ಅಡುಗೆ ಮಾಡುವಾಗ ಕೈ ಸುಟ್ಟಿತೇ? ತಕ್ಷಣವೇ ಹೀಗೆ ಮಾಡಿ

cookin
Published on

ಅಕಾಸ್ಮಾತ್ತಾಗಿ ಬಿಸಿ ಖಾದ್ಯ ಚೆಲ್ಲಿದಾಗ, ಜ್ವಾಲೆಯ ಪಕ್ಕ ಇರುವ ಬಟ್ಟೆಗೆ ಬೆಂಕಿ ಹತ್ತಿಕೊಂಡಾಗ ಮೊದಲಾದ ಸಂದರ್ಭಗಳಲ್ಲಿ ಶರೀರದ ಯಾವುದೋ ಒಂದು ಭಾಗ ಬೆಂಕಿ ಅಥವಾ ಬಿಸಿಗೆ ತುತ್ತಾಗಬಹುದು. ಬಿಸಿ ತಗುಲಿದ ಚರ್ಮದ ಭಾಗದಲ್ಲಿ ಅಪಾರ ಉರಿ ಮತ್ತು ತೀವ್ರ ತರದ ನೋವು ಎದುರಾಗುತ್ತದೆ. ಹಾಗಿದ್ರೆ ಈ ನೋವಿಗೆ ಸುಲಭವಾದ ಟಿಪ್ಸ್​​​​ಗಳಿವೆ ನೋಡೋಣ


ಸುಟ್ಟ ಭಾಗಕ್ಕೆ ತಣ್ಣೀರು ಸುರಿಯಿರಿ
ಯಾವುದೇ ಕಾರಣದಿಂದ ಸುಟ್ಟ ಗಾಯ ಎದುರಾದರೂ ಸರಿ, ಮೊತ್ತ ಮೊದಲಾಗಿ ಮಾಡಬೇಕಾದ ಕೆಲಸವೆಂದರೆ ತಣ್ಣೀರಿನ ಧಾರೆಗೆ ಈ ಭಾಗವನ್ನು ಒಡ್ಡುವುದು. ಈ ನೀರು ತಣ್ಣಗಿದ್ದಷ್ಟೂ ಒಳ್ಳೆಯದು. ತಕ್ಷಣಕ್ಕೆ ಸಿಗುವಂತೆ ಮಂಜುಗಡ್ಡೆ ಇದ್ದರೆ ಮಂಜುಗಡ್ಡೆಯನ್ನು ಹೆಚ್ಚಿನ ಒತ್ತಡವಿಲ್ಲದೇ ಸವರುತ್ತಾ ಈ ಭಾಗದಲ್ಲಿ ಮಂಜು ಕರಗಿದ ನೀರು ಆವರಿಸುವಂತೆ ಮಾಡಬೇಕು. ಎಲ್ಲಿಯವರೆಗೂ ಅಂದರೆ ಈ ಭಾಗದ ಉರಿ ಶಮನಗೊಳ್ಳುವವರೆಗೂ ಮುಂದುವರೆಸಬೇಕು. ಬೆಂಕಿಯ ಜ್ವಾಲೆಯಿಂದ ಹೊರಚರ್ಮಮತ್ತು ಒಳಚರ್ಮ ಎಷ್ಟರ ಮಟ್ಟಿಗೆ ಸುಟ್ಟಿವೆ ಎಂಬುದನ್ನು ಆಧರಿಸಿ ಈ ಸಮಯ ಹೆಚ್ಚಾಗಬಹುದು.

