ಹಲ್ಲುಗಳು ಗಟ್ಟಿಯಾಗಿದ್ರೇನೆ ಮುಖಕ್ಕೆ ಸೌಂದರ್ಯ… ಹಲ್ಲು ಗಟ್ಟಿಯಾಗಿ ಇಟ್ಕೊಳೋಕೆ ಇಲ್ಲಿವೆ ಸುಲಭೋಪಾಯಗಳು…

WhatsApp Image 2022-11-21 at 6.13.35 PM
Published on

ಉತ್ತಮ ಆರೋಗ್ಯ ಕ್ರಮಗಳನ್ನು ಅನುಸರಿಸುವುದು ಈಗಿನ ಟ್ರೆಂಡ್. ಅದೇ ರೀತಿ ನಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ಅತ್ಯಂತ ಮುಖ್ಯ. ಹಲ್ಲುಜ್ಜುವ ಕ್ರಮಗಳನ್ನು ಉತ್ತಮಗೊಳಿಸಿಕೊಂಡು ದಂತ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದರಿಂದ ಕೇವಲ ಬಾಯಿಯ ಆರೋಗ್ಯವಲ್ಲದೆ ದೈಹಿಕ ಆರೋಗ್ಯವನ್ನೂ ಉತ್ತಮಗೊಳಿಸಿಕೊಳ್ಳಬಹುದು.

ಎಲ್ಲರೂ ಪ್ರತಿದಿನ ಬೆಳಗ್ಗೆ ಮಾತ್ರ ಹಲ್ಲು ಉಜ್ಜುತ್ತಾರೆ. ಆದರೆ ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲು ಉಜ್ಜುವುದು ಒಳ್ಳೆಯದು. ಒಮ್ಮೆಯಾದರೂ ಫ್ಲಾಸ್‌ನಿಂದ ಹಲ್ಲಿನ ಸಂದುಗಳನ್ನು ಶುಚಿಗೊಳಿಸುವುದರಿಂದ ಹಲ್ಲುಗಳ ಮತ್ತು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಲ್ಲಿನ ಮೇಲೆ ಜಮೆ ಆಗುವ ಜಿಗುಟಾದ ಪಾಕ್ ಅನ್ನು ತೆಗೆದುಹಾಕಲು ಉತ್ತಮವಾದ ಟೂತ್‌ಬ್ರಶ್ ಮತ್ತು ಟೂತ್ ಪೇಸ್ಟ್ ಬಳಸಿಕೊಂಡು ಸರಿಯಾದ ಕ್ರಮದಲ್ಲಿ ಹಲ್ಲುಗಳನ್ನು ಶುಚಿಗೊಳಿಸಬೇಕು.

ಫ್ಲಾಸ್ ಮಾಡಿದ ನಂತರ ಗಮ್ ಮಸಾಜ್- ತೋರುಬೆರಳಿನಿಂದ ವಸಡನ್ನು ಒತ್ತಿ ವೃತ್ತಾಕಾರದಲ್ಲಿ ವಸಡಿನ ಉದ್ದಕ್ಕೂ ಮಸಾಜ್ ಮಾಡುವುದರಿಂದ ವಸಡಿಗೆ ರಕ್ತ ಸಂಚಲನ ಉತ್ತಮವಾಗಿ ವಸಡಿನ ಕಾಯಿಲೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಣೆಯನ್ನು ನೀಡುತ್ತದೆ.ನಮ್ಮ ಬಾಯಿಯಲ್ಲಿ ಸುಲಭವಾಗಿ ಮತ್ತು ಅತಿವೇಗವಾಗಿ ಪ್ಲಾಕ್ ಜಮೆಯಾಗುವ ಸ್ಥಳವೆಂದರೆ ಹಲ್ಲು ಮತ್ತು ವಸಡಿನ ಅಂಚು. ಪ್ರಮುಖವಾಗಿ ಕೆಳದವಡೆಯ ಮುಂಭಾಗದ ಹಲ್ಲುಗಳಲ್ಲಿ. ಇದು ಹೀಗೇ ಮುಂದುವರಿದರೆ ವಸಡಿನ ಕಾಯಿಲೆಯನ್ನು ಉಂಟುಮಾಡುತ್ತದೆ. ಹಲವು ಬಾರಿ ನಮ್ಮ ಗಮನಕ್ಕೆ ಬರುವ ಮುಂಚೆ ನಾವು ಒಸಡಿನ ಕಾಯಿಲೆಗೆ ಗುರಿಯಾಗಿರುತ್ತೇವೆ.

