೆಗೊಳಿಸುವುದರಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ನಿರೋಗವೆಂಬುದು ಕೇವಲ ಅದೃಷ್ಟವಲ್ಲ, ಅದೊಂದು ಸಾಧನೆ.