ಸುಟ್ಟ ಭಾಗವನ್ನು ಎಂದಿಗೂ ಯಾವುದರಿಂದಲೂ ಆವರಿಸದಿರಿ
ಒಂದು ವೇಳೆ ಬೆಂಕಿ ಬಿದ್ದು ಇನ್ನೂ ಜ್ವಾಲೆಗಳು ಶರೀರದ ಭಾಗವನ್ನು ಆವರಿಸಿದ್ದರೆ ಇದನ್ನು ನಂದಿಸಲು ಮಾತ್ರವೇ ದಪ್ಪನೆಯ ಕಂಬಳಿ ಅಥವಾ ಬಟ್ಟೆಯನ್ನು ಆವರಿಸಿ ಈ ಜ್ವಾಲೆಯನ್ನು ನಂದಿಸಬೇಕೇ ವಿನಃ ಸುಟ್ಟ ಭಾಗವನ್ನು ಯಾವ ಕಾರಣಕ್ಕೂ ಯಾವುದೇ ವಸ್ತುವಿನಿಂದ ಮುಚ್ಚಬಾರದು. ಅಷ್ಟೇ ಅಲ್ಲ, ನೀವು ತೊಟ್ಟುಕೊಂಡಿರುವ ಬಟ್ಟೆಗಳನ್ನು ನಿವಾರಿಸಿ ಈ ಬಟ್ಟೆಗಳು ಮತ್ತು ಆ ಸ್ಥಳದಲ್ಲಿ ಬಿಂಕಿಯ ಜ್ವಾಲೆಗೆ ತುತ್ತಾಗಿದ್ದ ಇತರ ಬಟ್ಟೆಗಳನ್ನೂ ವಿಸರ್ಜಿಸಬೇಕು. ಈ ಮೂಲಕ ಬಟ್ಟೆಯ ಬಿಸಿ ಇನ್ನೂ ಇದ್ದರೆ ಇದರಿಂದ ಎದುರಾಗಬಹುದಾದ ತೊಂದರೆಯನ್ನು ನಿವಾರಿಸಬಹುದು


ಗಾಯದ ತೀವ್ರತೆ ಜಾಸ್ತಿಯಾಗಿದ್ದರೆ ವೈದ್ಯರನ್ನು ಭೇಟಿ ಮಾಡಿ
ಒಂದು ವೇಳೆ ಸುಟ್ಟಿರುವ ಭಾಗ ಹೆಚ್ಚೇ ಸುಟ್ಟಿದ್ದು ಒಳಚರ್ಮ ಕಾಣುತ್ತಿದ್ದರೆ ಅಥವಾ ಒಳಚರ್ಮವೂ ಸುಟ್ಟಿದ್ದರೆ ಆದಷ್ಟೂ ಬೇಗನೇ ಆಸ್ಪತ್ರೆಗೆ ಅಥವಾ ಹತ್ತಿರದ ವೈದ್ಯರ ಬಳಿ ಧಾವಿಸಬೇಕು. ಯಾವುದೇ ಗಂಭೀರ ಸುಟ್ಟಗಾಯಕ್ಕೆ ತಣ್ಣೀರಿನ ಸಿಂಪರಣೆಯ ಹೊರತು ಬೇರೇನನ್ನೂ ನೀವಾಗಿ ಹಚ್ಚಿಕೊಳ್ಳದಿರಿ. ಅರಿವಿಲ್ಲದೇ ನೀವು ಚರ್ಮದ ಸೋಂಕು ಹೆಚ್ಚಿಸಲು ಕಾರಣರಾಗಬಹುದು. ಗಾಯದ ತೀವ್ರತೆಯನ್ನು ಪರಿಗಣಿಸಿದ ವೈದ್ಯರೇ ಇದಕ್ಕೆ ಸೂಕ್ತ ಔಷಧಿಗಳನ್ನು ನೀಡುತ್ತಾರೆ.


ಆಲೋವೆರಾ
ಒಂದು ವೇಳೆ ಸುಟ್ಟ ಗಾಯ ಬಿಸಿ ಎಣ್ಣೆ ಅಥವಾ ಕುದಿನೀರು ಬಿದ್ದು ಆಗಿದ್ದರೆ ಉರಿ ಹೆಚ್ಚಾಗಿಯೇ ಇರುತ್ತದೆ. ಇದನ್ನು ಶಮನಗೊಳಿಸಲು ಸಾಕಷ್ಟು ಹೊತ್ತು ತಣ್ಣೀರಿನ ಸಿಂಪರಣೆಯ ಅಗತ್ಯವಿರುತ್ತದೆ. ಆ ಬಳಿಕವೂ ಉರಿ ಪೂರ್ಣವಾಗಿ ತಗ್ಗದೇ ಚಿಕ್ಕದಾಗಿ ಉರಿಯುತ್ತಲೇ ಇರುತ್ತದೆ. ಇದನ್ನು ಶಮನಗೊಳಿಸಲು ನೈಸರ್ಗಿಕ ಲೋಳೆಸರ (ಆಲೋವೆರಾ) ತಿರುಳನ್ನು ಹಚ್ಚಿಕೊಂಡರೆ ಉತ್ತಮ ಶಮನ ದೊರಕುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net