ಶೇಕಡ 60ಕ್ಕಿಂತ ಹೆಚ್ಚಿನ ವಯಸ್ಕರು ಜಿಂಗೈವಿಟಿಸ್‌ನಿಂದ ಬಳಲುತ್ತಿದ್ದು ಇದು ವಸಡಿನ ಕಾಯಿಲೆಯ ಮೊದಲ ಹಂತ. ಇದರಲ್ಲಿ ವಸಡಿನ ಭಾಗಕ್ಕೆ ಮಾತ್ರ ಹಾನಿಯುಂಟಾಗುತ್ತದೆ. ಬಾಯಿಯ ಶುಚಿತ್ವವನ್ನು ಸರಿಯಾಗಿ ನೋಡಿಕೊಳ್ಳದೆ ಪ್ಲಾಕ್ ಜಮೆಯಾಗುವುದರಿಂದ ಜಿಂಗೈವಿಟಿಸ್ ಉಂಟಾಗುತ್ತದೆ. ಬಾಯಿಯ ನೈರ್ಮಲ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು, ಪ್ಲಾಕ್ ಜಮೆಯಾಗುವುದನ್ನು ತಡೆಯುವುದು, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದರಿಂದ ಅಥವಾ ನಿಯಮಿತವಾಗಿ ವೈದ್ಯರಿಂದ ಹಲ್ಲುಗಳನ್ನು ಶುಚಿಗೊಳಿಸುವುದರಿಂದ ಜಿಂಗೈವಿಟಿಸ್ ಬರದಂತೆ ತಡೆಯಬಹುದು.

ಯಾವುದೇ ರೂಪದಲ್ಲಿ ತಂಬಾಕು ಸೇವನೆ ಮಾಡುವುದು ಬಾಯಿಯ ಆರೋಗ್ಯಕ್ಕೆ ಹಾನಿಕರ. ಅಷ್ಟೇ ಅಲ್ಲ, ಅದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಉಂಟಾಗಬಹುದು. ತಂಬಾಕು, ವೈನ್, ಕಾಫಿ-ಟೀ ಸೇವನೆಯಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ. ಬ್ಲೀಚಿಂಗ್, ಟೂಥ್ ವೈಟನಿಂಗ್‌ನಂತಹ ಚಿಕಿತ್ಸೆ ಪಡೆಯುವುದರ ಮೂಲಕ ಆತ್ಮವಿಶ್ವಾಸವನ್ನು ಮತ್ತು ಸುಂದರವಾದ ಹಲ್ಲುಗಳನ್ನು ಪಡೆಯಬಹುದು.

ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಸುಲಭವಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಿಹಿ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು, ಸಿಹಿತಿನಿಸುಗಳನ್ನು ಸೇವಿಸಿದ ನಂತರ ಬಾಯಿಯನ್ನು ಶುಚಿಗೊಳಿಸುವುದು ಆಮೂಲಕ ಮೂಲಕ ಹಲ್ಲು ಹುಳುಕಾಗುವುದನ್ನು ತಪ್ಪಿಸಬಹುದು.

ನಿದ್ರಾಹೀನತೆ, ಒತ್ತಡ, ರಾತ್ರಿ ವೇಳೆ ಹಲ್ಲು ಕಡಿಯುವುದು, ಯಾವುದೋ ಕಾರಣದಿಂದಾಗಿ ಹಲ್ಲುಗಳನ್ನು ಕಳೆದುಕೊಂಡಿರುವುದು ಅಥವಾ ತೆಗೆಸಿಕೊಂಡಿದ್ದರೂ ತಡ ಮಾಡದೆ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಅದನ್ನು ನಿರ್ಲಕ್ಷ್ಯ ಮಾಡಿ ಹಾಗೆ ಬಿಟ್ಟುಕೊಳ್ಳುವುದು ಒಳ್ಳೆಯದಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net